ಪದ ಪದ ಕನ್ನಡ ಪದಾನೇ !

ವಿವೇಕ್ ಶಂಕರ್.

ppkp

ನಮ್ಮೆಲ್ಲರಿಗೂ ಗೊತ್ತಿರುವಂತೆ ಮಾರ‍್ಪಾಟುಗಳು ನಿಲ್ಲದಂತವು ಹಾಗೂ ಎಲ್ಲಾ ನುಡಿಗಳು ಈ ಮಾರ‍್ಪಾಟುಗಳನ್ನು ಎದುರಿಸಲೇಬೇಕಾಗುತ್ತದೆ. ಹೊಸ ಬೆಳವಣಿಗೆಗಳಿಂದ ಉಂಟಾಗುವ ಹೊಸ ಅರಿತ, ಚಳಕಗಳು ಎಂದೆಂದಿಗೂ ನಮ್ಮ ಮುಂದೆ ನಡೆಯುತ್ತಿರುತ್ತವೆ. ಇದರಿಂದ ಹೊಸ ಪದಗಳು ಕೂಡ ಉಂಟಾಗುತ್ತವೆ, ಇವುಗಳನ್ನು ಅರಗಿಸುವ ಕಸುವು ಒಂದು ನುಡಿಗೆ ಇದ್ದರೆ ಆ ನುಡಿಯೂ ಕೂಡ ಬೆಳೆಯುತ್ತದೆ.

ಕನ್ನಡದ ಮುಂದೆ ಕೂಡ ಇಂತ ಸವಾಲುಗಳಿವೆ. ಈ ಸವಾಲುಗಳು ಕನ್ನಡಕ್ಕೆ ಎದುರಾದಾಗ, ಕನ್ನಡ ನುಡಿಗೆ ಆ ಎಲ್ಲಾ ಹೊಸ ಬೆಳವಣಿಗೆಗಳನ್ನು ಅರಗಿಸುವ ಕಸುವು ಇದೆಯೆನ್ನುವ ಗಟ್ಟಿ ನಂಬಿಕೆಯಿಂದ ಕನ್ನಡಕ್ಕೆ ತನ್ನದೇ ಆದ ಹೊಸ ಪದಗಳು ಬೇಕೆಂದು ತೀರ‍್ಮಾನಿಸಿ, ಅದರ ಸಲುವಾಗಿ ಪದ ಪದ ಕನ್ನಡ ಪದಾನೇ! ಎಂಬ ಪೇಸ್-ಬುಕ್ ಗುಂಪನ್ನು ಪೆಬ್ರವರಿ-18, 2012 ರಂದು ಹುಟ್ಟುಹಾಕಲಾಯಿತು ಅಂದರೆ ಕನ್ನಡದ್ದೇ ಪದಕಟ್ಟಣೆಯ ಈ ಗುಂಪಿಗೆ ಇಂದು ಎರಡನೇ ಏಡಿನ ಸುಗ್ಗಿ 🙂

ಕಳೆದ ಎರಡು ಏಡಿನ ಪಯಣವನ್ನು ನೆನೆದರೆ ಹಲವು ಬಗೆಯ ಒಣರಿಕೆಗಳು ಕಂಡು ಬರುತ್ತವೆ. ಒಂದೆಡೆ ಕನ್ನಡ ನುಡಿಯ ಬೆಳವಣಿಗೆಯ ಸಲುವಾಗಿ ಕನ್ನಡದ್ದೇ ಪದಗಳನ್ನು ಕಟ್ಟಲೇಬೇಕು ಎನ್ನುವಂತ ದಿಟವಾದ ಹೆಜ್ಜೆ, ಇನ್ನೊಂದೆಡೆ ಕಟ್ಟಿದ ಪದಗಳನ್ನು ಕೂಡಣದಲ್ಲಿ ಬಳಕೆಗೆ ತರಬೇಕಾದ ಕೆಲಸ. ಹೀಗೆ ಹಲವು ಬಗೆಯ ಯೋಚನೆಗಳು ನಮ್ಮಲ್ಲಿ ಮೂಡಿದ್ದವು.

ಈಗ ಎರಡೇಡಿನ ಬಳಿಕ ಅಂದು ಮುಂದಿಟ್ಟಿದ್ದ ಹೆಜ್ಜೆ, ಅಂದುಕೊಂಡಿದ್ದ ಕೆಲಸ ಸರಿಯಾದ ದಿಕ್ಕಿನಲ್ಲಿ ಸಾಗಿದೆ ಅಂತಾ ಹಲವು ಕನ್ನಡಿಗರಿಗೆ ಅನಿಸುತ್ತಿದೆ. ಈ ಗುಂಪಿನ ಪದಕಟ್ಟಣೆಯ ಕಸುವೇ ಇದನ್ನು ಸಾರಿ ಹೇಳುತ್ತಿದೆ. ನಿಮಗೆ ಬೆರಗಾಗಬಹುದು, ಈ ಗುಂಪಿನಲ್ಲಿ ಇಲ್ಲಿಯವರೆಗೆ ಹುಟ್ಟುಹಾಕಿದ ಕನ್ನಡದ್ದೇ ಪದಗಳು ಸುಮಾರು 5000 !

ಇವತ್ತಿಗೆ ಈ ಗುಂಪಿನಲ್ಲಿ ಸುಮಾರು 590 ತೆತ್ತಿಗರು (members) ಇದ್ದು, ತೆತ್ತಿಗರ ಪಟ್ಟಿ ನೋಡಿದರೆ ಒಂದು ಕಿರು ಕನ್ನಡದ ಕೂಡಣವೇ ಕಾಣುತ್ತದೆ. ಓದುವವರಿಂದ ಹಿಡಿದು ಕೂಟಗಳಲ್ಲಿ ಕೆಲಸ ಮಾಡುವವರು ಇಲ್ಲವೇ ತಮ್ಮ ತಮ್ಮ ಹರವುಗಳಲ್ಲಿ ಹೆಸರು ಪಡೆದವರು, ಹೀಗೆ ಎಲ್ಲ ಬಗೆಯ ಮಂದಿ ಈ ಗುಂಪಿನಲ್ಲಿದ್ದಾರೆ.

ಈ ಗುಂಪಿನಿಂದ ಹಲವಾರು ಹೊಸ ಕನ್ನಡದ್ದೇ ಪದಗಳು ಉಂಟಾಗಿವೆ. ಕಟ್ಟಿದ ಹೊಸ ಪದಗಳು ಬಳಕೆಗೂ ಬರುತ್ತಿದ್ದು, ಹೊನಲು ಮಿಂಬಾಗಿಲೇ ಇದಕ್ಕೆ ಹಿಡಿದ ಕಯ್ಗನ್ನಡಿ. ಹೊಸ ಪದಗಳು ಹಲವು ಮಂದಿಯ ಅರಿವಿನಿಂದ ಹುಟ್ಟಿಕೊಳ್ಳುವುದರಿಂದ, ಬಗೆ ಬಗೆಯಾದ ಚೆಲುವಿನ ಹಲವು ಕನ್ನಡದ್ದೇ ಪದಗಳು ಈ ಗುಂಪಿನಲ್ಲಿ ಉಂಟಾಗಿವೆ. ಗುಂಪಿನಲ್ಲಿ ಕಟ್ಟಿದ ಸಾವಿರಾರು ಪದಗಳಲ್ಲಿ ಕೆಲವು ಪದಗಳನ್ನು ಕೆಳಗೆ ತೋರಿಸಲಾಗಿದೆ,

papakapa_padagaLu

ಈ ಗುಂಪಿನಲ್ಲಿ ಕಟ್ಟಲಾದ ಕನ್ನಡದ್ದೇ ಪದಗಳು ಪದನೆರಕೆಯ ರೂಪದಲ್ಲಿ ಮತ್ತು ಮಿಂಬಲೆಯಲ್ಲಿ ದೊರೆಯುವಂತೆ ಮಾಡುವ ಹಮ್ಮುಗೆಯನ್ನೂ‘ಪದ ಪದ…‘ ತಂಡ ಮುಂದೆ ಮಾಡಲಿದ್ದು, ಇದರಿಂದಾಗಿ ಕನ್ನಡಿಗರು ಕಟ್ಟಿದ ಕನ್ನಡದ್ದೇ ಪದಗಳು ಎಲ್ಲರಿಗೂ ಎಟುಕುವಂತಾಗುವುದು.

ಪೇಸಬುಕ್‍ನಲ್ಲಿರುವ ‘ಪದ ಪದ…‘ ಗುಂಪನ್ನು ನಾನು ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ. ಈ ಗುಂಪಿನಲ್ಲಿ ನಡೆಯುತ್ತಿರುವ ಕೆಲಸದ ಬಗ್ಗೆ ಎಲ್ಲರೂ ಹೆಮ್ಮೆ ಪಡುವಂತದು. ಹೊಸ ಪದಗಳನ್ನು ಕಟ್ಟುವ ನಿಟ್ಟಿನಲ್ಲಿ ಕನ್ನಡಿಗರ ಕಸುವು ಹೊರಗೆ ಬರುತ್ತಿದ್ದು, ಕನ್ನಡದ ಬೆಳವಣಿಗೆಗೆ ಹಲವು ಕನ್ನಡಿಗರು ಟೊಂಕ ಕಟ್ಟಿ ನಿಲ್ಲುತ್ತಿರುವುದು ನಲಿವಿನ ವಿಶಯ.

ಗುಂಪಿಗೆ ಈಗ ಎರಡು ಏಡಾಯಿತು ಹೀಗೆ ಹಲವು ಏಡುಗಳು ತುಂಬಲಿ ಮತ್ತು ಇದರಿಂದ ನಮ್ಮ ಕನ್ನಡವು ಇನ್ನೂ ಎತ್ತರದ ಮಟ್ಟಕ್ಕೆ ಬೆಳಯಲಿ, ಇನ್ನೂ ಹೊಸ ಪದಗಳು ಹರಿದು ಬರಲಿ.

ತಾವು ಮೊದಲ ಸಲ ಈ ಗುಂಪಿನ ಬಗ್ಗೆ ಕೇಳುತ್ತಿದ್ದರೆ ತಾವು ಕೂಡ ಈ ಪಯಣವನ್ನು ಸೇರಬಹುದು, ಸೇರುವುದಕ್ಕೆ ಈ ಕೊಂಡಿಗೆ ಹೋಗಬೇಕು www.facebook.com/groups/papakapa/ ಇಲ್ಲವೇ ಹೊನಲು ಪುಟದ ಬಲಬದಿಯಲ್ಲಿ ಕೂಡ ಈ ಕೊಂಡಿಯಿದೆ.

ಬನ್ನಿ, ಕನ್ನಡ ಪದಗಳನ್ನು ಕಟ್ಟೋಣ, ಕನ್ನಡವನ್ನು ಬೆಳೆಸೋಣ.

5 ಅನಿಸಿಕೆಗಳು

 1. ನಮಸ್ಕಾರ ವಿವೇಕ್ ಅವರೆ,

  ನೀವು ಕನ್ನಡದಲ್ಲಿ ಕಟ್ಟಿರುವ ಪದಗಳು ಎಷ್ಟು ಸರಳ ಮತ್ತು ಸುಂದರ! ನಾನು ಕನ್ನಡ ಮಾದ್ಯಮದಲ್ಲಿ ಕಲಿಯುತ್ತಿದ್ದಾಗ ವಿಗ್ನಾನ, ಗಣಿತ ಗಳಲ್ಲಿ ಇಂತಹ ಪದಗಳಿದ್ದಿದ್ದರೆ ಎಷ್ಟು ಚೆನ್ನಿರುತ್ತಿತ್ತು ಅಂತ ಅಗಾಗ ಅನಿಸುತ್ತೆ. ನೀವು ಕೊಟ್ಟಿರುವ ಪಪಕಪ ಪದಗಳನ್ನು ಬರಹ ನಿಘಂಟಿನಲ್ಲಿ ಸೇರಿಸಿದ್ದೇನೆ. ಮತ್ತಷ್ಟು ಪದಗಳು ಸೇರಿದಾಗ ದಯವಿಟ್ಟು ತಿಳಿಸಿ.

  -ವಾಸು

  1. ನಮಸ್ಕಾರ ವಾಸು ಅವರೇ,

   ನಿಮ್ಮ ಮಾತುಗಳಿಗೆ ತುಂಬಾ ನನ್ನಿ. ಆದರೆ ಪದ ಕಟ್ಟುವಿಕೆಯ ಕೆಲಸದಲ್ಲಿ ಹಲವು ಗೆಳೆಯರು ಕೂಡ ತೊಡಗಿದ್ದಾರೆ.

   ಹಾಗೂ ಇನ್ನೂ ಪದಗಳು ಸೇರಿದ ಕೂಡಲೇ ನಿಮಗೆ ತಿಳಿಸುತ್ತೇನೆ.

   ಇಂತಿ,
   ವಿವೇಕ್ ಶಂಕರ್

 2. ನಮಸ್ಕಾರ ವಿವೇಕ, ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ.. ನಾಡಿನಲ್ಲಿದ್ದರೆ ಖಂಡಿತಾ ಬರುವೆ… ನಮ್ಮ ಪದಕಮ್ಮಟವೂ ಇದೆ ಮರೆಯಬೇಡಿ ಜನವರಿ 4 ಕ್ಕೆ ಇದೇ ವಾಡಿಯಾ ಸಭಾಂಗಣದಲ್ಲಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.