ಮಂಡ್ಯದ ಸೀಗಡಿ ಉಪ್ಸಾರು

– ಮದು ಜಯಪ್ರಕಾಶ್.


ಉಪ್ಪುಸಾರು (ಅತವಾ ಆಡುಮಾತಿನಲ್ಲಿ ಉಪ್ಸಾರು) ಎಂಬುದು ಮಂಡ್ಯ ಜಿಲ್ಲೆಯ ಬಹುತೇಕ ಊರುಗಳಲ್ಲಿ ವಾರಕ್ಕೊಮ್ಮೆಯಾದರೂ ಮಾಡುವ ಸಾರಾಗಿರುತ್ತದೆ. ಉಪ್ಸಾರು-ಮುದ್ದೆ ಒಳ್ಳೆ ಜೋಡಿ. ಜೊತೆಗೆ ಮಾವಿನಕಾಯಿ ನಂಚ್ಕೊಂಡು ತಿನ್ನೋ ರೂಡಿ ಬಹಳ ಕಡೆ ಇದೆ.

ಸೀಗಡಿ ಕಾಲ ಬಂದಾಗ, ಅದೇ ಉಪ್ಸಾರನ್ನು ಅವರೆಕಾಳು ಹಾಗೂ ಸೀಗಡಿ ಜೊತೆ ಮಾಡಿ ತಿಂದರೆ, ಸ್ವರ‍್ಗಕ್ಕೆ ಎರಡೇ ಗೇಣು! ಬನ್ನಿ ಮಂಡ್ಯ ಸ್ಟಯಿಲ್ ಸೀಗಡಿ ಉಪ್ಸಾರನ್ನು ಮಾಡುವ ಬಗೆ ತಿಳಿಯೋಣ.

ಅಂದಹಾಗೆ ಯಾವುದೇ ಉಪ್ಸಾರಿಗೂ ಮುಕ್ಯವಾಗಿ ತಯಾರಿಸಬೇಕಾದ್ದು ಉಪ್ಸಾರು ಕಾರ. ಮೊದಲು ಕಾರ ಮಾಡುವ ಬಗೆ ತಿಳಿಯೋಣ.

ಕಾರ ಮಾಡಲು ಬೇಕಾಗುವ ಪದಾರ‍್ತಗಳು
10 ಒಣಮೆಣಸಿನಕಾಯಿ, 2 ಬೆಳ್ಳುಳ್ಳಿ, 1/4 ಚಮಚ ಮೆಣಸು, 1/4 ಚಮಚ ಜೀರಿಗೆ, ಗೋಲಿಗಾತ್ರದ ಹುಣಸೆಹಣ್ಣಿನ ರಸ, 1 ಚಮಚ ಉಪ್ಪು, 1 ಹಿಡಿ ಕೊತ್ತಂಬರಿ ಸೊಪ್ಪು (ನಾಕೈದು ಕಡ್ಡಿಗಳ ಸೊಪ್ಪು)

ಕಾರ ಮಾಡುವ ಬಗೆ
ಮೊದಲು ಒಣಮೆಣಸಿನಕಾಯಿಗಳನ್ನು ಉರಿದು ಮಿಕ್ಸಿಯಲ್ಲಿ ಹಾಕಿ. ನಂತರ ಉಪ್ಪು, ಬೆಳ್ಳುಳ್ಳಿ, ಮೆಣಸು, ಜೀರಿಗೆ ಮಿಕ್ಸಿಗೆ ಹಾಕಿ ನೀರು ಹಾಕದೆ ಪುಡಿಯಂತೆ ರುಬ್ಬಿಕೊಳ್ಳಿ. ನಂತರ ಹುಣಸೆ ರಸ, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನೀರನ್ನು ಹಾಕಿ ರುಬ್ಬಿ. ಉಪ್ಸಾರು ಕಾರ ರೆಡಿ.

ಉಪ್ಸಾರು ಮಾಡಲು ಬೇಕಾಗುವ ಪದಾರ‍್ತಗಳು
1 ಬಟ್ಟಲು (ಸಣ್ಣ ಬಟ್ಟಲು) ಸಣ್ಣ ಸೀಗಡಿ. (ಸಣ್ಣ ಸೀಗಡಿಯು ಸಾಮಾನ್ಯವಾಗಿ ಹಳ್ಳಿಗಳ ಸಂತೆಗಳಲ್ಲಿ ಸಿಗುತ್ತದೆ. ಬೆಂಗಳೂರಲ್ಲಿ ಕೆ. ಆರ್. ಮಾರ‍್ಕೆಟ್ ಅತವಾ ಬನಶಂಕರಿ ಸಂತೆಯಲ್ಲೂ ಸಿಗುತ್ತದೆ.) 4 ಅತವಾ 5 ಬೆಳ್ಳುಳ್ಳಿ ಎಸಳುಗಳು, ಚೂರು ಕೊತ್ತಂಬರಿ ಸೊಪ್ಪು, 1 ಬಟ್ಟಲು (ಸಣ್ಣ ಬಟ್ಟಲು) ಬೇಳೆ ಅತವಾ ಹಸಿ ಅವರೆಕಾಳು ಅತವಾ ಉರಿದ ಒಣ ಅವರೆಕಾಳು.

ಈಗ ಉಪ್ಸಾರು ಮಾಡುವ ಬಗೆ
ಮೊದಲಿಗೆ ಬೇಳೆ ಅತವಾ ಅವರೆಕಾಳುಗಳನ್ನು ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಿ. ನಂತರ ಸೀಗಡಿಯನ್ನು ಕ್ಲೀನ್ ಮಾಡಿರಿ (ಸಾಮಾನ್ಯವಾಗಿ ಸಣ್ಣ ಸೀಗಡಿ ಜೊತೆ ಕೆಲವೊಮ್ಮೆ ಕಸ-ಕಡ್ಡಿ ಇರುತ್ತವೆ. ಅವನ್ನು ತೆಗೆದು ಹಾಕಬೇಕು). ನಂತರ ಒಂದು ಬಾಣಲಿಯಲ್ಲಿ ಎಣ್ಣೆ ಹಾಕದೆ ಸೀಗಡಿಯನ್ನು 5 ನಿಮಿಶಗಳ ಕಾಲ ಉರಿದುಕೊಳ್ಳಿ. ಆಮೇಲೆ, ಸಾರು ಮಾಡುವ ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ, ತೆಳುವಾಗಿ ಕತ್ತರಿಸಿದ ಬೆಳ್ಳುಳ್ಳಿ ಎಸಳುಗಳು, ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ 2 ನಿಮಿಶ ಉರಿಯಿರಿ. ನಂತರ ಮುಂಚೆಯೇ ರುಬ್ಬಿಕೊಂಡ ಕಾರದಲ್ಲಿ 1 ಚಮಚದಶ್ಟು ಕಾರವನ್ನು ಸ್ವಲ್ಪ ನೀರಿನೊಡನೆ ಕಲಸಿ ಸಾರಿನ ಪಾತ್ರೆಗೆ ಹಾಕಿ. ನಂತರ ಮುಂಚೆಯೇ ಬೇಯಿಸಿಟ್ಟುಕೊಂಡಿದ್ದ ಕಾಳಗಳನ್ನು ಹಾಕಿ, ಸಾರಿಗೆ ಬೇಕಾದಶ್ಟು ನೀರು, ರುಚಿಗೆ ತಕ್ಕಶ್ಟು ಉಪ್ಪು, ಮತ್ತೆ ಸ್ವಲ್ಪ ಕಾರವನ್ನು (ಮುಂಚೆ ರುಬ್ಬಿಕೊಂಡುದು) ಹಾಕಿ, 15 ನಿಮಿಶಗಳ ಕಾಲ ಕುದಿಸಿ.

ಅಶ್ಟೇ. ಬಿಸಿ ಬಿಸಿ ಮಂಡ್ಯ ಮಾದರಿ ಸೀಗಡಿ ಉಪ್ಸಾರು ರೆಡಿ. ಬಿರಬಿರ‍್ನೆ ಉಣ್ಕಳ್ಳಿ. ಆರೋದ್ ಮೇಲೆ ಚೆನ್ನಾಗಿರಲ್ಲ ☺.

ನಿಮಗೆ ಹಿಡಿಸಬಹುದಾದ ಬರಹಗಳು

No Responses

  1. ನಿನ್ನೆ ರಾತ್ರಿ ನಾವು ಇದನ್ನು ನಮ್ಮ ಮನೆಯಲ್ಲಿ ಮಾಡಿದ್ದೆವು ರುಚಿ ಚೆನಾಗಿತ್ತು ಇಷ್ಟವಾಯಿತು, ಮಾಡುವುದು ಸಹ ಸುಲಬ.

ಅನಿಸಿಕೆ ಬರೆಯಿರಿ:

%d bloggers like this: