ಕವಿತೆ: ಬದುಕಿಗೆ ಮುನ್ನುಡಿ

– ಮಹೇಶ ಸಿ. ಸಿ.

ಒಡೆದ ದರ‍್ಪಣ, ಒಡೆದ ಮನಸು
ಎರಡೂ ಒಂದೇ ಬಾಳಲಿ
ಮತ್ತೆ ಸೇರದು ಎಂದೆಂದಿಗೂ
ಮೊದಲಿನ ಹಾಗೆ ಬದುಕಲಿ

ಕನ್ನಡಿಯ ಒಳ ಗಂಟಂತೆ
ಮನಸ ಬಯಕೆಗೂ ಗಂಟಿದೆ
ಕೈಗೆ ಎಟುಕದದಾವ ಪಲವೋ
ಯಾರಿಗದರ ಅರಿವಿದೆ

ಮನೆಯಲೆಂದೂ ಜಾಗವಿಲ್ಲ
ಚೂರಾದ ದರ‍್ಪಣ ಬಿಂಬಕೆ
ಬೆಸುಗೆಯೆಂದೂ ಸಾದ್ಯವಿಹುದು
ಮುರಿದ ಮನಸುಗಳೆರಡಕೆ

ಅಶುದ್ದ ಕನ್ನಡಿ ಶುದ್ದ ಮಾಡಿ
ಮತ್ತೆ ಬಳಸಲೂಬಹುದು,
ಶುದ್ದ ಮನಸಿನ ಪರಿಶುದ್ದತೆಯ
ಜಗಕೆ ತಿಳಿಸಲುಬಹುದು

ಶುಬ್ರ ದರ‍್ಪಣದಿಂದ ತಾನೆ
ಸ್ವಚ್ಚ ಬಿಂಬವು ಕಾಣ್ವುದು
ಶುಬ್ರ ಮನಸ್ಸಿನ ಒಳಗೇ ತಾನೆ
ಶುದ್ದ ಚರಿತೆಯು ಇರುವುದು

ಜೋಪಾನ ಮಾಡಬೇಕು
ಒಡೆಯದಂತೆ ಕನ್ನಡಿ
ಕದಲದಂತೆ ಕಾಯಬೇಕು
ಮನಸೇ ಬದುಕಿಗೆ ಮುನ್ನುಡಿ

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks