ಬಾಡೂಟಕ್ಕೂ ಹಸಿರು ಮಿಡತೆಗೂ ಇರುವ ನಂಟೇನು?

– ಹರ‍್ಶಿತ್ ಮಂಜುನಾತ್.

midathe

ಅಂದೊಮ್ಮೆ ರಾತ್ರಿ ಹೊತ್ತು ಗೆಯ್ಮೆಯಿಂದ ಬಂದವನೇ ಮೈಮೇಲೆರಡು ಕೊಡ ನೀರು ಸುರಿದುಕೊಂಡು ಆಯಾಸವ ತಣಿಸಿ ಗೆಂಟುಕಾಣ್ಕೆ(TV)ಯ ಎದುರು ಕುಳಿತೆ. ಅಲ್ಲೆ ಗೋಡೆಯ ಮೇಲೆ ಕಣ್ಣು ಹಾಯಿಸಿದಾಗ ಹಸಿರು ಮಿಡತೆ(Green Grass Hopper)ಯೊಂದು ತನ್ನ ಪಾಡಿಗಿ ಕುಳಿತಿತ್ತು. ನಮಗೆ ಈ ಹಸಿರು ಮಿಡತೆಯೇನು ಹೊಸದಲ್ಲ. ನಮ್ಮ ಕಡೆ(ಮಲೆನಾಡಿನಲ್ಲಿ) ಅದಕ್ಕೆ ಕುದ್ರೆ, ಹಸಿರು ಕುದ್ರೆ ಎಂದೆಲ್ಲ ಕರೆಯುತ್ತಾರೆ. ಮನೆಯಲ್ಲೇನಾದರು ಬಾಡೂಟದ ಅಡುಗೆ ಮಾಡಿದರೆ ಈ ಹಸಿರು ಮಿಡತೆ ಅಲ್ಲಿರುತ್ತದೆ. ಹಾಗಾಗಿ ನಮಗಿದು ಎಳವೆಯಿಂದಲೂ ಗೊತ್ತಿರುವ ಕೀಟವೇ. ಅಂದೂ ಹಸಿರು ಮಿಡತೆಯನ್ನು ನೋಡಿದಾಗ ನನಗೆ ತಟ್ಟನೆ ಈ ಬಾಡೂಟದ ನೆನಪಾಗಿತ್ತು. ಯಾವುದಕ್ಕೂ ಇರಲಿ ಎಂದೊಮ್ಮೆ ಅಮ್ಮನನ್ನು ಕರೆದು ಊಟಕ್ಕೆ ಸಾರೇನೆಂದು ಕೇಳಿದೆ. ಅರೇ ಬಾಡೂಟ! ನಮ್ಮ ಮನೆಯಲ್ಲಂದು ಬಾಡೂಟವೆಂಬುದು ನನಗೇ ಗೊತ್ತಿಲ್ಲ. ಅಂತದ್ದರಲ್ಲಿ ನಂಟೇ ಇರದ ಆ ಕೀಟಕ್ಕೆ ತಿಳಿದಿದ್ದಾದರೂ ಹೇಗೆ?!!!

ಒಂದೆರಡು ತಿಂಗಳು ಬಿಟ್ಟು ನನ್ನ ಗೆಳೆಯನ ಮನೆಗೆ ಹೋಗಿದ್ದೆ. ಅಲ್ಲೂ ಈ ಹಸಿರು ಮಿಡತೆ ನನಗಿಂತ ಮೊದಲೇ ಕಾದು ಕುಳಿತಿತ್ತು. ನನಗೇನೋ ಬಾಡೂಟಕ್ಕೆ ನನ್ನ ಗೆಳೆಯ ಕರೆದಿದ್ದ. ಆದರೆ ಈ ಹಸಿರು ಮಿಡತೆಯನ್ನು ಕರೆದದ್ದು ಯಾರು? ಅಂತೂ ಕರೆಯದೇ ಇದ್ದರೂ ಬಾಡೂಟಕ್ಕೆ ಬರುವ ನೆಂಟ ಈ ಹಸಿರು ಮಿಡತೆ ಎಂಬುದರಲ್ಲಿ ಮಾತ್ರ ಎರಡು ಮಾತಿಲ್ಲ. ನಾನು ನನ್ನ ಗೆಳೆಯನ ಅಮ್ಮನಿಗೆ ಕೇಳಿದೆ. ಅದಕ್ಕೆ ಅವರು “ನಾವು ಮನೆಯಲ್ಲಿ ಬಾಡೂಟ ಮಾಡಿದಾಗ, ತೀರಿಕೊಂಡ ನಮ್ಮ ಹಿರಿಯರಿಗೆ ಮೊದಲು ಬಡಿಸಬೇಕು. ಅದಕ್ಕೆ ಅವರು ಈ ಹುಳದ ರೂಪದಲ್ಲಿ ಮನೆಗೆ ಬರುತ್ತಾರೆ” ಎಂದರು. ಹೀಗೂ ಇರಬಹುದೇ? ಎಂದುಕೊಂಡರೂ ಅವರಿಗೆ ಮರುನುಡಿಯಲಿಲ್ಲ. ಬಳಿಕ ಒಂದಶ್ಟು ಮಂದಿಯಲ್ಲಿ ವಿಚಾರಿಸಿದೆ. ಸಿಕ್ಕ ಹೇಳ್ವಿಗಳೆಲ್ಲ ಅರಿಮೆಗೆ ತುಂಬಾ ದೂರವೆನಿಸಿದವು. ಕೊನೆಗೊಂದು ದಿನ ಮಿಂದಾಣವೊಂದರಲ್ಲಿ ಈ ಕುರಿತ ಬರಹವೊಂದಿತ್ತು. ಅದರಲ್ಲಿ ನನಗೆ ಬೇಕಾದ ಹೇಳ್ವಿ ಸಿಕ್ಕಿತು.

ಮಿಡತೆಯ ಮೀಸೆಗಳಿಗೆ ಬಲುದೂರದಿಂದಲೂ ವಾಸನೆಯನ್ನು ಅರಿಯುವ ಕಸುವಿದೆ

ಹಸಿರು ಮಿಡತೆಗಳು ಕೀಟಗಳ ಸಾಲಿನಲ್ಲಿ ಬರುತ್ತದೆ ಮತ್ತು ಇವುಗಳನ್ನು ಆರ‍್ತೋಪ್ಟೆರ (Orthoptera) ಎಂಬ ಅರಿಮೆಯ ಹೆಸರಿನಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಿಡತೆಗಳಲ್ಲಿ ಸುಮಾರು ಹನ್ನೊಂದು ಸಾವಿರಕ್ಕೂ ಹೆಚ್ಚಿನ ಬಗೆಯ ಮಿಡತೆಗಳನ್ನು ಗುರುತಿಸಲಾಗಿದ್ದು, ಹಸಿರು ಮಿಡತೆಯು ಇದರ ವಂಶಾವಳಿಯಾಗಿದೆ. ಮಿಡತೆಗಳು ಅಂಟಾರ‍್ಟಿಕವನ್ನು ಹೊರತುಪಡಿಸಿ, ಜಗತ್ತಿನ ಎಲ್ಲಾ ಮೂಲೆಗಳಲ್ಲೂ ಕಾಣಸಿಗುತ್ತವೆ. ಅದರಲ್ಲಿ ಹಸಿರು ಮಿಡತೆಗಳು ಮಾತ್ರ ಹೆಚ್ಚಾಗಿ ಕಾಡುಗಳನ್ನು ಹೊಂದಿರುವ ನಾಡುಗಳಲ್ಲಿ ಮಾತ್ರ ಕಂಡುಬರುತ್ತವೆ. ಮಿಡತೆಗಳಲ್ಲೂ ಸಸ್ಯಹಾರಿ ಮತ್ತು ಮಾಂಸಹಾರಿ ಎಂಬ ಬಗೆಗಳಿದ್ದು, ಹಸಿರು ಮಿಡತೆಗಳು ಈ ಎರಡೂ ಬಗೆಗಳಿಗೆ ಸೇರಿಕೊಳ್ಳುತ್ತವೆ. ಸುಮಾರು 1 ಮೀಟರ್ ದೂರದವರೆಗೆ ಹಾರಬಲ್ಲ ಇವುಗಳು, ಸುಮಾರು 2 ರಿಂದ 3 ಇಂಚುಗಳವರೆಗೆ ಬೆಳೆಯುತ್ತವೆ. ಆದರೆ ಇವುಗಳಲ್ಲಿ ಗಂಡುಗಳಿಗಿಂತ ಹೆಣ್ಣುಗಳೇ ದೊಡ್ಡದಾಗಿ ಬೆಳೆಯುವುದು ಮಾತ್ರ ವಿಶೇಶ. ಎರಡು ಜೊತೆ ರೆಕ್ಕೆಗಳು, ಉದ್ದನೆಯ ಆರು ಕಾಲುಗಳನ್ನು ಹೊಂದಿದ್ದು ದೂರಕ್ಕೆ ನೆಗೆಯುವಲ್ಲಿ ನೆರವುಕೊಡುತ್ತವೆ. ಹೆಚ್ಚಾಗಿ ಕೀಟಗಳಿಗೆ ಉದ್ದನೆಯ ಮೀಸೆಗಳಿರುತ್ತವೆ. ಅಂತೆಯೇ ಈ ಹಸಿರು ಮಿಡತೆಗಳಿಗೂ ಕೂಡ. ಇವು ಬಲುದೂರದಿಂದಲೂ ವಾಸನೆಯನ್ನು ಅರಿಯುವ ಕಸುವು ಮಯ್ಗೂಡಿಸಿಕೊಂಡಿರುತ್ತವೆ. ಆಗಲೇ ಹೇಳಿದಂತೆ ಇವು ಮಾಂಸಹಾರಿಗಳೂ ಆಗಿದ್ದು ಬಾಡೂಟದ ಹೊತ್ತಿನಲ್ಲಿ ಮನೆಗೆ ಬರುವ ಕಾರಣ ತುಸು ಬೇರೆಯೇ.

ನಾವು ಬಾಡೂಟಕ್ಕೆ ಮಾಂಸವನ್ನು ತಂದ ಮೇಲೆ ತುಸು ತುಂಡರಿಸಿ, ಸರಿಮಾಡುವುದಿದೆ. ಈ ಹೊತ್ತಿನಲ್ಲಿ ಮಾಂಸದಿಂದ ಹೊರಡುವ ವಾಸನೆಯನ್ನು ಹಸಿರು ಮಿಡತೆಗಳು ಸೆಳೆದುಕೊಂಡು, ಮಾಂಸವನ್ನು ಹುಡುಕಿ ಬರುವುವು. ಅಂದಹಾಗೆ ಇವು ಹಸಿ ಮಾಂಸವನ್ನು ಹುಡುಕಿ ಬರುವುದೇ ಹೊರತು ನಮ್ಮ ಪಾಲಿನ ಬಾಡೂಟವನ್ನಲ್ಲ. ಹೇಳೀ ಕೇಳೀ ನಮ್ಮದು ಮಲೆನಾಡು. ಹಚ್ಚ ಹಸಿರಿನ ಕಾಪಿ ತೋಟಗಳ ನಡುವೆ ಕಟ್ಟಿಕೊಂಡ ಮನೆ. ಹಸಿರನ್ನೇ ನೆಚ್ಚಿಕೊಂಡಿರುವ ಹಸಿರು ಮಿಡತೆಗಳು ನಮ್ಮ ಮನೆಗೆ ತರುವ ಮಾಂಸವನ್ನು ಅರಸಿ ಬರದೇ ಇರವು.

ಈ ನಡುವೆ ನಿಮಗೆ ಇನ್ನೊಂದು ಸಂಗತಿ ಹೇಳಲೇ ಬೇಕು. ಹಸಿರು ಮಿಡತೆಗಳು ತಿನ್ನಲು ಮಾಂಸ ಮತ್ತು ಹುಲ್ಲುಗಳನ್ನು ನೆಚ್ಚಿಕೊಂಡಿವೆ. ಇಲ್ಲೊಂದು ವಿಶೇಶವೆಂದರೆ ಮಿಡತೆಗಳನ್ನು ಮಂದಿಯೂ ತಿನ್ನುವುದುಂಟು. ಆಪ್ರಿಕ, ಏಶ್ಯಾ, ಮತ್ತು ತೆಂಕಣ ಅಮೇರಿಕಾ ನಾಡುಗಳಲ್ಲಿ ಇವುಗಳನ್ನು ಸಾಂಪ್ರದಾಯಿಕ ಅಡುಗೆಗೆ ಬಳಸಿಕೊಳ್ಳುತ್ತಾರೆ. ಅಲ್ಲದೆ ಇವುಗಳನ್ನು ಆಪ್ರಿಕಾದಲ್ಲಿ ಕರೆಯದೇ ಬರುವ ನೆಂಟ(Unwelcome Guest) ಎಂದೇ ಕರೆಯುವುದುಂಟು.

ತನ್ನುಂಟುಗೆ(Nature)ಯ ಎದುರಾಗಿ ಮಂದಿಯ ಪೈಪೋಟಿ ಇಂದು ನಿನ್ನೆಯದಲ್ಲ. ತನ್ನುಂಟುಗೆಯ ಒಳಗಿರುವ ಅದೆಶ್ಟೋ ಕೇಳ್ವಿಗಳಿಗೆ ಮಂದಿಯು ಹೇಳ್ವಿ ಹುಡುಕಲಾರದೆ ಹಿಂದುಳಿದಿರುವುದು ನಮಗೆ ಹೊಸ ಸಂಗತಿಯೇನಲ್ಲ. ಕೆಲವೊಮ್ಮೆ ಇಂತಹ ಕುತೂಹಲಗಳನ್ನು ಕೆಣಕಿದಾಗ ಸಿಗುವ ಉತ್ತರವು ನಮ್ಮನ್ನು ಅಚ್ಚರಿಗೊಳಿಸುವುದೂ ಹೊಸ ಸಂಗತಿಯೇನಲ್ಲ. ಅಂತಹ ಅಚ್ಚರಿಗಳಲ್ಲಿ ಹಸಿರು ಮಿಡತೆಗೂ ಬಾಡೂಟಕ್ಕೂ ಇರುವ ನಂಟೂ ಒಂದು!

(ಚಿತ್ರ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: