ಅರಿಗರಲ್ಲೇ ಮೇಲರಿಗ – ನಿಕೋಲ್ ಟೆಸ್ಲಾ

ಗಿರೀಶ ವೆಂಕಟಸುಬ್ಬರಾವ್.

ನಿಕೋಲ್ ಟೆಸ್ಲಾ – ಯಾರಿವರು?

ಎಂಬ ಕೇಳ್ವೆ ಈ ಬರಹದ ಹೆಸರು ನೋಡಿದಾಗ ನಿಮ್ಮ ಮನದಲ್ಲೂ ಮೂಡಿದರೆ ಅಚ್ಚರಿಯೇನಿಲ್ಲ. ನಮ್ಮ ಮನೆಗಳನ್ನು ಬೆಳಗಿಸಿ, ಜಗದ ಕತ್ತಲೆಯನ್ನು ತೊಡೆದವರು ಇವರಾದರೂ, ಬೆಳಕಿಗೆ ಬರದೇ, ಹೆಚ್ಚು ಮಂದಿಗೆ ಗೊತ್ತಿಲ್ಲದೆಯೇ ಬದುಕು ಮುಗಿಸಿ ಹೊರಟವರು. ಆದರೇನಂತೆ ಈ ಮೇಲರಿಗರ ಕೊಡುಗೆಗಳು ಇಂದಿಗೂ ಅವರ ಅರಿಮೆಯನ್ನು ಸಾರಿ ಹೇಳುತ್ತವೆ. ಇನ್ನು, ಅವರು ಬದುಕನ್ನು ಎದುರಿಸಿದ ಬಗೆಯಂತೂ ನಾವು ಕಶ್ಟದಲ್ಲಿದ್ದಾಗ ನೆನೆದರೆ ಸಾಕು ನಮ್ಮ ಕೆಚ್ಚು ಹೆಚ್ಚಿಸಿ, ಬದುಕನ್ನು ಎದುರಿಸುವ ಪರಿಯನ್ನು ಹೇಳಿಕೊಡುತ್ತದೆ. ಅರಿಗರಲ್ಲೇ ಮೇಲರಿಮೆಗಾರ ಎನಿಸಿಕೊಂಡ ಇವರ ಕುರಿತು ಅರಿವ ಒಂದು ಪುಟ್ಟ ಯತ್ನವೇ ಈ ಸರಣಿ.

1884 ರ ಜೂನ್ ತಿಂಗಳು, ಅಮೆರಿಕಾದ ನ್ಯೂಯಾರ‍್ಕ್ ಪಟ್ಟಣಕ್ಕೆ ಬದುಕು ಕಟ್ಟಿಕೊಳ್ಳಲು ಹೊರಟಿದ್ದು ಸೆರ‍್ಬಿಯಾದ 29 ಹರೆಯದ ಒಬ್ಬ ತರುಣ ನಿಕೋಲ ಟೆಸ್ಲಾ. ಅಂದು ಅವರ ಕಿಸೆಯಲ್ಲಿದ್ದಿದ್ದೋ ಬರೀ ನಾಲ್ಕು ಸೆಂಟುಗಳು ಹಾಗೂ ಮನಕ್ಕೆ ಹಿಡಿಸುತ್ತಿದ್ದ ಕೆಲವು ಪದ್ಯಗಳು. ಆದರೇನು ಅದಕ್ಕಿಂತ ಮಿಗಿಲಾಗಿದ್ದಿದ್ದು ಬೆಲೆಕಟ್ಟಲಾಗದ ಅವರ ಜಾಣ್ಮೆ ಮತ್ತದರಿಂದ ಹುಟ್ಟುತ್ತಿದ್ದ ಹಲವು ಚಳಕರಿಮೆಯ ಹೊಳಹುಗಳು (Technical Ideas), ಅದನ್ನು ಮಾಡಿಯೇ ತೋರುವ ಗಟ್ಟಿತನ ಮತ್ತು ಅದಕ್ಕಾಗಿ ಹೊತ್ತು ಮೀರಿ ದುಡಿಯುವ ಕೆಚ್ಚು.

ಅಂದಿನ ಪಯಣದುದ್ದಕ್ಕೂ ಅವರ ಮನ ತಮ್ಮ ಬದುಕು ಸಾಗಿಬಂದ ಹಾದಿಯನ್ನೇ ಅಚ್ಚರಿಯೊಂದಿಗೆ ನೆನೆಯುತ್ತಿತ್ತು, ಏಕೆಂದರೆ ಹಣೆಬರಹ ಯಾರನ್ನು ಎತ್ತ ಕೊಂಡೊಯ್ಯಲಿದೆ ಎಂಬುದೇ ಬಾಳಿನ ಗುಟ್ಟಲ್ಲವೆ? ಹಡಗು ಅಮೆರಿಕಾದತ್ತ ಸಾಗುತಿದ್ದಾಗ ಟೆಸ್ಲಾ ಮನದಲ್ಲಿ ಮೂಡಿದ, ಅವರೇ ಹೇಳಿಕೊಂಡ ಆ ಹಿಂದಿನ ನೆನಪುಗಳು ಇವು,

• ಇಂದಿನ ಕ್ರೋಶಿಯಾದ ಸ್ಮಿಲ್‍ಜನ್ ಹಳ್ಳಿಯಲ್ಲಿ, 1856 ರ ಜುಲಯ್ ತಿಂಗಳ 10 ರಂದು ಮಿಲುಟಿನ್ ಟೆಸ್ಲಾ ಹಾಗು ಡುಕಾ ಟೆಸ್ಲಾ ದಂಪತಿಗಳು ತಮಗೆ ತಂದೆ ತಾಯಿಗಳಾಗಿ ಪೊರೆದಿದ್ದು. ಇನ್ನು ಅವರ ಮನೆತನದಲ್ಲೋ ಎಲ್ಲರೂ ಪಾದರಿಗಳೆ, ಅವರ ನಡುವೆ ಕೊಂಚ ಬೇರೆಯೆಂದರೆ ಅಮ್ಮ. ಅಕೆಯೋ ಎಂದಿಗೂ ಏನನ್ನೂ ಮರೆಯದ ಜಾಣೆ, ತನ್ನ ನೇಯಿಗೆಯ ಕೆಲಸಕ್ಕೆ ನೆರವಾಗುವಂತಹ ಹಲವು ಚೂಟಿಗಳು ಹಾಗು ಮುಟ್ಟುಗಳನ್ನು (Devices and Tools) ಅವಳೇ ಮಾಡಿಕೊಂಡು ಬಿಡುತ್ತಿದ್ದಳು. ಹಗಲಿರುಳೆನ್ನದೆಯೇ ಅದರಲ್ಲಿ ತೊಡಗಿಸಿಕೊಂಡೇ ಇರುತ್ತಿದ್ದ ಅಮ್ಮನ ಈ ನಡೆಯೇ ಅಲ್ಲವೆ ತಮಗೆ ದೇವರ ಕೊಂಡಾಡುವಿಕೆಗಿಂತಲೂ, ಅರಿಮೆಯ ದಾರಿ ಹಿಡಿದು ನಡೆಯುಂತೆ ಮಾಡುತ್ತಿದ್ದುದು.

• ಮಗ ಪಾದರಿಯೇ ಆಗಲಿ ಎಂಬ ತಂದೆಯ ಹಂಬಲದ ನಡುವೆಯೇ, ಮೊದಲ ಕಲಿಮನೆಯ (Primary School) ಕಲಿಕೆ ಸ್ಮಿಲ್‌ಜನ್ ಹಾಗೂ ಗಾಸ್ಪಿಕ್‌ನಲ್ಲಿ ಮುಗಿದು, 1870 ಕ್ರೋಶಿಯಾದ ಕರ‍್‌ಲೋವಾಕ್‌ನಲ್ಲಿ ಮೇಲುಸಾಲೆಗೆ (High School) ಸೇರಿದ್ದು. ಅಲ್ಲಿದ್ದ ಎಣಿಕೆಯರಿಮೆಯ ಕಲಿಸುಗಾರ ತಾವು ತಟ್ಟನೇ ಲೆಕ್ಕಗಳನ್ನು ಬಿಡಿಸುತ್ತಿದ್ದನ್ನು ನೋಡಿ ಇನ್ನಶ್ಟು ಕಲಿಯುವಂತೆ ಮಾಡಿದ್ದು. ಈ ಪುಟ್ಟ ಬೆನ್ನುತಟ್ಟುವಿಕೆಗಳೇ ಅಲ್ಲವೆ, ತಮ್ಮನ್ನು ಅರಿಮೆಯತ್ತ ದಾಪುಗಾಲು ಇಡಿಸಿ ನಾಲ್ಕು ವರುಶಗಳ ಓದನ್ನು ಮೂರು ವರುಶಗಳಲ್ಲೇ ಮುಗಿಸುವಂತೆ ಮಾಡಿದ್ದು.

• ಓದು ಮುಗಿಸಿ ಹುಟ್ಟೂರು ಸೇರುತ್ತಿದ್ದಂತೆಯೇ, ಹಿಡಿದಿತ್ತು ಕಾಲಾರಾ ಬೇನೆ. ಒಂಬತ್ತು ತಿಂಗಳು ಹಾಸಿಗೆಯಲ್ಲೇ ಮಲಗಿಸಿ ಬಿಟ್ಟಿತ್ತು. ಆಗಲೇ ಅಲ್ಲವೆ ತಾವು ಈ ಮಾರಿಯಿಂದ ಉಳಿದರೆ, ತಮ್ಮನ್ನು ಪಾದರಿಯಾಗು ಎಂದು ಒತ್ತಾಯಿಸದೆ ಬಿಣಿಗೆಯರಿಮೆಯ ಕಲಿಕೆಗೆ ಕಳಿಸಬೇಕೆಂದು ತಂದೆಯವರಲ್ಲಿ ಕೋರಿದ್ದು, ಅವರೊಪ್ಪುತ್ತಿದ್ದಂತೆಯೇ, ಪವಾಡವೆಂಬಂತೆ ಹಾಸಿಗೆಯಿಂದ ಎದ್ದಿದ್ದು (ಟೆಸ್ಲಾ ಬದುಕು ಈ ತಿರುವು ಪಡೆದದ್ದು ಒಂದು ಬಗೆಯಲ್ಲಿ ನಮ್ಮ ಶಂಕರಚಾರ‍್ಯರಂತೆಯೇ!)

• ಕೊನೆಗೂ ಮನದಾಸೆ 1874 ರಲ್ಲಿ ಈಡೇರಿ, ಆಸ್ಟ್ರಿಯಾದ ಗ್ರಾಸ್‌ನ ಹಲಚಳಕರಿಮೆಯ ಕಲಿಮನೆಗೆ (Polytechnic) ತಾವು ಸೇರಿದ್ದು. ಆ ಮೊದಲ ವರುಶದಲ್ಲಿ ಒಂದು ದಿನವೂ ಬಿಡುವು ತೆಗೆದುಕೊಳ್ಳದೆಯೇ, ಮುಂಜಾನೆಯಿಂದ ನಡು ಇರುಳಿನವರೆಗೂ ಕಶ್ಟಪಟ್ಟು ಒಳ್ಳೆಯ ಅಂಕಗಳಿಸಿದ್ದು. ಅಲ್ಲಿಯೂ ಚಳಕರಿಮೆಯ ಕಲಿಸುಗಾರರು ತಂದೆಗೆ “ನಿಮ್ಮ ಮಗನೊಬ್ಬ ಮೇಲ್ಮಟ್ಟದ ಹೊಳೆವ ತಾರೆ” ಎಂಬ ಕಾಗದ ಬರೆದಿದ್ದು.

• ಆದರೆ ಎರಡನೆಯ ವರುಶದಲ್ಲೋ, ಮಾಡುಕಲಿಕೆಗಳಲ್ಲಿ (Practical Class), ಎಲ್ಲರೂ ಇರುವ ಚಳಕಗಳನ್ನೇ ಅರಿಯಲು ತಡಕುತ್ತಿದ್ದರೆ, ತಾವು ಅದನ್ನೂ ಮೀರಿ ಅದರಲ್ಲಿದ್ದ ತೊಡಕನ್ನು, ಹಾಗೂ ಅದನ್ನು ಬಿಡಿಸಬಹುದಾದ ಪರಿಯನ್ನು ಹೇಳಿದ್ದು. ಅಂದು ಆ ಕಲಿಸುಗಾರರೋ “ಅದು ಎಂದಿಗೂ ಮಾಡಲಾರದೆಂದು” ಹೇಳಿ ತಮ್ಮನ್ನು ಸುಮ್ಮನಾಗಿಸಿದ್ದು. ಪಾಪ ಅವರೇನು ಮಾಡಿಯಾರು ಪುಸ್ತಕದಲ್ಲಿದ್ದದನ್ನು ಆ ಸಾಲಿನಲ್ಲಿ ಹೇಳಿ ಮುಗಿಸುವುದಶ್ಟೇ ಗುರಿಯಾಗಿತ್ತಲ್ಲವೇ?

• ಎರಡನೆಯ ವರುಶದ ಓದು ಸರಾಗವಾಗಿ ಸಾಗಲೇ ಇಲ್ಲ, ಕಲಿಕೊಡುಗೆಯೂ (Scholarship) ಕಯ್ ಬಿಟ್ಟು ಓದನ್ನು ನಿಲ್ಲಿಸಬೇಕಾಯ್ತು, ಆ ಕೆಟ್ಟದಿನಗಳ ನೆನೆಪು ಎಂದೋ ಮನದಲ್ಲಿ ಮರೆಯಾಗಿತ್ತು. 1878 ಗ್ರಾಸ್‌ನ ತೊರೆದು ಸ್ಲೋವೆನಿಯಾದ ಮ್ಯಾರಿಬೋರ‍್‌ನತ್ತ ಕೆಲಸಕ್ಕಾಗಿ ಸಾಗಿದ್ದು, ಅಲ್ಲೊಂದು ಬಿಣಿಗೆಯರಿಮೆಯ ಸೇರುವೆಯಲ್ಲೊಬ್ಬ (Engineering Company) ಕರಡುತಯಾರಕನಾಗಿ (Draftsman) ದುಡಿದಿದ್ದು. ಅಲ್ಲಿಂದಲೂ 1879ರಲ್ಲಿ ಸ್ಲೋವೆನಿಯಾದ ನೆಲೆಸೆಲವು (Residence Permit) ಇಲ್ಲದಿರುವುದರಿಂದ ಮತ್ತೆ ಗಾಸ್ಪಿಕ್‌ಗೆ ಮರಳಿಕಳುಹಿಸಿಯೇ ಬಿಟ್ಟರು.

• ಮರಳಿ ತವರಿಗೆ ಬಂದವನಿಗೆ ಕಾಡಿದ್ದು ತಂದೆಯ ಅಗಲಿಕೆ, ಬದುಕಿಗಾಗಿ ಮೇಲುಸಾಲೆಯಲ್ಲಿ ಕಲಿಸುಗಾರನಾಗಿ ದುಡಿದ ದಿನಗಳು ಅವು. ಆದರೇನು ತಮ್ಮ ಮನದಾಸೆಯ ಬಲ್ಲ ನೆಂಟರು, ಕೊಂಚ ಹಣವನ್ನು ಹೊಂದಿಸಿ ತಮ್ಮನ್ನು 1880ರಲ್ಲಿ ಮತ್ತೆ ಓದುವಂತೆ ಮಾಡಿದರು. ಈ ಬಾರಿ ಜೆಕೊಸ್ಲಾವಿಕಿಯಾದ ಪ್ರಾಗ್ ಪಟ್ಟಣ ಸೇರಿ ಪೇರ‍್‌ಕಲಿಕೆಯಮನೆ (University) ಬಾಗಿಲು ತಟ್ಟುವಶ್ಟರಲ್ಲಿ ತಡವಾಗಿ ಹೋಗಿತ್ತು. ಆದಿನಗಳಲ್ಲಿ ಪುಸ್ತಕಮನೆಗಳಲ್ಲಿ ಓದಿ, ಪೇರ‍್‌ಕಲಿಕೆಯಮನೆಯ ಪೆರ‍್‌ಮಾತು (Lecture) ಗಳನ್ನು ಆಲಿಸುತ್ತ ಅರಿತಿದ್ದೇ ಆಯಿತು.

• 1881 ಮತ್ತೆ ಮನದಾಸೆಯ ಪೊರೆವ ನೆಂಟರು, ಹಂಗೇರಿಯ ಬುಡಾಪೆಸ್ಟ್ ಪಟ್ಟಣದಲ್ಲಿ ಕೆಲಸ ಸಿಗುವಂತೆಮಾಡಿದರು. ಆ ದಿನಗಳಲ್ಲಿ ಬುಡಾಪೆಸ್ಟ್‌ನ ನೆಲಯುಲಿ ಮಾರ‍್‌ಪಿನಲ್ಲಿ (Telephone Exchange) ಮಿಂಚುಗಾರನಾಗಿ(Electrician) ದುಡಿದು ಕೆಲವು ಕೊಡುಗೆಯ ನೀಡಿದ್ದು.

• 1882ರ ಒಂದು ಸಂಜೆ, ತಮಗೆ ಎರಡನೆಯ ವರುಶದ ಹಲಚಳಕರಿಮೆಯ ದಿನಗಳಲ್ಲಿ ಕಾಡಿದ್ದ ಆ ತೊಡಕಿಗೆ ಪರಿಹಾರ ಪವಾಡದಂತೆ ಹೊಳೆದದ್ದು. ಮತ್ತೆ ಅದೇ ವರುಶದಲ್ಲಿ ಬದುಕಿನ ಇನ್ನೊಂದು ತಿರುವು ಸಿಕ್ಕಿ, ಪ್ಯಾರಿಸ್‌ನ ಹೆಸರಾಂತ ಸೇರುವೆ, ತಾಮಸ್ ಆಲ್ವ ಎಡಿಸನ್‌ರ ಕಾಂಟಿನೆಂಟಲ್ ಎಲೆಕ್ಟ್ರಿಕಲ್ ಕಂಪನಿ (Continental Edision Electric Company) ಸೇರಿದ್ದು

• ಅಲ್ಲಿ ದುಡಿವಾಗ, ಅಂದು ಬಳಕೆಯಲ್ಲಿದ್ದ ನೇರ‍್ಮಿಂಚಿನ ಹುಟ್ಟುಕಗಳಲ್ಲಿ (DC Dynamo) ಇದ್ದ ತೊಡಕನ್ನು ಬಿಡಿಸಿ ಎಲ್ಲರ ಗಮನ ಸೆಳೆದಿದ್ದು. ಅದರಿಂದ ಆ ಸೇರುವೆಯವರು ಹೆಚ್ಚಿನ ಹೊಣೆಹೊರಿಸಿ 1883ರಲ್ಲಿ ಪ್ರಾನ್ಸ್ ಗೆ ಕಳುಹಿಸಿದ್ದು. ಅಲ್ಲಿ 1884 ರಂದು ಕೊನೆಗೂ ತಲೆಕೊರೆಯುತ್ತಿದ್ದ ಏರಿಳಿಕೆ ಮಿಂಚಿನ ತಿರುಗೆಯ (Alternating Current-AC Motor) ಮಾದರಿಯನ್ನು ಮಾಡಿತೋರಿದ್ದು.

ಅದೇ ಹುಮ್ಮಸ್ಸಿನಲ್ಲಿಯೇ ಅಲ್ಲವೆ ಅಮೆರಿಕಾ ಕಯ್ ಬೀಸಿ ಕರೆದಾಗ ಹಣವನ್ನು ಹೊಂದಿಸಿ ನ್ಯೂಯಾರ‍್ಕ್ ಪಟ್ಟಣ ತಲುಪಲು ಹಡಗನೇರಿದ್ದು? ಅರಿಮೆಯ ಹೆಬ್ಬಾಗಿಲನ್ನು ತಟ್ಟಲು ಅಣಿಯಾಗಿದ್ದು…

(ಮುಂದುವರೆಯುವುದು…)

ನಿಮಗೆ ಹಿಡಿಸಬಹುದಾದ ಬರಹಗಳು

No Responses

  1. 20/11/2014

    […] ಟೆಸ್ಲಾ ಅವರ ಬಗ್ಗೆ ತಿಳಿದುಕೊಳ್ಳಲು ಹಿಂದಿನ ಬರಹದಲ್ಲಿ ಮುಂದಡಿ ಇಟ್ಟಿದ್ದೆವು. ಇಂದಿನ ಬರಹದಲ್ಲಿ […]

ಅನಿಸಿಕೆ ಬರೆಯಿರಿ: