ಗೂಗಲ್‍ನವರ ಹೊಸ ಪೋನ್ – ಪಿಕ್ಸೆಲ್

– ರತೀಶ ರತ್ನಾಕರ.

pixel

ಆಂಡ್ರಾಯ್ಡ್ ಚೂಟಿಯುಲಿಗಳ(smartphones) ಮಾರುಕಟ್ಟೆಯಲ್ಲಿ ಸ್ಯಾಮ್‍ಸಂಗ್, ಮೊಟೊರೋಲ, ಒನ್ ಪ್ಲಸ್ ಹಾಗು ಎಚ್‍ಟಿಸಿ ಚೂಟಿಯುಲಿಗಳು ದೊಡ್ಡ ಸದ್ದನ್ನು ಮಾಡುತ್ತಿದ್ದರೆ, ಗೂಗಲ್‍ನವರೂ ಕೂಡ ‘ನಾವೇನು ಕಡಿಮೆ ಇಲ್ಲಾ’ ಎಂದು ನೆಕ್ಸಸ್ ಚೂಟಿಯುಲಿಗಳ ಮೂಲಕ ಮಂದಿಮೆಚ್ಚುಗೆಯನ್ನು ಗಳಿಸಿದ್ದಾರೆ. ನೆಕ್ಸಸ್ ನಿಂದ ಗೂಗಲ್ ನವರು ಈಗಾಗಲೇ ಹೆಸರು ಮಾಡಿದ್ದಾರೆ. ಮತ್ತೊಮ್ಮೆ ಮಂದಿಯನ್ನು ಸೆಳೆಯಲು ಬಯಸುತ್ತಿರುವ ಗೂಗಲ್‍ನವರು, ‘ಪಿಕ್ಸೆಲ್'(pixel) ಎಂಬ ಹೆಸರಿನೊಂದಿಗೆ ಹೊಸ ಚೂಟಿಯುಲಿಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ.

ಪಿಕ್ಸೆಲ್ ಹಾಗು ಪಿಕ್ಸೆಲ್ ಎಕ್ಸೆಲ್ ಎಂಬ ಎರಡು ಬಗೆಯ ಚೂಟಿಯುಲಿಗಳು ಒಟ್ಟಿಗೆ ಬಿಡುಗಡೆಯಾಗಲಿವೆ. ಪಿಕ್ಸೆಲ್ ನ ತೆರೆಯ ಅಳತೆ 5 ಇಂಚಿನದ್ದಾಗಿದ್ದರೆ ಪಿಕ್ಸೆಲ್ ಎಕ್ಸೆಲ್‍ನದ್ದು 5.5 ಇಂಚು. ಇದನ್ನು ಬಿಟ್ಟರೆ ಇವೆರಡರಲ್ಲಿ ಅಂತಹ ಬೇರ‍್ಮೆಯಿಲ್ಲ. ಪಿಕ್ಸೆಲ್ ಹಾಗು ಪಿಕ್ಸೆಲ್ ಎಕ್ಸೆಲ್ ನಡುವಿನ ಹೋಲಿಕೆ ಈ ಕೆಳಗಿನ ಪಟ್ಟಿಯಲ್ಲಿದೆ.

table1

ಎರಡೂ ಚೂಟಿಯುಲಿಗಳಿಗೆ ನೆನಪಿನ ಬಿಲ್ಲೆಗಳನ್ನು(memory card) ಅಳವಡಿಸಿಕೊಳ್ಳುವ ಆಯ್ಕೆಯಿಲ್ಲ. 32 ಜಿಬಿ ಇಲ್ಲವೇ 128 ಜಿಬಿಯ ಕೂಡಿಡುವ ಜಾಗವನ್ನೇ ಬಳಸಿಕೊಳ್ಳಬೇಕು. ಆದರೆ ‘ಗೂಗಲ್‍ ಕ್ಲೌಡ್’ ನಲ್ಲಿ ಎಶ್ಟು ಬೇಕೋ ಅಶ್ಟು ಚಿತ್ರಗಳು, ವೀಡಿಯೋಗಳನ್ನು ಕೂಡಿಟ್ಟುಕೊಳ್ಳಬಹುದು. ಹಾಗಾಗಿ, ಕೂಡಿಡುವ ಜಾಗದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಒಂದು ಬಾರಿ ಮಿಂಕಟ್ಟನ್ನು ತುಂಬಿಸಿದರೆ 26 ಗಂಟೆಗಳ ಕಾಲ ಎಡಬಿಡದೇ ಮಾತನಾಡಬಹುದು. ಒಂದು ವೇಳೆ ಮಿಂಕಟ್ಟಿನಲ್ಲಿ ಹುರುಪಿಲ್ಲದಿದ್ದರೆ, 15 ನಿಮಿಶಗಳ ಕಾಲ ಮಿಂಕಟ್ಟನ್ನು ತುಂಬಿಸಿದರೆ ಸಾಕು ಸುಮಾರು 7 ಗಂಟೆಗಳ ಕಾಲ ಮಾತನಾಡಬಹುದು.

ಸ್ನಾಪ್‍ಡ್ರ್ಯಾಗನ್ 821 ಚಿಪ್‍ಸೆಟ್, ಆಂಡ್ರಾಯ್ಡ್ ಎನ್ ನಡೆಸೇರ‍್ಪಾಟು ಹಾಗು 4 ಜಿಬಿ ರ‍್ಯಾಮ್(RAM) ಸೇರಿ ಪಿಕ್ಸೆಲ್ ಚೂಟಿಯುಲಿಯ ಗೆಯ್ಮೆಯನ್ನು ಹೆಚ್ಚಿಸಿವೆ. ಚೂಟಿಯುಲಿಯನ್ನು ಬಿರುಸಾಗಿ ಬಳಸಲು ಇದು ನೆರವಾಗಲಿದೆ. ಇದಲ್ಲದೇ ಗೂಗಲ್ ನವರ ಹೊಸ ನೆರವಿಗ ‘ಗೂಗಲ್ ಅಸಿಸ್ಟೆಂಟ್’ ಕೂಡ ಪಿಕ್ಸೆಲ್‍ನಲ್ಲಿ ಸಿಗಲಿದೆ.

ಪಿಕ್ಸೆಲ್ ನ ಹೊದಿಕೆಗಳಲ್ಲಿ ನಿಮಗೆ ಹಲವಾರು ಆಯ್ಕೆಗಳು ಸಿಗಲಿವೆ. ಬಗೆ ಬಗೆಯ ಚಿತ್ರಗಳಿಂದ ಕೂಡಿದ ಹೊದಿಕೆಗಳನ್ನು ಗೂಗಲ್ ನವರೇ ಹೊರಬಿಡುತ್ತಿದ್ದಾರೆ. ಹಾಗೆಯೇ ಇದು ಬರೀ ಹೊದಿಕೆಯಾಗಿರುವುದಿಲ್ಲ, ಹೊದಿಕೆಯೊಂದಿಗೆ ಸಣ್ಣ ತಂತಿಯ ಸುರುಳಿಯು ಇರುತ್ತದೆ ಇದು ಈ ಸುರುಳಿಯು ನೆರೆಯರುಹುವಿಗೆ(Near Field Communication) ನೆರವಾಗಲಿದೆ.

google-pixel-case-4

ಸೋಗಿನ ದಿಟ (Virtual Reality): ಸೋಗಿನ ದಿಟ ಎಂಬುದು ಮೆದುಜಾಣದ(software) ಚಳಕಗಳನ್ನು ಹಾಗು ಅದಕ್ಕೆ ಬೇಕಾದ ಎಣಿಗಳನ್ನು(devices) ಬಳಸಿ ನಾವು ಇದ್ದಲ್ಲಿಯೇ ಬೇರೊಂದು ಲೋಕಕ್ಕೆ ಕರೆದೊಯ್ಯುವುದು. ಒಂದು ಕನ್ನಡಕದ ಹಾಗೆ ಸೋಗಿನ ದಿಟದ ಎಣಿ ಇರುತ್ತದೆ, ಇದನ್ನು ಕಣ್ಣಿಗೆ ಹಾಕಿಕೊಂಡು ಚಂದ್ರಲೋಕ ಬೇಕಾದರೆ ಚಂದ್ರಲೋಕಕ್ಕೆ, ಮರಳುಗಾಡು ಬೇಕಾದರೆ ಮರಳುಗಾಡಿಗೆ, ನಿಮಗೆ ಬೇಕಾದ ಆಯ್ಕೆಯನ್ನು ಮಾಡಿಕೊಂಡರೆ ಅದೇ ಜಾಗದಲ್ಲಿ ನೀವಿರುವಂತೆ ಅನಿಸುತ್ತದೆ. ಹೀಗಿರುವ ಸೋಗಿನ ದಿಟದ ಎಣಿಯ ಜೊತೆಗೆ ಅದಕ್ಕೆ ಹೊಂದಿಕೊಳ್ಳುವಂತಹ ಚೂಟಿಯುಲಿ ಇಲ್ಲವೇ ಎಣ್ಣುಕ ಇರಬೇಕು. ಗೂಗಲ್‍ನವರು ಕೂಡ ‘ಡೇಡ್ರೀಮ್ ವಿಆರ್’ ಎಂಬ ಸೋಗಿನ ದಿಟದ ಎಣಿಯನ್ನು ಹೊರತಂದಿದ್ದಾರೆ. ಈಗ ಹೊರಬರುತ್ತಿರುವ ಪಿಕ್ಸೆಲ್ ಚೂಟಿಯುಲಿಯು ಈ ಡೇಡ್ರೀಮ್ ವಿಆರ್ ಜೊತೆ ಹೊಂದಿಕೊಳ್ಳುವ ಅಳವನ್ನು ಹೊಂದಿದೆ.

daydream

ಸದ್ಯಕ್ಕೆ ಪಿಕ್ಸೆಲ್‍ಗೆ ಬೇಕಾದ ಮೈಕಟ್ಟನ್ನು(body) ತೈವಾನ್ ನಾಡಿನ ಎಚ್‍ಟಿಸಿ ಕಂಪನಿಯವರು ಕಟ್ಟಿಕೊಡುತ್ತಿದ್ದಾರೆ. ಮುಂದೆ ಗೂಗಲ್ ನವರೇ ತಮ್ಮ ಚೂಟಿಯುಲಿಗಳಿಗೆ ಬೇಕಾದ ಮೈಕಟ್ಟನ್ನು ಕಟ್ಟಿಕೊಳ್ಳುವ ಏರ‍್ಪಾಡನ್ನು ಮಾಡಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಹಲವಾರು ಹೊಸತನಗಳನ್ನು ಮೈಗೂಡಿಸಿಕೊಂಡು ಹೊರಬರುತ್ತಿರುವ ಪಿಕ್ಸೆಲ್, ಈಗಾಗಲೇ ಮಾರುಕಟ್ಟೆಯಲ್ಲಿರುವ ಚೂಟಿಯುಲಿಗಳಿಗೆ ಹೇಗೆ ಸಡ್ಡುಹೊಡೆದು ನಿಲ್ಲುತ್ತದೆ ಎಂದು ಕಾದುನೋಡಬೇಕಿದೆ.

(ಮಾಹಿತಿ ಸೆಲೆ: gsmarena.com )
(ಚಿತ್ರ ಸೆಲೆ: theverge.com, trustedreviews.com,  picadvisor.co.uk)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: