ಹನಿಗವನಗಳು
– ವೆಂಕಟೇಶ ಚಾಗಿ.
***ಹೊಸತನ***
ಪ್ರತಿದಿನವು ಬದುಕಲ್ಲಿ ಹೊಸದೊಂದು ಚಿಗುರು
ಹೊಸ ರಂಗು ಹೊಸ ಗುಂಗು ಹೊಸತನದ ಸಂಗ
ಹಳೆಬೇರಿನಂಗಿನಲಿ ಹೊಸ ಹೂವು ಅರಳುತಿರೆ
ಜಗವಾಗುವುದು ಹೂದೋಟ ಮುದ್ದು ಮನಸೆ
***ಲೆಕ್ಕ***
ಹುಟ್ಟು ಸಾವಿನ ನಡುವೆ ಸಾವಿರಾರು ಪರೀಕ್ಶೆ
ಗೊಣಗದಿರು ಹಗಲಿರುಳು ಬದುಕೊಂದು ಶಿಕ್ಶೆ
ಬಿಟ್ಟುಬಿಡು ಸೋಲು ಗೆಲುವುಗಳ ಲೆಕ್ಕ
ಲೆಕ್ಕಿಸದೆ ನಟಿಸುತಲಿರು ಮುದ್ದು ಮನಸೆ
***ಎಚ್ಚರ***
ಬೂಮಿಯೊಳಗೆ ಬಿತ್ತಿದ ಬೀಜ
ಮತಿಯೊಳಗೆ ತುಂಬಿದ ವಿಶಯ
ಬವಿಶ್ಯದಲಿ ಅದುವೆ ಹೆಮ್ಮರವಾಗುವುದು
ಎಚ್ಚರದಿಂದ ಇರಬೇಕು ಮುದ್ದು ಮನಸೆ
***ಗುರಿ***
ಹರಿಯುವ ನದಿಗೆ ಹರಿಯುವುದೇ ಚಿಂತೆ
ಹಲವು ತಡೆಗೆ ನಡಿಗೆ ಬದಲಾದರೇನಂತೆ
ಚಿತ್ತ ಮಾತ್ರ ಗುರಿಯ ಕಡೆಗೆ ಶರದಿಯೆಡೆಗೆ
ಹಾಕು ಹೆಜ್ಜೆ ಬದುಕಿನೆಡೆಗೆ ಮುದ್ದು ಮನಸೆ
(ಚಿತ್ರ ಸೆಲೆ: ecosalon.com)
ಚೆನ್ನಾಗಿದೆ.