ಸಣ್ಣಕತೆ: ಜ್ಯೋತಿಶಿ ಹೇಳಿದ ಬವಿಶ್ಯ

ಕೆ.ವಿ.ಶಶಿದರ.

2e9673191a85ae2afae7299786bd446a

ಆಕೆ ಆತುರಾತುರವಾಗಿ ಒಳ ನುಗ್ಗಿದಳು. ಕಾರಣ ಇಲ್ಲದಿಲ್ಲ. ಇತ್ತೀಚಿನ ದಿನಗಳಲ್ಲಿ ಅವಳಿಗೆ ಕೆಟ್ಟ ಕನಸು ಕಾಡುತ್ತಿತ್ತು. ಕನಸಿಗೆ ಪರಿಹಾರ ಬೇಕಿತ್ತು. ನಿದ್ದೆಯಿಲ್ಲದ ಹಲವು ರಾತ್ರಿಗಳನ್ನು ಕಳೆದು ಹೈರಾಣಾಗಿದ್ದಳು. ಜ್ಯೋತಿಶಿಗಳಲ್ಲದೇ ಮತ್ಯಾರು ತಾನೆ ಪರಿಹಾರ ನೀಡಲು ಸಾದ್ಯ? ಅದಕ್ಕಾಗಿ ಯಾರಿಗೂ ಕಾಣದಂತೆ ಆಕೆ ಒಳಗೆ ನುಗ್ಗಿದ್ದು.

ಮಂದವಾದ ಬೆಳೆಕು. ಮಿನುಗುತ್ತಿರುವ ಕೆಂಪು ದೀಪ. ದೊಡ್ಡ ಕುರ‍್ಚಿಯ ಮೇಲೆ ಕೂತು ಬೂತಗನ್ನಡಿ ಹಿಡಿದು ಏನೋ ಲೆಕ್ಕಾಚಾರ ಮಾಡುತ್ತಿರುವ ಜ್ಯೋತಿಶಿ, ಇವಳ ಬರುವನ್ನು ಗಮನಿಸಿದರೂ ಬಿಗುಮಾನದಿಂದ ತನ್ನ ಕೆಲಸದಲ್ಲಿ ಮುಂದುವರೆಸಿದ್ದರು. ಈಕೆಯೇ ಅವರ ಗಮನ ಸೆಳೆದಳು. ತ್ರಿಕಾಲ ಗ್ನಾನಿಗಳಾದ ಜ್ಯೋತಿಶಿಗಳು ಕಣ್ಣು ತೆರೆಯುತ್ತಿದ್ದಂತೆ ಇವಳನ್ನು ನೋಡಿ,

“ನೀವು ಬಂದಿರೋ ವಿಶ್ಯ ನಮಗೆ ತಿಳಿಯಿತು… ನಿಮ್ಮ ಮುಕ ನೋಡಿದ ಕೂಡಲೇ ತಿಳಿಯಿತು. ನೀವು ಇದೇ ಮೊದಲ ಬಾರಿ ನಮ್ಮ ಬಳಿ ಬರುತ್ತಿರುವುದು ಎಂದೂ ಗೊತ್ತು. ನಿಮ್ಮ ಮುಕದಲ್ಲಿ ಆತಂಕವಿರುವುದು ಸ್ಪಶ್ಟವಾಗಿ ಕಾಸುತ್ತಿದೆ. ಬವಿಶ್ಯದ ಬಗ್ಗೆ ಚಿಂತೆಯಿದ್ದಂತೆ ಇದೆ. ನಿಮ್ಮ ಬವಿಶ್ಯದಲ್ಲಿ ಕರಾಳ ದಿನಗಳು ಎದುರಾಗುವ ಎಲ್ಲಾ ಲಕ್ಶಣಗಳೂ ಇದೆ. ಅದನ್ನು ನಿಮಗೆ ಹೇಗೆ ಹೇಳಬೇಕೋ ನನಗೆ ತಿಳಿಯುತ್ತಿಲ್ಲ. ನಿಜ ಹೇಳಬೇಕಾದ್ದು ನಮ್ಮ ಕರ‍್ತವ್ಯ. ನೇರವಾಗಿ ಹೇಳುತ್ತೇನೆ. ಮನಸ್ಸು ಗಟ್ಟಿ ಮಾಡಿಕೊಳ್ಳಿ, ನಿಮ್ಮ ಜೀವನದಲ್ಲಿ ಬರ ಸಿಡಿಲು ಬಡಿಯುವ ಕಾಲ ಹತ್ತಿರ ಬರುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ನೀವು…ನೀವು…ವಿದವೆಯಾಗುತ್ತಿದ್ದೀರಿ” ಹೇಳಿ ಮುಗಿಸುವಶ್ಟರಲ್ಲಿ ಜ್ಯೋತಿಶಿಯ ಮನಸ್ಸು ಹಗುರವಾದಂತಿತ್ತು.

ಈಗ ಜ್ಯೋತಿಶಿಯ ದ್ರುಶ್ಟಿಯೆಲ್ಲಾ ಆಕೆಯ ಮೇಲೆ ನೆಟ್ಟಿತ್ತು. ವಿಶಯದ ಅಗಾದತೆಯಿಂದ ಆಕೆಯ ಮನಸ್ತಿತಿ ವಿಚಲವಾಗಿ ಕ್ಶಣಕಾಲ ಉದ್ವೇಗಕ್ಕೊಳಗಾಗುತ್ತಾಳೆ ಎಂದು ಅವರಿಗೆ ಅನ್ನಿಸಿತ್ತು. ನೀರಿನ ಲೋಟವನ್ನು ಆಕೆಯ ಮುಂದೆ ಸರಿಸಿದರು. ಆಕೆ ವಿಚಲಿತಳಾದಂತೆ ಮೇಲ್ನೋಟಕ್ಕೆ ಕಂಡುಬಂದರೂ ಗಟ್ಟಿ ಹ್ರುದಯದ ಹೆಣ್ಣು. ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂಬುದರ ಬಗ್ಗೆ ಕೊಂಚ ಕಾಲ ತನ್ನಲ್ಲೇ ಚಿಂತಿಸಿದಳು. ಹಣೆಯ ಮೇಲೆ ಸಾಲು ಸಾಲು ಬೆವರಿನ ಹನಿ ಮೂಡಿತು. ಜ್ಯೋತಿಶಿಯನ್ನು ಒಮ್ಮೆ, ಕೆಂಪು ಬಣ್ಣದ ದೀಪವನ್ನು ಒಮ್ಮೆ, ತನ್ನ ಕೈಗಳನ್ನೇ ಒಮ್ಮೆ ನೋಡಿ ನಿಟ್ಟುಸಿರು ಬಿಟ್ಟು ಮುಕ ಒರೆಸಿಕೊಂಡು ಸೆರೆಗನ್ನು ಮತ್ತೊಮ್ಮೆ ಸರಿಯಾಗಿ ಹೊದ್ದು, ಗಂಟಲು ಸರಿಪಡಿಸಿಕೊಂಡು ಯಾವುದೇ ಉದ್ವೇಗವಿಲ್ಲದೆ,

“ಗುರುಗಳೇ ಆ ವಿಶಯ ಒತ್ತಟ್ಟಿಗಿರಲಿ. ನಾನು ತಮ್ಮ ಬಳಿಗೆ ಬಂದಿದ್ದು ಬೇರೆಯದೇ ವಿಶಯಕ್ಕೆ. ನನ್ನ… ನನ್ನ ಪ್ರಶ್ನೆ…ಏನೆಂದರೆ…” ಮಾತನ್ನು ನಿಲ್ಲಿಸಿದಳು. ಆಕಡೆ ಈಕಡೆ ತಿರುಗಿ ಕಣ್ಣು ಹಾಯಿಸಿ ನೋಡಿ ಯಾರೂ ಇಲ್ಲದ್ದನ್ನು ಕಾತ್ರಿಪಡಿಸಿಕೊಂಡು ತಾನು ಕುಳಿತಿದ್ದ ಸೀಟಿನಿಂದ ಕೊಂಚ ಮುಂದೆ ಬಾಗಿ ಮೊಣಕೈಗಳನ್ನು ಟೇಬಲ್ ಮೇಲೆ ಊರಿ,ಅಂಗೈಯನ್ನು ಬಾಯಿಗೆ ಅಡ್ಡಲಾಗಿ ಹಿಡಿದು ಮೆಲುದನಿಯಲ್ಲಿ ಕೇಳಿದಳು

“ನನ್ನ ಗಂಡನ ಕೊಲೆ ಕೇಸಿನಿಂದ ಕಂಡಿತವಾಗಿಯೂ ನಾನು ಆರೋಪ ಮುಕ್ತಳಾಗುತ್ತೇನೆಯೇ?”

(ಚಿತ್ರಸೆಲೆ – mumbairock.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.