ಹಿಂದುಳಿಯಲು ಪಯ್ಪೋಟಿ ನಡೆಸುವ ಒಕ್ಕೂಟ ವ್ಯವಸ್ತೆ
ಒಕ್ಕೂಟ ಸರ‍್ಕಾರದ ಹಣಕಾಸು ಕಾತೆ ನೇಮಿಸಿದ್ದ ರಗುರಾಮ ರಾಜನ್ ಸಮಿತಿಯ ವರದಿ ಹೊರಬಿದ್ದಿದೆ. ಬಾರತ ದೇಶದ ಬೇರೆ ಬೇರೆ ನಾಡುಗಳ ಬೆಳವಣಿಗೆ, ಹಿಂದುಳಿದಿರುವಿಕೆಗಳ ಬಗ್ಗೆ ಅರಿತು ಮುಂದಿನ ಹಣಕಾಸಿನ ನೀತಿ ಹೊರತರಲು ಒಕ್ಕೂಟ ಸರ‍್ಕಾರ ರಾಜನ್ ಮುಂದಾಳತ್ವದಲ್ಲಿ ಈ ಸಮಿತಿಯನ್ನು ರಚನೆ ಮಾಡಿತ್ತು. ಈ ಮುಂಚೆ ಒಕ್ಕೂಟ ಸರ‍್ಕಾರ ದೇಶದ ಎಲ್ಲ ನಾಡುಗಳಿಗೆ ನೀಡುತ್ತಿದ್ದ ಹಣಕಾಸು ಇನ್ನು ಮುಂದೆ ಬಿನ್ನವಾಗಿರಲಿದೆ. ರಗುರಾಮ ರಾಜನ್ ತಂಡ ಹೊರತಂದ ವರದಿಯ ಕೆಲ ಮುಕ್ಯ ಸಂಗತಿಗಳೇನು ನೋಡೋಣ ಬನ್ನಿ.
ಈ ಮೊದಲು ಹಿಂದುಳಿದ ನಾಡು ಎಂಬ ಹಣೆಪಟ್ಟಿ ಹೊಂದಿದ ನಾಡುಗಳಿಗೆ ‘ವಿಶೇಶ ಸ್ತಾನಮಾನ’ದಡಿ ಇಡುಗಂಟು ದೊರಕುತ್ತಿರಲಿಲ್ಲ. ಇಡುಗಂಟು ಕೊಡಲು ಒಕ್ಕೂಟವು ಆಯಾ ನಾಡಿನ ಬೆಳವಣಿಗೆ ಮತ್ತು ಎಸಕಗಳನ್ನು ತನ್ನ ಅಳತೆಗೋಲಾಗಿಸಲಿದೆ. ಬಾರತದ ವಿವಿದ ನಾಡುಗಳನ್ನು 3 ಪಂಗಡಗಳಲ್ಲಿ ಬೇರ‍್ಪಡಿಸಲಾಗಿದೆ, ಮೊದಲನೆಯದಾಗಿ ಅತಿ ಕಡಿಮೆ ಬೆಳವಣಿಗೆ ಹೊಂದಿರುವ ನಾಡುಗಳು, ಎರಡು ಕಡಿಮೆ ಬೆಳವಣಿಗೆ ಹೊಂದಿರುವವು ಹಾಗೂ ಕೊನೆಯದಾಗಿ ಇವರೆಡಕ್ಕಿಂತಲೂ ಹೆಚ್ಚು ಬೆಳವಣಿಗೆ ಕಂಡ ನಾಡುಗಳು. ರಾಜನ್‍ರವರ ತಂಡ ಈ ಎಲ್ಲ ನಾಡುಗಳಿಗೆ ಮಲ್ಟಿ-ಡಾಯ್ಮೆನ್ಶನಲ್ ಇಂಡೆಕ್ಸ್ ಎಂಬ ಅಂಕ ನೀಡಿದ್ದಾರೆ. ಪ್ರತಿ ನಾಡಿನ ಕಲಿಕೆ, ದುಡಿಮೆ, ಅಲ್ಲಿನ ಮಂದಿಯ ಕರ‍್ಚು-ವೆಚ್ಚಗಳು, ಮಂದಿಯ ಸರಾಸರಿ ಸಂಬಳ, ಇರುವ ಮನೆಯ ಬಳಕೆ ಸವ್ಕರ‍್ಯಗಳು, ಬಡತನ, ಹಿಂದುಳಿದ ಜಾತಿ/ಪಂಗಡ, ಮಂದಿಯ ಆರೋಗ್ಯ, ಮುಂದುವರಿದ ಪಟ್ಟಣಗಳು ಮತ್ತು ಹಣಕಾಸಿನ ಒಳಗೊಳ್ಳುವಿಕೆ – ಇವುಗಳ ನೆಲೆಯ ಮೇಲೆ ಈ ಗುರುತಿನ ಅಂಕ ಕೊಡಲಾಗಿದೆ.
ಈ ಗುರುತಿಗೆ ತಕ್ಕಂತೆ ಒಕ್ಕೂಟದ ಹಣಕಾಸು ಸಚಿವಾಲಯ ವಿವಿದ ನಾಡಿನ ಹಮ್ಮುಗೆಗಳಿಗೆ ದುಡ್ಡನ್ನು ನಿಗದಿಪಡಿಸಲಿದೆ. ಹೆಚ್ಚು ಅಂಕ ಪಡೆದು ಅತಿ ಕಡಿಮೆ ಏಳಿಗೆಯಾದ ಬಿಹಾರ್, ಒರಿಸ್ಸಾ, ಉತ್ತರಪ್ರದೇಶ, ಮದ್ಯಪ್ರದೇಶ, ಜಾರ‍್ಕಂಡ್‍ಗಳಿಗೆ ಹೆಚ್ಚು ಹಣದ ಹೊಳೆಹರಿಯಲಿದ್ದರೆ, ಎಲ್ಲರಿಗಿಂತ ಮುಂದಿರುವ ಕೇರಳ, ತಮಿಳುನಾಡು, ಮಹಾರಾಶ್ಟ್ರ, ಗೋವಾಗಳಿಗೆ ಒಕ್ಕೂಟ ಸರ‍್ಕಾರದ ದುಡ್ಡು ಹಂಚಿಕೆ ಕಡಿಮೆಗೊಳ್ಳುವುದು. ಕರ‍್ನಾಟಕ, ಆಂದ್ರ, ಜಮ್ಮುಕಾಶ್ಮೀರ, ಹಿಮಾಚಲ, ಪಡುವಣ ಬಂಗಾಳ ಮತ್ತು ಗುಜರಾತ್ ಇವುಗಳು ಎಲ್ಲದರ ಮದ್ಯದಲ್ಲಿವೆ. ದೇಶದಲ್ಲೇ ಬಿರುಸಿನ ಏಳಿಗೆ ಹೊಂದಿದ ನಾಡು, ಎಲ್ಲಕ್ಕಿಂತ ಮುಂದೆ ಎಂಬಂತೆ ಬಿಂಬಿತವಾಗಿದ್ದ ಗುಜರಾತ್ ಈ ಪಟ್ಟಿಯಲ್ಲಿ ಮದ್ಯದ ಸ್ತಾನಕ್ಕೆ (12ನೆಯದು) ಇಳಿದಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ. ವಿವಿದ ನಾಡಿನ ಕುಂದು ಕೊರತೆ ಅಲ್ಲಿನ ಅಬಿವ್ರುದ್ದಿಗಳಿಗೆ ಇದೊಂದೇ ಅಳತೆಗೋಲನ್ನು ಇಟ್ಟುಕೊಂಡು ಬಾರತವನ್ನು ಏಳಿಗೆಯ ಹಾದಿಯತ್ತ ಕೊಂಡೊಯ್ಯಲು ರಾಜನ್ ಸಮಿತಿ ಹಣಕಾಸು ಸಚಿವ ಪಿ. ಚಿದಂಬರಮ್ ಅವರಿಗೆ ಸಲಹೆ ಕೊಟ್ಟಿದೆ. ಬರಲಿರುವ ಮುಂಗಡ ಪತ್ರದವರೆಗೂ ಯು.ಪಿ.ಎ. ಸರ‍್ಕಾರ ಆಳ್ವಿಕೆಯಲ್ಲಿದ್ದರೆ, ಚಿದಂಬರಮ್ ಮಂಡಿಸುವ ಮುಂಗಡ ಪತ್ರದ ಮೇಲೆ ಈ ವರದಿ ಸಾಕಶ್ಟು ಪ್ರಬಾವ ಬೀರಲಿದೆ.
ಇದರ ಪರಿಣಾಮ
ದೇಶದ ಎಲ್ಲ ನಾಡುಗಳಿಗೆ ಈ ತೆರನಾದ ಒಂದು ಹಣ ವಿಂಗಡನೆಯ ಏರ‍್ಪಾಟು ಎಶ್ಟು ಸರಿ ಎಂಬುದು ಎಲ್ಲರ ಬಾಯಿಗೆ ಬೀಗ ಹಾಕಿದೆ! ಎತ್ತುಗೆಗೆ ಕರ‍್ನಾಟಕವನ್ನೇ ನೋಡಿ, ಹೇರಳವಾದ ಆಯ್ಟಿ-ಬಿಟಿ, ಬಟ್ಟೆ ತಯಾರಿಕೆ, ಬಾನೋಡ, ತಾನೋಡ, ಮಾತ್ರೆ-ಗುಳಿಗೆಗಳ ಕಯ್ಗಾರಿಕೆಗಳಿಂದ ಕೂಡಿದ ನಾಡಿದು. ಇದರೊಂದಿಗೆ ಬಾರಿ ಸಂಕ್ಯೆಯ ಪಬ್ಲಿಕ್ ಸೆಕ್ಟರ್ ಉದ್ದಿಮೆಗಳಾದ ಬಿ.ಹೆಚ್.ಇ.ಎಲ್., ಹೆಚ್.ಎ.ಎಲ್., ಎನ್.ಎ.ಎಲ್., ಬಿ.ಇ.ಎಲ್., ಬಿ.ಇ.ಎಮ್.ಎಲ್.ಗಳು ನಮ್ಮಲ್ಲಿವೆ. ಕರ‍್ನಾಟಕದಲ್ಲಿ ಕೆಲಸ ಮಾಡುವ ಎಲ್ಲ ಕನ್ನಡಿಗರು, ತಮ್ಮ ತೆರಿಗೆಯನ್ನು ಒಕ್ಕೂಟಕ್ಕೆ ಕಟ್ಟಿ ಅದೇ ದುಡ್ಡನ್ನು ಸರ‍್ಕಾರ ಬಳಸಿಕೊಂಡು ಬೇರೆ ಹಿಂದುಳಿದ ನಾಡಿನ ಏಳಿಗೆಗೆ ಒದಗಿಸಿದರೆ, ಇಲ್ಲಿನವರ ಗತಿ? ನಮ್ಮ ನಾಡಿನ ಬೆಳವಣಿಗೆಗೆ ನಾವು ತೆರಿಗೆ ಕಟ್ಟಿ ನಾಳಿನ ಒಳಿತಿಗೆ ಸಹಕರಿಸಿ ಎಂದು ಪದೇ ಪದೇ ಬಯಲರಿಕೆಗಳ ಮೂಲಕ ಎಚ್ಚರಿಸುವ ಸರ‍್ಕಾರ ಇದೀಗ ನಮ್ಮ ಕರ‍್ನಾಟಕದಿಂದ ಬರುವ ಸಾವಿರಾರು ಕೋಟಿ ಹಣ ಬಳಸಿ ಬಿಹಾರ್, ಒರಿಸ್ಸಾ ಇಲ್ಲವೇ ಇತರ ಹಿಂದುಳಿದ ರಾಜ್ಯಗಳಿಗೆ ಕೊಟ್ಟು ಉದ್ದಾರ ಮಾಡುವುದೆಂದರೇನು? ನಮಗೆ ಚಿಪ್ಪೇ! ಇದು ಸದ್ಯಕ್ಕಿರುವ ಏರ‍್ಪಾಟಿನಂತೆ, ಕೆರೆಯ ನೀರನು ಕೆರೆಗೆ ಚೆಲ್ಲುವುದೇ ಆಗಿದೆ. ಈಗಿರುವಂತೆ ಪ್ರಾದೇಶಿಕ ಪಕ್ಶ ಹೊಂದಿರುವ ಬಲಾಡ್ಯ ನಾಡುಗಳು ಲೋಕಸಬೆಯಲ್ಲಿ ದೊಂಬಿ ಎಬ್ಬಿಸಿ, ತಮ್ಮ ಸಂಸದರ ಮೂಲಕ ದಿಲ್ಲಿಯಲ್ಲಿ ಲಾಬಿ ಮಾಡಿ ಒಕ್ಕೂಟದ ಹೆಚ್ಚಿನ ನೆರವು ಪಡೆಯುತ್ತಿರುವುದು ಮುಂದುವರೆಯತ್ತ ಹೋಗಲಿದೆ. ರಾಶ್ಟ್ರೀಯ ಪಕ್ಶಗಳನ್ನು ನಂಬಿ ಕುಳಿತಿರುವ ಕರ‍್ನಾಟಕದ ಪಾಡು ಎಂದಿನಂತೆ ಮಲತಾಯಿ ಮಕ್ಕಳ ಪಾಡು.
ರಯ್ಲು ಮುಂಗಡ ಪತ್ರದ ಎತ್ತುಗೆಯನ್ನೇ ತೆಗೆದುಕೊಂಡರೆ, ಬಂಗಾಳ/ಬಿಹಾರದ ಸಚಿವರು ಹೊಸ ರಯ್ಲಿನ ಕಾರ‍್ಕಾನೆಗಳ ಸಮೇತ ನೂರಾರು ಬಂಡಿಗಳನ್ನು ಬಂಗಾಳ/ಬಿಹಾರದ ಒಳನಾಡಿಗೆ ಹರಿಬಿಡುತ್ತಾರೆ. ಹೀಗೆ ಆಂದ್ರ, ಮಹಾರಾಶ್ಟ್ರ, ಉತ್ತರ ಪ್ರದೇಶದ ಪ್ರಾದೇಶಿಕ ಪಕ್ಶದ ಆಳ್ವಿಗರು ದಿಲ್ಲಿ ನಾಯಕರ ಮೇಲೆ ಒತ್ತಡ ಹೇರಿಯೋ, ಮನವೊಲಿಸಿಕೊಂಡೋ ಬಿಹಾರಿಗರ, ಮರಾಟಿಗರ, ತೆಲುಗರ ಹಿತ ಕಾಯುತ್ತ ತಮ್ಮ ಮಂದಿಗಳ ನಿಜವಾದ ನಾಯಕರಾಗಿದ್ದುಂಟು. ಹಣದ ದುರ‍್ಬಳಕೆ, ಲಾಬಿಕೋರತನ, ಪಕ್ಶಪಾತ ಒಂದೆಡೆಯಾದರೆ, ಹಿಂದುಳಿದ ನಾಡಿನವರ ಎಗ್ಗಿಲ್ಲದ ವಲಸೆ ಇನ್ನೊಂದೆಡೆ. ಇದರಿಂದ ಕರ‍್ನಾಟಕದ ಕನ್ನಡಿಗರು ಕೆಲಸವೂ ಇಲ್ಲದೆ ಬೆಳವಣಿಗೆಯೂ ಇಲ್ಲದೆ ಗೋವಿಂದ ಗೋವಿಂದ ಎಂದು ಚೊಂಬೆತ್ತುವ ಪರಿಸ್ತಿತಿ ದಿಟ. ನಾಡುಗಳ ನಡುವೆ ಪರಸ್ಪರ ತಿಕ್ಕಾಟ, ಗರ‍್ಶಣೆಗಳು ಹೆಚ್ಚಲೂಬಹುದು. ನೆನಪಿರಲಿ ಈ ವರದಿಗೆ ಹಣಕಾಸು ಸಚಿವಾಲಯ ಕಯ್ ಹಾಕಿದ್ದೇ ಬಿಹಾರದ ಮುಕ್ಯಮಂತ್ರಿ ತಮ್ಮ ನಾಡಿಗೆ ವಿಶೇಶ ಸ್ತಾನ-ಮಾನ ಕೊಡುವಂತೆ ಕೇಳಿದ್ದಕ್ಕೆ, ಇದು ಕಂಡು ಒರಿಸ್ಸಾ ಕೂಡ ತಾವು ಹಿಂದುಳಿದಿರುವುದಾಗಿ ತಗಾದೆ ತೆಗೆದಿದ್ದು ಈಗ ಹಳೆಯ ಸುದ್ದಿ.
ಹೀಗಾಗಬೇಕು
ಇದರ ಬದಲು ಒಕ್ಕೂಟ ಸರ‍್ಕಾರ ಪ್ರತಿ ನಾಡಿನಿಂದ ಬರುವ ತೆರಿಗೆ ದುಡ್ಡನ್ನು ಅಲ್ಲಿಯ ಸರ‍್ಕಾರಗಳಿಗೆ ಕರ‍್ಚುಮಾಡುವ ಹೊಣೆಗಾರಿಕೆ ಒಪ್ಪಿಸಬೇಕು. ಆಯಾ ನಾಡಿನ ಮಂದಿಯ ಆಳ್ವಿಕೆ ಚುಕ್ಕಾಣಿ ಹಿಡಿದವರು ಅಲ್ಲಿನ ಬೆಳವಣಿಗೆಗೆ ತಕ್ಕುದಾದ ವಿವಿದ ಹಮ್ಮುಗೆಗಳನ್ನು ಕಯ್ಗೆತ್ತಿಕೊಂಡು ಮುನ್ನುಗ್ಗಲು ಅನುವು ಮಾಡಿಕೊಡಬೇಕು. ಸ್ತಳೀಯ ಸರ‍್ಕಾರಗಳು ಗೊಂದಲಗಳಲ್ಲಿ ಇದ್ದಾಗ ಬೇಕಿದ್ದರೆ ಒಕ್ಕೂಟ ತಾನು ನೆರವುಗಾರನಂತೆ ಸಲಹೆಗಳನ್ನು ನೀಡಿ, ಆಡಳಿತದಲ್ಲಿರುವ ಪಕ್ಶಪಾತ ಮುಂತಾದ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ಸಾದ್ಯ. ಇದರಿಂದ ಎಲ್ಲರಿಗೂ ಲಾಬವಲ್ಲದೆ, ಆಳ್ವಿಕೆಯಲ್ಲಿ ಹೆಚ್ಚು ತೂರ್‍ನೋಡುತನವೂ (transparency) ಕಾಣಲು ಸಿಗುವುದು.
(ಮಾಹಿತಿ ಸೆಲೆ: in.finance.yahoo.com)
(ಚಿತ್ರ ಸೆಲೆ: weeklytimesofindia.com)
ಇತ್ತೀಚಿನ ಅನಿಸಿಕೆಗಳು