ಮಾರುಕಟ್ಟೆಗೆ ಲಗ್ಗೆ ಇಡಲಿರುವ ‘ಆಂಡ್ರಾಯ್ಡ್ ಎನ್’ ನಲ್ಲಿ ಏನೇನಿರುತ್ತೆ?

– ರತೀಶ ರತ್ನಾಕರ.

Android1

ಈಗೇನಿದ್ದರೂ ಆಂಡ್ರಾಯ್ಡ್, ಐಓಎಸ್ ಗಳದ್ದೇ ಸದ್ದು. ಅಲೆಯುಲಿ ನಡೆಸೇರ‍್ಪಾಟಿನ (Mobile Operating System) ಉದ್ದಿಮೆಯಲ್ಲಿ ಬಿರುಗಾಳಿಯನ್ನು ಎಬ್ಬಿಸುತ್ತಿರುವ ಗೂಗಲ್ ನ್ ಆಂಡ್ರಾಯ್ಡ್ ತನ್ನ ಹೊಸ ವರಸೆ(version)ಯಾದ ‘ಆಂಡ್ರಾಯ್ಡ್ ಎನ್'(Android N)  ಅನ್ನು ಹೊರತರಲಿದೆ. ಏನೆಲ್ಲಾ ಹೊಸತು ಬರಬಹುದೋ ಎಂದು ಕಾದು ಕುಳಿತವರಿಗೆ ಆಂಡ್ರಾಯ್ಡ್ ಎನ್ ಹಬ್ಬದೂಟವನ್ನೇ ಬಡಿಸಲಿದೆ.

ಬಿಡುಗಡೆ ಯಾವಾಗ?
ಗೂಗಲ್ ನವರು ಮಾರ‍್ಚ್ 9, 2016 ರಂದು ‘ಆಂಡ್ರಾಯ್ಡ್ ಎನ್’ ನ ಮುನ್ನೋಟವನ್ನು ಬಿಡುಗಡೆ ಮಾಡಿದ್ದು, ಇದೇ ವರುಶದ ಸೆಪ್ಟೆಂಬರ್ ಹೊತ್ತಿಗೆ ಎಲ್ಲರ ಚೂಟಿಯುಲಿ(smart phone)ಗಳಲ್ಲಿ ಆಂಡ್ರಾಯ್ಡ್ ಎನ್ ಬಳಕೆಗೆ ಅಣಿಯಾಗಲಿದೆ ಎಂದು ತಿಳಿಸಿದ್ದಾರೆ.

ಏನೆಲ್ಲಾ ಹೊಸತು ಬರಲಿದೆ?
ಹಲತೆರೆಯ ಬಗೆ (multi-window mode): ಇನ್ನು ಮುಂದೆ ಒಂದೇ ಚೂಟಿಯುಲಿಯಲ್ಲಿ ಎರಡು ಬಳಕಗಳನ್ನು(applications) ಒಂದರ ಪಕ್ಕ ಒಂದನ್ನು ಇರಿಸಿಕೊಂಡು ಬಳಸಬಹುದಾಗಿದೆ. ಎರಡು ಬಳಕಗಳ ತೆರೆಗಳನ್ನು ನಿಮಗೆ ಬೇಕಾದ ಅಳತೆಗೆ ಹೊಂದಿಸಿಕೊಂಡು ಒಟ್ಟಿಗೆ ನೋಡಬಹುದಾಗಿದೆ. ಅಂದರೆ, ಒಂದೇ ಚೂಟಿಯುಲಿಯಲ್ಲಿ ಯೂಟ್ಯೂಬ್ ನಲ್ಲಿ ವಿಡಿಯೋ ನೋಡುತ್ತಲೇ ಗೆಳೆಯರೊಂದಿಗೆ ವಾಟ್ಸಾಪ್ ನಲ್ಲಿ ಹರಟಬಹುದು!

Android 2

ಚುರುಕಾದ ಅರೆನಿದ್ದೆಯ ಬಗೆ: ಆಂಡ್ರಾಯ್ಡ್ ನ ಹಿಂದಿನ ವರಸೆಯಾದ ಮೆಲ್ಲೋಮಶ್ರೋಮ್ ನಲ್ಲಿ ಅರೆನಿದ್ದೆಯ ಬಗೆ (doze mode) ಇತ್ತು. ಚೂಟಿಯುಲಿಯು ಅಲ್ಲಾಡದೆ, ಇದ್ದಲ್ಲೇ ಇದ್ದಿದ್ದರೆ ಕೆಲವು ಹೊತ್ತಿನ ಬಳಿಕ ಅದು ಅರೆನಿದ್ದೆಗೆ ಹೋಗುತ್ತಿತ್ತು ಇದರಿಂದ ಚೂಟಿಯುಲಿಯ ಬ್ಯಾಟರಿಯ ಬಳಕೆ ಹೆಚ್ಚುತ್ತಿತ್ತು. ಆಂಡ್ರಾಯ್ಡ್ ‘ಎನ್’ ನಲ್ಲಿ ಇದನ್ನು ಇನ್ನೂ ಹೊಸದಾಗಿಸಲಾಗಿದೆ. ಚೂಟಿಯುಲಿಯು ಅರೆನಿದ್ದೆಗೆ ಹೋಗಲು ಇನ್ನು ಮೇಲೆ ಚೂಟಿಯುಲಿಯನ್ನು ಅಲ್ಲಾಡಿಸದೆ ಒಂದೇ ಕಡೆ ಇಡಬೇಕಾಗಿಲ್ಲ, ನೀವು ಬಳಕೆ ಮಾಡದ ಎಲ್ಲಾ ಹೊತ್ತಿನಲ್ಲಿ, ಅಂದರೆ ನೀವು ಓಡಾಡುವಾಗ ನಿಮ್ಮ ಜೇಬಿನಲ್ಲಿ ಇಲ್ಲವೇ ಚೀಲದಲ್ಲಿ ಇದ್ದಾಗಲು ಅದು ಅರೆನಿದ್ದೆಗೆ ಹೋಗುತ್ತದೆ. ಇದು ಬ್ಯಾಟರಿಯ ಬಳಕೆ ಮತ್ತು ಚೂಟಿಯುಲಿಯ ಬಾಳಿಕೆಯನ್ನು ಹೆಚ್ಚಿಸಲಿದೆ.

ಹಲತೆರೆಗಳ ಅಲೆದಾಟ: ಒಂದಕ್ಕಿಂತ ಹೆಚ್ಚಿನ ಬಳಕಗಳನ್ನು ತೆರೆದು ಒಟ್ಟಿಗೆ ಬಳಸಬಹುದು ಎಂದು ಮೇಲೇ ನೋಡಿದ್ದೇವೆ. ನೀವೇನಾದರು ಚೂಟಿಮಣೆಗಳಲ್ಲಿ (tablet) ಆಂಡ್ರಾಯ್ಡ್ ಎನ್ ಬಳಸುವುದಾದರೆ, ಒಂದಕ್ಕಿಂತ ಹೆಚ್ಚಿನ ಬಳಕಗಳನ್ನು ತೆರೆದು, ಅವುಗಳ ಗಾತ್ರವನ್ನು ಹೊಂದಿಸಿಕೊಂಡು, ತೆರೆಯ ಮೇಲೆ ನಿಮಗೆ ಬೇಕಾದ ಕಡೆ ಕೂರಿಸಿಕೊಳ್ಳಬಹುದಾಗಿದೆ. ಚೂಟಿಯುಲಿಗಳಲ್ಲೂ ಈ ಆಯ್ಕೆಯನ್ನು ಬಳಸಬಹುದು. ಒಟ್ಟಿನಲ್ಲಿ, ಬಳಕಗಳನ್ನು ತೆರೆಯ ಮೇಲೆ ಹೇಗೆ ಬೇಕೋ ಹಾಗೆ ಅಲೆದಾಡಿಸಬಹುದು, ಒಂದು ಬಳಕದಲ್ಲಿನ ಬರಹ/ಚಿತ್ರಗಳನ್ನು ಇನ್ನೊಂದು ಬಳಕಕ್ಕೆ ಅಲ್ಲೇ ಎಳೆದು ಹಾಕಬಹುದು (Drag and Drop).

Android 3

ಹೊಸ ಅಳವಡಿಕೆಗಳ ಪಟ್ಟಿ(settings menu): ಈ ಹಿಂದಿನ ಅಳವಡಿಕೆಯ ಪಟ್ಟಿಯಲ್ಲಿದ್ದ ತೊಂದರೆಗಳನ್ನು ಅರಿತು ಹೊಸ ವರಸೆಯಲ್ಲಿ ಮಾರ‍್ಪಡಿಸಲಾಗಿದೆ. ಒಂದೇ ಸಲಕ್ಕೆ ಹೆಚ್ಚಿನ ಅಳವಡಿಕೆಯ ಆಯ್ಕೆಗಳು ಕಾಣುವಂತೆ ಮಾಡಲಾಗಿದೆ. ಎತ್ತುಗೆಗೆ, ಯಾವ ವೈಪೈ ಸೇವೆಯನ್ನು ಪಡೆಯುತ್ತಿದ್ದೀರಿ ಎಂದು ತಿಳಿಯಲು ಅಳವಡಿಕೆ ಪಟ್ಟಿಯ ‘ವೈಪೈ’ ಆಯ್ಕೆಯನ್ನು ಒತ್ತಿ ಆಮೇಲೆ ಅದರ ವಿವರ ನೋಡಬೇಕಾಗಿಲ್ಲ, ಆ ವಿವರ ‘ವೈಪೈ’ ಆಯ್ಕೆಯ ಒಟ್ಟಿಗೆ ಇರುತ್ತದೆ. (ಕೆಳಗಿನ ಚಿತ್ರ ನೋಡಿ.) ಇಂತಹ ಹಲವಾರು ಮಾರ‍್ಪಾಟುಗಳನ್ನು ಅಳವಡಿಕೆಯ ಪಟ್ಟಿಯಲ್ಲಿ ಮಾಡಲಾಗಿದೆ. ಇದು ಚೂಟಿಯುಲಿಯ ಬಳಕೆಯನ್ನು ಸುಳುವಾಗಿಸುತ್ತವೆ.

Android 4

ಚುರುಕು ಅಳವಡಿಕೆ ಪಟ್ಟಿ (quick settings panel) ಹಾಗು ಮುನ್ಸುಳಿವು(Notification):
ಚುರುಕು ಅಳವಡಿಕೆ ಪಟ್ಟಿಯು ಮೊದಲಿಗಿಂತ ಚಿಕ್ಕದಾಗಿ ಚೊಕ್ಕವಾಗಿ ಮೂಡಿಬರಲಿದೆ. ಚೂಟಿಯುಲಿಯ ಯಾವ ಆಯ್ಕೆಗಳನ್ನು ಹೆಚ್ಚು ಬಳಸುವಿರೋ ಆ ಆಯ್ಕೆಗಳು ಈ ಪಟ್ಟಿಯಲ್ಲಿ ಕಾಣಸಿಗುತ್ತವೆ. ಅಲ್ಲದೇ ನಿಮಗೆ ಬೇಕಾದ ಅಳವಡಿಕೆಯ ಆಯ್ಕೆಗಳನ್ನು ಈ ಪಟ್ಟಿಯಲ್ಲಿ ನೀವು ಹೊಂದಿಸಿಕೊಳ್ಳಲು ಸಾದ್ಯವಿದೆ.
ಮುನ್ಸುಳಿವಿನ ಬಳಕೆಯಲ್ಲಿ ದೊಡ್ಡ ಮಾರ‍್ಪಾಟು ಆಗಿದೆ. ಈ ಹಿಂದೆ, ಒಂದಕ್ಕಿಂತ ಹೆಚ್ಚಿನ ಮುನ್ಸುಳಿವುಗಳಿದ್ದರೆ ಅವು ಇಟ್ಟಿಗೆಯಂತೆ ಒಂದರ ಮೇಲೆ ಒಂದರಂತೆ ಕಾಣುತ್ತಿದ್ದವು. ಆದರೆ, ಹೊಸ ವರಸೆಯಲ್ಲಿ ಹೀಗಿಲ್ಲ. ಎಲ್ಲಾ ಮುನ್ಸುಳಿವುಗಳು ಒಂದೇ ತೆರೆಯಲ್ಲಿ ಗುಂಪಾಗಿ ಕಾಣುತ್ತವೆ. ಒಂದು ತೆಳುವಾದ ಗೆರೆ ಈ ಸುದ್ದಿಗಳನ್ನು ಬೇರ‍್ಪಡಿಸುತ್ತದೆ. ನಿಮಗೆ ಬೇಕಾದ ಮುನ್ಸುಳಿವಿಗೆ ಮರುನುಡಿಯಲು ಆ ತೆರೆಯಲ್ಲೇ ಆಯ್ಕೆಗಳಿರುತ್ತವೆ.

Android 5

ನಿಮಗೆ ಬೇಕಾದ ಅಳತೆಯಲ್ಲಿ ತೆರೆಯ ತೋರಿಕೆ (display): ಹೌದು, ನಿಮ್ಮ ಚೂಟಿಯುಲಿಯ ತೆರೆ(screen)ಯ ಅರೆಪಾಲು ಇಲ್ಲವೇ ಮುಕ್ಕಾಲು ಪಾಲನ್ನು ಮಾತ್ರ ಬಳಸುವ ಬಯಕೆ ಇದ್ದರೆ, ತೆರೆಯ ತೋರಿಕೆಯನ್ನು ಅಸ್ಟಕ್ಕೇ ಹೊಂದಿಸಿಕೊಳ್ಳಬಹುದು. ತೆರೆಯ ಯಾವುದಾದರು ಮೂಲೆಯಲ್ಲಿ ಒಡೆದು ಬಿರುಕಾಗಿದ್ದರೆ, ತೆರೆಯು ಚೆನ್ನಾಗಿರುವ ಕಡೆಗೆ ಮಾತ್ರ ತೋರಿಕೆಯನ್ನು ಹೊಂದಿಸಿಕೊಂಡು ಚೂಟಿಯುಲಿಯನ್ನು ಬಳಸಲು ನೆರವಾಗುತ್ತದೆ.

ಬಿರುಸಾಗಲಿರುವ ಬಳಕಗಳು: ಯಾವುದೇ ನಡೆಸೇರ‍್ಪಾಟಿಗೆ ಆಗಾಗ ತೇಪೆಗಳು (patch updates) ಬರುವುದು ಸಾಮಾನ್ಯ. ಅದಕ್ಕೆ ತಕ್ಕಂತೆ ನಿಮ್ಮ ನಡೆಸೇರ‍್ಪಾಟನ್ನು ಹೊಸದಾಗಿಸಿಕೊಳ್ಳುತ್ತಿರಬೇಕು. ಆಗ ನೀವು ಬಳಸುವ ಬಳಕಗಳನ್ನು ಕೂಡ ಹೊಸದಾಗಿಸಬೇಕು(update). ಆಗಾಗ ನಿಮ್ಮ ಬಳಕಗಳು ಅವುಗಳ ಪಾಡಿಗೆ ಅವು ಹೊಸದಾಗುವುದನ್ನು ನೀವು ಗಮನಿಸಿರಬಹುದು. ಆಂಡ್ರಾಯ್ಡ್ ಎನ್ ನಲ್ಲಿ ಈ ಕೆಲಸವನ್ನು ಕೊಂಚ ಬೇರೆ ಬಗೆಯಲ್ಲಿ ಮಾಡಲಾಗುತ್ತದೆ. ಯಾವುದೇ ಬಳಕವನ್ನು ಹೊಸದಾಗಿಸ ಬೇಕೆಂದರೆ ಅದನ್ನು ತೆರೆಯ ಬೇಕಾಗುತ್ತದೆ. ಆಗ ಆ ಬಳಕವು ಹೊಸದಾಗಿ, ಬಳಿಕ ತೆರೆದುಕೊಳ್ಳಲು ಕೊಂಚ ಹೊತ್ತು ಹಿಡಿಯುತ್ತಿದೆ. ಆದರೆ ಇದು ಆಗುವುದು ಮೊದಲಬಾರಿ ಮಾತ್ರ. ಒಮ್ಮೆ ಆ ಬಳಕವು ಹೊಸದಾದರೆ ಮುಗಿಯಿತು, ಮುಂದೆ ನೀವು ಮುಟ್ಟಿದಕೂಡಲೇ ಬಳಕವು ತೆರೆದುಕೊಳ್ಳುತ್ತದೆ.

ಇನ್ನೂ ಕೆಲವು ಮಾರ‍್ಪಾಟುಗಳು:

ಅದಲು ಬದಲು ಬಳಕಗಳು – ಈಗಿನ ಆಂಡ್ರಾಯ್ಡ್ ಚೂಟಿಯುಲಿ ತೆರೆಯ ಕೆಳಬಾಗದಲ್ಲಿರುವ ಇರುವ ಗುಂಡಿಯನ್ನು ಒತ್ತಿದರೆ ಇತ್ತೀಚೆಗೆ ಬಳಸಲಾದ ಬಳಕಗಳು(recent apps) ಒಂದರ ಹಿಂದೆ ಒಂದು ಕಾಣುತ್ತವೆ. ಆಂಡ್ರಾಯ್ಡ್ ಎನ್ ನಲ್ಲಿ ಇದೇ ಗುಂಡಿಯನ್ನು ಎರಡುಬಾರಿ ಬಡಿಯುವ ಮೂಲಕ ನೀವು ಈಗ ಬಳಸುತ್ತಿರುವ ಬಳಕವು ಮರೆಯಾಗಿ ಈ ಹಿಂದೆ ಬಳಸಿದ್ದ ಬಳಕವು ತೆರೆದುಕೊಳ್ಳುತ್ತದೆ. ಹೀಗೆ ಎರಡು ಬಳಕಗಳನ್ನು ಅದಲು ಬದಲು (swap) ಮಾಡಿಕೊಳ್ಳಲು ಇದೊಂದು ಹೊಸ ಆಯ್ಕೆ. ಹಾಗೆಯೇ ಈ ಹಿಂದೆ ಬಳಸಿದ ಎಲ್ಲಾ ಬಳಕಗಳ(recent apps) ಪಟ್ಟಿಯನ್ನು ಎಲ್ಲಾ ತೆರವುಗೊಳಿಸುವ (clear all) ಆಯ್ಕೆ ಬಂದಿದೆ. ಹಾಗಾಗಿ, ಒಂದೊಂದೇ ಬಳಕವನ್ನು ಕೊನೆಗಾಣಿಸುವ ತಲೆನೋವು ಇನ್ನು ಮುಂದೆ ಇರುವುದಿಲ್ಲ.

ಡೇಟಾ ಉಳಿಸುವ ಬಗೆ (Data Saver mode) : ಮಿಂಬಲೆ ಬಳಕೆದಾರರಿಗೆ ಇದು ತುಂಬಾ ಅನುಕೂಲವಾಗಲಿದೆ. ಡೇಟಾ ಉಳಿಸುವ ಬಗೆಯು ಹೆಚ್ಚಿನ ಡೇಟಾವನ್ನು ಬಳಸದಂತೆ ನೋಡಿಕೊಳ್ಳುತ್ತದೆ. ಅಲ್ಲದೇ ಹಿನ್ನಲೆಯಲ್ಲಿ ಯಾವುದಾದರು ಬಳಕಗಳು ಡೇಟಾವನ್ನು ತಿನ್ನುತ್ತಿದ್ದರೆ ಅದನ್ನು ತಡೆಯುತ್ತದೆ. ಇದು ಮಿಂಬಲೆ ಡೇಟಾವು ಪೋಲಾಗದಂತೆ ತಡೆಯಲು ಒಳ್ಳೆಯ ದಾರಿ.

ಕಡು ನೀಲಿ ಹಿನ್ನಲೆ (Dark mode)- ಚೂಟಿಯುಲಿಯ ಅಳವಡಿಕೆ ಪಟ್ಟಿ ಇಲ್ಲವೇ ಇತರೆ ಬಳಕಗಳನ್ನು ತೆಗೆದಾಗ ಅವುಗಳ ಹಿನ್ನಲೆ ಬಿಳಿ ಬಣ್ಣದಲ್ಲಿ ಇರುತ್ತದೆ. ಆದರೆ ಆಂಡ್ರಾಯ್ಡ್ ಎನ್ ನಲ್ಲಿ ಇದು ಕಡುನೀಲಿ ಬಣ್ಣದಲ್ಲಿಯು ಸಿಗುತ್ತದೆ. ಮಾರುಕಟ್ಟೆಯ ಬೇಡಿಕೆ ಮೇರೆಗೆ ಈ ಆಯ್ಕೆಯನ್ನು ನೀಡಲಾಗಿದೆ. ಅಲ್ಲದೇ ತೆರೆಯಿಂದ ಹೊರಬರುವ ಬೆಳಕು ಹೊರಗಿನ ಬೆಳಕು ಎಶ್ಟಿದೆ ಎನ್ನುವುದರ ಮೇಲೆ ಬದಲಾಗುತ್ತದೆ. ಕತ್ತಲಿನಲ್ಲಿ ಬಳಸುವಾಗ ಹೆಚ್ಚಿನ ಬೆಳಕು ತೆರೆಯಿಂದ ಬರುವುದು ಒಳ್ಳೆಯದಲ್ಲ. ಈ ಆಯ್ಕೆ ಈಗಾಗಲೇ ಇದ್ದು, ಇದಕ್ಕೆ ಇನ್ನೂ ಒನಪು ನೀಡಲಾಗಿದೆ.

Android 6

ಬೇಡದ ಕರೆಗಳಿಗೆ ಬೇಲಿ: ಈಗಿನ ಆಂಡ್ರಾಯ್ಡ್ ವರಸೆಗಳಲ್ಲಿ ಬೇಡದ ನಂಬರ್ ಗಳಿಂದ ಕರೆಬರುವುದನ್ನು ತಡೆಯಲು ಆಯ್ಕೆ ಇದೆ. ನಿಮಗೆ ಯಾವುದಾದರು ಒಂದು ನಂಬರ್ ನಿಂದ ಕರೆ ಬರುವುದು ಬೇಡ ಎಂದರೆ ಅದನ್ನು ಬೇಡದ ಕರೆಯ ಪಟ್ಟಿ(Do not Call list/blacklist)ಗೆ ಹಾಕಿದರೆ ಆಯಿತು. ಆದರೆ ಇಲ್ಲೊಂದು ತೊಂದರೆ ಇತ್ತು, ನೀವೇನಾದರು ನಿಮ್ಮ ಚೂಟಿಯುಲಿಯನ್ನು ಬದಲಿಸಿದರೆ ಆ ಬೇಡದ ಕರೆಯ ಪಟ್ಟಿ ಮಾಯವಾಗುತ್ತಿತ್ತು. ಆಂಡ್ರಾಯ್ಡ್ ಎನ್ ನಲ್ಲಿ ಈ ತೊಂದರೆಯನ್ನು ಬಗೆಹರಿಸಲಾಗಿದೆ. ಬೇಡದ ಕರೆಯ ಪಟ್ಟಿಯನ್ನು ಒಂದು ಬಾರಿ ಅಣಿಗೊಳಿಸಿದರೆ ಆಯಿತು, ಚೂಟಿಯುಲಿ ಬದಲಾದರು ನಿಮ್ಮ ಪಟ್ಟಿ ಮಾಯವಾಗುವುದಿಲ್ಲ. ಅಲ್ಲದೇ ಇಲ್ಲಿ ಮತ್ತೊಂದು ಆಯ್ಕೆ ಇದೆ, ಒಂದು ವೇಳೆ ಯಾವುದಾದರು ನಂಬರ್ ಇಂದ ಕೆಲವು ಹೊತ್ತಿನಲ್ಲಿ ಕರೆ ತೆಗೆದುಕೊಳ್ಳುವುದು ಬೇಡ ಎಂದರೆ ಅದನ್ನೂ ಅಣಿಗೊಳಿಸಬಹುದಾಗಿದೆ.

ತುರ‍್ತು ಮಾಹಿತಿ: ಚೂಟಿಯುಲಿಯ ಬೀಗದ ತೆರೆ(lock screen)ಯಲ್ಲಿ ನಿಮಗೆ ಬೇಕಾದ ತುರ‍್ತು ಮಾಹಿತಿಗಳನ್ನು ಹಾಕಿಡಬಹುದು. ಹೆಸರು, ವಿಳಾಸ, ಮನೆಯವರ ನಂಬರ್, ನೆತ್ತರ ಗುಂಪು, ಹೀಗೆ ತೊಂದರೆಯ ಹೊತ್ತಿನಲ್ಲಿ ತುರ‍್ತಾಗಿ ಬೇಕಾಗುವ ವಿವರಗಳನ್ನು ಸೇರಿಸಿಡಬಹುದು.

Android 7

ಬೀಗದ ತೆರೆಯಿಂದಲೇ ಮರುನುಡಿಯಬಹುದು: ಹೌದು, ಚೂಟಿಯುಲಿಗೆ ಬೀಗ ಹಾಕಿದ್ದರೂ ಬೀಗದ ತೆರೆಯ ಮೇಲೆ ಕಾಣುವ ಮುನ್ಪೇಳ್ವಿ ಗಳಿಗೆ ಅಲ್ಲಿಂದಲೇ ಮರುನುಡಿಯಬಹುದು. ಇದಕ್ಕಾಗಿ ಅಳವಡಿಕೆಯಲ್ಲಿ ಕೆಲವು ಮಾರ‍್ಪಾಟನ್ನು ಮಾಡಿಕೊಳ್ಳಬೇಕು. ಬೀಗವನ್ನು ತೆರೆಯದೇ ಮರುನುಡಿಯುವ ಸಾದ್ಯತೆ ಇರುವುದು ಕೊಂಚ ತೊಂದರೆ ಕೊಡುವ ಆಯ್ಕೆಯಾಗಿದೆ, ಯಾರಾದರು ಬೇರೆಯವರ ಕೈಗೆ ಚೂಟಿಯುಲಿ ಸಿಕ್ಕರೆ ತೊಂದರೆ ಆಗಬಹುದು. ಆದರು ಇದೊಂದು ಆಯ್ಕೆಯಾಗಿ ಇದೆ.

ಇವುಗಳಲ್ಲದೇ, ಹೊಸ ಹೊಸ ಮೊಗಬಗೆಗಳು(emoticons), ಹೊಸ ಕ್ಯಾಮೆರಾ ಆಯ್ಕೆಗಳು, ತೋರಿಕೆ(display)ಯ ಆಯ್ಕೆಗಳು, ಹೀಗೆ ಹತ್ತು ಹಲವು ಹೊಸತನವನ್ನು ಹೊತ್ತು ಆಂಡ್ರಾಯ್ಡ್ ಎನ್ ಹೊರಬರಲಿದೆ. ಈ ಆಯ್ಕೆಗಳೆಲ್ಲವೂ ಕಂಡಿತಾ ಸಿಗಲಿವೆ ಎಂದು ಗೂಗಲ್ ತಿಳಿಸಿದೆ, ಆದರೆ ಸೆಪ್ಟಂಬರ್ ನಲ್ಲಿ ಹೊರಬರುವ ಆಂಡ್ರಾಯ್ಡ್ ಎನ್ ಇವುಗಳಲ್ಲಿ ಎಸ್ಟು ಆಯ್ಕೆಗಳನ್ನು ಹೊತ್ತು ತರುತ್ತದೆ ಎಂದು ಕಾದುನೋಡಬೇಕಿದೆ.

ಆಂಡ್ರಾಯ್ಡ್ ಎನ್ ನ ಹೆಸರೇನು?
‘ಇದಕ್ಕೆ ಹೆಸರಿಡಲು ನಾನು ನನ್ನ ತಾಯಿಯನ್ನು ಕೇಳುತ್ತೇನೆ ಇಲ್ಲವಾದರೆ ಮಂದಿಯೇ ಓಟಿನ ಮೂಲಕ ತಿಳಿಸಲಿ’ ಎಂದು ಗೂಗಲ್ ನ ಸುಂದರ್ ಪಿಚ್ಚೈ ಹೇಳಿದ್ದಾರೆ. ಈಗಾಗಲೇ ಹಲವಾರು ಆಯ್ಕೆಗಳಿಗೆ ಮಂದಿ ಓಟನ್ನು ಹಾಕುತ್ತಿದ್ದಾರೆ. ‘ಆಂಡ್ರಾಯ್ಡ್ 7.0 ನ್ಯುಟೆಲ್ಲಾ’ ಎಂಬುದು ಇಲ್ಲಿಯವರೆಗೆ ಕೇಳಿಬರುತ್ತಿರುವ ಹೆಸರು.

(ಮಾಹಿತಿ ಹಾಗು ಚಿತ್ರ ಸೆಲೆ: androidauthority.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *