ತಾಯೆ ಬಾರ ಮೊಗವ ತೋರ..

– ಬಿ.ವಿ.ರಾವ್.

horandu-annapoorneshwari

ತಾಯೆ ಬಾರ ಮೊಗವ ತೋರ ಅನ್ನಪೂರ‍್ಣ ದೇವಿಯೇ
ಕಂದರೆಲ್ಲ ಕರೆವರೆಲ್ಲ ದುಕ್ಕ ನಾಶಿ ದೇವಿಯೇ
ಆರ‍್ತನಾದ ಕಳೆಯಲಿ
ಮೋಹ ನಾಶವಾಗಲಿ
ಲೋಬ ನಾಶವಾಗಲಿ
ಲೋಕದೆಲ್ಲ ಕಡೆಯಲಿ
ಚಿನ್ನ ಪರದೆ ಇರುವುದಮ್ಮ ನಮ್ಮ ನಿಮ್ಮ ನಡುವಲಿ

ತಾಯೆ ಬಾರ ಮೊಗವ ತೋರ ಎಲ್ಲ ಜನರ ದೇವಿಯೇ
ಜಗದ ಮಾತೆ ಸ್ರುಶ್ಟಿ ಕರ‍್ತೆ ಎಂಬ ಕ್ಯಾತಿ ದೇವಿಯೇ
ಕೋಪ ನಾಶವಾಗಲಿ
ಕಾಮ ನಾಶವಾಗಲಿ
ಮದವು ನಾಶವಾಗಲಿ
ಲೋಕದೆಲ್ಲ ಕಡೆಯಲಿ
ಚಿನ್ನ ಪರದೆ ಇರುವುದಮ್ಮ ನಮ್ಮ ನಿಮ್ಮ ನಡುವಲಿ

ತಾಯೆ ಬಾರ ಮೊಗವ ತೋರ ಎಲ್ಲ ಜೀವಿ ದೇವಿಯೇ
ಕಗದ ದೇವಿ ಜಲದ ದೇವಿ ತಾಯಿ ರೂಪಿ ದೇವಿಯೇ
ಸ್ನೇಹ ಪ್ರೇಮ ಅರಳಲಿ
ಹೂವು ಮನವು ಅರಳಲಿ
ಮುಗ್ದ ನಗುವು ಅರಳಲಿ
ಲೋಕದೆಲ್ಲ ಕಡೆಯಲಿ
ಚಿನ್ನ ಪರದೆ ಇರುವುದಮ್ಮ ನಮ್ಮ ನಿಮ್ಮ ನಡುವಲಿ

ತಾಯೆ ಬಾರ ಮೊಗವ ತೋರ ಸೂತ್ರದಾರಿ ದೇವಿಯೇ
ಲೀಲೆ ಇರಲಿ ಮಾಯೆ ಇರಲಿ ಶಾಂತಿ ಇರಲಿ ದೇವಿಯೇ
ಮರವು ಗಿಡವು ಬೆಳೆಯಲಿ
ಹೂವು ಹಣ್ಣು ಬೆಳೆಯಲಿ
ಬೂಮಿ ತಾಯಿ ಹಸುರಲಿ
ಲೋಕದೆಲ್ಲ ಕಡೆಯಲಿ
ಚಿನ್ನ ಪರದೆ ಇರುವುದಮ್ಮ ನಮ್ಮ ನಿಮ್ಮ ನಡುವಲಿ

ತಾಯೆ ಬಾರ ಮೊಗವ ತೋರ ಸ್ಕಂದ ಮಾತೆ ದೇವಿಯೇ
ಕೋಟಿ ಸೂರ‍್ಯ ಕೋಟಿ ಚಂದ್ರ ಸ್ರುಶ್ಟಿ ಕರ‍್ತೆ ದೇವಿಯೇ
ಜಾತಿ ಬೇದ ಹೋಗಲಿ
ಎಲ್ಲರೊಂದಾಗಲಿ
ಏಕ ಬಾವ ತುಂಬಲಿ
ಲೋಕದೆಲ್ಲ ಕಡೆಯಲಿ
ಚಿನ್ನ ಪರದೆ ಹೋಗಲಮ್ಮ ನಮ್ಮ ನಿಮ್ಮ ನಡುವಲಿ

( ಚಿತ್ರ ಸೆಲೆ: holidayplans.co.in/kudremukh/horanadu )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *