ಇಂದಿನಿಂದ ’ಬಂಡಿಗಳ ಸಂತೆ’

– ಜಯತೀರ‍್ತ ನಾಡಗವ್ಡ.

autoexpo1

ಜಗತ್ತಿನೆಲ್ಲೆಡೆ ಹೆಸರುವಾಸಿಗೊಂಡಿರುವ ಬಾರತದ ತಾನೋಡಗಳ ತೋರ‍್ಪು ಆಟೋ ಎಕ್ಸ್ಪೋ- 2014 ಇಂದಿನಿಂದ ಆರಂಬಗೊಳ್ಳುತ್ತಿದೆ. ಬಾರತವಶ್ಟೇ ಅಲ್ಲದೇ ಹಲನಾಡಿನ ತಾನೋಡ ತಯಾರಕರು, ಬಿಡಿಬಾಗ ಮಾರಾಳಿ ಕೂಟಗಳು, ಇಂತ ಕೂಟಗಳಿಗೆ ವಿವಿದ ಇಂಜಿನೀಯರಿಂಗ್ ಸೇವೆ ಒದಗಿಸುವ ನೂರಾರು ಸಂಸ್ತೆಗಳು ಇದರಲ್ಲಿ ಬಾಗಿಯಾಗಲಿವೆ.

ಪ್ರತಿ ಎರಡು ವರುಶಕ್ಕೊಮ್ಮೆ “ಆಟೋ ಎಕ್ಸ್ಪೋ” ಹೆಸರಿನಲ್ಲಿ ಇಂತದೊಂದು ಸಂತೆ ದೆಹಲಿಯಲ್ಲಿ ನಡೆಯುತ್ತದೆ. ಬಾರತ ಒಕ್ಕೂಟದ ನೆಲೆವೀಡು ಹೊಸದೆಹಲಿ ಮತ್ತು ದೆಹಲಿ ಹೊರಬಾಗದ ನೋಯ್ಡಾಗಳಲ್ಲಿ ಪೆಬ್ರುವರಿ 7 ರಿಂದ 11 ನೇ ತಾರೀಕಿನವರೆಗೆ ’ಬಂಡಿಗಳ ಜಾತ್ರೆ’ ನಡೆಯಲಿದೆ.

ಕಳೆದ 2-3 ವರುಶಗಳಲ್ಲಿ ಹಣಕಾಸಿನ ಹಿಂಜರಿಕೆಯಿಂದ ಸಾಕಶ್ಟು ಏರಿಳಿತ ಕಂಡಿರುವ ಜಗತ್ತಿನ ಪ್ರಮುಕ ತಾನೋಡ ಕೂಟಗಳು ತಮ್ಮ ಮುಂದಿನ ನಡೆಗಳು ಏನಾಗಿರುತ್ತವೆ? ಎಂತ ಮಾದರಿಯ ಬಂಡಿಗಳ ಮೂಲಕ ಬಾರತದ ಗ್ರಾಹಕನನ್ನು ತನ್ನತ್ತ ಸೆಳೆಯಲಿವೆ ಎಂಬುದನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ.

ಬಾರತದ ಪ್ರಮುಕ ಬಂಡಿ ತಯಾರಕ ಟಾಟಾ ಮೋಟಾರ‍್ಸ್ ನ ಮೇಲಾಳು ಕಾರ‍್ಲ್ ಸ್ಲಿಮ್ ರವರ ಅಸಹಜ ಸಾವು, ಜನರಲ್ ಮೋಟಾರ‍್ಸ್ ನ ಹೊಗೆ ಕಳ್ಳಾಟದ ವಿಶಯಗಳು ತೋರ‍್ಪಿಗೆ ಕರಿನೆರಳಾಗಿ ಕಾಡಲಿವೆ. ಇದೇ ಹೊತ್ತಿಗೆ ಕೆಲವೇ ದಿನಗಳ ಹಿಂದೆ, ಬ್ರಿಟನ್ ಮೂಲದ ವಿಶ್ವ ಹೊಸ ಬಂಡಿ ಒರೆಹಚ್ಚುವಿಕೆ ಸಂಸ್ತೆಯೊಂದು ಬಾರತದ ಹಲವು ಪುಟ್ಟಕಾರುಗಳು, ಗುದ್ದುವಿಕೆಯ ಒರೆಹಚ್ಚುವುದರಲ್ಲಿ (crash test) ಸೋತಿವೆ ಎಂಬ ವರದಿ ಹೊರಡಿಸಿದ್ದು ಆಯಾ ಬಂಡಿ ತಯಾರಕರಿಗೆ ನಡುಕ ಹುಟ್ಟಿಸಿದೆ.

ಈ ಬಾರಿ ನಡೆಯುತ್ತಿರುವುದು ಹನ್ನೆರಡನೇಯ “ಆಟೋ ಎಕ್ಸ್ಪೋ” ಆಗಿದ್ದು, ಈ ಮುಂಚೆಗಿಂತ ಬಿನ್ನವಾಗಿರಲಿದೆ. ಈ ಮೊದಲಿನ ಹನ್ನೊಂದು ಆಟೋ-ಎಕ್ಸ್ಪೋಗಳು ದೆಹಲಿಯ ‘ಪ್ರಗತಿ ಮಯ್ದಾನ’ದಲ್ಲಿ ಒಟ್ಟಾಗಿ ನಡೆಯುತ್ತಿದ್ದವು. ಪ್ರತಿಬಾರಿ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಯಿಂದ, ಹನ್ನೆರಡನೇಯ ತಾನೋಡಗಳ ತೋರ‍್ಪು 2 ಬಯಲುಗಳಲ್ಲಿ ಬೇರೆ ಬೇರೆಯಾಗಿ ನಡೆಯಲಿದೆ.

ಈ ಮುಂಚಿನ ‘ಪ್ರಗತಿ’ ಬಯಲಿನಲ್ಲಿ ಬಿಡಿಬಾಗ ಮಾರಾಳಿಗರಿಗಶ್ಟೇ ಅವಕಾಶ ಮಾಡಲಾಗಿದ್ದರೆ, ಇದಕ್ಕಿಂತ ಹೆಚ್ಚು ದೊಡ್ಡದಾಗಿರುವ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ಪೋ ಮಾರ‍್ಟ್ ನಲ್ಲಿ ಇಗ್ಗಾಲಿ ಬಂಡಿ, ಆಟೋರಿಕ್ಶಾದಂತ ಮೂರ‍್ಗಾಲಿ ಬಂಡಿ, ಕಾರು, ಜೀಪು ಸೇರಿದಂತೆ ಮಂದಿ ಸಾರಿಗೆಯ ಬಸ್, ಸರಕು ಸಾಗಣೆಯ ಟ್ರಕ್, ಲಾರಿಗಳ ಕೂಟಗಳ ತೋರ‍್ಪು ಕಳೆಕಟ್ಟಲಿದೆ. ಇದರಿಂದ ತಮ್ಮ ಮಾರಾಟಕ್ಕೆ ಹಿನ್ನಡೆ ಮತ್ತು ನಶ್ಟವಾಗಲಿದೆ ಎಂದು ಹಲವು ಬಿಡಿಬಾಗ ಮಾರಾಳಿ ಕೂಟದವರು ತಗಾದೆ ತೆಗೆದಿದ್ದರು, ಆದರೆ ಮಂದಿ ದಟ್ಟಣೆ, ಟ್ರಾಪಿಕ್ ಒಯ್ಯಾಟಗಳನ್ನು ಹಿಡಿತದಲ್ಲಿಟ್ಟು ಎಲ್ಲವನ್ನು ಸರಳವಾಗಿ ನಡೆಸಲು ಈ ರೀತಿ ಮಾಡಲಾಗಿದೆಯಂತೆ.

ಬಾರತ ಬಂಡಿ-ತಾನೋಡಗಳ ತಯಾರಕರ ಒಕ್ಕೂಟ,ತಾನೋಡ ಬಿಡಿಬಾಗಗಳ ಕಯ್ಗಾರಿಕೆ ಸಂಸ್ತೆ ಮತ್ತು ಬಾರತ ಕಯ್ಗಾರಿಕೆಗಳ ಒಕ್ಕೂಟ ಈ ತೋರ‍್ಪನ್ನು ಹಮ್ಮಿಕೊಂಡಿವೆ. ಜರ‍್ಮನಿ,ಪ್ರಾನ್ಸ್,ಜಪಾನ್,ಇಟಲಿ,ಬ್ರಿಟನ್,ಚೀನಾ,ಅಮೇರಿಕಾ,ಕೆನಡಾ ಸೇರಿದಂತೆ ಜಗತ್ತಿನ ಪ್ರಮುಕ ಬಂಡಿ ತಯಾರಕರು ಇದರಲ್ಲಿ ಪಾಲ್ಗೊಳ್ಳುವುದನ್ನು ಕಚಿತಪಡಿಸಿವೆ. ವೋಕ್ಸ್ ವ್ಯಾಗನ್, ಪಿಯಟ್, ಹೋಂಡಾ, ನಿಸ್ಸಾನ್, ರೆನೋ, ಜಿಎಂ, ಪೋರ‍್ಡ್, ಟೋಯೋಟಾ, ಬೆಂಜ್, ಅವ್ಡಿ, ಜಾಗ್ವರ್&ಲ್ಯಾಂಡ್ರೋವರ್, ಸ್ಕೋಡಾ, ಇಸುಜು, ಹ್ಯುಂಡಾಯ್, ಬಿ.ಎಮ್.ಡಬಲ್ಯೂ ಸೇರಿದಂತೆ ಬಾರತ ಮಾರುಕಟ್ಟೆಯ ಪ್ರಮುಕರಾದ ಮಾರುತಿ-ಸುಜುಕಿ, ಟಾಟಾ ಮೋಟಾರ‍್ಸ್, ಮಹೀಂದ್ರಾ ಮತ್ತು ಮಹೀಂದ್ರಾ ಕಾರು ತಯಾರಕರು ಪಾಲ್ಗೊಳ್ಳಲಿದ್ದಾರೆ.

ಇಗ್ಗಾಲಿ ಬಂಡಿ-ಸ್ಕೂಟರ್ ಕೂಟಗಳಾದ ಬಜಾಜ್, ಹಿರೋ ಮೋಟೊ ಕಾರ‍್ಪ್, ಹೋಂಡಾ, ಯಮಹಾ, ಟಿ.ವಿ.ಏಸ್, ರಾಯಲ್ ಎನ್ಪೀಲ್ಡ್, ಸುಜುಕಿ ಅಲ್ಲದೇ ಬ್ರಿಟನ್ನಿನ ಟ್ರಂಪ್ ಮೋಟಾರ‍್ಸ್, ಅಮೇರಿಕೆಯ ಹಾರ‍್ಲಿ ಡೆವಿಡ್ಸನ್, ಕೊರಿಯಾದ ಹ್ಯೊಸುಂಗ್ ಕೂಟಗಳು ಮಂದಿಯ ಕಣ್ಣಿಗೆ ಹಬ್ಬವುಂಟುಮಾಡಲು ಸಜ್ಜಾಗಿವೆ.

ಇನ್ನು ಬಸ್ಸು-ಟ್ರಕ್ಕುಗಳ ಬಗೆಯಲ್ಲಿ ವೋಲ್ವೋ, ಟಾಟಾ, ಅಶೋಕ್-ಲೆಯಲ್ಯಾಂಡ್, ಸ್ವರಾಜ್-ಇಸುಜು, ಆಯ್ಶರ‍್, ಡಾಯ್ಮಲರ್-ಬೆಂಜ್ (ಬಾರತ ಬೆಂಜ್), ಚೀನಾ ಮೂಲದ ಪೋಟೊನ್, ನವಿಸ್ತಾರ್ ಕೂಟದೊಂದಿಗಿನ ಒಪ್ಪಂದ ಕಯ್ಬಿಟ್ಟು ಒಬ್ಬಂಟಿಯಾಗಿ ಹೊಸ ಹುಟ್ಟು ಪಡೆದಿರುವ ಮಹೀಂದ್ರಾ ಬಸಸ್ ಆಂಡ್ ಟ್ರಕ್ಸ್, ಕರ‍್ನಾಟಕದಲ್ಲಿ ಕಳೆದ ವರುಶ ತನ್ನ ಕಾರ‍್ಕಾನೆ ಸ್ತಾಪಿಸುವ ಮೂಲಕ ಬಾರತದಲ್ಲಿ ತನ್ನ ನೆಲೆ ಕಂಡುಕೊಳ್ಳಲು ಹುರುಪಾಗಿರುವ ಸ್ಕಾನಿಯಾ ಕೂಟಗಳ ದೊಡ್ಡ ಪಯ್ಪೋಟಿ ಜರುಗಲಿದೆ.

ಬಾಶ್, ಕಾಂಟಿನೆಂಟಲ್, ಮಾಹ್ಲೆ, ಮಿಂಡಾ, ಟಾಟಾ ಆಟೋ-ಕಾಂಪ್ಸ್, ಪೋರೆಶಿಯಾ, ಮ್ಯಾಗ್ನಾ ಸೇರಿದಂತೆ ಬಿಡಿಬಾಗ ಮಾರಾಳಿಗಳು ಇದರಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಲಿದ್ದಾರೆ.

ಯಾವ ಪ್ರಮುಕ ಬಂಡಿ ಮಾದರಿಗಳು ಗಮನ ಸೆಳೆಯಲಿವೆ?

ಮಾರಾಟ ಸತತವಾಗಿ ಇಳಿಮುಕದತ್ತ ಹೊರಟರು ಪೀನಿಕ್ಸ್ ನಂತೆ ಎದ್ದು ಬರಲು ಟಾಟಾ ಮೋಟರ‍್ಸ್ 3 ಪ್ರಮುಕ ಮಾದರಿಗಳನ್ನು ಮುಂದಿಡಲಿದೆ. ಇದರಲ್ಲಿ ಬೋಲ್ಟ್ ಚಿಕ್ಕ ಕಾರು, ಜೇಸ್ಟ್ ಸೇಡಾನ್ ಪ್ರಮುಕ ಕಾರುಗಳಾಗಿದ್ದು. ನೇಕ್ಸಾನ್ ಎಂಬ ಹಲಬಳಕೆಯ ಮಾದರಿಯನ್ನು ಕೂಡ ಟಾಟಾ ಸಂಸ್ತೆ ಮುಂದಿಡಲಿದೆ.

ಟಾಟಾಗೆ ತಾನೇನು ಕಡಿಮೆಯಿಲ್ಲ ಎಂಬಂತೆ ಮಾರುತಿ-ಸುಜುಕಿ ಕೂಡ ಸೆಲೆರಿಯೊ ಎಂಬ ಬರ‍್ಜರಿ ಸೇಡಾನ್ ಕಾರನ್ನು ಹೊರತಂದಿದೆ. ತೋರ‍್ಪು ಆರಂಬಕ್ಕೂ ಮುನ್ನವೇ ಬಯಲರಿಕೆಗಳ ಮೂಲಕ ಮಾರಾಟಕ್ಕೆ ಸೆಲೆರಿಯೊ ಅಣಿಗೊಂಡಿದೆ.

celerio maruti

(ಮಾರುತಿ ಸುಜುಕಿ ಸೆಲೆರಿಯೊ)

ಸೆಲೆರಿಯೊದಲ್ಲಿ ತನ್ನಿಡಿತ- ಓಡಿಸುಗನ ಹಿಡಿತದ ಹಲ್ಲುಗಾಲಿಯ (Automatic Manual Transmission) ಹೊಸ ಚಳಕವನ್ನು ಅಳವಡಿಸಲಾಗಿದ್ದು ವಿಶೇಶ. ಇದಲ್ಲದೇ ಆಯ್ವಿ-4 (IV-4) ಎಂಬ ಹೊಸ ಹುರುಪು-ಬಳಕೆಯ ಬಂಡಿಯನ್ನು ಸುಜುಕಿ ಕೂಟ ತೋರ‍್ಪಡಿಸುತ್ತಿದೆ. ಸಿಯಾಜ್ ಎಂಬ ಇನ್ನೊಂದು ಸೇಡಾನ್ ಕಾರು ಸುಜುಕಿಯ ತೋರ‍್ಪಿನ ಮಳಿಗೆಗಳಲ್ಲಿ ಕಂಡು ಬಂದಿದೆ.

ಪಿಗೊ ಕಾರಿನ ಮೂಲಕ ತನ್ನ ಮಾರಾಟ ಹೆಚ್ಚಿಸಿಕೊಂಡು ಕಳೆದ ವರುಶ ಹಲಬಳಕೆಯ ಇಕೋ-ಸ್ಪೋರ‍್ಟ್ ಬಿಡುಗಡೆಗೊಳಿಸಿ ರೆನೊ ಡಸ್ಟರ‍್ ಕಾರಿನ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದ್ದ ಪೋರ‍್ಡ್ ಸಂಸ್ತೆ ಇದೀಗ ಪಿಗೊ ಸೇಡಾನ್ ಹೊಳಹಿನ ಕಾರನ್ನು ಸಿದ್ದಪಡಿಸಿ ಪಯ್ಪೋಟಿಗಾರರ ನಿದ್ದೆಗೆಡಿಸಿದೆ.

ಟೋಯೋಟಾ ಹತ್ತನೇಯ ತಾನೋಡದ ತೋರ‍್ಪಿನಲ್ಲಿ ಬಿಡುಗಡೆಗೊಳಿಸಿದ್ದ ಇಟಿಯೋಸ್ ಮತ್ತು ದುಬಾರಿ ಕೊರೊಲಾ ಮಾದರಿಗಳನ್ನು ಮಾರ‍್ಪಡಿಸಿ ಮಂದಿಯ ಎದುರಿಗೆ ತರಲಿದೆ. ಇದರಂತೆ ವೋಕ್ಸ್ ವ್ಯಾಗನ್, ಅವ್ಡಿ,ಬಿ.ಎಮ್.ಡಬಲ್ಯೂ, ಜಿ.ಎಮ್ ಕಾರ್ ಬಂಡಿಯವರು ತಮ್ಮ ಜರ‍್ಮನಿ, ಅಮೇರಿಕೆಯ ಅರಕೆಮನೆಯಲ್ಲಿ ಅಣಿಗೊಳಿಸಿರುವ ವಿಶೇಶ ಕಾರು ಮಾದರಿಗಳು ಆಟೋ ಎಕ್ಸ್ಪೋನಲ್ಲಿ ಕಾಣಸಿಗುತ್ತಿವೆ.

ಇಗ್ಗಾಲಿ ಬಂಡಿಗಳ ವಿಶಯಕ್ಕೆ ಬಂದರೆ, ಹಿರೋ ಮೋಟೊ ಕಾರ‍್ಪ್ ನವರು ಇದೇ ಮೊದಲಬಾರಿಗೆ ಸ್ಕೂಟರ್ ಗಳಲ್ಲಿ ಡೀಸಲ್-ಬೆರಕೆಯ ಬಿಣಿಗೆಗಳನ್ನು ತೋರಿಸಿ ಇತರರನ್ನು ಬೆರಗುಗೊಳಿಸಿಲಿದ್ದರೆ, ಬಜಾಜ್400 ಸಿಸಿಯ ದೊಡ್ಡ ಅಳತೆ ಬಿಣಿಗೆಯ ಬಯ್ಕುಗಳನ್ನು ಪಯ್ಪೋಟಿಗೆ ಒಡ್ಡಲಿದೆ. ಹಾರ‍್ಲಿ ಡೆವಿಡ್ಸನ್ ರವರು 0.75 ಲೀಟರ್ ನ ಸ್ಟ್ರೀಟ್-750 ಎಂಬ 4.1 ಲಕ್ಶ ಬೆಲೆಯ ಬಯ್ಕನ್ನು ಎದುರಿಡುವ ಮೂಲಕ ಪಣಕ್ಕಿಳಿಯಲು ತಯಾರಾಗಿದ್ದಾರೆ.

harley davidson(ಹಾರ‍್ಲಿ ಡೆವಿಡ್ಸನ್ ಇಗ್ಗಾಲಿ)

ಈ ಬಾರಿಯ ಆಟೋ ಎಕ್ಸ್ಪೋ ತುಂಬಾ ಕುತೂಹಲ ಹುಟ್ಟಿಸಿದ್ದು ಕಡಿಮೆ ಬೆಲೆಯಲ್ಲಿ ಹೊಸ ಚಳಕದ ಬಂಡಿಗಳನ್ನು ಸಿದ್ದಪಡಿಸಿ ತಮ್ಮ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳುವ ಹವಣಿಕೆಯಲ್ಲಿವೆ. ಪೆಬ್ರುವರಿ 11 ರವರೆಗೆ ನಡೆಯಲಿರುವ ಈ ಬಂಡಿಹಬ್ಬದ ಆಗುಹೋಗುಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಿರುವೆ. ಬನ್ನಿ, ತಾನೋಡಗಳ ಈ ಸಂತೆಯಲ್ಲಿ ಪಾಲ್ಗೊಳ್ಳೋಣ.

ಕಾರಿನೊಲವಿಗರು, ಇಗ್ಗಾಲಿ ಬಂಡಿ ಆಸಕ್ತರು, ನೋಡಲು ಹೋಗುವರು ಆಟೋಎಕ್ಸ್ಪೋ ಡಾಟ್ ಇನ್ (www.autoexpo.in) ಮಿಂದಾಣಕ್ಕೆ ಬೇಟಿ ನೀಡಿ ಗುರುತಿನ ಚೀಟಿ ಹಾಗೂ ಇತರೆ ಎಲ್ಲ ವಿವರ ಪಡೆಯಬಹುದು.

(ತಿಟ್ಟಸೆಲೆಗಳು: www.autoexpo.in,  forbesindia.com, autocarindia.comoverdrive.com

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks