ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ

– ವೆಂಕಟೇಶ ಚಾಗಿ.

friends, friendship, ಗೆಳೆಯರು, ಗೆಳೆತನ, ಸ್ನೇಹ

ಹೌದು, ನಾನು ಸ್ನೇಹ ಜೀವಿ. ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗೂ ನನಗೆ ಹಲವಾರು ಸ್ನೇಹಿತರು ಇದ್ದಾರೆ. ಚಿಕ್ಕ ವಯಸ್ಸಿನಲ್ಲಿ ಇದ್ದಾಗ ನನ್ನೊಂದಿಗೆ ಆಡಿ ಬೆಳೆದ ನನ್ನ ಸ್ನೇಹಿತರು ಇಂದು ಎಲ್ಲಿ ಇರುವರೋ ಗೊತ್ತಿಲ್ಲ. ಆದರೆ ಅವರೊಂದಿಗೆ ಕಳೆದ ನೆನಪುಗಳು ಇಂದಿಗೂ ಮಾಸಿಲ್ಲ. ಕಣ್ಣಾಮುಚ್ಚಾಲೆ ಆಟ, ಮರಕೋತಿ ಆಟ, ಆಣಿಕಲ್ಲು ಆಟ, ಚಿನ್ನಿದಾಂಡು ಹೀಗೆ ಹಲವಾರು ವಿದದ ಆಟಗಳನ್ನು ಆಡುವುದು ಸಾಮಾನ್ಯವಾಗಿತ್ತು. ಕಣ್ಣಾ ಮುಚ್ಚಾಲೆ ಆಟದಲ್ಲಿ ಇಡೀ ನಮ್ಮ ಗ್ರಾಮವನ್ನೇ ಸುತ್ತು ಹಾಕುತ್ತಿದ್ದೆವು. ಕೆಲವು ಸಾರಿ ಗೆಳೆಯರೊಂದಿಗೆ ಜಗಳವಾಡುವುದು, ಟೂ ಬಿಡುವುದು, ಕದ್ದು ತಿನ್ನುವುದು, ಹಂಚಿ ತಿನ್ನುವುದು ಅಂತಹ ಅನುಬವಗಳನ್ನೆಲ್ಲಾ ಮರೆಯೋಕಾಗುತ್ತದೆಯೇ? ಆಗಿನ ಸ್ನೇಹ ಬಳಗವೇ ಹಾಗಿತ್ತು. ಹೈಸ್ಕೂಲ್ ದಿನಗಳಲ್ಲಿನ ಸ್ನೇಹಿತರೇ ಬೇರೆ. ಹರಟೆ ಹೊಡೆಯುವುದು, ಹೊಳೆ ದಂಡೆ ಸುತ್ತುವುದು, ಗಾಳಿ ಪಟ ಹಾರಿಸುವುದು, ಗೋಲಿ ಆಟ, ಕ್ರಿಕೆಟ್ ಹೀಗೆ ಜೊತೆಗಾರರೊಂದಿಗೆ ಕಳೆದ ದಿನಗಳೇ ವಿಶೇಶ. ಕಾಲೇಜು ದಿನಗಳಲ್ಲಿ ಸ್ನೇಹಿತರ ಸಂಕ್ಯೆ ಕಡಿಮೆಯಾದರೂ ಗಟ್ಟಿ ಸ್ನೇಹ ಹಾಗೇ ಉಳಿದಿತ್ತು. ಅವರ ಸಹಾಯ ಸಹಕಾರ ಮರೆಯುವಂತಿಲ್ಲ.

ಜಾತಿ-ದರ‍್ಮ, ಮೇಲು-ಕೀಳುಗಳನ್ನು ಮೀರಿದ್ದು ಸ್ನೇಹ

ಸ್ನೇಹ ಎಂದರೇನೇ ಹಾಗೆ. ಒಂದು ಮದುರವಾದ ಸಂಬಂದವನ್ನು ಏರ‍್ಪಡಿಸುತ್ತದೆ; ಎಂತಹ ಕಾಲದಲ್ಲೂ ಸಹಾಯವನ್ನು ನೀಡುತ್ತದೆ. ಮುಕ್ತ ಮನಸ್ಸಿನಿಂದ ತನ್ನ ಸುಕ ದುಕ್ಕ ಅನಿಸಿಕೆಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ನಿರ‍್ಮಿಸಿಕೊಡುತ್ತದೆ. ಮನೆಯವರೊಂದಿಗೆ ಹಂಚಿಕೊಳ್ಳಲಾಗದ ವಿಶಯಗಳನ್ನು ಆಪ್ತ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ. ಜೀವನವನ್ನು ರೂಪಿಸಿಕೊಳ್ಳುವಲ್ಲಿ ಸ್ನೇಹವೂ ಒಂದು ಮಹತ್ವದ ಪಾತ್ರ ವಹಿಸುತ್ತದೆ. ಜಾತಿ ದರ‍್ಮ ಮೇಲು ಕೀಳು ಎಂಬ ಬಾವನೆಯನ್ನು ಮೀರಿ ಸ್ನೇಹ ಬೆಸೆದುಕೊಳ್ಳುತ್ತದೆ. ಸ್ನೇಹಕ್ಕೆ ಅಂತಹ ಪವರ್ ಇದೆ.

ಅರ‍್ತ ಕಳೆದುಕೊಳ್ಳುತ್ತಿದೆ ಸ್ನೇಹ

ಸ್ನೇಹ ಕೆಲವೊಮ್ಮೆ ದುರುಪಯೋಗಕ್ಕೂ, ಬವಿಶ್ಯದ ತೊಂದರೆಗಳಿಗೂ ಕಾರಣವಾಗಿಬಿಡುತ್ತದೆ. ಹೀಯಾಳಿಸುವುದು, ಬೈಯುವುದು, ಅಡ್ಡ ಹೆಸರಿನಿಂದ ಕರೆಯುವುದು, ರ‍್ಯಾಗಿಂಗ್ ನಡೆಸುವುದು, ಮೋಸ ಮಾಡುವುದು, “ಸಂಕಟ ಬಂದಾಗ ವೆಂಕಟರಮಣ” ಎನ್ನುವಂತೆ ಕೆಲಸವಿದ್ದಾಗ ಮಾತ್ರ ಗೆಳೆತನವನ್ನು ನೆನಪಿಸಿಕೊಂಡು ದುರುಪಯೋಗ ಪಡಿಸಿಕೊಳ್ಳುವ ಗೆಳೆಯರೂ ಇರುತ್ತಾರೆ ಎನ್ನುವ ಮಾತನ್ನು ಅಲ್ಲಗೆಳೆಯುವಂತಿಲ್ಲ. ಗೆಳೆಯರೊಡನೆ ಸೇರಿ ಹಲವು ಚಟಗಳ ದಾಸರಾಗಿ ವಿದ್ಯಾರ‍್ತಿ ಜೀವನವನ್ನು ಹಳ್ಳ ಹಿಡಿಸಿದ ಹಲವಾರು ನಿದರ‍್ಶನಗಳನ್ನು ಇಂದಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಹೀಗಾಗಿ ಸ್ನೇಹ ಎಂಬುದು ತನ್ನ ನಿಜವಾದ ಅರ‍್ತವನ್ನೇ ಕಳೆದುಕೊಳ್ಳುತ್ತಿದೆ.

ಸ್ನೇಹ ಎಂಬುದು ಹೇಗಿರಬೇಕು? ಏಕೆ ಬೇಕು?

ಸ್ನೇಹಿತನಾಗಿ ನಾನು ಇತರರೊಂದಿಗೆ ಹೇಗಿರಬೇಕು ಎಂಬುದನ್ನು ಮೊದಲು ತಿಳಿಯುವುದು ಅವಶ್ಯ. ಸ್ನೇಹದಲ್ಲಿ ಪರಸ್ಪರ ಗೌರವವಿರಬೇಕು. ನಂಬಿಕೆ ಅತೀ ಅವಶ್ಯಕ. ತನ್ನ ಸ್ನೇಹಿತನ ಸಹಾಯಕ್ಕೆ ಯಾವಾಗಲೂ ಮುಂದಿರಬೇಕು. ಸ್ನೇಹಿತನ ಸುಕ ದುಕ್ಕಗಳಿಗೆ ಸ್ಪಂದಿಸಬೇಕು. ಸ್ನೇಹಿತನ ಪ್ರತಿಬೆಯನ್ನು ಗುರ‍್ತಿಸಿ, ಗೌರವಿಸಿ ಪ್ರೋತ್ಸಾಹ ನೀಡುವ ಮನೋಬಾವ ಉಳ್ಳವನಾಗಬೇಕು. ತನ್ನ ಲಾಬಕ್ಕಾಗಿ ಸ್ನೇಹ ಮಾಡದೇ ಸಹಕಾರ ಸಹಬಾಳ್ವೆ ಮನೋಬಾವಗಳು ಇದ್ದಾಗಲೇ ಸ್ನೇಹ ಉಳಿಯುತ್ತದೆ. ಇಲ್ಲದಿದ್ದರೆ ಸ್ನೇಹ ಎಂಬ ಪದಕ್ಕೆ ಅರ‍್ತವೇ ಇಲ್ಲದಂತಾಗುತ್ತದೆ‌.

(ಚಿತ್ರ ಸೆಲೆ: maxpixel.net)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Ravichandra Ravi says:

    ವೆಂಕಟೇಶ ಚಾಗಿರವರ ಸ್ನೇಹದ ಕುರಿತ ಲೇಕನ ಸೊಗಸಾಗಿದೆ

  2. C P Nagaraja says:

    ಯಾರು ನಮ್ಮ ನಡೆನುಡಿಯಲ್ಲಿನ ತಪ್ಪನ್ನು ಕಂಡ ಕೂಡಲೇ , ಅದರಿಂದ ಉಂಟಾಗುವ ಕೆಡುಕನ್ನು ತಿಳಿಸಿ, ಎಚ್ಚರಿಕೆಯನ್ನು ನೀಡುತ್ತಾರೆಯೋ ಅವರೇ ನಮ್ಮ ಪಾಲಿಗೆ ಒಳ್ಳೆಯ ಗೆಳೆಯ / ಗೆಳತಿ.

  3. Sachin.H.J Jayanna says:

    ಸುಂದರ ಸರಳ ಬರಹ :):)

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *