ದೊಡ್ಡ ಹಮ್ಮುಗೆಗಳ ವರುಶ 2016

ಜಯತೀರ‍್ತ ನಾಡಗವ್ಡ.

stratolaunch2

ನೀವು ದೊಡ್ಡ ದೊಡ್ಡ ಯೋಚನೆಗಳನ್ನು ಮಾಡಲಾಗದು – ಇದು ಅಮೇರಿಕಾದ ಮೊಜಾವೆ (Mojave) ಮರುಬೂಮಿಯಲ್ಲಿ ಕಾಣಸಿಗುವ ದೂಳು ಹಿಡಿದಿರುವ ಹಲಗೆ.  ಅಂದ ಹಾಗೆ ಇದೇ ಮರುಬೂಮಿಯ ಈ ಹಲಗೆ ಇರುವ ಜಾಗದ ಬಳಿಯೇ ವಿಶ್ವದ ಬಲು ದೊಡ್ಡ ಬಾನಬಂಡಿಯೊಂದು ತಿರುಗುದಾರಿಗೆ ಸೇರಿಸಲಾಗುತ್ತಿದೆ. ಎಂತ ಅಚ್ಚರಿ ನೋಡಿ! ಹಲಗೆಯೊಂದು ದೊಡ್ಡ ಯೋಚನೆ ಮಾಡಲಾಗದು ಎಂದರೆ ದೊಡ್ಡ ಬಾನಬಂಡಿಯೊಂದು (Space craft) ಇಲ್ಲಿಂದ ಹಾರಿಬಿಡುತ್ತಿರುವುದು. ಇದು ಅಮೇರಿಕದ ಅರಿಮೆಗಾರರ ಮುಕ್ಯ ಹಮ್ಮುಗೆ.ಇಶ್ಟೇ ಅಲ್ಲ ಅಮೇರಿಕಾದ ಇನ್ನೊಂದೆಡೆ ಎಲಾನ್ ಮಸ್ಕ್‌ರವರ ಕೂಟ ಗಿಗಾ ಪ್ಯಾಕ್ಟರಿ (Giga factory) ಹೆಸರಿನಲ್ಲಿ ದೊಡ್ಡದೊಂದು ಮಿಂಕಟ್ಟುಗಳ (Battery) ಕಾರ‍್ಕಾನೆ ತೆರೆಯುವ ಕೆಲಸ ನಡೆಸುತ್ತಿದೆ. ಸುಮಾರು 30 ಕಾಲೆಚೆಂಡಿನ ಬಯಲಿನಷ್ಟು ಉದ್ದದ ದೂರತೋರುಕವೊಂದನ್ನು ಕೆಲವು ಅರಿಮೆಗಾರರು ಹೊರತರುವ ಸಾಹಸ ಮಾಡಿದ್ದಾರೆ. ಇವೆಲ್ಲ 2016 ರಲ್ಲಿ ನಡೆಯಲಿರುವ ದೊಡ್ಡ ದೊಡ್ಡ ಚಳಕದ ಹಮ್ಮುಗೆಗಳು. ಅದಕ್ಕೆ 2016ರ ವರುಶವನ್ನು ದೊಡ್ಡ ಹಮ್ಮಗೆಗಳ ವರುಶವೆಂದು ಸುದ್ದಿಯಾಗಿದೆ. ಚೀನಾದಲ್ಲಾಗುತ್ತಿರುವ ಬೆಳವಣಿಗೆ, ಆಳದ ತಯ್ಲ್ ಬಾವಿಗಳ ಹಾಗೂ ದೊಡ್ಡ ಗಣಿಗಳ ಕೊರೆತ ಇಂತ ಹಮ್ಮುಗೆಗಳಿಗೆ ಹುರುಪು ತುಂಬಲಿವೆ.

ದೊಡ್ಡ ಬಾನಬಂಡಿ  ಸ್ಟ್ರಟೋಲಾಂಚ್ (StratoLaunch) ಎಂಬುದು ಮಯ್ಕ್ರೋಸಾಪ್ಟ್ ಕೂಟ ಹುಟ್ಟುಹಾಕಿದವರಲ್ಲೊಬ್ಬರಾದ ಪವ್ಲ್ ಅಲ್ಲೆನ್‌ರವರ (Paul Allen) ಕನಸಿನ ಕೂಸು. ಈ ಬಾನಬಂಡಿ ಸಾಮಾನ್ಯ ಬಾನಬಂಡಿಯಾಗಿರದೇ ಹಲವು ವಿಶೇಶತೆಗಳನ್ನು ಹೊಂದಿದೆ. ಈ ಬಾನಬಂಡಿಯಲ್ಲಿ ಬಾನೋಡವೊಂದಿದ್ದು ಇದರೊಂದಿಗೆ ಏರುಗಣೆಯನ್ನು (Rocket) ಹೊತ್ತು ಹಾರಲಿದೆ. 117 ಮೀಟರ‍್ ಉದ್ದದ ಇದರ ರೆಕ್ಕೆಗಳು ಯಾವುದೇ ಬಾನೋಡದ ರೆಕ್ಕೆಗಳಿಗಿಂತ ಹೆಚ್ಚು ಉದ್ದವಾಗಿರುವ ದಾಕಲೆ ಬರೆದಿವೆ. ತೂಕದಲ್ಲೂ ಇದು ಬಕಾಸುರನೇ ಸರಿ. ಸುಮಾರು 540000 ಕಿಲೋ ತೂಕದ ಬಾನಬಂಡಿ ಸ್ಟ್ರಟೋಲಾಂಚ್. ಇದು ಓಡಲು 12 ಸಾವಿರ ಅಡಿ ಉದ್ದದ ರನ್‌ವೇ ಬೇಕಂತೆ. ಇದರ ಮೂಲಕ ಏರುಗಣೆಯೊಂದನ್ನು ಎಲ್ಲಿಂದ ಬೇಕಾದರೂ ತಿರುಗುದಾರಿಗೆ ಹಾರುಬಿಡಬಹುದು ಮತ್ತು ಅಗ್ಗದ ಬೆಲೆಯಲ್ಲಿ ಬಾನದೆರವಿಗೆ (Space) ತೆರಳಬಹುದು ಎಂಬುದನ್ನು ಜಗತ್ತಿಗೆ ತೋರಿಸಲು ಹೊರಟಿದ್ದಾರೆ ಅಲ್ಲೆನ್.

Stratolaunch3

ಎಲಾನ್ ಮಸ್ಕ್ ಅವರು ಮಾಡದ ಕೆಲಸವೇ ಇಲ್ಲ ಎನ್ನಬಹುದು. ಪೇಯ್ಪಾಲ್ (Pay Pal), ಟೆಸ್ಲಾ ಮೋಟಾರ‍್ಸ್ (Tesla Motors), ಕೊಳವೆ ಸಾರಿಗೆಯ (Tubular transport) ಹಮ್ಮುಗೆ ಮುಂತಾದ ಚಳಕದ ಕೆಲಸಕ್ಕೆ ಕಯ್ ಹಾಕಿರುವ ಮಸ್ಕ್ ಆಕಾಶಕ್ಕೂ ಎಣಿ ಹಾಕಿದ್ದಾರೆ. 2002 ರಲ್ಲಿ ಸ್ಪೇಸ್-ಎಕ್ಸ್ (SpaceX) ಎಂಬ ಕೂಟದವನ್ನು ಹುಟ್ಟುಹಾಕಿ ಅಗ್ಗವಾಗಿ ಬಾನದೆರವಿಗೆ ತೆರಳುವ ಬಗೆಯನ್ನು ಮತ್ತು ಮಂಗಳನಲ್ಲಿ ಸಾಮಾನ್ಯರನ್ನು ಕೊಂಡೊಯ್ಯುವ ಹಮ್ಮುಗೆಗಳತ್ತ ಚಿತ್ತ ನೆಟ್ಟಿದ್ದಾರೆ. 2016ರಲ್ಲಿ ಈ ಹಮ್ಮುಗೆ ಬಲು ಮುಕ್ಯದ ಹಂತವೊಂದು ತಲುಪಲಿದೆ ಎಂಬ ಸುದ್ದಿ ಆಳವಾಗಿ ಹರಡಿದೆ.

ಚೀನಾದಲ್ಲಿ 500 ಮೀಟರ‍್‌ಗಳಶ್ಟು ಉದ್ದದ ಅಪೇರ‍್ಚರ್ ಹೊಂದಿರುವ ದೂರತೋರುಕವೊಂದನ್ನು (Telescope) ತಯಾರು ಮಾಡಲಾಗಿದೆ. ಇದರಿಂದ ಬೇರೆ ಗ್ರಹದ ಜೀವಿಗಳ ಇರುವಿಕೆ ಕಂಡುಹಿಡಿಯುವುದು ಸುಲಬವಾಗಲಿದೆ ಎಂಬುದು ಅರಿಮೆಗಾರರ ಅಂಬೋಣ. ಚೀನಾದ ವಿವಿದೆಡೆ ವಿಶ್ವದ ನೀರೊಳಗಿನ ದೊಡ್ಡ ಸುರಂಗ, ವಿಶ್ವದ ಅತಿ ಉದ್ದದ ಸೇತುವೆ ಮತ್ತು ಉದ್ದದ ಗಾಳಿಯ ಕೊಳವೆದಾರಿಗಳ ಹಮ್ಮುಗೆಗಳು ಬರದಿಂದ ಸಾಗಿವೆ.  20 ವರುಶ ಸತತ ಅಗೆದು ವಿಶ್ವದ ದೊಡ್ಡ ರಯ್ಲು ಸುರಂಗವೊಂದು ಸ್ವಿಜರ್‌ಲ್ಯಾಂಡ್‌ನಲ್ಲಿ ಬಿಡುಗಡೆಯಾಗುತ್ತಿರುವುದು 2016ರಲ್ಲೇ.

ಒಟ್ಟಿನಲ್ಲಿ 2016ರಲ್ಲಿ ಬಲು ದೊಡ್ಡ ಹಮ್ಮುಗೆಗೆಳು ನಮ್ಮ ಬದುಕನ್ನು ನಮ್ಮ ಬದುಕಿನ ನೋಟವನ್ನು ಬದಲಾಯಿಸುವ ಗುರಿ ಹೊಂದಿವೆ. ದೊಡ್ಡ ಕನಸಿನೊಂದಿಗೆ ದೊಡ್ಡ ಮೆಟ್ಟಿಲೇರುವ ಚಳಕಗಳು ನನಸಾಗಲಿ. ಅರಿವೇ ಗುರು ಎನ್ನುವ ಬಸವಣ್ಣನವರ ನುಡಿಯಂತೆ ಅರಿಮೆಯಿಂದ ಜಗತ್ತು ಹೊಸ ಬೆಳಕು ಕಾಣಲಿ. ದೊಡ್ಡ ಹಮ್ಮುಗೆಗಳ 2016ಕ್ಕೆ ನಲ್ಬರವು.

( ಮಾಹಿತಿ ಮತ್ತು ತಿಟ್ಟ ಸೆಲೆ: theworldin.com, reditt.com, turbosquid.com)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: