ಹಯಬ್ರೀಡ್ ಕಾರುಗಳತ್ತ ಒಂದು ಇಣುಕುನೋಟ

– ಜಯತೀರ‍್ತ ನಾಡಗವ್ಡ.

hybrid-car-toyota-prius

(ಟೋಯೋಟಾ ಪ್ರಿಯುಸ್ – ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಮಾರಾಟವಾಗುತ್ತಿರುವ ಬೆರಕೆ ಕಾರು)  

ಪೆಟ್ರೋಲಿಯಂ ಉರುವಲುಗಳು ಮುಗಿದುಹೋಗುವಂತ ದಿನಗಳು ದೂರವಿಲ್ಲ ಹಾಗಾಗಿ ಬರಲಿರುವ ದಿನಗಳಲ್ಲಿ ಡೀಸಲ್, ಪೆಟ್ರೊಲ್ ನಂತ ಉರುವಲುಗಳ ಬಳಕೆ ಕಶ್ಟವಾಗಲಿದೆ. ದಿನೇ ದಿನೇ ಹೆಚ್ಚಳಗೊಳ್ಳುತ್ತಿರುವ ಡೀಸಲ್, ಪೆಟ್ರೋಲ್ ಬೆಲೆಯಿಂದಾಗಿ ಮಂದಿ ಈಗ ತಮ್ಮ ಬಂಡಿಗಳನ್ನು ನಡೆಸಲು ಬೇರೆಯದೇ ಕಸುವಿನ ಸೆಲೆಯತ್ತ ಮುಕ ಮಾಡುತ್ತಿದ್ದಾರೆ. ಈ ನಿಟ್ಟಿನ ಹೊಸ ಹುಡುಕಾಟದಲ್ಲಿ ಹೊಮ್ಮಿದ್ದೇ ಬೆರಕೆ ಬಂಡಿಗಳು (hybrid cars). ಬೆರಕೆ ಕಾರುಗಳ ಕುರಿತು ಒಂದು ಇಣುಕುನೋಟ ಇಲ್ಲಿದೆ.

ಬೆರಕೆ ಕಾರಿನಲ್ಲಿ ಹೆಚ್ಚಾಗಿ 2 ಕಸುವಿನ ಸೆಲೆಗಳು ಇರುತ್ತವೆ. ಡೀಸಲ್ ಇಲ್ಲವೇ ಪೆಟ್ರೋಲ್ ಕಸುವಿನಿಂದ ನಡೆಯುವ ಬಿಣಿಗೆಯ (engine) ಜೊತೆ ಎರಡನೆಯ ಕಸುವಿನ ಸೆಲೆಯಾಗಿ ಮಿಂಚು ಓಡುಗೆಯನ್ನು (electric motor) ಅಳವಡಿಸಲಾಗಿರುತ್ತದೆ. ಎಲ್ಲ ಬೆರಕೆ ಕಾರುಗಳು ಇದೇ ತರದ 2 ಸೆಲೆ ಹೊಂದಿರಬೇಕೆಂದಿಲ್ಲ. ಆದರೆ ಇವೊತ್ತಿನ ಹೆಚ್ಚಿನ ಬೆರಕೆ ಬಂಡಿಗಳ ಏರ‍್ಪಾಟು ಈ ತರನಾಗಿರುತ್ತದೆ.

ಬೆರಕೆ ಕಾರಿನ ಪ್ರಮುಕ ಬಾಗಗಳು:

1. ಬಿಣಿಗೆ
2. ಜನರೇಟರ್‍
3. ಬ್ಯಾಟರಿ ಗೊಂಚಲು
4. ಮಿಂಚು ಓಡುಗೆ
5. ಡೀಸಲ್ ಚೀಲ
6. ಹಲ್ಲುಗಾಲಿ ಏರ‍್ಪಾಡು

ಬೆರಕೆ ಕಾರುಗಳಲ್ಲಿ ಎರಡು ಬಗೆ, ಒಂದು ‘ಸರಣಿ ಬೆರಕೆ’ (series hybrid) ಬಂಡಿ ಮತ್ತೊಂದು ‘ಜೋಡಿ ಬೆರಕೆ’ (parallel hybrid) ಬಂಡಿ.

series

 

parallel

ಸರಣಿ ಬೆರಕೆ ಕಾರುಗಳಲ್ಲಿ ಜನರೇಟರಿದ್ದು ಮಿಂಚು ಓಡುಗೆಗೆ ಕಸುವನ್ನು ನೀಡಲು ಇಲ್ಲವೇ ಬ್ಯಾಟರಿಗಳನ್ನು ಚಾರ‍್ಜ್ ಮಾಡಲು ಬಳಸಲಾಗುತ್ತದೆ. ಈ ಜನರೇಟರಗೆ ಡೀಸಲ್ ಇಲ್ಲವೆ ಪೆಟ್ರೋಲ್ ಬಿಣಿಗೆಯು ಬಲ ತುಂಬುತ್ತದೆ. ಹೀಗಾಗಿ ಸರಣಿ ಬೆರಕೆ ಬಂಡಿಯಲ್ಲಿ ಬಿಣಿಗೆಯಿಂದ ನೇರವಾಗಿ ಕಾರು ಓಡುವುದಿಲ್ಲ ಅದರ ಬದಲಾಗಿ ಮಿಂಚು ಓಡುಗೆಯಿಂದ ಓಡುತ್ತದೆ. ಅದೇ ಜೋಡಿ ಬೆರಕೆ ಕಾರಿನಲ್ಲಿ ಡೀಸಲ್ ಇಲ್ಲವೇ ಪೆಟ್ರೋಲ್ ಬಿಣಿಗೆ ಮತ್ತು ಮಿಂಚು ಓಡುಗೆಗಳೆರಡರ ಕಸುವಿನ ಸೆಲೆಗಳ ಮೂಲಕ ಬಂಡಿಯನ್ನು ಒಟ್ಟಿಗೆ ಓಡಿಸಬಹುದು.

ದೂರದ ಸ್ತಳಗಳಿಗೆ ಹೋಗವಾಗ ಉರುವಲು ಉಳಿಸಲು ಡೀಸಲ್ ಬಿಣಿಗೆ ನೆರವಾದರೆ, ಸಮೀಪದ ಜಾಗಗಳಿಗೆ ತೆರಳಲು ಮಿಂಚು ಓಡುಗೆಯ ನೆರವಿಂದ ಕಾರು ಓಡಿಸಬಹುದು. ಮಿಂಚು ಓಡುಗೆಯಿಂದ ಕಾರು ಕೆಡುಗಾಳಿ ಉಗುಳುವ ಮಾತೇ ಇಲ್ಲ.

ಹಳೆ ತಲೆಮಾರಿನ ಪೆಟ್ರೋಲಿಯಮ್ ಉರುವಲುಗಳ ಬಿಣಿಗೆ ಜೊತೆಯಲಿ ಹೊಸ ಚಳಕದ ಮಿಂಚು ಓಡುಗೆ ಬಳಸಿಕೊಳ್ಳುವ ಬೆರಕೆ ಬಂಡಿಗಳು ಈಗಾಗಲೇ ಮುಂದುವರೆದ ಯುರೋಪ್, ಜಪಾನ್, ಅಮೇರಿಕಾ, ಕೆನಡಾ ನಾಡುಗಳಲ್ಲಿ ಲಗ್ಗೆ ಇಟ್ಟಿವೆ. ಇಂತ ಕಾರುಗಳು ನಮ್ಮ ನಾಡಲ್ಲೂ ಹೆಚ್ಚಾಗಲಿವೆ. ಅಲ್ಲಿಯವರೆಗೂ ಕಾರೊಲವಿಗರು ಕಾಯ್ತಾ ಇರಿ.

(ಚಿತ್ರಸೆಲೆ: watchcaronline.blogspot.com

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: