ಅಲ್ಲಮನ ವಚನಗಳ ಓದು – 6ನೆಯ ಕಂತು

– ಸಿ.ಪಿ.ನಾಗರಾಜ.

 

ಕುಲಮದ ಛಲಮದ ವಿದ್ಯಾಮದದವರ ತೋರದಿರಾ
ಅವರ ಆರೂಢ ಪದವಿಯನೆನಗೆ ತೋರದಿರಾ
ಅವರ ಗರುವ ಗಂಭೀರತನವನೆನಗೆ ತೋರದಿರಾ
ಶಮೆದಮೆಯುಳಿದು ದಶಮುಖ ನಿಂದು
ಲಿಂಗದಲ್ಲಿ ಲೀಯವಾದವರನಲ್ಲದೆ ಎನಗೆ ತೋರದಿರಾ ಗುಹೇಶ್ವರ.

“ನಾವೇ ಎಲ್ಲವನ್ನೂ ತಿಳಿದವರು / ನಾವೇ ಎಲ್ಲರಿಗಿಂತ ದೊಡ್ಡವರು / ನಮ್ಮಿಂದಲೇ ಎಲ್ಲವೂ ನಡೆಯುತ್ತಿದೆ” ಎಂಬ ಮೇಲರಿಮೆಯ ಒಳಮಿಡಿತದಿಂದ ಕೂಡಿ, ಕುಲಮದ / ಚಲಮದ / ವಿದ್ಯಾಮದದಿಂದ ಮೆರೆಯುತ್ತಾ, ಇತರರನ್ನು ಕೀಳಾಗಿ ಕಾಣುವಂತಹ ವ್ಯಕ್ತಿಗಳನ್ನು ಅಲ್ಲಮನು ಈ ವಚನದಲ್ಲಿ ಅಲ್ಲಗಳೆದಿದ್ದಾನೆ.

“ಕುಲಮದ” ಎಂದರೆ ವ್ಯಕ್ತಿಯು ತಾನು ಹುಟ್ಟಿ ಬೆಳೆದು ಬಾಳುತ್ತಿರುವ ಜಾತಿ /ಮತ /ವಂಶ /ಮನೆತನವು ಮೇಲಿನದು /ದೊಡ್ಡದು /ಪವಿತ್ರವಾದುದು ಎಂಬ ತಿಳಿಗೇಡಿತನದ ಒಳಮಿಡಿತಕ್ಕೆ ಒಳಗಾಗಿ , ಸಮಾಜದಲ್ಲಿರುವ ಇನ್ನಿತರ ಜಾತಿ /ಮತ /ವಂಶ / ಮನೆತನಕ್ಕೆ ಸೇರಿದ ಜನಸಮುದಾಯವನ್ನು ಕೀಳೆಂದು ಕಡೆಗಣಿಸಿ, ಸೊಕ್ಕಿನಿಂದ ಕೊಬ್ಬಿ ಮೆರೆಯುವ ನಡೆನುಡಿ. ಇನ್ನಿತರ ಜಾತಿ /ಮತಗಳಿಗೆ ಸೇರಿದ ವ್ಯಕ್ತಿಗಳು ವಿದ್ಯೆಯನ್ನು ಪಡೆದು, ಅರಿವನ್ನು ಹೊಂದಿ, ಒಳ್ಳೆಯ ಗದ್ದುಗೆಗಳನ್ನೇರಿ, ಆಸ್ತಿ-ಪಾಸ್ತಿ-ಹಣಕಾಸನ್ನು ಸಂಪಾದಿಸಿ ಸಮಾಜದಲ್ಲಿ ತಲೆಯೆತ್ತಿ ಬಾಳುವುದನ್ನು ಕುಲಮದವುಳ್ಳ ವ್ಯಕ್ತಿಗಳು ಸಹಿಸುವುದಿಲ್ಲ. ಇದಕ್ಕಾಗಿ ನೂರೆಂಟು ಬಗೆಯ ಜಾತಿ /ಮತಗಳಿಂದ ಹೆಣೆದುಕೊಂಡು ರೂಪುಗೊಂಡಿರುವ ಸಮಾಜದಲ್ಲಿನ ಜನಸಮುದಾಯಗಳ ನಿತ್ಯದ ಆಗುಹೋಗುಗಳಲ್ಲಿ ಜಾತಿ /ಮತ /ದೇವರ ಹೆಸರಿನಲ್ಲಿ ಇಲ್ಲಸಲ್ಲದ ಸಂಗತಿಗಳನ್ನು ಹರಡುತ್ತಾ, ಜನರ ಮನದಲ್ಲಿ ಪರಸ್ಪರ ಅನುಮಾನದ /ಅಪನಂಬಿಕೆಯ /ಹಗೆತನದ ಬೆಂಕಿ ಹತ್ತಿ ಉರಿಯುವಂತೆ ಮಾಡುತ್ತಾ, ಸಮಾಜದಲ್ಲಿನ ಜನತೆಯು ಒಗ್ಗಟ್ಟಿನಿಂದ ಜತೆಗೂಡಿ ನೆಮ್ಮದಿಯಿಂದ ಬದುಕನ್ನು ನಡೆಸದಂತಹ ಹುನ್ನಾರಗಳನ್ನು ಹೂಡುತ್ತಿರುತ್ತಾರೆ.

“ಛಲಮದ” ಎಂದರೆ ವ್ಯಕ್ತಿಯು ತಾನು ತಿಳಿದುಕೊಂಡಿರುವುದು /ಹೇಳುತ್ತಿರುವುದು /ಮಾಡುತ್ತಿರುವುದೇ ಸರಿ ಎಂಬ ಒಳಮಿಡಿತದಿಂದ ಕೂಡಿ , ಇತರರು ನೀಡುವ ಯಾವುದೇ ಬಗೆಯ ಸಲಹೆ /ಸೂಚನೆ /ತಿಳುವಳಿಕೆಯ ಮಾತುಗಳಿಗೆ ಬೆಲೆಕೊಡದ ನಡೆನುಡಿ. ಚಲಮದವುಳ್ಳ ವ್ಯಕ್ತಿಗಳು ತಮ್ಮ ಹಟಮಾರಿತನ ನಡೆನುಡಿಗಳಿಂದ “ತಾನು /ತನ್ನ ಕುಟುಂಬ /ತನ್ನ ಸಮಾಜ ಹಾಳಾದರೂ ಲೆಕ್ಕಿಸದೆ, ಇತರರಿಗೆ ಕೇಡನ್ನು ಬಗೆಯಲು” ಮುನ್ನುಗ್ಗುತ್ತಾರೆ.

“ವಿದ್ಯಾಮದ” ಎಂದರೆ ವ್ಯಕ್ತಿಯು ಅಕ್ಕರದ ಓದು ಬರಹದ ಕಲಿಕೆಯಿಂದ ಪಡೆದ ಅರಿವಿನಿಂದ ತನಗೆ ಮತ್ತು ಸಹಮಾನವರಿಗೆ ಒಳಿತನ್ನು ಉಂಟುಮಾಡುವ ಕೆಲಸಗಳನ್ನು ಮಾಡದೆ, ತಾನೊಬ್ಬನೇ ಹೆಚ್ಚಿನ ತಿಳುವಳಿಕೆಯುಳ್ಳವನು ಎಂಬ ಒಳಮಿಡಿತದಿಂದ ಕೂಡಿ, ಇನ್ನುಳಿದವರನ್ನು ತಿಳಿಗೇಡಿಗಳೆಂದು ಕಡೆಗಣಿಸುವ ನಡೆನುಡಿ. ವಿದ್ಯಾಮದವುಳ್ಳವರು ತಾವು ಕಲಿತ ವಿದ್ಯೆಯಿಂದ ಸಹಮಾನವರನ್ನು ವಂಚಿಸುವ ಕಲೆಯಲ್ಲಿ ಪರಿಣತರಾಗಿ ಜನಸಮುದಾಯದ ಬದುಕನ್ನು ಹಾಳುಮಾಡುವುದಲ್ಲದೇ, ಇತರರನ್ನು ಹೆಜ್ಜೆಹೆಜ್ಜೆಗೂ ಅಪಮಾನಗೊಳಿಸುತ್ತಿರುತ್ತಾರೆ.

