‘ಮಣ್ಣೆತ್ತಿನ ಅಮವಾಸೆ’ಯ ಸೊಗಡು

ಗುರುರಾಜ‌ ಮನಹಳ್ಳಿ.

mannina-basavanna

ರಾಜ್ಯದ ಉತ್ತರ ಬಾಗದಲ್ಲಿ ಇನ್ನೇನು ಕಾರು ಹುಣ್ಣಿಮೆ ಮುಗಿದು ಹೋಯ್ತು ಅನ್ನೋದರಲ್ಲಿ, ಮತ್ತೊಂದು ಸೊಗಸಾದ, ಚಿಕ್ಕಮಕ್ಕಳಿಗೆ ಸಂತಸ ತರುವ ಹಬ್ಬ, ಅಂದರೆ ಅದು “ಮಣ್ಣೆತ್ತಿನ ಅಮವಾಸೆ”.

ನಾವು ಚಿಕ್ಕವರಿದ್ದಾಗ, ಈ ಮಣ್ಣೆತ್ತಿನ ಅಮವಾಸೆ ದಿನದಂದು ಸೂರ‍್ಯ ಹುಟ್ಟೋದಕ್ಕಿಂತ ಮುಂಚೆ ಕುಂಬಾರನ ಮನೆಯಲ್ಲಿ ಇರ‍್ತಿದ್ವಿ – ನನಗೆ ‘ಆ ಜೋಡಿ ಮಣ್ಣೆತ್ತು ಬೇಕು’, ‘ಈ ಜೋಡಿ ಮಣ್ಣೆತ್ತು ಬೇಕು’ ಅಂತ ಕುಂಬಾರನ ಜೊತೆ ಜಗಳ ಮಾಡಕೊಂಡು. ನಾವು ‘4 ರೂಪಾಯಿಗೆ ಜೋಡಿ ಕೊಡಿ’ ಅನ್ನೋದು, ಅವನು ‘ಅಶ್ಟಕ್ಕ ಆಗೋದಿಲ್ಲ, 6 ರೂಪಾಯಿ ಆದರ ತಗೊಂಡು ಹೋಗಿ, ಇಲ್ಲ ಅಂದ್ರ ಬೇಡ’ ಅನ್ನೋದು. ಕೊನೆಗೆ ಹಾಗೋ ಹೀಗೋ ಏನೋ ಮಾಡಿ, ಒಂದು ಜೋಡಿ ಮಣ್ಣೆತ್ತು ಹಿಡಕೊಂಡು ಮನೆ ದಾರಿ ಹಿಡಿಯೋದು ನಮ್ಮ ಕೆಲಸವಾಗಿತ್ತು.

ಮನೆಯ ತಲಬಾಗಿಲಲ್ಲಿ ಕಾಲು ಇಡೋದೇ ತಡ, ಅವ್ವನ ಕಡೆಯಿಂದ ಕಿವಿಗೆ ಇಂಪಾದ ಪದಗಳು ತಾಕುತ್ತಿದ್ದವು. ‘ಒಂದ ಬೆಳಿಗ್ಗೆ ಹೋಗೀ, ಒಂದ ಹಬ್ಬ ಗೊತ್ತಿಲ್ಲ ಒಂದ ಹರಿದಿನ ಗೊತ್ತಿಲ್ಲ, ಜಳಕಾ ಯಾವಾಗ ಮಾಡೋದು, ಪೂಜೀ ಯಾವಾಗ ಮಾಡ್ತೀ’ ಅಂತ ಬೈಕೊಂತ, ಕೊನೆಗೆ ‘ನೀರು ಕಾದಾವು, ಬಂದ ಜಳಕ ಮಾಡು’ ಅಂತ ಹೇಳಿ ತಲಿಗೆ ಎಣ್ಣೆ ಹಚ್ಚಿ, ಅವ್ವ ಜಳಕ ಮಾಡಸಾಕಿ. ಇನ್ನೇನು ಜಳಕ ಮುಗೀತು ಅನ್ನೋದರಲ್ಲಿ ಮಣ್ಣೆತ್ತಿಗೆ ಪೂಜೆ ಮಾಡುತ್ತಿದ್ವಿ.

ಇನ್ನು ಮಣ್ಣೆತ್ತಿಗೆ ಸಿಂಗಾರ ಮಾಡೋದು ಅಂದ್ರೆ, ಅದು ಬಣ್ಣಿಸಲಾಗದ ಸಂಗತಿ. ಅಕ್ಕ ತಂಗಿಯರು ಹೆಣಿಕೆ ಹಾಕಲೆಂದು ಬಣ್ಣ ಬಣ್ಣದ ಉಲನ್ ತಂದಿರುತ್ತಿದ್ದರು. ಅಕ್ಕ ತಂಗಿಯರ ಜೊತೆ ಜಗಳವಾಡಿ ಈ ಒಂದು ಬಣ್ಣ ಬಣ್ಣದ ಉಲನ್ ನಿಂದ ಮಣ್ಣೆತ್ತಿಗೆ ಮೂಗುದಾರ, ಹಗ್ಗ ಮತ್ತೆ ಗೊಂಡೆ ಮಾಡಿ ಕಟ್ಟಿ, ತರತರದ ಬಣ್ಣ ಹಚ್ಚಿ ಸಿಂಗಾರ ಮಾಡ್ತಾ ಇದ್ವಿ.

ಇದ್ದೆಲ್ಲಾ ಆದಮೇಲೆ ಸಂಜೆ ಊರ ಹೊರಗೆ ಹೋಗುತ್ತಿದ್ವಿ. ಹೋಗುವಾಗ ಮನೆಯಲ್ಲಿ ಮಾಡಿದ್ದ ತಿಂಡಿಗಳನ್ನೂ ಕಟ್ಟಿಕೊಂಡು ಹೋಗುತ್ತಿದ್ವಿ. ಮಣ್ಣೆತ್ತು ಹಿಡಕೊಂಡು ಓಡುವ ಸ್ಪರ‍್ದೆ(ಕರಿ ಹಿಡಿಯುವುದು) ಇರುತ್ತಿತ್ತು. ಇದರಲ್ಲಿ ಮೊದಲು ಬಂದವನನ್ನು ಹೊಗಳಿ, ಆಮೇಲೆ ಕರಿ ಹಿಡಿದ ಮಣ್ಣೆತ್ತನ್ನು ಬಾವಿಗೆ ಅತವಾ ಕೆರೆಗೆ ಹಾಕಿ, ಕಟ್ಟಿಕೊಂಡ ಹೋದ ತಿಂಡಿ ತಿನಿಸುಗಳನ್ನು ತಿಂದು ಮನೆಗೆ ಬರುತ್ತಿದ್ವಿ.

ಈ ಬಸವನ ಅಮಾವಾಸೆ ಅತವಾ ಮಣ್ಣೆತ್ತಿನ ಅಮವಾಸೆ ದಿನದಿಂದ, ಬೇಸಾಯ ಚಟುವಟಿಕೆಗಳಿಗೆ ಚಾಲನೆ ನೀಡಲಾಗುತ್ತದೆ. ಈ ಅಮಾವಾಸೆ ದಿನ ಪ್ರತಿ ಮನೆಗಳಲ್ಲೂ ಚಕ್ಕುಲಿ ತಯಾರಿಸಿ, ಮಕ್ಕಳಿಗೆ ಚಕ್ಕುಲಿ ನೀಡುವುದು ವಾಡಿಕೆ. ಸಾಯಂಕಾಲದ ವೇಳೆ ಮಕ್ಕಳು ಪೂಜೆ ಮಾಡಿದ ಬಸವನ ಮಣ್ಣಿನ ವಿಗ್ರಹವನ್ನು ಸಣ್ಣ ಗಾಡಿಯಲ್ಲಿ ಕೂರಿಸಿ ಬೀದಿಯಲ್ಲಿ ಹೋಗುವರು.

ಇತ್ತೀಚಿನ ದಿನಗಳಲ್ಲಿ ಬೇಸಾಯದಲ್ಲಿ ಜನರ ಆಸಕ್ತಿ ಕಡಿಮೆಯಾಗುತ್ತಾ, ಈ ಸಂಪ್ರದಾಯವು ಮರೆಯಾಗುತ್ತಿರುವುದು ಬೇಸರದ ಸಂಗತಿ.

(ಚಿತ್ರಸೆಲೆ: kannada.eenaduindia.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks