ಬೆಣ್ಣೆ ನಿಜಕ್ಕೂ ಮಯ್ಯೊಳಿತಿಗೆ ಮಾರಕವೆ?
– ಕೆ.ವಿ.ಶಶಿದರ.
ಹಾಲಿನ ಕೊಬ್ಬು ನಿಜವಾಗಲೂ ವಿಶವೇ? ಬೊಜ್ಜು, ಕೊಲೆಸ್ಟೆರಾಲ್ ಹೆಚ್ಚುವಿಕೆ ಹಾಗೂ ಹ್ರುದಯ ಸಂಬಂದಿ ಕಾಯಿಲೆಗಳಿಗೆ ಕೊಬ್ಬು ಮೂಲವೆ? ಹೆಚ್ಚು ಕೊಬ್ಬಿನಂಶವಿರುವ ಬೆಣ್ಣೆಯಿಂದ ಹಾಗೂ ಅದರಲ್ಲಿ ಅಡಗಿರುವ ಜೀವಸತ್ವಗಳಿಂದ ಆಗುವ ಉಪಯೋಗಗಳಾದರೂ ಏನು? ಯಾವ ರೀತಿಯಲ್ಲಿ ಬೆಣ್ಣೆ ಮಯ್ಯೊಳಿತಿಗೆ ಸಹಕಾರಿ? ಎಂಬಿತ್ಯಾದಿ ಪ್ರಶ್ನೆಗಳು ಜನಸಾಮಾನ್ಯರನ್ನು ಸದಾ ಕಾಡುವುದು ಸಹಜ.
ಬೊಜ್ಜು, ಡಯಾಬಿಟೀಸ್ ಹಾಗೂ ಹಲವಾರು ಕಾಯಿಲೆಗಳಿಗೆ ದೇಹದ ಅತಿತೂಕ ಹಾಗೂ ಕೊಬ್ಬು ಮೂಲ ಎಂಬುದು ನಿರ‍್ವಿವಾದ. ಅಂತೆಯೇ ಬೆಣ್ಣೆ ಹಾಗೂ ತುಪ್ಪದಲ್ಲಿನ ಕೊಬ್ಬು ದೇಹದ ತೂಕ ಹೆಚ್ಚಳಕ್ಕೆ ಹಾಗೂ ದೇಹದಲ್ಲಿ ಕೊಬ್ಬಿನ ಶೇಕರಣೆಗೆ ಸಹಕಾರಿ ಎಂಬುದು ಅಶ್ಟೇ ಸುಳ್ಳು. ಬೆಣ್ಣೆಯಲ್ಲಿ ಕಡಿಮೆ ಎಂದರೂ ಶೇಕಡ 80ರಶ್ಟು ಹಾಲಿನ ಕೊಬ್ಬಿನಂಶ, ಶೇಕಡ 15 ರಿಂದ 17 ನೀರಿನಾಂಶ, ಹಾಗೂ ಉಳಿದ ಪಾಲಿನಲ್ಲಿ ಹಾಲಿನ ಗನಾಂಶ ಹೊಂದಿರಬೇಕೆಂಬ ಕಾನೂನಿದೆ. ಆದರೆ ಇಂದು ಮಾರುಕಟ್ಟೆಯಲ್ಲಿ ಲಬ್ಯವಿರುವ ಹೆಚ್ಚಿನ ಬ್ರಾಂಡೆಡ್ ಬೆಣ್ಣೆಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಅವೆಲ್ಲಾ ಸ್ವೇಚ್ಚಾಚಾರವಾಗಿ ಮಾರಾಟವಾಗುತ್ತವೆ. ಗುಣಮಟ್ಟಕ್ಕೆ ಎಲ್ಲಿ ಬೆಲೆಯಿಲ್ಲವೊ ಅಲ್ಲಿ ಕೆಟ್ಟ ಮಾಲುಗಳದ್ದೇ ದರ‍್ಬಾರು.
ಅದಿರಲಿ ‘ಬೆಣ್ಣೆ ಮಾನವನ ದೇಹದ ಮಯ್ಯೊಳಿತಿಗೆ ಮಾರಕ’ ಎಂದು ಹೆಚ್ಚಿನವರು ಹೇಳುವುದಿದೆ. ತುಪ್ಪ ಮತ್ತು ಬೆಣ್ಣೆಯಲ್ಲಿನ ಕೊಬ್ಬನ್ನು ಸೇವಿಸುವುದರಿಂದ ಒಬೆಸಿಟಿ, ಕೊಲೆಸ್ಟೆರಾಲ್ ಹೆಚ್ಚುವಿಕೆ ಮತ್ತು ಹ್ರುದಯ ಸಂಬಂದಿ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆ ಎಂಬ ಅಬಿಪ್ರಾಯ ಹಲವರಲ್ಲಿ ಬಲವಾಗಿ ಮೂಡಿದೆ. ವಿಪರ‍್ಯಾಸವೆಂದರೆ ಹಬ್ಬ ಹರಿದಿನಗಳಲ್ಲಿ ಎಲೆಯ ಕೊನೆಗೆ ಹಾಕುವ ತುಪ್ಪವನ್ನೂ ಬಿಡುವ ಮಟ್ಟಕ್ಕೆ ಈ ಅಬಿಪ್ರಾಯ ಇಂದು ಹದಿ ಹರೆಯದವರಿಂದ ಮೊದಲ್ಗೊಂಡು ಎಲ್ಲಾ ವಯೋಮಾನದವರ ಮನದಲ್ಲಿ ಬೇರೂರಿದೆ ಎಂದರೆ ತಪ್ಪಲ್ಲ.
ಬೆಣ್ಣೆಯ ಬಗೆಗಿನ ವಿಚಾರಗಳನ್ನು ತಿಳಿಯುವ ಮುನ್ನ ಒಂದು ಅತಿ ಸೂಕ್ಶ್ಮವಾದ ವಿಚಾರವನ್ನು ಗಮನದಲ್ಲಿರಿಸಿಕೊಳ್ಳುವುದು ಒಳಿತು. ಅದೇ ‘ಅತಿಯಾದರೆ ಅಮ್ರುತವೂ ವಿಶವಾಗುವುದು’ ಎಂಬುದು. ಈ ಜಾಣ್ಣುಡಿ ಬೆಣ್ಣೆ ಅತವಾ ತುಪ್ಪದಂತಹ ಜಿಡ್ಡಿನ ಪದಾರ‍್ತಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಬಾವಿಸುವುದು ಮೂರ‍್ಕತನ. ಇದು ಎಲ್ಲಾ ತರಹದ ಆಹಾರ ಪದಾರ‍್ತಕ್ಕೂ ಔಶದೋಪಚಾರಕ್ಕೂ ಅದರಲ್ಲೂ ಹೆಚ್ಚಾಗಿ ಜಂಕ್ ಪುಡ್‍ಗಳಿಗೂ ಅನ್ವಯಿಸುತ್ತದೆ ಎಂಬುದನ್ನು ಮರೆಯಬಾರದು.
ಬನ್ನಿ, ಬೆಣ್ಣೆಯಲ್ಲಿ ಅಡಗಿರುವ ಹಾಗೂ ಮಾನವನ ದೇಹಕ್ಕೆ ಸಹಾಯಕವಾಗುವ ಜೀವಸತ್ವಗಳ ಬಗ್ಗೆ, ಪ್ಯಾಟೀ ಆಸಿಡ್ ಬಗ್ಗೆ, ಸ್ಯಾಚುರೇಟೆಡ್ ಪ್ಯಾಟ್ ಬಗ್ಗೆ ಕೊಂಚ ತಿಳಿಯೋಣ.
ಕೊಬ್ಬಿನಲ್ಲಿ ಕರಗುವ ಜೀವ ಸತ್ವಗಳು
ಬೆಣ್ಣೆಯಲ್ಲಿ ಕೊಬ್ಬಿನಂಶ ಶೇಕಡ 80ಕ್ಕೂ ಹೆಚ್ಚಿರಬೇಕಾದಾಗ ಸ್ವಾಬಾವಿಕವಾಗಿ ಕೊಬ್ಬಿನಲ್ಲಿ ಕರಗಿರುವ ಜೀವಸತ್ವಗಳೂ ಸಹ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಎ, ಡಿ, ಇ, ಕೆ ಜೀವ ಸತ್ವಗಳು ಕೊಬ್ಬಿನಲ್ಲಿ ಕರಗಿರುವಂತಹವುಗಳು. ‘ಡಿ’ ಜೀವಸತ್ವವು ಇಂದಿನ ಆಹಾರ ಪದಾರ‍್ತಗಳಲ್ಲಿ ಬಹು ಅಪರೂಪ. ಕ್ಯಾಲ್ಶಿಯಂ ಮೆಟಬಾಲಿಸಂಗೆ ಇದು ತೀರ ಅವಶ್ಯಕ. ಬಹಳಶ್ಟು ಗಂಬೀರ ಕಾಯಿಲೆಗಳು ದೇಹವನ್ನು ಆವರಿಸಲು ‘ಡಿ’ ಜೀವಸತ್ವದ ಕೊರತೆಯೇ ಪ್ರಮುಕ ಕಾರಣ.
ಹೆಚ್ಚಿನ ಪ್ರಮಾಣದಲ್ಲಿರುವ ಸ್ಯಾಚುರೇಟೆಡ್ ಕೊಬ್ಬುಗಳು
ಇತ್ತೀಚಿನ ಅದ್ಯಯನಗಳನ್ನು ಗಮನಿಸಿದಾಗ ಹ್ರುದಯ ಸಂಬಂದಿ ಕಾಯಿಲೆಗೂ ನೈಸರ‍್ಗಿಕವಾಗಿ ಹಾಲಿನ ಕೊಬ್ಬಿನ ಮೂಲಕ ಬೆಣ್ಣೆಯಲ್ಲಿ ದತ್ತವಾಗಿರುವ ಸ್ಯಾಚುರೇಟೆಡ್ ಕೊಬ್ಬಿಗೂ ಯಾವುದೇ ಸಂಬಂದವಿರುವುದಿಲ್ಲ. ಬೆಣ್ಣೆಯಲ್ಲಿ (ಹಾಲಿನ ಕೊಬ್ಬಿನಲ್ಲಿ) ಚಿಕ್ಕ ಮತ್ತು ಮದ್ಯಮ ಚೈನ್ ಕೊಬ್ಬು ಇದ್ದು, ಇದರ ಮೆಟಬಾಲಿಸಂ ಸಹ ಬೇರೆಯೇ. ಈ ಸಣ್ಣ ಚೈನ್ ಸ್ಯಾಚುರೇಟೆಡ್ ಕೊಬ್ಬಿನಿಂದ ಹೆಚ್ಚಿನ ಕೊಬ್ಬಿನ ಪಚನಕ್ರಿಯೆಯೂ ಆಗುತ್ತದೆ.
ಹ್ರುದಯಾಗಾತದ ಅಪಾಯವನ್ನೂ ಕಡಿಮೆಗೊಳಿಸುತ್ತದೆ
ಪಾರ್‍ಮಿಂಗ್ಯಾಮ್‍ನಲ್ಲಿ ಹ್ರುದಯ ಸಂಬಂದಿ ಕಾಯಿಲೆಯ ಬಗ್ಗೆ ಅದ್ಯಯನ ನಡೆಸಿದಾಗ, ಬೆಣ್ಣೆಯಿಂದ ಹ್ರುದಯದ ಕಾಯಿಲೆಯ ಮೇಲೆ ಯಾವುದೇ ಪರಿಣಾಮ ಇರುವುದಿಲ್ಲವೆಂದು ತಿಳಿದು ಬಂದಿದೆ. ಮತ್ತೊಂದು ಅದ್ಯಯನದಂತೆ ಹಾಲಿನಲ್ಲಿನ ಕೊಬ್ಬಿನ ಸೇವನೆಯು ಹ್ರುದಯ ಸಂಬಂದಿ ಕಾಯಿಲೆಯ ಅಪಾಯವನ್ನು ಶೇಕಡ 69 ರಶ್ಟು ಕಡಿಮೆಗೊಳಿಸುತ್ತದೆ ಎಂದು ತಿಳಿಸಿರುತ್ತೆ. ಇದಕ್ಕೆ ಬಹುಶಹ ಹೆಚ್ಚು ಕೆ2 ಜೀವಸತ್ವದ ಸ್ವೀಕರಣೆಯೇ ಮೂಲ ಕಾರಣ ಎಂದು ಗುರುತಿಸಲಾಗಿದೆ.
ಬೆಣ್ಣೆಯು ಬ್ಯುಟೈರೇಟ್ ಮೇದಾಮ್ಲದ ಸಮ್ರುದ್ದ ಮೂಲ
ಬೆಣ್ಣೆಯಲ್ಲಿನ ಕೊಬ್ಬು ಕೋಲನ್‍ನಲ್ಲಿ ನಾರಿನ ಆಹಾರಕ್ಕೆ ಮತ್ತು ಬ್ಯಾಕ್ಟೀರಿಯಾಕ್ಕೆ ಸಿಕ್ಕು ಪಚನವಾಗಿ ನಾಲ್ಕು ಕಾರ‍್ಬನ್ ಉಳ್ಳ ಪ್ಯಾಟೀ ಆಸಿಡ್ ಬ್ಯುಟೈರೇಟ್ ಉತ್ಪತ್ತಿಯಾಗುತ್ತದೆ. ಈ ಕಾರಣಕ್ಕಾಗಿ ಹೆಚ್ಚು ಹೆಚ್ಚು ನಾರಿನ ಅಂಶದ ಆಹಾರವನ್ನು ಸೇವಿಸಲು ಪ್ರತಿಪಾದಿಸುವುದು. ಈ ರೀತಿಯಲ್ಲಿ ಉತ್ಪತ್ತಿಯಾದ ಬ್ಯುಟೈರೇಟ್ ಆಮ್ಲವು ಊತ ನಿರೋದಕ ಹಾಗೂ ಪಚನ ಅಂಗಗಳ ರಕ್ಶಣಾ ಕವಚವಾಗಿಯೂ ಕೆಲಸ ನಿರ‍್ವಹಿಸುತ್ತದೆ.
ಬೆಣ್ಣೆಯು ಸಂಯೋಜಿತ ಲಿನೋಲಿಯಿಕ್ ಆಮ್ಲದ ಸಮ್ರುದ್ದ ಮೂಲ
ಪ್ರಮುಕವಾಗಿ ಹುಲ್ಲು ತಿನ್ನುವ ಎಮ್ಮೆ/ದನಗಳಿಂದ ಉತ್ಪತ್ತಿಯಾದ ಹಾಲಿನಿಂದ ತಯಾರಿಸಿದ ಬೆಣ್ಣೆಯು ಸಂಯೋಜಿತ ಲಿನೋಲಿಯಿಕ್ ಎಂಬ ಪ್ಯಾಟೀ ಆಸಿಡ್‍ನ ಬಹು ದೊಡ್ಡ ಮೂಲ ಸೆಲೆ. ಈ ಆಮ್ಲವು ಪಚನಕ್ರಿಯೆಯ ಮೇಲೆ ಪ್ರಬಲ ಪರಿಣಾಮಕಾರಿ. ಇದರೊಂದಿಗೆ ಬಾಡಿ ಪ್ಯಾಟ್ ಅಂಶವನ್ನು ಕಡಿಮೆಮಾಡುವ ಗುಣವನ್ನೂ ಸಹ ಹೊಂದಿದೆ. ಆದ್ದರಿಂದ ಈ ಆಮ್ಲವನ್ನು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಯಸುವವರಿಗೆ ಪರ‍್ಯಾಯವಾಗಿ ನೀಡುವುದಿದೆ. ಇದು ಅಂಟಿ-ಕ್ಯಾನ್ಸರ್ ಗುಣ ಹೊಂದಿರುವುದಾಗಿಯೂ ಸಾಬೀತಾಗಿದೆ. ಇದರೊಂದಿಗೆ ರೋಗ ನಿರೋದಕ ಶಕ್ತಿಯನ್ನು ಹಾಗೂ ಮಾಂಸಕಂಡಗಳ ಬೆಳವಣಿಗೆಗೂ ಬಹು ಮುಕ್ಯ.
ಬೆಣ್ಣೆಯು ಬೊಜ್ಜು ಬೆಳೆಯುವಿಕೆಗೆ ಮಾರಕ
ನ್ಯೂಟ್ರೀಶನಲ್ ಪರಿಣಿತರು ಬೊಜ್ಜು ಬರದಂತೆ ತಡೆಯಲು ಅತಿ ಕಡಿಮೆ ಅತವಾ ಕೊಬ್ಬು ಇಲ್ಲದ ಪದಾರ‍್ತಗಳನ್ನು ಮಾತ್ರ ಸೇವಿಸಲು ಸೂಚಿಸುವುದು ಸಾಮಾನ್ಯ. ಇದರಿಂದ ದೇಹಕ್ಕೆ ಅವಶ್ಯವಿರುವ ಕ್ಯಾಲ್ಶಿಯಂ ಸಿಗುವುದಲ್ಲದೆ, ‘ಕೆಟ್ಟ’ ಕೊಬ್ಬಿನಂಶ ಹಾಗೂ ಹೆಚ್ಚಿನ ಕ್ಯಾಲೋರಿಯು ದೇಹ ಸೇರುವುದನ್ನು ತಡೆಗಟ್ಟುತ್ತದೆ ಎಂಬುದು ನ್ಯೂಟ್ರಿಶನಿಸ್ಟ್ ಗಳ ಅಂಬೋಣ. ಆದರೆ 2012ರಲ್ಲಿ ಬೆಣ್ಣೆಯಲ್ಲಿನ ಕೊಬ್ಬಿನಲ್ಲಿರುವ ಪ್ಯಾಟೀ ಆಸಿಡ್‍ಗಳ ಉಪಯೋಗದ ಮೇಲೆ ನಡೆಸಿದ ಮರುಸಂಶೋದನೆಯಿಂದ ದ್ರುಡಪಟ್ಟ ಅಂಶವೆಂದರೆ ಹೈ-ಪ್ಯಾಟ್ ಹೈನು ಉತ್ಪನ್ನಗಳ ಸೇವನೆಯಿಂದ ಬೊಜ್ಜಾಗಲಿ, ಹ್ರುದಯ ಸಂಬಂದಿ ಕಾಯಿಲೆಯಾಗಲಿ, ಪಚನ ಕ್ರಿಯೆಯಲ್ಲಿನ ತೊಂದರೆಯಾಗಲಿ ಆಗುವುದಿಲ್ಲ. ಬದಲಿಯಾಗಿ ಬೊಜ್ಜು ಬೆಳೆಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಣ್ಣೆಯಲ್ಲಿನ ಪ್ಯಾಟೀ ಆಸಿಡ್‍ಗಳು ಬಹಳ ಪ್ರ್ರಮುಕ ಪಾತ್ರ ವಹಿಸುತ್ತವೆ ಎಂಬುದು.
ಬೆಣ್ಣೆಯಿಂದಾಗುವ ಪ್ರಮುಕ ಉಪಯೋಗಗಳನ್ನು ಒಮ್ಮೆ ಅವಲೋಕಿಸೋಣ:
- ದೇಹದಲ್ಲಿನ ತೈರಾಯ್ಡ್ ಅಡ್ರೆನಲ್‍ನ ಒಳಿತಿಗೆ ಅವಶ್ಯವಿರುವ ವಿಟಮಿನ್ ‘ಎ’ ಜೀವಸತ್ವವು ಬೆಣ್ಣೆಯಲ್ಲಿ ಹೇರಳವಾಗಿದೆ. ಈ ವಿಟಮಿನ್ ‘ಎ’ ಜೀವ ಸತ್ವವು ದೇಹವು ನಿರಾಯಾಸವಾಗಿ ಹೀರಿಕೊಳ್ಳುವ ಸ್ತಿತಿಯಲ್ಲಿ ಬೆಣ್ಣೆಯ ಕೊಬ್ಬಿನಲ್ಲಿ ಲಬ್ಯ.
- ಬೆಣ್ಣೆಯಲ್ಲಿ ಲಾರಿಕ್ ಆಸಿಡ್ ಇದ್ದು ಇದು ಪಂಗಲ್ ಸೋಂಕಿಗೆ ಮದ್ದಾಗಿ ಕೆಲಸ ನಿರ‍್ವಹಿಸುತ್ತದೆ.
- ಬೆಣ್ಣೆಯು ಸೆಲೆನಿಯಮ್ ಮಿನರೆಲ್‍ನ ಸೆಲೆ. ಇದು ಹ್ರುದಯ ಸಂಬಂದಿ ಕಾಯಿಲೆಗೆ ಕಡಿವಾಣ ಹಾಕುತ್ತದೆ.
- ಬೆಣ್ಣೆಯಲ್ಲಿನ ವಿಟಮಿನ್ ‘ಡಿ’, ಕ್ಯಾಲ್ಶಿಯಂ ಅನ್ನು ದೇಹದೊಳಗೆ ಹೀರಿಕೊಳ್ಳಲು ಸಹಕರಿಸುತ್ತದೆ. ಹೀಗೆ ಹೀರಿಕೊಂಡ ಕ್ಯಾಲ್ಶಿಯಂ ಕೀಲುಗಳಲ್ಲಿನ ಕ್ಯಾಲ್ಸಿಪಿಕೇಶನ್ ತಡೆಗಟ್ಟಲು ಸಹಾಯಕಾರಿ.
ಈಗ ಹೇಳಿ ದೇಹದ ಸ್ವಾಸ್ತ್ಯಕ್ಕೆ ಬೆಣ್ಣೆ ಬೇಕೋ ಬೇಡವೋ? ಎಂದು. ಬೆಣ್ಣೆ ತಿನ್ನಿ. ಅದರಿಂದಾಗಿ ದೇಹಕ್ಕೆ ಸೇರುವ ಹೆಚ್ಚಿನ ಕ್ಯಾಲೋರಿಗಳನ್ನು ವ್ಯಾಯಾಮ, ವಾಕಿಂಗ್ ಮುಂತಾದ ಕಸರತ್ತಿನಿಂದ ಕರಗಿಸಿಕೊಳ್ಳಿ, ಆರೋಗ್ಯ ಹೆಚ್ಚಿಸಿಕೊಳ್ಳಿ. ಬೆಣ್ಣೆ ತಿನ್ನದೆ ಸುಮ್ಮನೆ ಕಾಯಿಲೆಗಳಿಗೆ ಒಳಗಾಗಬೇಡಿ.
(ಚಿತ್ರ ಸೆಲೆ: fid-gesundheitswissen.de, bbc.co.uk)
ಇತ್ತೀಚಿನ ಅನಿಸಿಕೆಗಳು