ನೆಮ್ಮದಿಯ ಬದುಕಿಗೆ ಅಗತ್ಯವಾದ ಅನ್ನ /ಬಟ್ಟೆ /ವಸತಿ /ಕೆಲಸ /ಸಂಪತ್ತು /ಆರೋಗ್ಯವನ್ನು ಪಡೆದು ಒಲವು-ನಲಿವುಗಳಿಂದ ಜತೆಗೂಡಿ ಬಾಳಬೇಕಾದ ಜನಸಮುದಾಯಕ್ಕೆ ಎಲ್ಲಾ ರೀತಿಯಿಂದಲೂ ಕೇಡನ್ನುಂಟುಮಾಡುವ ಕುಲಮದ /ಚಲಮದ /ವಿದ್ಯಾಮದವುಳ್ಳ ವ್ಯಕ್ತಿಗಳಿಂದ ದೂರವಿರಬೇಕೆಂಬ ಎಚ್ಚರಿಕೆಯನ್ನು ಅಲ್ಲಮನು ನೀಡಿದ್ದಾನೆ.

ಮಯ್ ಮನಗಳನ್ನು ಹತೋಟಿಯಲ್ಲಿಟ್ಟುಕೊಂಡು , ಒಳ್ಳೆಯ ನಡೆನುಡಿಗಳಿಂದ ತಮಗೆ ಮತ್ತು ಸಮಾಜದಲ್ಲಿನ ಸಹಮಾನವರಿಗೆ ಒಳಿತನ್ನುಂಟು ಮಾಡುವ ವ್ಯಕ್ತಿಗಳನ್ನು ನೋಡಲು ಮತ್ತು ಅಂತಹವರೊಡನೆ ಮಾತ್ರ ಒಡನಾಡಲು ಅಲ್ಲಮನು ಬಯಸುತ್ತಾನೆ.

(ಕುಲ=ಜಾತಿ /ಮತ /ವಂಶ /ಮನೆತನ ; ಮದ=ಸೊಕ್ಕು /ಗರ‍್ವ ; ಕುಲಮದ=ತನ್ನ ಜಾತಿ /ವಂಶ /ಮನೆತನವೇ ದೊಡ್ಡದು ಎಂಬ ಮೇಲರಿಮೆಯಿಂದ ಕೂಡಿದ ಸೊಕ್ಕಿನ ನಡೆನುಡಿ ; ಛಲ=ತಾನು ಅಂದುಕೊಂಡಿದ್ದನ್ನು ಅದರ ಒಳಿತು /ಕೆಡುಕಿನ ಪರಿಣಾಮಗಳನ್ನು ಲೆಕ್ಕಿಸದೆ ಮಾಡಿಮುಗಿಸಬೇಕೆನ್ನುವ ನಡೆನುಡಿ ; ಛಲಮದ=ತನ್ನ ಅನಿಸಿಕೆಯಂತೆ ಎಲ್ಲವೂ ನಡೆಯಬೇಕೆಂಬ ಮೊಂಡುತನದ ನಡೆನುಡಿ ; ವಿದ್ಯಾ=ಅರಿವು /ತಿಳುವಳಿಕೆ /ಅಕ್ಕರದ ಓದು ಬರಹ ; ವಿದ್ಯಾಮದ=ಅಕ್ಕರದ ಓದುಬರಹದಿಂದ ತಾನು ಇತರರಿಗಿಂತ ಹೆಚ್ಚು ತಿಳಿದವನು ಎಂಬ ಸೊಕ್ಕಿನ ನಡೆನುಡಿ ; ತೋರದಿರು+ಆ ; ತೋರದಿರು=ತೋರಬೇಡ /ನನ್ನ ಕಣ್ಣಿಗೆ ಕಾಣುವಂತೆ ಮಾಡಬೇಡ ; ಆರೂಢ=ಪಡೆದಿರುವ /ಹೊಂದಿರುವ ; ಪದವಿಯನ್+ಎನಗೆ ; ಪದವಿ=ಹುದ್ದೆ /ಗದ್ದುಗೆ ; ಆರೂಢ ಪದವಿ=ಸಮಾಜದಲ್ಲಿ ಏರಿರುವಂತಹ ದೊಡ್ಡ ಗದ್ದುಗೆ /ಮೇಲಿನ ಅಂತಸ್ತು ; ಎನಗೆ=ನನಗೆ ; ಗರುವ=ಸೊಕ್ಕು/ಹೆಮ್ಮೆ ; ಗಂಭೀರತನವನ್+ಎನಗೆ ; ಗಂಭೀರತನ=ಜನರೊಡನೆ ಹೆಚ್ಚು ಮಾತುಕತೆಗಳನ್ನಾಡದೆ /ಒಲವುನಲಿವುಗಳಿಂದ ಬೆರೆಯದೆ ಗತ್ತಿನಿಂದ ಕೂಡಿದ ನಡೆನುಡಿ ; ಶಮೆ+ದಮೆ+ಉಳಿದು ; ಶಮೆ=ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ; ದಮೆ=ಕಣ್ಣು /ಕಿವಿ /ಮೂಗು /ತೊಗಲು /ನಾಲಿಗೆಯಿಂದ ಉಂಟಾಗುವ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡು ಬಾಳುವುದು ; ಉಳಿದು=ಹೊಂದಿ /ಪಡೆದು ; ದಶ=ಹತ್ತು ; ಮುಖ=ದಿಕ್ಕು /ದಿಶೆ /ಎಡೆ ; ದಶಮುಖ=ಎಲ್ಲೆಡೆಗಳಲ್ಲಿಯೂ /ಎಲ್ಲಾ ಕಡೆಗಳಲ್ಲಿಯೂ  ; ನಿಂದು=ನೆಲೆಸಿ /ಹರಡಿ ; ಲಿಂಗ+ಅಲ್ಲಿ ; ಲೀಯ+ಆದವರನ್+ಅಲ್ಲದೆ ; ಲಿಂಗ=ಈಶ್ವರ /ಒಳ್ಳೆಯ ನಡೆನುಡಿಗಳಿಗೆ ಪ್ರೇರಣೆಯನ್ನು ನೀಡುವ ದೇವರು ; ಲೀಯ=ಬೆರೆಯುವಿಕೆ /ಕೂಡಿಕೊಳ್ಳುವಿಕೆ ; ಲಿಂಗದಲ್ಲಿ ಲೀಯವಾದವರು=ಒಳ್ಳೆಯತನದ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವವರು ; ಅಲ್ಲದೆ=ಹೊರತುಪಡಿಸಿ /ಬಿಟ್ಟು ; ಗುಹಾ+ಈಶ್ವರ=ಗುಹೇಶ್ವರ ; ಗುಹಾ=ಗುಹೆ /ಬೆಟ್ಟಗುಡ್ಡಗಳಲ್ಲಿರುವ ಕಲ್ಲಿನ ಪೊಟರೆ ; ಈಶ್ವರ=ಶಿವ ; ಗುಹೇಶ್ವರ=ಶಿವನ ಮತ್ತೊಂದು ಹೆಸರು /ಅಲ್ಲಮನ ಮೆಚ್ಚಿನ ದೇವರು /ಅಲ್ಲಮನ ವಚನಗಳಲ್ಲಿ ಕಂಡುಬರುವ ಅಂಕಿತನಾಮ)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: