ಹೆಂಗರುಳ ಹ್ರುದಯಗಂಗೆ

– ಅಜಯ್ ರಾಜ್.

indian-woman

ಹೆಂಗರುಳ ಹ್ರುದಯಗಂಗೆ
ಹುಟ್ಟು-ಅದು ನಿನ್ನ ಮರುಹುಟ್ಟು
ಅಶ್ಟಲಕ್ಶ್ಮಿಯರ ಹೆಸರೊತ್ತು
ದುಕ್ಕ-ದುಗುಡಗಳ ಹೊರೆ ಹೊತ್ತು
ಜೀವವಿರುವ ನಿರ‍್ಜೀವಿಯಂತೆ
ಬದುಕುವ ನೀನು-
ಬದುಕಿನ ಸಾರ‍್ತದ ಒಳಗುಟ್ಟು!

ಬಾಳ ಪಯಣದಲಿ
ಎಲ್ಲರಿಗೂ ಎಲ್ಲವಾದೆ
ಹಸುಳೆಗೆ ತಾಯಿ,ಗಂಡನಿಗೆ ಮಡದಿ
ಕವಿಯ ಕಾವ್ಯಕ್ಕೆ ಸ್ಪೂರ‍್ತಿ
ರಸಿಕರಿಗೆ ರೂಪವತಿ,ಸಂಸ್ಕ್ರುತಿಗೆ ಶಿಲಾಬಾಲಿಕೆ
ಸೌಬಾಗ್ಯವತಿ,ಸಂಸಾರದರಸಿ
ಬಿರುದು-ಬಿನ್ನಾಣಗಳೊಂದಿಗೆ ನೀನೊಂದಾದೆ
ನೀ ಸೇವಕಿಯಾದೆ!

ಬದುಕಿನ ಕ್ರೂರ ತಿರುವುಗಳು
ಜೀವ ಹಿಂಡಿವೆ
ನಡೆಯಲಾರದ ನೂರಾರು ಹರಿದಾರಿಗಳು
ನಿನ್ನ ಮುಂದಿವೆ
ಬದುಕು ನಿನ್ನದಾದರೂ ಆಯ್ಕೆ ನಿನ್ನದಲ್ಲ
ನಡೆಸುವಾತನ ನಡೆಯ ನಡೆವವನೇನು ಬಲ್ಲ?

ಎದ್ದೇಳು ಕುಸುಮ ಬಾಲೆ
ತೊಳೆ ಸುಪ್ತ ಸೂತಕದ ಕಲೆ
ಬಾಡಿ ಹೋಗ ಬಿಡದಿರು ನಿನ್ನ
ಮನದ ಜಡತ್ವವ ಹಸನಾಗಿಸಿ
ಪುನರುಜ್ಜೀವನಕ್ಕೆ ನಾಂದಿಯಾಗು

(ಚಿತ್ರ ಸೆಲೆ: artponnada.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *