ನಾ ನೋಡಿದ ಸಿನೆಮಾ: ಬಾನದಾರಿಯಲ್ಲಿ

– ಕಿಶೋರ್ ಕುಮಾರ್.

ಬಾಳಿನ ದಾರಿಯಲ್ಲಿ ನಮ್ಮ ಪಯಣ ಯಾವತ್ತೂ ನಾವಂದು ಕೊಂಡಂತೆ ಸಾಗದು. ಅಲ್ಲಿ ನಮಗರಿಯದೆ ನಮ್ಮೆದುರು ಬರುವ ನೋವು, ನಲಿವುಗಳು ನಮ್ಮ ಪಯಣದ ದಿಕ್ಕನ್ನೇ ಬದಲಾಯಿಸಿ ಬಿಡುತ್ತವೆ. ಆ ಬದಲಾದ ದಿಕ್ಕಿನಲ್ಲಿ ನೋವನ್ನು ಮರೆತು ನಲಿವನ್ನು ಹುಡುಕಿಕೊಳ್ಳುವುದು ಕಶ್ಟವೇ ಇರಬಹುದು ಆದರೆ ಅದೇ ಬಾಳುವವರ ಲಕ್ಶಣ. ಇಲ್ಲವೇ ನೋವನ್ನು ನೆನೆಯುತ್ತಾ ಇನ್ನುಳಿದ ಮುಂದಿನ ದಿನಗಳಲ್ಲೂ ಅದೇ ನೋವನ್ನು ಉಣ್ಣುತಾ ಸಾಗಬೇಕು. ನಮ್ಮ ಪಯಣ ಯಾವತ್ತೂ ನಿನ್ನೆಗಳ ನೆನಪಿನಲ್ಲಿ, ನಾಳೆಗಳ ಅಂಜಿಕೆಯಲ್ಲಿ ಇಂದಿನ ದಿನವನ್ನು ಮರೆಯುವಂತಾಗಬಾರದು. ನಮ್ಮಿಂದ ದೂರವಾದವರ ನೆನಪುಗಳನ್ನು ಉಳಿಸಿಕೊಂಡು ಅವರ ಕನಸುಗಳನ್ನು ಸಾಕಾರಗೊಳಿಸಲು ಆಗುವುದಾದರೆ ಅದರೆಡೆಗೆ ಸಾಗುವುದು ಒಳಿತು. ಇವೆಲ್ಲವೂ ನಿಜ ಜೀವನಕ್ಕೂ ಹೊಂದುತ್ತವೆ. ಇಂತದ್ದೇ ಒಂದು ಕತೆ ಹೊಂದಿದ ಚಿತ್ರವೇ ಬಾನದಾರಿಯಲ್ಲಿ.

ಪ್ರೀತಿಸಿದ ಜೋಡಿಯೊಂದು ಮನೆಯವರನ್ನು ಒಪ್ಪಿಸಿ, ಅದನ್ನು ಮದುವೆಯ ವರೆಗೆ ಒಯ್ದು, ಮುಂದೆ ಹೊಸ ಬಾಳಿನ ಕನಸು ಕಾಣುತ್ತಿದ್ದಾಗ ಎದುರಾಗುವ ಅನಿರೀಕ್ಶಿತ ಸಂದರ‍್ಬ. ಅದನ್ನು ನಾಯಕ ಹೇಗೆ ಎದುರಿಸುತ್ತಾನೆ, ಮುಂದೆ ಆತನ ಪಯಣ ಹೇಗೆ ಸಾಗುತ್ತದೆ ಎಂಬುದನ್ನು ಒಂದು ಪೀಲ್ ಗುಡ್ ಮೂವಿಯಂತೆ ನೋಡುಗರ ಮುಂದಿಟ್ಟಿದೆ ಸಿನೆಮಾ ತಂಡ.

ಎಂದಿನಂತೆ ತಮ್ಮ ಸಹಜ ನಟನೆಯ ಮೂಲಕ ಗಣೇಶ್ ಅವ್ರು ನೋಡುಗರ ಮುಂದೆ ಬಂದಿದ್ದು, ರುಕ್ಮಿಣಿ ವಸಂತ ಅವರ ಪಾತ್ರ ನೋಡುಗರ ಮನ ಗೆಲ್ಲುತ್ತದೆ. ರೀಶ್ಮಾ ನಾಣಯ್ಯ ಅವರು ತಮ್ಮ ಚಿನುಕುರಳಿ ಮಾತುಗಳಿಂದ ನೋಡುಗರನ್ನು ಸೆಳೆಯುತ್ತಾರೆ. ಇನ್ನುಳಿದಂತೆ ರಂಗಾಯಣ ರಗು ಅವರ ಪಾತ್ರ ಬಾವನೆ ವ್ಯಕ್ತಪಡಿಸುವಲ್ಲಿ ಸ್ವಲ್ಪ ಅತಿಯಾಯಿತು ಎನಿಸುತ್ತದೆ. ಅಶೋಕ್ ರಾಜ್ ಅವರ ಪಾತ್ರ ಎಲ್ಲರನ್ನು ನಗಿಸುತ್ತದೆ. ಪ್ರೀತ ಜಯರಾಮ್ ಅವರ ಕತೆ ಇದ್ದು, ಪ್ರೀತಮ್ ಗುಬ್ಬಿ ಅವರ ನಿರ‍್ದೇಶನ ಹಾಗೂ ಚಿತ್ರಕತೆ ಇದೆ. ಎಂದಿನಂತೆ ಪ್ರೀತಮ್ ಗುಬ್ಬಿ ಅವರ ನಿರ‍್ದೇಶನ ಅಚ್ಚುಕಟ್ಟಾಗಿದೆ. 2019ರಲ್ಲಿ ತೆರೆಕಂಡ 99 ಚಿತ್ರದ ನಂತರ ಪ್ರೀತಮ್ ಗುಬ್ಬಿ ಅವರ ನಿರ‍್ದೇಶನದ ಚಿತ್ರ ಇದಾಗಿದ್ದು, ನೋಡುಗರಿಗೆ ಒಂದೊಳ್ಳೆ ಸಿನೆಮಾ ಕೊಟ್ಟಿದ್ದಾರೆ. ಅರ‍್ಜುನ್ ಜನ್ಯ ಅವರ ಸಂಗೀತ ಮುದ ನೀಡುತ್ತದೆ. ಅಬಿಲಾಶ್ ಕಳತಿ ಅವರ ಸಿನೆಮಾಟೋಗ್ರಪಿ ಚೆನ್ನಾಗಿದ್ದು, ದೀಪು ಎಸ್ ಕುಮಾ‍ರ್ ಅವರ ಸಂಕಲನ ಹಾಗೂ ಶ್ರೀ ವಾರಿ ಟಾಕೀಸ್ ಅವರು ಈ ಚಿತ್ರವನ್ನು ನಿರ‍್ಮಿಸಿದ್ದಾರೆ. ಕುಟುಂಬ ಸಮೇತ ಕೂತು ನೋಡ ಬಹುದಾದ ಒಂದು ಪೀಲ್ ಗುಡ್ ಮೂವಿಯೇ ಬಾನದಾರಿಯಲ್ಲಿ….

(ಚಿತ್ರಸೆಲೆ: imdb.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *