ಇದು ವಿಶ್ವದ ಅತಿ ದೊಡ್ಡ ಗೇರುಬೀಜದ ಮರ
– ಕೆ.ವಿ.ಶಶಿದರ.
ವಿಶ್ವದ ಪ್ರತಿಯೊಂದು ದೇಶವೂ ತನ್ನದೇ ಆದ ಹೆಗ್ಗುರುತನ್ನು ಹೊಂದಿದ್ದು ಅದರಿಂದ ತನ್ನನ್ನು ಗುರುತಿಸಿಕೊಳ್ಳುತ್ತದೆ. ಇದು ಪ್ರಾಕ್ರುತಿಕ ಅತವ ನೈಸರ‍್ಗಿಕವಾಗಿರಬಹುದು ಅತವ ಮಾನವ ನಿರ‍್ಮಿತವಾಗಿರಬಹುದು. ಮಹಾಗೋಡೆಯಿಂದ ಚೀನಾ, ಗ್ರೇಟ್ ಬ್ಯಾರಿಯರ್ ರೀಪ್‍ನಿಂದ ಆಸ್ಟ್ರೇಲಿಯಾ, ಗ್ರ್ಯಾಂಡ್ ಕಾನ್ಯಾನ್‍ನಿಂದ ಅಮೇರಿಕಾ, ಬಿಗ್ ಬಿನ್‍ನಿಂದ ಬ್ರಿಟನ್ ಹೀಗೆ ಪಟ್ಟಿ ಮುಂದುವರೆಯುತ್ತದೆ. ಇದೇ ರೀತಿಯಲ್ಲಿ ಬ್ರುಹದಾಕಾರದ ಗೇರು ಬೀಜದ ಮರದಿಂದ ನಟಾಲ್ ಬ್ರಜಿಲ್ ಗುರುತಿಸಿಕೊಳ್ಳುತ್ತದೆ.
“ಮೇಜರ್ ಕಜ್ಯುರೊ ಡು ಮುಂಡೊ” ಅಂದರೆ ವಿಶ್ವದ ಅತಿ ದೊಡ್ಡ ಗೋಡಂಬಿ ಮರ, ಇದನ್ನು ಕಜ್ಯುರೊ ಡೆ ಪಿರಂಗಿ ಅಂದರೆ ಪಿರಂಗಿಯ ಗೋಡಂಬಿ ಮರ ಎಂತಲೂ ಕರೆಯುತ್ತಾರೆ. ಬ್ರಜಿಲ್ ದೇಶದ ರಿಯೋ ಗ್ರಾಂಡೆ ಡು ನಾರ‍್ಟೆ ರಾಜ್ಯದ ಪಿರಂಗಿ ಡು ನಾರ‍್ಟೆ ಜಿಲ್ಲೆಯ ಪರ‍್ನಾಮಿರಿನ್ ಸಿಟಿಯಲ್ಲಿ ಈ ಮರವನ್ನು ಕಾಣಬಹುದು.
1994ನೇ ಇಸವಿಯಲ್ಲಿ ‘ಗಿನ್ನೆಸ್ ಬುಕ್ ಆಪ್ ವರ‍್ಲ್ಡ್ ರೆಕಾರ‍್ಡ್ಸ್’ರವರು ‘ಮೇಜರ್ ಕಜ್ಯುರೊ ಡು ಮುಂಡೊ’ಗಾಗಿಯೇ ವಿಶೇಶ ವಿಬಾಗವನ್ನು ತೆರೆದು ಅದರಲ್ಲಿ ಇದನ್ನು ವಿಶ್ವದ ಅತಿ ದೊಡ್ಡ ಗೋಡಂಬಿ ಮರ ಎಂದು ದಾಕಲಿಸಿದ್ದಾರೆ. ಈ ಪಟ್ಟ ದೊರಕಬೇಕಾದರೆ ಅದರಲ್ಲೇನೋ ವಿಶೇಶತೆ ಇರಬೇಕಲ್ಲವೆ?
ಗೇರು ಬೀಜ ಅರ‍್ತಾತ್ ಗೋಡಂಬಿ ಮರವನ್ನು ಅನಕಾರ‍್ಡಿಯಂ ಆಕ್ಸಿಡೆಂಟೇಲ್ ಎಂದು ಸಸ್ಯ ಶಾಸ್ತ್ರಜ್ನರು ಕರೆಯುತ್ತಾರೆ. ಉಶ್ಣವಲಯದಲ್ಲಿ ಇದರ ಇರವು ಹೆಚ್ಚು. ಸದಾಕಾಲವು ಹಸಿರಾಗಿರುವ ಈ ಮರವು ಗೋಡಂಬಿಯೊಂದಿಗೆ ಗೇರು ಹಣ್ಣನ್ನು ನೀಡುತ್ತದೆ. ಗೇರು ಬೀಜದ ಮರವು ಸಾಮಾನ್ಯವಾಗಿ 14 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಇದರಲ್ಲಿ ಕುಬ್ಜ ಮರವು ಬೆಳೆಯುವುದು 6 ಮೀಟರ್ ಎತ್ತರ ಮಾತ್ರ. ಕುಬ್ಜ ಮರವು ಬೇಗನೆ ಬಲಿತು ಹೆಚ್ಚು ಪಸಲು ನೀಡುವುದರಿಂದ ಹೆಚ್ಚು ಲಾಬದಾಯಕ. ಗೇರು ಬೀಜದ ಮರಕ್ಕೆ ಈಶಾನ್ಯ ಬ್ರಜಿಲ್ ದೇಶ ಮೂಲ. ಅಲ್ಲಿಂದ ಬೆಳೆದು ಬಂದ ಗೇರು ಬೀಜದ ಮರಗಳು ಈಗೀಗ ವಿಯಟ್ನಾಮ್, ನೈಜೀರಿಯಾ, ಐವರಿ ಕೋಸ್ಟ್ ಹಾಗೂ ಬಾರತದಲ್ಲಿ ಹೆಚ್ಚು ಹೆಚ್ಚಾಗಿ ಕಂಡು ಬರುತ್ತದೆ.
ಅತಿ ದೊಡ್ಡ ಗೋಡಂಬಿ ಮರದ ವಿಚಿತ್ರ ಸತ್ಯಗಳು
ಈ ಮರವು ಅಂದಾಜು 8000 ಚದರ ಮೀಟರ್‍ಗಳಶ್ಟು ವಿಸ್ತಾರವಾಗಿದ್ದು 500 ಮೀಟರ್‍ಗಳಶ್ಟು ಸುತ್ತಳತೆಯನ್ನು ಹೊಂದಿದೆ. ಅಂದಾಜು 70 ಮಾಮೂಲಿ ಗಾತ್ರದ ಗೋಡಂಬಿ ಮರಗಳಶ್ಟು ಜಾಗದಲ್ಲಿ ಇದು ವ್ಯಾಪಿಸಿದೆ. ಇದು ಹೇಗೆ ಸಾದ್ಯವಾಯಿತು ಎಂಬ ಪ್ರಶ್ನೆ ಉದ್ಬವಿಸುವುದು ಸಹಜ. ಇದಕ್ಕೆ ಎರೆಡು ಅನುವಂಶಿಕ ವೈಪರಿತ್ಯಗಳು ಸಂಬವಿಸಿದ್ದೇ ಕಾರಣ ಎನ್ನಬಹುದು.
ಒಂದು: ಈ ಮರದ ಕೊಂಬೆಗಳು ಮೇಲ್ಮುಕವಾಗಿ ಬೆಳೆಯುವ ಬದಲು ಅಕ್ಕಪಕ್ಕಕ್ಕೆ ಬೆಳೆದಿರುವುದು. ಕೊಂಬೆಗಳು ಬೆಳೆದಂತೆಲ್ಲಾ ತೂಕ ಹೆಚ್ಚಾಗಿ ಬಾಗಿ ನೆಲ ಮುಟ್ಟಿರುವುದು.
ಎರಡು: ಒಂದನೇ ವೈಪರಿತ್ಯವು ಎರಡನೆಯದಕ್ಕೆ ಕಾರಣವಾಗಿರುವುದು. ಅಕ್ಕಪಕ್ಕದಲ್ಲಿ ಹರಡಿದ ಕೊಂಬೆಗಳು ಹಾಗೆಯೇ ಮುಂದುವರೆಯಬೇಕಿತ್ತು. ಆದರೆ ಹಾಗಾಗದೆ ಬಾರದಿಂದಾಗಿ ಕೊಂಬೆಗಳು ನೆಲವನ್ನು ಮುಟ್ಟಿದೊಡನೆ ಅಲ್ಲೇ ಬೇರು ಬಿಟ್ಟು ಮತ್ತೊಂದು ಮರವಾಗಿ ಬೆಳೆದಿರುವುದು ಎರಡನೇ ವೈಪರಿತ್ಯ.
1888ರಲ್ಲಿ ಲೂಯಿóಜ್ ಇನಾಸಿಯೋ ಡೆ ಓಲಿವೆರಾ ಎಂಬ ಮೀನುಗಾರ ಇದನ್ನು ನೆಟ್ಟು ನೀರೆರೆದನೆಂಬ ಮಾತು ಕೇಳಿಬರುತ್ತದೆ. ಹಲವಾರು ವರ‍್ಶಗಳ ತರುವಾಯ ಆತ ತನ್ನ 93ನೇ ವಯೋಮಾನದಲ್ಲಿ ಈ ಮರದ ಉಲ್ಲಾಸಬರಿತ ನೆರಳಿನಲ್ಲೇ ಅಸುನೀಗಿದ. ಈ ಬ್ರುಹದಾಕಾರದ ಗೋಡಂಬಿ ಮರದ ಮೂಲ ಮರವು ತನ್ನ ಕಾಂಡದಿಂದ ಐದು ಕೊಂಬೆಗಳನ್ನು ಹೊರಚಾಚಿತ್ತು. ಐದರಲ್ಲಿ ನಾಲ್ಕು ಕೊಂಬೆಗಳು ಅನುವಂಶಿಕ ವೈಪರಿತ್ಯಕ್ಕೆ ಬಲಿಯಾಗಿ ಅಡ್ಡಡ್ಡ ಬೆಳೆಯಲು ಪ್ರಾರಂಬವಾಗಿ, ತೂಕ ಹೆಚ್ಚಾದಾಗ ಬಾಗಿ ನೆಲಕ್ಕೆ ತಗುಲಿ ಹೊಸ ಬೇರಾಗಿ ಹೊಸ ಮರವಾಗಿ ಬೆಳೆಯಿತು. ಉಳಿದ ಒಂದು ಕೊಂಬೆ ಮಾತ್ರ ಸಾಮಾನ್ಯ ಗೋಡಂಬಿ ಮರದ ಕೊಂಬೆಯಂತಯೇ ಬೆಳೆಯಿತು ಹಾಗೂ ಇದು ನೆಲಕ್ಕೆ ತಗುಲಿದ ನಂತರ ಬೇರಾಗಲಿಲ್ಲ, ಹೊಸ ಮರವೂ ಆಗಲಿಲ್ಲ.
ಈ ಮರ ಹರಡಿರುವ ಪ್ರದೇಶವನ್ನು ಸೂಕ್ಶ್ಮವಾಗಿ ಗಮನಿಸಿದಲ್ಲಿ ಇಲ್ಲಿ ಎರಡು ಗೋಡಂಬಿ ಮರಗಳು ಬೆಳೆದಿರುವುದು ಕಾಣುತ್ತವೆ. ಒಂದು ಅನುವಂಶಿಕ ವೈಪರಿತ್ಯಕ್ಕೆ ಒಳಗಾಗಿ ಬ್ರುಹದಾಕಾರವಾಗಿ ಬೆಳೆದು ಇಡೀ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಮರ. ಮತ್ತೊಂದು ಬೇರೆಲ್ಲೆಡೆ ಕಂಡು ಬರುವ ಯಾವುದೇ ರೀತಿಯ ತಳಿ ಪರಿವರ‍್ತನೆಗೆ ಒಳಗಾಗದೆ ಬೆಳೆದಂತಹ ಸಾಮಾನ್ಯ ಮರ. ಪ್ರಕ್ರುತಿಯ ಒಡಲಲ್ಲಿ ಇಂತಹ ಎಶ್ಟು ವಿಸ್ಮಯಗಳು ಅಡಗಿವೆಯೋ ಬಲ್ಲವರಾರು?
ಮೇಜರ್ ಕಜ್ಯುರೊ ಡು ಮುಂಡೊ ಮರ ಸಾವಿರಕ್ಕೂ ಹೆಚ್ಚು ವರ‍್ಶದಿಂದಿರುವುದೆಂದು ಬಹಳಶ್ಟು ಜನರು ಅಂದಾಜಿಸಿದ್ದಾರೆ. ಹಾಗಾಗಿ ಮರದ ನೂರಾರು ಕೊಂಬೆಗಳು ನೆಲಕ್ಕೆ ಬಾಗಿ, ಬೇರಾಗಿ ಹೊಸ ಹೊಸ ಮರಗಳ ಉದಯಕ್ಕೆ ಕಾರಣವಾಗಿದೆ. ವರ‍್ಶ ವರ‍್ಶಗಳ ಕಾಲ ಹೊಸ ಮರಗಳು ಸೇರ‍್ಪಡೆಯಾದ ಕಾರಣ ಹರಡುತ್ತಾ ಇಂದು ಅಂದಾಜು 8000 ಚದರ ಮೀಟರ್ ಪ್ರದೇಶವನ್ನು ಆಕ್ರಮಿಸಿಕೊಂಡಿರುವುದು. ಅಂದರೆ ಸರಿ ಸುಮಾರು 2 ಎಕರೆ ಪ್ರದೇಶ.
ಈ ಮರದ ವಿಶಾಲತೆಯನ್ನು ಕಾಣಲು ಅದರಡಿಯಲ್ಲಿ ನುಸುಳುವಾಗ ಎಚ್ಚರಿಕೆ ಅಗತ್ಯ. ಅಲ್ಲಿ ವಿಶಕಾರಕ, ಕಿತ್ತಲೆ ಬಣ್ಣದ, ಕಂಬಳಿ ಹುಳಗಳ ಕಾಟ ಇರುತ್ತದೆ. ಈ ಕಂಬಳಿ ಹುಳಗಳು ವರ‍್ಶದ ಕೆಲವೊಂದು ತಿಂಗಳುಗಳಲ್ಲಿ ಮಾತ್ರ ತನ್ನ ಇರುವನ್ನು ತೋರಿಸುತ್ತದೆ. ಮಳೆಗಾಲದಲ್ಲಿ ಈ ಹುಳುವಿನ ಇರುವಿಕೆ ಜಾಸ್ತಿ. ಸಣ್ಣ ಕಂಬಿಗಾತ್ರದ ಇದು ಬೆಳೆಯುತ್ತಾ ಬೆರಳು ಗಾತ್ರದಶ್ಟಾಗುತ್ತದೆ. ಇದರ ಮೈಮೇಲಿನ ಕಿತ್ತಲೆ ಬಣ್ಣದ ರೋಮಗಳಿಂದಾಗಿ ಇನ್ನೂ ದಪ್ಪವಾಗಿ ಕಾಣುತ್ತದೆ. ಇದರ ರೋಮಗಳು ಮಾನವನ ಚರ‍್ಮಕ್ಕೆ ತಗುಲಿದಲ್ಲಿ ಚರ‍್ಮದ ನವೆ ಹಾಗೂ ಅತಿ ಹೆಚ್ಚು ನೋವಿನ ಊತ ಬರುವ ಸಾದ್ಯತೆಯಿದೆ.
ಈ ಮರದಿಂದ ಪ್ರತಿ ವರ‍್ಶವೂ ಅಂದಾಜು 60000 ಗೋಡಂಬಿ ಬೀಜಗಳು ಸಿಗುತ್ತದೆ. ಗೇರು ಹಣ್ಣಿನ ತುದಿಗೆ ಅಂಟಿಕೊಂಡಿರುವುದೇ ಗೋಡಂಬಿ. ಗೇರು ಹಣ್ಣನ್ನು ಮಾದಕ ಪಾನೀಯದ ತಯಾರಿಕೆಯಲ್ಲೂ ಬಳಕೆ ಮಾಡುತ್ತಾರೆ. ವಿಟಮಿನ್ ‘ಸಿ’ ಹೆಚ್ಚು ಹೊಂದಿರುವ ಹಣ್ಣು ಇದು.
(ಮಾಹಿತಿ ಸೆಲೆ: wiki)
(ಚಿತ್ರ ಸೆಲೆ: unbelievable-facts.com, rn.gov.br)
ಒಳ್ಳೆಯ ಬರಹ, ಚೆನ್ನಾಗಿದೆ.