ಪ್ರಕ್ರುತಿ ಪಾಟಶಾಲೆ

ವೆಂಕಟೇಶ್ ಯಗಟಿ.

nature-damage

ನಮ್ಮಲ್ಲಿರುವ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವುದು ಪ್ರಕ್ರುತಿ. ನಮ್ಮ ಅಹಂ, ಅಸೂಯೆ ಸ್ವಾರ‍್ತಗಳಿಗೆ ತಿರುಗೇಟು ನೀಡಿ ಪಾಟಕಲಿಸುವುದೂ ಪ್ರಕ್ರುತಿಯೇ. ಮನುಜರಾಗಿ ನಮ್ಮಲ್ಲಿ ಸಾವಿರಾರು ಪ್ರಶ್ನೆಗಳಿರುತ್ತವೆ. ಈ ಜಗತ್ತು ಯಾಕೆ ಹೀಗಿದೆ? ಕುಶಿ ಕಡಿಮೆಯಾದರೆ ದುಕ್ಕ; ಅತಿ ನೋವಿನ ಹಿಂದೆಯೇ ಬರುವುದು ನಲಿವು. ಯಾವ ಕಶ್ಟಗಳೂ  ಶಾಶ್ವತವಲ್ಲ; ಹಾಗೆಯೇ ಸುಕವೂ ಕೂಡ! ಬಹಳ ವರ‍್ಶಗಳ ಕಾಲ ನಮ್ಮ ಜತೆಗಿದ್ದ ವ್ಯಕ್ತಿ  ದಿಡೀರನೆ ನಮ್ಮನ್ನಗಲಿ ಹೋಗುವುದೇಕೆ? ಸಾವು ಯಾಕಿರಬೇಕು? ಕೆಲ ದಿನಗಳ ಹಿಂದೆ ಜನ್ಮ ಪಡೆದ ನಮ್ಮ ಶಿಶು, ಆಪ್ತರ ಮಗುವಿನ ಜೊತೆ ನಂಟು ಬೆಳಿಸಿಕೊಳ್ಳೋದೇಕೆ? ಕೆಲವರು ಹೋದ ವರ‍್ಶ ನಮಗೆ ಪರಿಚಯವಾಗಿರಲ್ಲ ಆದರೆ ಈ ವರ‍್ಶ ನಮಗೆ ಬಹಳ ಆಪ್ತರಾಗಿರುತ್ತಾರೆ. ಹಿಂದೆ ಆಪ್ತರಾದವರು ಇಂದು ದೂರವಾಗಿರ‍್ತಾರೆ, ಏನಿದರ ಮರ‍್ಮ?? ಹೀಗೆ ಹಲವಾರು ಪ್ರಶ್ನೆಗಳು ನಮಗೆ ಎದುರಾಗೋದು ನಿಜ.

ಇದಕ್ಕಿಲ್ಲಾ ನಮ್ಮಲ್ಲಿ ಉತ್ತರ… ನಿರುತ್ತರ. ಈ ಪ್ರಶ್ನೆಗಳು ನಮ್ಮ ಬುದ್ದಿ ಸಂಕೀರ‍್ಣತೆಗೆ ಅಪ್ಪಳಿಸಿ ಕಾಡುವುದಂತೂ ನಿರಂತರ.

ಇವಕ್ಕೆಲ್ಲಾ ಉತ್ತರ ಸಿಕ್ಕೋದಿಲ್ವಾ? ಈ ಬರಹದ ಶುರುವಿನಿಂದ ಕೇವಲ ಪ್ರಶ್ನೆಗಳಾಗಿವೆ, ಉತ್ತರ ಎಲ್ಲಿ ಎಂದು ಹುಡುಕುತ್ತಿದ್ದರೆ ಕೆಳಗಿನದನ್ನ ಓದಲೇ ಬೇಕಾದ ಪರಿಸ್ತಿತಿ ನಿಮ್ಮದು!

ಪ್ರಕ್ರುತಿ, ದೇವರ ಅದ್ಬುತ ಕೊಡುಗೆ ಮನುಶ್ಯಗಣಕ್ಕೆ. ನಾವುಗಳು ಜೀವಿಸಲು ಅತ್ಯವಶ್ಯವಾದ ಪಂಚಬೂತಗಳಾದ ಬೆಂಕಿ, ಗಾಳಿ, ನೀರು, ಬೂಮಿ, ಆಕಾಶ ಸಿಗುವದೇ ಪ್ರಕ್ರುತಿಯಿಂದ. ಹೀಗೆ ನಿಮಲ್ಲೇನೋ ಪರಿಹರಸಲಾಗದ ಪ್ರಶ್ನೆ ಉದ್ಬವಿಸಿದರೆ ಒಮ್ಮೆ ದಿಟ್ಟಿಸಿ ನಿಮ್ಮ ಸುತ್ತ ಮುತ್ತಲಿನ ಪರಿಸರ ನೋಡಿ. ಒಂದು ಮರವನ್ನು ನೋಡಿದರೆ ನಿಮಗದು ವಿವರಿಸುತ್ತದೆ “ಎಶ್ಟೇ ಕಶ್ಟಗಳು ಬಂದರೂ ನನ್ನಂತಯೆ ಅಂಜದೇ ನಿನ್ನ ಕೆಲಸವನ್ನು ನೀ ಮಾಡು,ಇನ್ನೊಬ್ಬರಿಗೆ ಒಳಿತನ್ನು ಮಾಡು” ಎಂದು. ಹಾಗೆಯೇ ಬೆಟ್ಟವನ್ನು ನೋಡಿ, “ಎಶ್ಟೇ ಅಡ್ಡಿಗಳಿದ್ದರೂ, ಮಳೆ-ಗಾಳಿ-ಬಿಸಿಲಿಗೆ ಅಲುಗಾಡದೆ ಅಚಲವಾಗಿರು” ಎಂದೆನ್ನುತ್ತದೆ. ಅನಂತರ,  ನಿಮ್ಮ ಸುತ್ತಲೂ ಹರಿಯುವ ಆ ತೊರೆಯನ್ನು ನೋಡಿ, “ತಾನು ಹರಿಯುವ ಜಾಗ ಎಶ್ಟೇ ಕಿರಿದಾಗಿದ್ದರೂ ಅದಕ್ಕೆ ಹೆದರದೆ ಹರಿದು, ನದಿಯನ್ನು ಸೇರು, ನಿನ್ನ ಗುರಿ ತಲುಪು..” ಎಂದೆನ್ನುತ್ತದೆ.

ಹೀಗೆ ಯಾವ ಅಡ್ಡಿ ಆತಂಕಗಳಿಲ್ಲದೇ, ಯಾವುದೇ ರೀತಿಯ ಲೌಕಿಕ ಬಂದಗಳಿಲ್ಲದೇ ಸಾಗುತ್ತಿರುವ ಪ್ರಕ್ರುತಿಯೇ ನಮಗೆ ಉತ್ತರಗಳ ಗಣಿ. ಇನ್ನೊಂದೆಡೆ ನಮ್ಮ ಅವಶ್ಯಕತೆಗೂ ಮೀರಿದ ಕಾರಣಗಳಿಗಾಗಿ ನಮ್ಮ ಸುತ್ತಲಿನ ಸಂಪತ್ತನ್ನು ಲೂಟಿ ಮಾಡುವುದು, ದುಡ್ಡಿನ ಬಲೆಗೆ ಬಿದ್ದು, ಎಲ್ಲವನ್ನೂ ವ್ಯಾವಹಾರಿಕವಾಗಿ ತಿಳಿದು ಬೂತಾಯಿಯ ಗರ‍್ಬಕ್ಕಳಿದು ವಾಣಿಜ್ಯೀಕರಿಸುತ್ತಿರಿಸುವುದು, ಮನುಶ್ಯಕುಲವು ಮಾಡುತ್ತಿರುವ ಅತಿದೊಡ್ಡ ತಪ್ಪು. ಸ್ವಾಬಾವಿಕ ಸ್ವತ್ತನ್ನು ತನ್ನ ವೈಯುಕ್ತಿಕವೆಂದು ಬಾವಿಸಿಯೇ ತನ್ನ ಸ್ವಾರ‍್ತದ ಬಾವಿಯೊಳಗಿನ ಕಪ್ಪೆಯಾಗಿದ್ದಾನೆ ಮಾನವ.

ತನ್ನ ಒಳಿತಿಗಾಗಿ ಎಂದು ಬಾವಿಸಿ ಮನುಜ ಪ್ರಕ್ರುತಿಯನ್ನುಪಯೋಗಿಸಿ ಮರಗಳನ್ನು ಕಡಿಯಲಾರಂಬಿಸಿ ಅದಕ್ಕೆ ಆದುನೀಕರಣ ಎಂಬ ಹೆಸರಿಟ್ಟ. ಇಲ್ಲ ಸಲ್ಲದ ಕಾರ‍್ಕಾನೆಗಳ ನಿರ‍್ಮಿಸಿ ಜಾಗತಿಕ ಬೆಳವಣಿಗೆಯ ನೆಪ ಒಡ್ಡುತ್ತಿರುವದು ಮೂರ‍್ಕತನದ ಪರಮಾವದಿ ಅನ್ನದೆ ಬೇರೆ ವಿದಿ ಇಲ್ಲ. ಹೀಗೆ ನಗರೀಕರಣದ ಹೆಸರಲ್ಲಿ ಹಸಿರ ಅಳಿಸಿ, ದೊಡ್ಡ ಬ್ರಹತ್ತಾಕಾರದ ಅಪಾರ್‍ಟ್‌‍ಮೆಂಟ್‍ಗಳಿಗೆ ನೀರೆರೆದು ಪೋಶಿಸುವ ಜಾಗಕ್ಕೆ ಹಲವಾರು ಸಾಲುಮರದ ತಿಮ್ಮಕ್ಕನಂತವರು ಬರಬೇಕಾಗಿರುವ ಸಂದರ‍್ಬ ಬಂದಿದೆ. ತನ್ನ ಸಾದನೆಗಾಗಿ  ಪರಿಸರದ ಒಡಲ ಸೀಳಿ ಇಡೀ ಪ್ರಪಂಚವನ್ನು ಹಾಳು ಮಾಡುತ್ತಿರುವ ಮನುಶ್ಯ ಸಂಕುಲಕ್ಕೂ, ಮಹಾತಾಯಿ ಪ್ರಕ್ರುತಿ ಪಾಟ ಕಲಿಸದೇ ಇರುವುದಿಲ್ಲ. ಆಗಾಗ ಬೂಕಂಪ, ಪ್ರಳಯ, ಪ್ರವಾಹ, ಬರಗಳಿಂದ ತನ್ನ ಕೋಪ, ವಿಕೋಪ ತೋರಿಸುತ್ತಾ ಎಚ್ಚರದ ಗಂಟೆಯನ್ನು ಬಾರಿಸುತ್ತಿದ್ದಾಳೆ. ಅರಿತರೆ ನಮ್ಮ ಉಳಿವಿದೆ.

ಪ್ರಕ್ರುತಿಯ ಉಳಿವು ನಮ್ಮ ಉಳಿವು..ಪ್ರಕ್ರುತಿಯೇ ನಮಗೆ ಪಾಟಶಾಲೆ..

(ಚಿತ್ರ ಸೆಲೆ: wallpapers-fenix.eu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: