ಬ್ರೆಕ್ಟ್ ಕವನಗಳ ಓದು – 18 ನೆಯ ಕಂತು

– ಸಿ.ಪಿ.ನಾಗರಾಜ.

*** ಫಿನ್ಲ್ಯಾಂಡ್ – 1940 ***

(ಕನ್ನಡ ಅನುವಾದ: ಕೆ.ಪಣಿರಾಜ್)
1
ನಾವೀಗ ನಿರಾಶ್ರಿತರಾಗಿ
ಫಿನ್ಲ್ಯಾಂಡಿನಲ್ಲಿದ್ದೇವೆ
ನನ್ನ ಪುಟ್ಟ ಮಗಳು
ಸಂಜೆ ಮನೆಗೆ ಬಂದವಳೇ ದೂರುತ್ತಾಳೆ
“ತನ್ನನ್ನು ಮಕ್ಕಳು ಆಟಕ್ಕೆ ಸೇರಿಸಿಕೊಳ್ಳೋಲ್ಲ
ಇವಳು ಜರ್ಮನಿಯವಳು. ಕೇಡಿಗಳ ನಾಡಿನವಳು”

ವಾಗ್ವಾದ ಮಾಡುವಾಗ
ನಾನು ದನಿ ಎತ್ತರಿಸಿದರೆ
ಇಲ್ಲಿಯ ಜನ ಮೆತ್ತಗೆ ಮಾತಾಡಲು ಹೇಳುತ್ತಾರೆ
ಕೇಡಿಗಳ ನಾಡಿಂದ ಬಂದವನು
ದನಿ ಎತ್ತರಿಸುವುದು ಇಲ್ಲಿನವರಿಗೆ ರುಚಿಸದು

“ಜರ್ಮನಿ ಕೇಡಿಗಳ ನಾಡಲ್ಲವೇ ಪುಟ್ಟಿ
ಕೇಡಿಗಳ ನಾಡೆಂದರೆ ಯಾರಿಗೆ ಅಕ್ಕರೆ ಹೇಳು”

ಎಂದು ರಮಿಸಿದಾಗ
ಅವಳಿಗೆ ಸಮಾಧಾನವಾಗುತ್ತದೆ
ಇಬ್ಬರೂ ಖುಷಿಯಿಂದ ನಗುತ್ತೇವೆ
2
ರೈತಾಪಿ ಕುಟುಂಬದ ಕುಡಿ ನಾನು
ರೊಟ್ಟಿಯನು ಬಿಸಾಡುವುದ ಕಂಡರೆ
ನನಗೆ ರೇಗುತ್ತದೆ
ಯುದ್ಧವನ್ನು ನಾನು ಯಾಕಿಷ್ಟು
ದ್ವೇಷಿಸುವೆನೆಂದು ನಿಮಗೆ ಅರ್ಥವಾಗಿರಬೇಕು
3
ಗೆಳೆಯರ ಕೂಟದಲ್ಲಿ ವೈನ್ ಕುಡಿಯುತ್ತಿರುವಾಗ
ಫಿನ್ಲ್ಯಾಂಡಿನ ಗೆಳತಿ
ಯುದ್ಧ ತನ್ನ ದ್ರಾಕ್ಷಿ ತೋಟವನ್ನು
ಹಾಳುಗೆಡವಿರುವ ಬಗೆ ವಿವರಿಸಿದಳು
ನಾವೀಗ ಕುಡಿಯುತ್ತಿರುವ ವೈನ್
ಆ ತೋಟದ್ದೇ ಎಂದು ಹೇಳಿದಳು
ನಾವು ದ್ರಾಕ್ಷಿ ತೋಟಕ್ಕೆ
ವಿವೇಚನೆಗೆ
ವಂದಿಸಿ ವೈನ್ ಕುಡಿದೆವು
4
ಜನರ ಬಾಯಲ್ಲುಳಿಯುವ ವರ್ಷವಿದು
ಜನ ಬಾಯಲ್ಲಾಡಲು ಹಿಂಜರೆವ ವರ್ಷವಿದು
ಮುಪ್ಪಾದವರ ಎದುರೇ ಹರೆಯದವರ ಸಾವು
ವಿವೇಕಿಗಳ ಅಳಿವು ಮೂರ್ಖರ ಉಳಿವು
ಭೂಮಿಯಿನ್ನು ಏನನ್ನೂ ಬೆಳೆಯದು
ಅದಕ್ಕೀಗ ನುಂಗುವ ದಾಹ
ಆಕಾಶದಿಂದಿನ್ನು ಮಳೆ ಸುರಿಯದು
ಸುರಿವುದು ಬರಿ ಲೋಹ.

ಸರ್‍ವಾದಿಕಾರಿ ಅಡಾಲ್ಪ್ ಹಿಟ್ಲರನ ಆಡಳಿತ ಕಾಲದಲ್ಲಿ ಬ್ರೆಕ್ಟ್ ಅವರು ಜರ್‍ಮನಿಯನ್ನು ತೊರೆದು ಪಿನ್ಲ್ಯಾಂಡ್ ದೇಶದಲ್ಲಿ ನೆಲೆಸಿದ್ದಾಗ, ತಮ್ಮ ಜೀವನದಲ್ಲಿ ಕಂಡುಂಡ ಹಲವು ಕಹಿ ಪ್ರಸಂಗಗಳನ್ನು ಈ ಕವನದಲ್ಲಿ ಚಿತ್ರಿಸಿದ್ದಾರೆ.

ನಾವು+ಈಗ; ನಿರಾಶ್ರಿತ=ಹುಟ್ಟಿ ಬೆಳೆದು ಬಾಳುತ್ತಿದ್ದ ತಾಯ್ನಾಡಿನ ನೆಲೆಯನ್ನು ಕಳೆದುಕೊಂಡು ಮತ್ತೊಂದು ನಾಡಿನಲ್ಲಿ ತಾತ್ಕಾಲಿಕವಾಗಿ ಆಶ್ರಯವನ್ನು ಪಡೆದವನು; ಫಿನ್ಲ್ಯಾಂಡ್=ಉತ್ತರ ಯುರೋಪಿನ ಒಂದು ದೇಶ;

ನಾವೀಗ ನಿರಾಶ್ರಿತರಾಗಿ ಫಿನ್ಲ್ಯಾಂಡಿನಲ್ಲಿದ್ದೇವೆ=1933 ರಲ್ಲಿ ಬ್ರೆಕ್ಟ್ ಅವರು ತಮ್ಮ ತಾಯ್ನಾಡಾದ ಜರ್‍ಮನಿಯಿಂದ ತಲೆತಪ್ಪಿಸಿಕೊಂಡು ತಮ್ಮ ಹೆಂಡತಿ ಮತ್ತು ಮಕ್ಕಳೊಡನೆ ಕೆಲವು ವರುಶಗಳ ಕಾಲ ಆಸ್ಟ್ರಿಯಾ, ಸ್ವಿಟ್ವಜರ‍್ಲೆಂಡ್, ಪ್ರಾನ್ಸ್, ಡೆನ್ಮಾರ‍್ಕ್ ದೇಶಗಳಲ್ಲಿ ಆಶ್ರಯವನ್ನು ಪಡೆದಿದ್ದು , ಈ ದೇಶಗಳು ನಾಜಿ ಪಡೆಗಳ ಆಕ್ರಮಣಕ್ಕೆ ಒಳಗಾಗುತ್ತಿದ್ದಂತೆ, ಅಲ್ಲಿಂದ ಹೊರಟು, ಇದೀಗ ಅಂದರೆ 1940 ರಲ್ಲಿ ಪಿನ್ಲ್ಯಾಂಡ್ ದೇಶಕ್ಕೆ ಬಂದು ನೆಲೆಸಿದ್ದಾರೆ.

1933 ರಿಂದ 1945 ರ ವರೆಗೆ ಜರ್‍ಮನಿಯನ್ನು ಆಳಿದ ನಿರಂಕುಶಾದಿಕಾರಿ ಅಡಾಲ್ಪ್ ಹಿಟ್ಲರನ ಕಾಲದಲ್ಲಿ ಲಕ್ಶಾಂತರ ಮಂದಿ ಯಹೂದಿಗಳು ಜನಾಂಗ ಹಗೆತನಕ್ಕೆ ಗುರಿಯಾಗಿ ಆರ್‍ಯನ್ ಜನಾಂಗದ ನಾಜಿ ಪಡೆಯಿಂದ ಅತ್ಯಾಚಾರ, ಕೊಲೆ ಸುಲಿಗೆಗೆ ಬಲಿಯಾಗುತ್ತಿದ್ದರು.

1920 ರ ದಶಕದಲ್ಲಿ ಹಿಟ್ಲರನ ನಾಯಕತ್ವದಲ್ಲಿ ಆರಂಬಗೊಂಡ “ಕಾರ್‍ಮಿಕರ ರಾಶ್ಟ್ರೀಯ ಸಮಾಜವಾದಿ ಪಕ್ಶ-National Socialist Party of Workers” ಎಂಬ ಒಕ್ಕೂಟವೇ ನಾಜಿ ಪಕ್ಶವೆಂಬ ಜರ್‍ಮನ್ ಹೆಸರನ್ನು ಪಡೆಯಿತು. ನಾಜಿ ಪಕ್ಶದ ಮೂಲ ಸಿದ್ದಾಂತವೆಂದರೆ “ಜಗತ್ತಿನಲ್ಲಿ ಆರ್ಯನ್ ಜನಾಂಗವೇ ಅತ್ಯುತ್ತುಮವಾದುದು. ಇಡೀ ಜಗತ್ತನ್ನು ಆರ್ಯನ್ ಜನಾಂಗದವರು ಮಾತ್ರ ಆಳುವಂತಾಗಬೇಕು. ಯಹೂದಿ ಜನಾಂಗವನ್ನು ಸಂಪೂರ್ಣವಾಗಿ ಕಗ್ಗೊಲೆ ಮಾಡಬೇಕು. ಜಗತ್ತಿನಲ್ಲಿರುವ ಇನ್ನಿತರ ಜನಾಂಗಗಳು ಆರ್ಯನ್ ಜನಾಂಗಕ್ಕೆ ಅಡಿಯಾಳುಗಳಾಗಿರಬೇಕು. ಇದಕ್ಕಾಗಿ ಯಾವ ಬಗೆಯ ಹಿಂಸಾಚಾರವನ್ನು ಮಾಡಲು ಹಿಂಜರಿಯಬಾರದು.”

ಹಿಟ್ಲರನ ಸರ್‍ವಾದಿಕಾರತ್ವ ಮತ್ತು ಜನಾಂಗ ಹಗೆತನದ ಸಿದ್ದಾಂತದ ನಾಜಿ ಒಕ್ಕೂಟವನ್ನು ಬ್ರೆಕ್ಟ್ ಅವರು ವಿರೋದಿಸುತ್ತ, ಜರ್‍ಮನಿ ಮಾತ್ರವಲ್ಲ… ಇಡೀ ಜಗತ್ತಿನಲ್ಲಿ ದುಡಿಯುತ್ತಿರುವ ಶ್ರಮಜೀವಿಗಳೆಲ್ಲರೂ ಜೀವನಕ್ಕೆ ಅತ್ಯಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಆರೋಗ್ಯವನ್ನು ಪಡೆದು, ಸರ್‍ವರಿಗೂ ಸಮಪಾಲು; ಸರ್‍ವರಿಗೂ ಸಮಬಾಳು ಎಂಬ ಸಮತಾವಾದದ ಸಿದ್ದಾಂತಕ್ಕೆ ಅನುಗುಣವಾಗಿ ಬಾಳುವಂತಾಗಬೇಕೆಂಬ ವಿಚಾರಗಳನ್ನು ತಮ್ಮ ಕವನ, ಕತೆ, ನಾಟಕಗಳ ಮೂಲಕ ಪ್ರತಿಪಾದಿಸುತ್ತ, ಒಟ್ಟು ಮಾನವ ಸಮುದಾಯದ ಒಳಿತಿಗಾಗಿ ನಡೆಯುತ್ತಿದ್ದ ಹೋರಾಟಗಳಲ್ಲಿ ಕ್ರಿಯಾಶೀಲರಾಗಿದ್ದರು. ಆದ್ದರಿಂದ ನಾಜಿ ತಂಡ ಪಟ್ಟಿಮಾಡಿದ್ದ ಯಹೂದಿಗಳ ಕೊಲೆಯಲ್ಲಿ ಬ್ರೆಕ್ಟ್ ಅವರ ಹೆಸರು ಮೊದಲ ಪುಟದಲ್ಲಿತ್ತು.

*** ಪ್ರಸಂಗ – 1 ***

ಪುಟ್ಟ=ಚಿಕ್ಕ; ದೂರು=ವ್ಯಕ್ತಿಯು ತನಗಿರುವ ತೊಂದರೆಯನ್ನು ತಿಳಿಸಿ, ಪರಿಹಾರಕ್ಕಾಗಿ ನೆರವನ್ನು ಕೇಳುವುದು/ಅಹವಾಲು/ಮನವಿ; ಕೇಡಿ=ಕೆಡುಕನ್ನು ಮಾಡುವವನು/ಸಾವು ನೋವನ್ನುಂಟುಮಾಡುವವನು/ಹಾಳು ಮಾಡುವವನು; ನಾಡು=ದೇಶ/ಪ್ರಾಂತ್ಯ;

ಕೇಡಿಗಳ ನಾಡು=ಜನಾಂಗದ ಹೆಸರಿನಲ್ಲಿ ಹಗೆತನವನ್ನು ಆರ್‍ಯನ್ನರ ಮಯ್ ಮನದಲ್ಲಿ ತುಂಬಿ, ಆರ್‍ಯನ್ ಜನಸಮುದಾಯವನ್ನು ಯಹೂದಿಗಳ ಎದುರು ಎತ್ತಿಕಟ್ಟಿ, ಯಹೂದಿಗಳನ್ನು ನಂಜಿನ ಅನಿಲ ತುಂಬಿದ ಗ್ಯಾಸ್ ಚೇಂಬರ್ ಗಳಲ್ಲಿ ಕೊಲ್ಲುತ್ತಿರುವ, ಗುಂಡಿನ ಸುರಿಮಳೆಯಿಂದ ಯಹೂದಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡುತ್ತಿರುವ, ಯೆಹೂದಿ ಜನಾಂಗಕ್ಕೆ ಸೇರಿದ ಮಕ್ಕಳು ಹೆಂಗಸರನ್ನು ಕ್ರೂರರೀತಿಯಲ್ಲಿ ಹಿಂಸಿಸುತ್ತ ನಾಶಮಾಡುತ್ತಿರುವ ನಾಜಿ ಪಡೆಗಳಿಂದ ತುಂಬಿರುವ ಜರ್‍ಮನಿ ಎಂಬ ನಾಡು;

ಒಂದು ಸಂಜೆ ಆಟವಾಡಲೆಂದು ಹೋಗಿದ್ದ ಬ್ರೆಕ್ಟ್ ಅವರ ಚಿಕ್ಕ ಮಗಳು “ನೀನು ಕೇಡಿಗಳ ನಾಡಿನಿಂದ ಬಂದವಳು ಎಂದು ಪಿನ್ಲ್ಯಾಂಡಿನ ಮಕ್ಕಳು ತನ್ನನ್ನು ಆಟಕ್ಕೆ ಸೇರಿಸಿಕೊಳ್ಳುತ್ತಿಲ್ಲ” ಎಂದು ಅಳಲನ್ನು ಹೇಳಿಕೊಂಡಾಗ, ಬ್ರೆಕ್ಟ್ ಅವರಿಗೆ ಜನಾಂಗ ಹಗೆತನದ ನಂಜು ಕೇವಲ ಜರ್‍ಮನಿಯನ್ನು ಮಾತ್ರವಲ್ಲ, ಇತರ ನಾಡುಗಳಲ್ಲಿಯೂ ಹಬ್ಬುತ್ತಿರುವುದು ಕಂಡುಬರುತ್ತದೆ. ಪಿನ್ನಿಶ್ ಜನಸಮುದಾಯದ ಮಕ್ಕಳ ಮನದಲ್ಲಿಯೂ ಯಹೂದಿಗಳ ಈ ಬಗೆಯ ಕೆಟ್ಟ ಬಾವನೆಯು ಹಬ್ಬಿರುವುದನ್ನು ತಿಳಿದು ಹತಾಶರಾಗುತ್ತಾರೆ;

ವಾಗ್ವಾದ=ಚರ್‍ಚೆ/ಯಾವುದೇ ಒಂದು ಸಂಗತಿಯಲ್ಲಿನ ಸರಿ-ತಪ್ಪನ್ನು ಒರೆಹಚ್ಚಿ ನೋಡುವಾಗ ಇತರರೊಡನೆ ಆಡುವ ಮಾತುಗಳು; ದನಿ=ಸದ್ದು/ಶಬ್ದ; ದನಿ ಎತ್ತರಿಸು=ಇದೊಂದು ನುಡಿಗಟ್ಟು. ವ್ಯಕ್ತಿಯು ತನ್ನ ನಿಲುವು ಸರಿಯೆಂದು ಹೇಳುವಾಗ ದೊಡ್ಡದನಿಯಲ್ಲಿ ಮಾತನಾಡುವುದು; ರುಚಿಸು=ಮೆಚ್ಚಿಗೆಯಾಗು/ಮನಸ್ಸಿಗೆ ಹಿಡಿಸು; ರುಚಿಸದು=ಇಶ್ಟವಾಗುವುದಿಲ್ಲ;

ಮಕ್ಕಳ ನಡುವೆ ತಮ್ಮ ಮಗಳಿಗೆ ಆದ ಅಪಮಾನದ ರೀತಿಯಲ್ಲಿಯೇ ತಮಗೂ ಆದುದನ್ನು ಬ್ರೆಕ್ಟ್ ನೆನಪಿಸಿಕೊಳ್ಳುತ್ತಾರೆ. ಪಿನ್ಲ್ಯಾಂಡಿನ ಜನರೊಡನೆ ಯಾವುದಾದರೊಂದು ಸಂಗತಿಯನ್ನು ಕುರಿತು ಚರ್‍ಚಿಸುತ್ತ, ತಮ್ಮ ನಿಲುವನ್ನು ಪ್ರತಿಪಾದಿಸುತ್ತಿದ್ದಾಗ , ತಮ್ಮ ಕೊರಳಿನಿಂದ ದನಿಯು ತುಸು ಜೋರಾಗಿ ಹೊರಹೊಮ್ಮಿದರೆ, ಅದರ ಬಗ್ಗೆ ಪಿನ್ನಿಶ್ ಜನರು ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದರು. ತಾಯ್ನಾಡಿನಿಂದ ದೂರವಾದ ನಿರಾಶ್ರಿತರು ಹೆಜ್ಜೆಹೆಜ್ಜೆಗೂ ಒಂದಲ್ಲ ಒಂದು ಬಗೆಯ ಅನುಮಾನ, ತಿರಸ್ಕಾರ ಮತ್ತು ಅಪಮಾನಕ್ಕೆ ಗುರಿಯಾಗಿ ನರಳಬೇಕಾಗುವುದನ್ನು ಬೇರೆ ಬೇರೆ ದೇಶಗಳಲ್ಲಿ ಸುಮಾರು ಹದಿನಾಲ್ಕು ವರುಶಗಳ ಕಾಲ ಆಶ್ರಯ ಪಡೆದಿದ್ದಾಗ ಬ್ರೆಕ್ಟ್ ಅನುಬವಿಸುತ್ತಿದ್ದರು;

ಪುಟ್ಟಿ=ಒಲವಿನಿಂದ ಮಗಳನ್ನು ಕರೆಯುತ್ತಿರುವ ಪದ; ನಾಡು+ಎಂದರೆ; ಅಕ್ಕರೆ=ಪ್ರೀತಿ/ಒಲವು/ಮೆಚ್ಚುಗೆ; ರಮಿಸು=ಸಂತಯಿಸು/ಆತಂಕವನ್ನು ಹೋಗಲಾಡಿಸು; ಖುಷಿ=ಹಿಗ್ಗು/ಆನಂದ;

“ಜರ್‍ಮನಿಯಲ್ಲಿ ನಾಜಿ ಒಕ್ಕೂಟದಿಂದ ನಡೆಯುತ್ತಿರುವ ಹಿಂಸಾಚಾರದಿಂದ ತಮ್ಮ ತಾಯ್ನಾಡಾದ ಜರ್‍ಮನಿಗೆ ಕೇಡಿಗಳ ನಾಡು ಎಂಬ ಹೆಸರು ಸಹಜವಾಗಿ ಬಂದಿದೆಯಾದ್ದರಿಂದ, ಯಾರಿಗೆ ತಾನೆ ಜರ್‍ಮನಿ ಬಗ್ಗೆ ಒಳ್ಳೆಯ ಭಾವನೆಯು ಹೇಗೆ ಬರುತ್ತದೆ ” ಎಂದು ತಮ್ಮ ಚಿಕ್ಕ ಮಗಳಿಗೆ ಬ್ರೆಕ್ಟ್ ಪ್ರಶ್ನೆಯನ್ನು ಹಾಕಿದಾಗ, ಆಕೆಯು ಅದನ್ನು ಒಪ್ಪಿಕೊಂಡು, ಓರಿಗೆಯ ಮಕ್ಕಳಿಂದ ಉಂಟಾಗಿದ್ದ ನೋವನ್ನು ಅರಗಿಸಿಕೊಳ್ಳುತ್ತಾಳೆ. ಈ ರೀತಿ ಅಪ್ಪ ಮತ್ತು ಮಗಳು ಕಟು ವಾಸ್ತವವನ್ನು ಅರಿತುಕೊಂಡು ಪಿನ್ಲ್ಯಾಂಡಿನಲ್ಲಿ ಉಂಟಾದ ಕಹಿಯನ್ನು ಮರೆತು ನೋವಿನಲ್ಲೂ ನಗುತ್ತಾರೆ;

*** ಪ್ರಸಂಗ – 2 ***

ರೈತಾಪಿ=ಬೇಸಾಯಗಾರರ; ಕುಟುಂಬ=ಮನೆತನ; ಕುಡಿ=ಚಿಗುರು/ಒಕ್ಕಲು; ರೊಟ್ಟಿ=ಉಣ್ಣುವ ತಿನ್ನುವ ಕುಡಿಯುವ ಆಹಾರ/ಉಣಿಸು ತಿನಸು; ರೇಗು=ಕೋಪಗೊಳ್ಳು/ಕೆರಳು/ಸಿಟ್ಟು;

ಜರ್‍ಮನಿ ದೇಶದ ಬವೇರಿಯಾ ಪ್ರಾಂತ್ಯದ ಆಗ್ಸ್‌ಬರ್‍ಗ್ ಎಂಬ ಊರಿನಲ್ಲಿ 1898 ರಲ್ಲಿ ಬ್ರೆಕ್ಟ್ ಹುಟ್ಟಿ ಬೆಳೆದರು. ಆಗ ಆಗ್ಸ್‌ಬರ್‍ಗ್ ಊರಿನ ಪರಿಸರ ಬೇಸಾಯಗಾರರಿಂದ ತುಂಬಿತ್ತು. ಬೆಳೆಗಳನ್ನು ಬೆಳೆಯಬೇಕಾದರೆ ಬೇಸಾಯಗಾರರು ಚಳಿ ಮಳೆ ಗಾಳಿ ಬಿಸಿಲಿನಲ್ಲಿ ಹಗಲು ಇರುಳೆನ್ನದೆ ದುಡಿಯುತ್ತಿದ್ದುದನ್ನು ಬಾಲ್ಯದಲ್ಲಿ ಬ್ರೆಕ್ಟ್ ಕಣ್ಣಾರೆ ಕಂಡಿದ್ದರು. ಬೆಳೆಯುವ ಒಂದೊಂದು ಕಾಳಿನಲ್ಲಿಯೂ ಬೇಸಾಯಗಾರರ ಬೆವರ ಹನಿ ಮತ್ತು ಅವರ ಬದುಕನ್ನೇ ತೇಯ್ದ ಪರಿಶ್ರಮವಿದ್ದುದನ್ನು ಗಮನಿಸಿದ್ದರು. ಮಾನವ ಸಮುದಾಯ ಉಳಿದು ಬೆಳೆದು ಬಾಳುತ್ತಿರಬೇಕಾದರೆ ದುಡಿಯುವ ಶ್ರಮಜೀವಿಗಳಾದ ಬೇಸಾಯಗಾರರೇ ಕಾರಣವೆಂಬ ವಾಸ್ತವವನ್ನು ಬ್ರೆಕ್ಟ್ ಅರಿತಿದ್ದರು. ಆದ್ದರಿಂದಲೇ ಯಾರಾದರೂ ಉಣಿಸು ತಿನಸನ್ನು ಹಾಳುಮಾಡಿದರೆ ಬ್ರೆಕ್ಟ್ ಅಂತಹವರ ಬಗ್ಗೆ ಕೋಪದಿಂದ ಕೆರಳಿ, ಆಹಾರವನ್ನು ಪೋಲು ಮಾಡದಂತೆ ಎಚ್ಚರಿಸುತ್ತಿದ್ದರು.

1914-18 ರವರೆಗೆ ನಡೆದಿದ್ದ ಮೊದಲನೆಯ ಮಹಾಯುದ್ದದಲ್ಲಿ ಸೇನಾಶಿಬಿರವೊಂದರಲ್ಲಿ ಗಾಯಾಳುಗಳನ್ನು ಉಪಚರಿಸುವ ವೈದ್ಯಕೀಯ ಕೆಲಸದಲ್ಲಿ ಬ್ರೆಕ್ಟ್ ಅವರು ತೊಡಗಿದ್ದರು. ಆಗ ರಣರಂಗದಲ್ಲಿ ಮದ್ದುಗುಂಡುಗಳ ಹೊಡೆತಕ್ಕೆ ಸಿಲುಕಿ ಚಿದ್ರಚಿದ್ರಗೊಂಡ ಅಂಗಾಂಗಗಳಿಂದ ನರಳುತ್ತಿರುವ ಸಾವಿರಾರು ಸೈನಿಕರ ಅಸಹನೀಯವಾದ ಯಾತನೆಯನ್ನು ಕಂಡಿದ್ದ ಬ್ರೆಕ್ಟ್ ಅವರಿಗೆ “ಯುದ್ಧವೆನ್ನುವುದು ಮಾನವರ ಪ್ರಾಣವನ್ನು ಮಾತ್ರ ತೆಗೆಯುವುದಿಲ್ಲ; ಮಾನವ ಸಮುದಾಯವು ಪರಿಶ್ರಮದಿಂದ ರೂಪಿಸಿದ ಮತ್ತು ಕಟ್ಟಿದ ವಸ್ತುಗಳೆಲ್ಲವನ್ನೂ ನಾಶಪಡಿಸಿ, ಮಾನವ ಸಮುದಾಯದ ಬದುಕನ್ನೇ ದುರಂತದ ಕಡೆಗೆ ದೂಡುತ್ತದೆ” ಎಂಬ ವಾಸ್ತವದ ಅರಿವಾಗಿತ್ತು.

1939 ರಿಂದ ಮತ್ತೆ ಎರಡನೆಯ ಮಹಾಯುದ್ದ ಪ್ರಾರಂಬವಾಗಿತ್ತು. ಪ್ರಾನ್ಸ್-ಇಂಗ್ಲೆಂಡ್-ಅಮೆರಿಕ-ರಶ್ಯ ದೇಶಗಳ ಸೇನೆಗಳು ಒಗ್ಗೂಡಿ  ಜರ್‍ಮನಿ-ಜಪಾನ್-ಇಟಲಿ ದೇಶಗಳ ಸೇನೆಗಳ ಎದುರು ಹೋರಾಡತೊಡಗಿ, ಯುರೋಪಿನ ಆದ್ಯಂತ ಹಿಂಸಾಚಾರ ಕ್ರೂರವಾದ ರೀತಿಯಲ್ಲಿ ಹರಡಿತ್ತು. ನಿಸರ್‍ಗದ ಸಂಪತ್ತನ್ನು ಮತ್ತು ಮಾನವನ ಪ್ರಾಣ ಹಾಗೂ ಮಾನವನು ತನ್ನ ಜಾಣ್ಮೆ, ಕುಶಲತೆ ಮತ್ತು ಪರಿಶ್ರಮದಿಂದ ರೂಪಿಸಿದ ಜಗತ್ತನ್ನು ನಾಶಮಾಡುವ ಯುದ್ದವನ್ನು ಬ್ರೆಕ್ಟ್ ತಮ್ಮ ಜೀವನದ ಉದ್ದಕ್ಕೂ ಸದಾಕಾಲ ವಿರೋದಿಸುತ್ತಿದ್ದರು.

*** ಪ್ರಸಂಗ – 3 ***

ವೈನ್=ದ್ರಾಕ್ಶಿಯ ಹಣ್ಣುಗಳಿಂದ ತಯಾರಿಸಿರುವ ರಸ; ವಿವೇಚನೆ=ಸರಿ/ತಪ್ಪುಗಳನ್ನು ಒರೆಹಚ್ಚಿ ನೋಡಿ, ಕೆಟ್ಟದ್ದನ್ನು ಗುರುತಿಸಿ ದೂರಸರಿಯುವ ಮತ್ತು ಒಳ್ಳೆಯದನ್ನು ಅರಿತು ಬಾಳುವ ತಿಳುವಳಿಕೆ; ವಂದಿಸಿ=ನಮಸ್ಕರಿಸಿ;

ಗೆಳೆಯರ ಕೂಟದಲ್ಲಿ ವೈನ್ ಕುಡಿಯುತ್ತಿರುವಾಗ ಪಿನ್ಲ್ಯಾಂಡಿನ ಗೆಳತಿಯೊಬ್ಬಳು ಎರಡನೆಯ ಮಹಾಯುದ್ದದ ಹೋರಾಟ ತನ್ನ ದೇಶಕ್ಕೂ ಹಬ್ಬಿ ದ್ರಾಕ್ಷಿ ತೋಟವನ್ನು ಹಾಳುಗೆಡವಿರುವುದನ್ನು ವಿವರಿಸಿದಳು. ನಾವೀಗ ಕುಡಿಯುತ್ತಿರುವ ವೈನ್ ಆ ತೋಟದ್ದೇ ಎಂದು ಹೇಳುತ್ತ, ಯುದ್ದವು ಮಾನವ ಸಮುದಾಯದ ಅನ್ನವನ್ನು ಕಸಿಯುತ್ತಿರುವುದ ಬಗ್ಗೆ ತನ್ನ ಸಂಕಟವನ್ನು ತೋಡಿಕೊಂಡಳು. ವೈನ್ ಕುಡಿಯಲು ಕಾರಣವಾದ ದ್ರಾಕ್ಶಿ ತೋಟಕ್ಕೆ ಮತ್ತು ಯುದ್ದವೆಂಬುದು ಕೆಟ್ಟದ್ದು ಎಂಬ ವಾಸ್ತವವನ್ನು ಅರಿತುಕೊಂಡ ವಿವೇಚನೆಯ ಮಾತುಕತೆಗೆ ವಂದಿಸುತ್ತ ನಾವು ವೈನ್ ಕುಡಿದೆವು;

*** ಪ್ರಸಂಗ – 4 ***

ಬಾಯಲ್ಲಿ+ಉಳಿಯುವ; ಜನರ ಬಾಯಲ್ಲಿ ಉಳಿಯುವುದು=ಇದೊಂದು ನುಡಿಗಟ್ಟು. ಜಗತ್ತಿನಲ್ಲಿ ಆಗುತ್ತಿರುವ ಪ್ರಸಂಗಗಳನ್ನು ಜನಸಮುದಾಯ ನೆನಪನಲ್ಲಿಟ್ಟುಕೊಂಡು ಮತ್ತೆ ಮತ್ತೆ ಮುಂದಿನ ತಲೆಮಾರುಗಳಲ್ಲಿ ಮಾತನಾಡಿಕೊಳ್ಳುವುದು; ಹಿಂಜರಿ=ಹಿಮ್ಮೆಟ್ಟು/ಹಿಂದಕ್ಕೆ ಸರಿಯುವುದು; ಬಾಯಲ್ಲಿ+ಆಡಲು; ಜನ ಬಾಯಲ್ಲಾಡಲು ಹಿಂಜರೆಯುವುದು=ಇದೊಂದು ನುಡಿಗಟ್ಟು. ಜಗತ್ತಿನಲ್ಲಿ ಆಗುತ್ತಿರುವ ಕೆಡುಕನ್ನು ಕುರಿತು ಜನರು ಪರಸ್ಪರ ಮಾತನಾಡಲು ಹೆದರಿ ತತ್ತರಿಸುವುದು;

ಜನರ ಬಾಯಲ್ಲುಳಿಯುವ ವರ್ಷವಿದು… ಜನ ಬಾಯಲ್ಲಾಡಲು ಹಿಂಜರೆವ ವರ್ಷವಿದು=1940 ನೆಯ ಈ ವರುಶ… ಜಗತ್ತಿನ ಜನಮನದ ಮೇಲೆ ಎರಡು ಬಗೆಯ ಪರಿಣಾಮಗಳನ್ನುಂಟು ಮಾಡಿದೆ. ಜಗತ್ತಿನಲ್ಲಿ ಮಿಲಿಟೆರಿ ಶಕ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಪಡೆದಿರುವ ದೇಶಗಳು ಎರಡು ಗುಂಪುಗಳಾಗಿ ವಿಂಗಡಣೆಗೊಂಡು ಮಾಡುತ್ತಿರುವ ಯುದ್ದದಿಂದ, ಜಗತ್ತಿನ ಮಾನವ ಸಮುದಾಯವು ಮಹಾದುರಂತಕ್ಕೆ ಬಲಿಯಾಗುವುದೆಂಬ ವಾಸ್ತವ ಜನರ ಬಾಯಲ್ಲಿ ಉಳಿಯುತ್ತದೆ. ಹಾಗೆಯೇ ಈ ಯುದ್ದದಲ್ಲಿ ನಡೆಯುವ ಮಾನವ ಸಮುದಾಯದ ಕಗ್ಗೊಲೆಯನ್ನು ಮತ್ತು ಮಾನವ ನಿರ್‍ಮಿತವಾದುದೆಲ್ಲವೂ ಅಳಿದು ಬೆಂಗಾಡಾಗುವುದನ್ನು ನೆನಪಿಸಿಕೊಳ್ಳಲು ಹಿಂಜರಿಯುತ್ತದೆ.

ಮುಪ್ಪಾದವರು=ವಯಸ್ಸಾದವರು; ಹರೆಯದವರು=ತರುಣತರುಣಿಯರು;

ಮುಪ್ಪಾದವರ ಎದುರೇ ಹರೆಯದವರ ಸಾವು=ಯುದ್ಧದಿಂದಾಗಿ ರಣರಂಗದಲ್ಲಿ ಹೋರಾಡುತ್ತಿರುವ ತರುಣರು ಸಾವನ್ನಪ್ಪುತ್ತಾರೆ. ವಯಸ್ಸಾದವರು ಇಂತಹ ಎದೆಬಿರಿಯುವ ಸಾವು ನೋವನ್ನು ಕಣ್ಣಾರ ನೋಡುವ ಸಂಕಟಕ್ಕೆ ಗುರಿಯಾಗುತ್ತಾರೆ;

ವಿವೇಕಿ=ಅರಿವುಳ್ಳ ವ್ಯಕ್ತಿ/ತಿಳುವಳಿಕೆಯುಳ್ಳ ವ್ಯಕ್ತಿ; ಅಳಿವು=ನಾಶ/ಸಾವು; ಮೂರ್ಖ=ತಿಳಿಗೇಡಿ/ಅರಿವಿಲ್ಲದವನು; ಉಳಿವು=ಜೀವಂತವಾಗಿರುವುದು;

ವಿವೇಕಿಗಳ ಅಳಿವು… ಮೂರ್ಖರ ಉಳಿವು=ಯುದ್ದದಿಂದಾಗಿ ಕಟ್ಟುಮಸ್ತಾದ ದೇಹಶಕ್ತಿ ಮತ್ತು ಮನೋಶಕ್ತಿಯನ್ನುಳ್ಳ ಲಕ್ಶಾಂತರ ಮಂದಿ ವ್ಯಕ್ತಿಗಳು ಸಾಯುತ್ತಾರೆ. ಯುದ್ದ ನಡೆಯುವುದನ್ನೇ ವಿರೋದಿಸುತ್ತಾ, ಮಾನವ ಸಮುದಾಯವು ದೇಶಗಳ ಗಡಿಗಳಿಲ್ಲದೆ, ಜನಾಂಗ/ದರ್‍ಮ/ಮಯ್ ಬಣ್ಣದ ತಾರತಮ್ಯವಿಲ್ಲದೆ, ಇಡೀ ಜಗತ್ತಿನ ಮಾನವ ಸಮುದಾಯವೆಲ್ಲವೂ ಪರಸ್ಪರ ಪ್ರೀತಿ, ಕರುಣೆ, ಗೆಳೆತನ ಮತ್ತು ಸಮಾನತೆಯಿಂದ ಬಾಳುವಂತಾಗಬೇಕೆಂಬ ಕರೆಯನ್ನು ನೀಡುವ ವಿವೇಕಿಗಳನ್ನು ಎರಡು ಕಡೆಯ ಸೇನೆಗಳು ಸದೆಬಡಿದು ಕೊಲ್ಲುತ್ತವೆ; ಆದರೆ ತಮ್ಮ ಅದಿಕಾರದ ಗದ್ದುಗೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಜನಾಂಗ, ದರ್‍ಮ, ದೇಶ ಮತ್ತು ಸಂಸ್ಕ್ರುತಿಯ ಹೆಸರಿನಲ್ಲಿ ಮಾನವ ಸಮುದಾಯದಲ್ಲಿ ಪರಸ್ಪರ ಹಗೆತನವನ್ನು ಬೆಳೆಸಿ ಯುದ್ದಕ್ಕೆ ಕಾರಣರಾದ ತಿಳಿಗೇಡಿಗಳಾದ ರಾಜಕಾರಣಿಗಳು ಜೀವಂತವಾಗಿ ಉಳಿದುಕೊಳ್ಳುತ್ತಾರೆ. ಏಕೆಂದರೆ ಅದಿಕಾರದ ಗದ್ದುಗೆಯಲ್ಲಿ ಕುಳಿತಿರುವ ಇವರಾಗಲಿ ಇಲ್ಲವೇ ಇವರ ಮಕ್ಕಳಾಗಲಿ ರಣರಂಗದಲ್ಲಿ ನೇರಾನೇರವಾಗಿ ಶತ್ರುಗಳ ಎದುರು ಹೋರಾಡಲು ಹೋಗುವುದಿಲ್ಲ;

ನುಂಗುವ=ಕಬಳಿಸುವ/ಎಲ್ಲವನ್ನೂ ತನ್ನೊಳಕ್ಕೆ ಸೇರಿಸಿಕೊಳ್ಳುವ; ದಾಹ=ಬಾಯಾರಿಕೆ/ಉರಿ/ತಾಪ/ಬೇಗೆ;

ಭೂಮಿಯಿನ್ನು ಏನನ್ನೂ ಬೆಳೆಯದು… ಅದಕ್ಕೀಗ ನುಂಗುವ ದಾಹ=ಇನ್ನು ಮುಂದೆ ಬೂಮಿಯ ಪಚ್ಚೆಪಯಿರುಗಳಿಂದ ಕೂಡಿ ಹೂಹಣ್ಣುಗಳನ್ನು ನೀಡುವುದಿಲ್ಲ. ಏಕೆಂದರೆ ಬೂಮಿಯನ್ನು ಉತ್ತು ಬಿತ್ತಿ ಬೆಳೆಯಲು ಬಳಸುವ ಬದಲು, ಬೂಮಂಡಲವನ್ನು ರಣರಂಗವನ್ನಾಗಿ ಮಾಡಿಕೊಳ್ಳಲಾಗಿದೆ. ಈಗೇನಿದ್ದರೂ ಪರಸ್ಪರ ಕಾದಾಡಿ ಒಬ್ಬರು ಮತ್ತೊಬ್ಬರನ್ನು ಕೊಲ್ಲುವಾಗ ಬೂಮಿಯ ಮೇಲೆ ಬೀಳುವ ಹೆಣಗಳನ್ನು ತನ್ನಲ್ಲಿ ಒಳಗೊಳ್ಳುವುದು ಮಾತ್ರ ಬೂಮಿಯ ಪಾಲಿಗೆ ಉಳಿದಿದೆ;

ಆಕಾಶದಿಂದ+ಇನ್ನು; ಸುರಿ=ಬೀಳು; ಲೋಹ=ಉಕ್ಕು ಕಬ್ಬಿಣ ಮುಂತಾದ ಲೋಹಗಳಿಂದ ತಯಾರು ಮಾಡಿರುವ ಮದ್ದುಗುಂಡುಗಳನ್ನು ಒಳಗೊಂಡ ಹತಾರಗಳು;

ಆಕಾಶದಿಂದಿನ್ನು ಮಳೆ ಸುರಿಯದು… ಸುರಿವುದು ಬರಿ ಲೋಹ=ಇನ್ನು ಮುಂದೆ ಆಕಾಶದಿಂದ ಬೂಮಂಡಲದ ಸಕಲ ಜೀವಿಗಳ ಪಾಲಿಗೆ ಜೀವಶಕ್ತಿಯಾದ ಮಳೆಯು ಸುರಿಯುವುದಿಲ್ಲ. ಅದರ ಬದಲು ಇಡೀ ಬೂಮಂಡಲದಲ್ಲಿರುವ ಜೀವರಾಶಿಯನ್ನು ಬಲಿ ತೆಗೆದುಕೊಳ್ಳುವ ಮದ್ದುಗುಂಡುಗಳ ಮತ್ತು ಬಾಂಬುಗಳ ಸುರಿಮಳೆಯಾಗುತ್ತದೆ;

ಬ್ರೆಕ್ಟ್ ಅವರು ತಮ್ಮ ವ್ಯಕ್ತಿಗತ ಜೀವನದಲ್ಲಿ ನಡೆದ ಹಲವು ಪ್ರಸಂಗಗಳ ಮೂಲಕ 1940 ನೆಯ ವರುಶದಲ್ಲಿ ಹೇಗೆ ಇಡೀ ಜಗತ್ತು ಎರಡನೆಯ ಮಹಾಯುದ್ದದಿಂದಾಗಿ ದುರಂತದ ಕಡೆಗೆ ಸಾಗುತ್ತಿದೆ ಎಂಬುದನ್ನು ಈ ಕವನದಲ್ಲಿ ನಿರೂಪಿಸಿದ್ದಾರೆ.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: