‘ಕ್ರಿಸ್ಮಸ್’ – ಕ್ರಿಸ್ತನ ಜನನ ಸಂಬ್ರಮದ ಸುದಿನ

– ಅಜಯ್ ರಾಜ್.

chrimas-jesus

ಅದು ಸಮಸ್ತ ಯೆಹೂದ್ಯ ಜನಾಂಗ ಮೆಸ್ಸಾಯ(ಲೋಕೋದ್ದಾರಕ)ನನ್ನು ನಿರೀಕ್ಶಿಸುತ್ತಿದ್ದ ಕಾಲ. ದೇವರು ತನ್ನ ಪುತ್ರನನ್ನು ಮನುಕುಲದ ರಕ್ಶೆಗಾಗಿ ಕಳುಹಿಸುವ ವಾಗ್ದಾನ ಪ್ರತಿ ಯೆಹೂದ್ಯನ ಹ್ರುದಯದಲ್ಲಿ ಮಾರ‍್ದನಿಸುತ್ತಿದ್ದ ಕಾಲ. ಆ ಸಮಯಕ್ಕೆ ನೀಡಿದ ವಾಗ್ದಾನವನ್ನು ನೆರವೇರಿಸಿದ ಸರ‍್ವೇಶ್ವರ ದೇವರು ಗೇಬ್ರಿಯಲ್ ದೇವದೂತನನ್ನು ಮರಿಯಳೆಂಬ ಕನ್ಯೆಯ ಬಳಿಗೆ ಕಳುಹಿಸುತ್ತಾರೆ. “ಮರಿಯಾ.. ಕನ್ಯೆಯಾದ ನೀನು ಪವಿತ್ರಾತ್ಮರ ಪ್ರಬಾವದಿಂದ ಗಂಡು ಮಗುವಿಗೆ ಜನ್ಮವಿಯ್ಯುವೆ. ಆತ ಮಹಾಪುರುಶನಾಗುವನು ಹಾಗೂ ಪರಾತ್ಪರ ದೇವರ ಪುತ್ರನೆನಿಸಿಕೊಳ್ಳುವನು” ಎಂಬ ಸುವಾರ‍್ತೆ ನೀಡುತ್ತಾನೆ. ಅಂತೆಯೆ ಮರಿಯ ಕ್ರಿಸ್ತನಿಗೆ ದನದ ಕೊಟ್ಟಿಗೆಯಲ್ಲಿ ಜನ್ಮ ನೀಡುತ್ತಾಳೆ. ಇದು ‘ಕ್ರಿಸ್ತನೆಂಬ ಮಹಾಕಾವ್ಯ’ದ ಮುನ್ನುಡಿ.

ಕ್ರಿಸ್ಮಸ್ ಯೇಸುಕ್ರಿಸ್ತನ ಜನನದ ಸುದಿನ. ಕ್ರೈಸ್ತರ ಹಬ್ಬಗಳಲ್ಲಿ ಇದೊಂದು ಮಹತ್ವಪೂರ‍್ಣ ಹಬ್ಬ. ಡಿಸೆಂಬರ್ ತಿಂಗಳಿನ ಆರಂಬದಿಂದಲೆ ಸಕಲ ಸಿದ್ದತೆಗಳಿಗೆ ಸಜ್ಜುಗೊಳ್ಳುವ ಹಬ್ಬ. ಕ್ರಿಶ್ಚಿಯನ್ ಕ್ಯಾಲೆಂಡರ್ ಪ್ರಕಾರ ಕ್ರೈಸ್ತರಿಗೆ ವರ‍್ಶದಲ್ಲಿ ನಾಲ್ಕು ಕಾಲಗಳು. ಆಗಮನ ಕಾಲ, ಸಾದಾರಣ ಕಾಲ, ತಪಸ್ಸು ಕಾಲ ಹಾಗು ಪಾಸ್ಕ ಕಾಲ. ಆಗಮನ ಕಾಲ ಕ್ರಿಸ್ತನ ಜನನದ ಮುನ್ಸೂಚನೆ. ಕ್ರಿಸ್ತನ ಬರುವಿಕೆಗಾಗಿ ಸಂತೋಶ ಸಂಬ್ರಮದಿಂದ, ಬಾಹ್ಯ ಮತ್ತು ಆತ್ಮಶುದ್ದಿಯಿಂದ ಕಾತರತೆಯಿಂದ ಎದುರು ನೋಡುವ ಕಾಲ.

ಕ್ರಿಸ್ಮಸ್ ಪದದ ಅರ‍್ತವೇನು?

ಕ್ರಿಸ್ಮಸ್(Christmas) ಎಂದರೆ ಕ್ರೈಸ್ಟ್ ಮಾಸ್ ಎಂದರ‍್ತ. ಕನ್ನಡದಲ್ಲಿ ಕ್ರಿಸ್ತನ ಪೂಜೆ ಎಂದರ‍್ತ. ಪಾಪಿಗಳ ಪಾಪ ಪರಿಹಾರಕ್ಕಾಗಿ ದರೆಗಿಳಿದ ಕ್ರಿಸ್ತನ ಜನನದ ಆಚರಣೆಯೆ ಕ್ರಿಸ್ತ ಜಯಂತಿ. ಕ್ರಿಸ್ಮಸ್ ಹಬ್ಬದ ವಿಶೇಶತೆಗಳೆಂದರೆ ಗೋದಲಿ(crib), ನಕ್ಶತ್ರಗಳು ಮತ್ತು ಕ್ರಿಸ್ಮಸ್ ತಾತ(Santa Claus). ಈ ಮೂರೂ ವಿಶೇಶತೆಗಳ ಹಿನ್ನೆಲೆ ನೋಡೋಣ.

ಗೋದಲಿ – ಕ್ರಿಸ್ತ ಹುಟ್ಟಿದ್ದು ದನದ ಕೊಟ್ಟಿಗೆಯೊಳಗಿನ ಗೋದಲಿಯಲ್ಲಿ. ಇದರ ಹಿನ್ನೆಲೆ ತಿಳಿಯ ಬೇಕೆಂದರೆ ನಾವು ಹದಿಮೂರನೆಯ ಶತಮಾನಕ್ಕೆ ಕಣ್ಣಾಯಿಸಬೇಕು. ಹದಿಮೂರನೆ ಶತಮಾನದ ಮೊದಲಾರ‍್ದದಲ್ಲಿ ಇಟಲಿ ದೇಶದ ಅಸಿಸ್ಸಿ ಎಂಬ ಪಟ್ಟಣದಲ್ಲಿ ಒಬ್ಬ ತರುಣನಿಂದ ಶುರುವಾದ ಇದು ಇಂದು ಜಗತ್ಪರಸಿದ್ದವಾಗಿದೆ. ಆ ತರುಣನ ಹೆಸರು ಪ್ರಾನ್ಸಿಸ್. ಈ ಪ್ರಾನ್ಸಿಸ್ ಮುಂದೆ ಸಂತ ಪ್ರಾನ್ಸಿಸ್ ಅಸಿಸ್ಸಿಯಾದ. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಪ್ರಾನ್ಸಿಸ್ ಯೌವನದ ದಿನಗಳಲ್ಲಿ ಮೋಜುಗಾರ ಸೊಗಸುಗಾರ. ಒಮ್ಮೆ ಕ್ರಿಸ್ತನ ದ್ವನಿಗೆ ಓಗೊಟ್ಟು ಮನಪರಿವರ‍್ತನೆಗೊಂಡು, ವೈರಾಗ್ಯ ತಾಳಿ ಸನ್ಯಾಸಿಯಾದರು. ಕ್ರಿಸ್ಮಸ್ ಹಬ್ಬವನ್ನು ಅರ‍್ತಪೂರ‍್ಣವಾಗಿ ಕೊಂಡಾಡುವ ಸಲುವಾಗಿ ತನ್ನ ಗೆಳೆಯ ಜಾನ್ ಎಂಬುವವನಿಗೆ ದನ ಕರುಗಳ ಒಂದು ನೈಜ ಕೊಟ್ಟಿಗೆಯನ್ನು ಮಾಡಲು ಹೇಳುತ್ತಾರೆ. ಅಂದು ಕ್ರಿಸ್ಮಸ್ ಹಬ್ಬವನ್ನು ನೈಜ ಚಿತ್ರಣದ ಮೂಲಕ ಕೊಂಡಾಡುತ್ತಾರೆ. ಅಂದಿನಿಂದ ಪ್ರಾರಂಬವಾದ ಈ ಗೋದಲಿಯ ನಿರ‍್ಮಾಣ ಇಂದಿಗೂ ಪ್ರಸಿದ್ದವಾಗಿದೆ.

ನಕ್ಶತ್ರಗಳ ವಿಶೇಶತೆಯೆಂದರೆ ಅಂದು ಕ್ರಿಸ್ತನ ಜನನವಾದಾಗ ಕ್ರಿಸ್ತನನ್ನು ಕಂಡು ಆರಾದಿಸಲು ದೂರ ದೇಶಗಳಿಂದ ಮೂರು ರಾಜರು ಬರುತ್ತಾರೆ. ಆದರೆ ಅವರಿಗೆ ಕ್ರಿಸ್ತನ ಜನನದ ಸ್ತಳ ತಿಳಿಯುವುದಿಲ್ಲ. ಆಗ ಬಾನಿನಲ್ಲಿ ಉದಯಿಸಿದ ತಾರೆಯೊಂದು ಅವರ ಮುಂದೆ ಮುಂದೆ ಸಾಗಿ ಕ್ರಿಸ್ತನ ಜನನದ ಸ್ತಳವನ್ನು ತೋರಿಸುತ್ತದೆ. ಅದರ ಸಂಕೇತವಾಗಿ ಕ್ರಿಸ್ಮಸ್ ಹಬ್ಬದಂದು ಎಲ್ಲರ ಮನೆಗಳಲ್ಲಿ ನಕ್ಶತ್ರಗಳನ್ನು ತೂಗಿಹಾಕುತ್ತಾರೆ. ಅದರರ‍್ತ ಶಾಂತಿ ಪ್ರೀತಿಯ ಕ್ರಿಸ್ತ ನಮ್ಮ ಮನೆಯಲ್ಲಿಯೂ ಜನಿಸಿದ್ದಾನೆ ಎಂದು.

ಕ್ರಿಸ್ಮಸ್ ಹಬ್ಬದ ಮತ್ತೊಂದು ಬಹುಮುಕ್ಯ ವಿಶೇಶತೆಯೆಂದರೆ ಕ್ರಿಸ್ಮಸ್ ತಾತ ಅತವಾ ಸ್ಯಾಂಟಕ್ಲಾಸ್. ಸ್ಯಾಂಟಕ್ಲಾಸ್ ಹಿನ್ನೆಲೆ ನೂರಾರು ವರ‍್ಶಗಳ ಹಿಂದಿನದು. ಈಗಿನ ಟರ‍್ಕಿಯಲ್ಲಿ ನೂರಾರು ವರ‍್ಶಗಳ ಹಿಂದೆ ಸಂತ ನಿಕೋಲಾಸ್ ಎಂಬ ಪಾದ್ರಿಯೊಬ್ಬರಿದ್ದರು. ಸರಳ, ಕರುಣೆ-ಕನಿಕರವುಳ್ಳ ಇವರು ಬಡವರ ಮೇಲೆ ವಿಶೇಶ ಸಹಾನುಬೂತಿಯುಳ್ಳವರಾಗಿದ್ದರು. ಹಳ್ಳಿಗಳ ಮಕ್ಕಳಿಗೆ ಉಡುಗೊರೆ ಹಾಗೂ ಚಾಕೊಲೇಟ್ಗಳನ್ನು ಹಂಚುತ್ತಿದ್ದರು. ಅದರಲ್ಲೂ ಕ್ರಿಸ್ಮಸ್ ಹಬ್ಬದ ಸಂದರ‍್ಬದಲ್ಲಿ ಅವರು ತಮ್ಮ ಕಾರ‍್ಯಗಳಿಂದ ಎಶ್ಟು ಜನಪ್ರಿಯರಾದರೆಂದರೆ ಇವರನ್ನು ಮಕ್ಕಳು ಪಾದರ್ ನಿಕೊಲಾಸ್ ಎನ್ನುವ ಬದಲು ಸ್ಯಾಂಟಕ್ಲಾಸ್ ಎನ್ನತ್ತಿದ್ದರು. ಇಂದಿಗೂ ಮಕ್ಕಳಿಗೆ ಸ್ಯಾಂಟಕ್ಲಾಸ್ ಎಂದರೆ ಬಹಳ ಅಚ್ಚುಮೆಚ್ಚು.

ಇದು ಕ್ರಿಸ್ಮಸ್ ಹಬ್ಬದ ಹಿನ್ನೆಲೆ ಹಾಗೂ ವಿಶೇಶತೆಗಳ ಕಿರು ಪರಿಚಯ. ಸಹ್ರುದಯಿ ಓದುಗರಿಗೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾರ‍್ದಿಕ ಶುಬಾಶಯಗಳು. ಕರುಣೆಯ ಯೇಸು ಕಂದ ಎಲ್ಲರಿಗೂ ಸುಕ ಶಾಂತಿ ನೆಮ್ಮದಿ ಅನವರತ ನೀಡಲಿ.

(ಚಿತ್ರ ಸೆಲೆ: hanoitours.info)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: