ಮಲೆನಾಡಿನ ಹೆಮ್ಮೆಯ ‘ಸಹಕಾರ ಸಾರಿಗೆ’!

– ರತೀಶ ರತ್ನಾಕರ.

yk_158

“ಸಹಕಾರ ಸಾರಿಗೆ” ಇದು ಮಲೆನಾಡಿಗರಿಗೆ “ನಮ್ಮೂರ ಬಸ್ಸು” ಎಂಬ ಹೆಮ್ಮೆಯ ಗುರುತು! ಹೌದು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ದಟ್ಟ ಕಾಡಿನ ಜಾಗಗಳಲ್ಲಿ ಬಸ್ಸುಗಳನ್ನು ಓಡಿಸುತ್ತಾ, ಅಲ್ಲಿನ ಮಂದಿಗೆ ಎಂದಿನ ಪಯಣಕ್ಕೆ ಇಂಬು ಕೊಡುತ್ತಾ, ಕೆಲಸದ ಅವಕಾಶಗಳನ್ನು ಹುಟ್ಟುಹಾಕುತ್ತಾ, ಒಂದಲ್ಲ ಒಂದು ಬಗೆಯಲ್ಲಿ ಮಲೆನಾಡಿಗರ ಬಾಳಿಗೆ ನೆರವಾಗುತ್ತಾ ಬಂದಿರುವುದೇ ‘ಸಹಕಾರ ಸಾರಿಗೆ’ ಎಂಬ ಸಾರಿಗೆ ಏರ‍್ಪಾಟು. ‘ಟ್ರಾನ್ಸ್ ಪೋರ‍್ಟ್ ಕೋ-ಆಪರೇಟಿವ್ ಸೊಸೈಟಿ (ಟಿಸಿಎಸ್)’ ಎಂಬ ಹೆಸರಿನ ಈ ಕೂಟ ಸುಮಾರು 80 ಬಸ್ಸುಗಳು ಹಾಗು 300 ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದ್ದು ಇಂದು ಮಲೆನಾಡಿನ ಹಳ್ಳಿಗಳನ್ನು ಬೆಸೆಯುವ ಕೊಂಡಿಯಾಗಿದೆ ಎಂದರೆ ತಪ್ಪಾಗಲಾರದು.

ಕನ್ನಡಿಗರೇ ಈ ಕೂಟವನ್ನು ಕಟ್ಟಿದ್ದು!

ಕಡಿದಾದ ತಿರುವುಗಳಿರುವ ಕಿರಿದಾದ ದಾರಿಗಳು, ಕಾಡಿನ ನಡುವೆ ಅಲ್ಲಲ್ಲಿ ಒಂದೊಂದು ಮನೆಗಳಿರುವ ಊರುಗಳು, ಮಳೆಗಾಲದಲ್ಲಿ ದಾರಿಗೆ ಅಡ್ಡ ಬೀಳುವ ಮರಗಳು, ಚಳಿಗಾಲದಲ್ಲಿ ಮಂಜು ಮುಸುಕಿದ ಹಾದಿಗಳು, ಇನ್ನೂ ಬಸ್ಸೇನಾದರು ದಾರಿಯಲ್ಲಿ ಕೆಟ್ಟು ನಿಂತರೆ ಅಂದು ಬಸ್ಸಿನ ಸಿಬ್ಬಂದಿಗೆ ಹೇಳಿಕೊಳ್ಳಲಾಗದ ಸಂಕಟ. ಇಂತಹ ನೂರಾರು ಸವಾಲುಗಳ ನಡುವೆ ಬಸ್ಸುಗಳನ್ನು ಓಡಿಸುವುದು ಸಾಹಸವೇ ಸರಿ. 1990 ರ ಹೊತ್ತಿಗೆ ‘ಶಂಕರ್ ಟ್ರಾನ್ಸ್ ಪೋರ‍್ಟ್’ ಎಂಬ ಕೂಟವು ಹಲವಾರು ಬಸ್ಸುಗಳನ್ನು ಓಡಿಸುತ್ತಿತ್ತು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಇದರ ಕಚೇರಿ ಇತ್ತು. ಕೊಪ್ಪ ನಗರದ ಹಿರಿಯ ಹಾಗೂ ಹೆಸರುವಾಸಿಯಾದ ಶ್ರೀ ದ್ಯಾವೇಗೌಡರು ಈ ಕೂಟವನ್ನು ಹುಟ್ಟುಹಾಕಿದ್ದರು. ಬಳಿಕ ಈ ಕೂಟದ ಆಡಳಿತ ಬದಲಾಗಿತ್ತು.

1990 ರ ಹೊತ್ತಿನಲ್ಲಿ ಶಂಕರ್ ಬಸ್ಸಿನ ಸಾರಿಗೆ ಕೆಲಸಗಾರರು ತಮ್ಮ ಸಂಬಳ ಹೆಚ್ಚಿಸುವುದರ ಜೊತೆಗೆ ಇತರೆ ಬೇಡಿಕೆಗಳನ್ನು ಕೂಟದ ಒಡೆಯರ ಮುಂದಿಟ್ಟರು. ಕೆಲಸಗಾರರ ಬೇಡಿಕೆಗಳನ್ನು ಈಡೇರಿಸಲಾಗದೆ ಇದರ ಒಡೆಯರು ಕೂಟವನ್ನು ಮುಚ್ಚಿಯೇ ಬಿಟ್ಟರು. ಇದರಿಂದಾಗಿ ನೂರಾರು ಮಂದಿ ಕೆಲಸ ಕಳೆದುಕೊಂಡು ಬದುಕು ನಡೆಸುವುದು ಹೇಗಪ್ಪಾ ಎನ್ನುವಂತಾಗಿತ್ತು. ಆ ಹೊತ್ತಿನಲ್ಲಿ, ಕೆಲಸ ಕಳೆದುಕೊಂಡವರೆಲ್ಲಾ ಒಂದುಗೂಡಿ ಸಮಾಜ ಸೇವಕರಾಗಿದ್ದ ಬಿ.ಕೆ. ಸುಂದರೇಶ್ ಅವರ ಮುಂದಾಳ್ತನದಲ್ಲಿ, ಆಗಿನ ಚಿಕ್ಕಮಗಳೂರು ಜಿಲ್ಲಾದಿಕಾರಿಯಾಗಿದ್ದ ಡಾ. ಎಸ್. ಸುಬ್ರಮಣ್ಯ, ಡೆಪ್ಯೂಟಿ ರಿಜಿಸ್ಟರ್ ಆಗಿದ್ದ ಜಿ. ರಮಣ ರೆಡ್ಡಿ ಹಾಗೂ ಪ್ರಾದೇಶಿಕ ಸಾರಿಗೆ ಮೇಲುಗರಾಗಿದ್ದ ಶ್ರೀ ಪುಟ್ಟೇಗೌಡರವರ ನೆರವಿನಿಂದ 8-3-1991 ರಂದು ‘ಟ್ರಾನ್ಸ್ ಪೋರ‍್ಟ್ ಕೋ-ಆಪರೇಟಿವ್ ಸೊಸೈಟಿ’ ಯನ್ನು ಹುಟ್ಟುಹಾಕಿದರು. ಹಿಂದಿನ ಶಂಕರ್ ಬಸ್ಸಿನವರು ಕೂಟವನ್ನು ಮುಚ್ಚಿದಾಗ ಕೆಲಸಗಾರರಿಗೆ ಹಂಚಿದ್ದ ಪರಿಹಾರದ ಹಣವನ್ನೇ ಈ ಕೂಟಕ್ಕೆ ಮೂಲ ಬಂಡವಾಳವನ್ನಾಗಿ ಹಾಕಲಾಯಿತು. ಶಂಕರ್ ಬಸ್ಸಿನವರಿಂದ ಹಳೆಯ ಬಸ್ಸುಗಳನ್ನು ಕೊಂಡು ‘ಸಹಕಾರ ಸಾರಿಗೆ’ ಎಂಬ ಹೆಸರಿನಲ್ಲಿ ಬಸ್ಸುಗಳನ್ನು ಬಿಡಲಾಯಿತು. ಒಟ್ಟು 123 ಕೆಲಸಗಾರರ 12 ಲಕ್ಶ ಬಂಡವಾಳದಿಂದ ಹೊಸ ಕೂಟವು ತನ್ನ ಕೆಲಸವನ್ನು ಶುರುಮಾಡಿತು.

emblom2ಕೆಲಸಗಾರರೇ ಒಡೆಯರು, ಒಡೆಯರೇ ಕೆಲಸಗಾರರು!

ಹೌದು, ಈ ಕೂಟವು ಕೆಲಸಮಾಡುವ ಬಗೆಯೇ ಹೀಗೆ. ಇಲ್ಲಿ ಒಡೆಯ, ಕೆಲಸಗಾರ ಎಂಬ ಬೇರ‍್ಮೆ ಇಲ್ಲ! ಇಲ್ಲಿ ಕೆಲಸಮಾಡುವ ಎಲ್ಲರೂ ಆ ಕೂಟಕ್ಕೆ ಒಡೆಯರು. ಇದ್ದ 123 ಮಂದಿಯಲ್ಲಿ ಸುಮಾರು 36 ಮಂದಿ ಕಚೇರಿಯ ಕೆಲಸಗಳನ್ನು ವಹಿಸಿಕೊಂಡರೆ ಉಳಿದವರು ಬಸ್ಸನ್ನು ಓಡಿಸುವ ಹಾಗೂ ಕಂಡಕ್ಟರ್ ನಂತಹ ಕೆಲಸಗಳನ್ನು ವಹಿಸಿಕೊಂಡರು. ದುಡಿಮೆಯಲ್ಲಿಯೇ ದೇವರನ್ನು ಕಾಣುತ್ತಿದ್ದ ಇವರು ದುಡಿಮೆಯಿಂದ ಬಂದ ಹೆಚ್ಚುವರಿ ಆದಾಯದಿಂದ ಹೊಸ ಬಸ್ಸುಗಳನ್ನು ಕೊಂಡು ಕೂಟವನ್ನು ಬೆಳೆಸುತ್ತಾ ಹೋದರು. ಮೊದಲು 6 ಬಸ್ಸುಗಳು ಹಾಗೂ 123 ಕೆಲಸಗಾರರಿದ್ದ ಕೂಟವು ಇಂದು 80 ಬಸ್ಸುಗಳು ಹಾಗು 300 ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿರುವುದೇ ಅವರ ದುಡಿಮೆಗೆ ಸಿಕ್ಕ ದೊಡ್ಡ ಗೆಲುವಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಕಂಪ್ಯೂಟರ್ ಬಳಸಿದ ಮೊದಲ ಕೋ-ಆಪರೇಟಿವ್ ಸೊಸೈಟಿ ಇದು

1998 ರಲ್ಲಿ ತನ್ನ ಕಚೇರಿಗಾಗಿ ಕೊಪ್ಪ ನಗರದಲ್ಲಿ ದೊಡ್ಡದಾದ ಕಟ್ಟಡವನ್ನು ಕಟ್ಟಿಕೊಂಡಿತು. ಕೆಲಸದ ಅನುಕೂಲಕ್ಕಾಗಿ ಈ ಹೊಸ ಕಟ್ಟಡದಲ್ಲಿ ಕಂಪ್ಯೂಟರನ್ನು ಅಳವಡಿಸಿಕೊಂಡಿತು. ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಕೆಲಸಕ್ಕಾಗಿ ಕಂಪ್ಯೂಟರನ್ನು ಬಳಸಿದ ಮೊದಲ ಕೂಟವೆಂಬ ಹೆಗ್ಗಳಿಕೆ ಪಡೆಯಿತು. ಆಡಳಿತವನ್ನು ಸುಳುವಾಗಿಸಲು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಹಲವು ನಗರಗಳಲ್ಲಿ ಸಣ್ಣ ಕಚೇರಿಗಳನ್ನು ಹೊಂದಿದೆ. ಬಸ್ಸಿನ ಕೆಲಸಗಾರರಿಗೆ ನೆರವಾಗಲು ಅಲ್ಲಲ್ಲಿ ‘ಬಿಡುವು ತಾಣಗಳನ್ನು'(rest house) ಕಟ್ಟಿದೆ. ಬಸ್ಸಿನ ರಿಪೇರಿ ಹಾಗು ಇನ್ನಿತರ ಕೆಲಸಗಳಿಗೆ ಗ್ಯಾರೆಜ್ ಗಳನ್ನು ಕಟ್ಟಿಕೊಂಡಿದೆ. ಕಿರಿದಾದ ಹಾಗೂ ತಿರುವುಗಳಿರುವ ದಾರಿಯಲ್ಲಿ ದೊಡ್ಡ ಬಸ್ಸುಗಳನ್ನು ಓಡಿಸಲು ಆಗುವುದಿಲ್ಲ ಅಂತಹ ಕಡೆ ಮಿನಿಬಸ್ ಗಳನ್ನು ಓಡಿಸುತ್ತದೆ. ಇದರಿಂದಾಗಿ ಈ ಕೂಟದ ಬಸ್ಸುಗಳು ಓಡಾಡುವ ಹರವು ದೊಡ್ಡದಾಗಿದೆ. ಇಂದಿಗೂ ಟಿಸಿಎಸ್ ಕೂಟದ ಬಸ್ಸುಗಳು ಓಡಾಡುವ ಹೆಚ್ಚಿನ ಊರುಗಳಲ್ಲಿ ರಾಜ್ಯ ಸರಕಾರದ ದೊಡ್ಡ ಕೆಎಸ್‍ಆರ್‍ಟಿಸಿ ಬಸ್ಸುಗಳು ಓಡಾಡುವುದಿಲ್ಲ! ಅಲ್ಲಿ ಸಹಕಾರ ಸಾರಿಗೆಯದ್ದೇ ಮೇಲುಗೈ.

ಟಿಸಿಎಸ್ ಕೂಟದ ಕೆಲಸದ ಬಗೆಯನ್ನು ಅರಿಯಲು ಜಪಾನ್ ಇಂದ ಕೂಡ ಬಂದಿದ್ದಾರೆ!

1998 ರಲ್ಲಿ ಈ ಕೂಟದ ಬೆಳವಣಿಗೆಯನ್ನು ಹಾಗೂ ಮಂದಿಮೆಚ್ಚುಗೆಯನ್ನು ಗುರುತಿಸಿದ ಜಪಾನಿನ ಕ್ಯೊಟೊ (Kyoto) ನಗರದ ರಿಟ್ಸುಮೆಕಿನ್ ಕಲಿಕೆವೀಡಿನವರು (Ritsumekin University) 21 ಮಂದಿಯ ತಂಡವೊಂದನ್ನು ಕಳಿಸಿದ್ದರು. ಆ ತಂಡವು ಕೂಟದ್ದ ಕೆಲಸದ ಬಗೆಯನ್ನು ಅರಿತು ಅದರಲ್ಲಿರುವ ಒಳಿತಿನ ಮಾಹಿತಿಯನ್ನು ಜಪಾನಿನ ಕೋ-ಆಪರೇಟಿವ್ ಕೂಟಗಳಿಗೆ ನೀಡಿದೆ.

ಮಂಗಳೂರು ಕಲಿಕೆವೀಡಿನ ಕಲಿಸುಗರಾದ ಶ್ರೀ. ಪಿ. ಸುರೇಶ್ ರಮಣ ಮಯ್ಯ ಅವರು ಟಿಸಿಎಸ್ ನ ಕೆಲಸದ ಮೇಲೆ ಸುಮಾರು 2 ವರುಶಗಳ ಕಾಲ ಅರಕೆಯನ್ನು ನಡೆಸಿ ಡಾಕ್ಟರೇಟ್ ಅನ್ನು ಪಡೆದಿದ್ದಾರೆ. ಈ ಅರಕೆಯ ಮಾಹಿತಿಯನ್ನು ಮಣಿಪಾಲದ ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್‍ಮೆಂಟ್‍‍ನವರು ತಮ್ಮ ಸ್ನಾತಕೊತ್ತರ ಪದವಿಯ ಕಲಿಕೆಗಾಗಿ ಬಳಸಿಕೊಂಡಿದ್ದಾರೆ.

ಕೊಪ್ಪದ ಕಾಲೇಜಿನ ಕಲಿಸುಗರಾದ ಶ್ರಿ ಎಂ.ಸಿ. ದುಗ್ಗಪ್ಪಗೌಡರವರು 2005ರಲ್ಲಿ ಟಿಸಿಎಸ್ ಕೂಟದ ಬಗ್ಗೆ ಕಲಿಕೆ ನಡೆಸಿ, ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಹಾಗೆಯೇ ಸುಮಾರು 40 ಕ್ಕೂ ಹೆಚ್ಚು ಕಾಲೇಜುಗಳ ಎಂ.ಬಿ.ಎ. ಕಲಿಗರು ಕೂಟದ ಬಗ್ಗೆ ಅದ್ಯಯನ ನಡೆಸಿ ವರದಿ ನೀಡಿದ್ದಾರೆ.

ಮಕ್ಕಳ ಕಲಿಕೆಯ ಮೇಲೆ ಇವರಿಗೆ ಹೆಚ್ಚಿನ ಕಾಳಜಿ!

bus1

ಮಲೆನಾಡಿನಲ್ಲಿ ಈ ಹಿಂದೆ, ಓದನ್ನು ನಡುವೆ ಬಿಟ್ಟವರು ಕೊಡುತ್ತಿದ್ದ ಕಾರಣಗಳಲ್ಲಿ ‘ಅಶ್ಟು ದೂರದ ಕಾಲೇಜಿಗೆ/ಸ್ಕೂಲಿಗೆ ಹೋಗುವುದಾದರು ಹೇಗೆ?’ ಎಂಬುದು ಒಂದಾಗಿತ್ತು. ಆದರೆ ಟಿಸಿಎಸ್ ಈ ಕೊರತೆಯನ್ನು ನೀಗಿಸಿದೆ. ಕಾಡಿನ ಮೂಲೆಯಲ್ಲಿರುವ ಊರುಗಳಿಗೂ ಬಸ್ಸುಗಳನ್ನು ಬಿಟ್ಟು ಬಾಳೆಹೊನ್ನೂರು, ಶ್ರಿಂಗೇರಿ, ಕೊಪ್ಪ, ತೀರ‍್ತಹಳ್ಳಿ, ನರಸಿಂಹರಾಜಪುರದಂತಹ ದೊಡ್ಡ ನಗರಗಳಿಗೆ ಸಂಪರ‍್ಕವನ್ನು ಒದಗಿಸಿಕೊಟ್ಟಿದೆ. ಅಲ್ಲದೇ ಸ್ಕೂಲಿಗೆ ಹೋಗುವ ಮಕ್ಕಳಿಗೆ ಪ್ರಯಾಣದ ದರದಲ್ಲಿ 50% ರಿಯಾಯಿತಿ ಕೂಡ ಇದೆ. ಸ್ಕೂಲಿಗೆ ಹೋಗುವ ಅಂಗವಿಕಲ ಮಕ್ಕಳಿಗೆ ಇವರ ಬಸ್ಸಿನಲ್ಲಿ ಯಾವುದೇ ಹಣ ತೆಗೆದುಕೊಳ್ಳುವುದಿಲ್ಲ. ಇದು ಮಕ್ಕಳ ಕಲಿಕೆಗೆ ಇನ್ನಿಲ್ಲದ ನೆರವನ್ನು ನೀಡಿದೆ. ಬಸ್ಸಿನ ಕೆಲಸಗಾರರು ಕೂಡ ಮಕ್ಕಳ ಮೇಲೆ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತಾರೆ. ಸ್ಕೂಲಿಗೆ ಹೋಗುವ ಚಿಕ್ಕ ಮಕ್ಕಳನ್ನು ಎಚ್ಚರಿಕೆಯಿಂದ ಬಸ್ಸಿಗೆ ಹತ್ತಿಸಿಕೊಂಡು ಇಳಿಸುತ್ತಾರೆ. ಬೆಳಿಗ್ಗೆ ಸ್ಕೂಲು ಶುರುವಾಗುವ ಹಾಗು ಸಂಜೆ ಮುಗಿಯುವ ಹೊತ್ತಿಗೆ ಸಹಕಾರ ಸಾರಿಗೆ ಬಸ್ ಇದ್ದೇ ಇರುತ್ತದೆ. ಒಂದು ವೇಳೆ ಸ್ಕೂಲು ಊರಿನ ಹೊರಗಿದ್ದರೂ ಆ ಸ್ಕೂಲಿನ ಬುಡಕ್ಕೆ ಹೋಗಿ ಮಕ್ಕಳನ್ನು ಇಳಿಸುತ್ತಾರೆ ಇಲ್ಲವೇ ಹತ್ತಿಸಿಕೊಂಡು ಬರುತ್ತಾರೆ. ಇದಲ್ಲದೇ ಕೂಟವು 2010 ರಿಂದ ಕೊಪ್ಪದ ಐ.ಟಿ.ಐ. ಕಾಲೇಜಿನ ಮಕ್ಕಳಿಗೆ ತಾಂತ್ರಿಕ ನಿರ‍್ವಹಣೆಯ ಬಗ್ಗೆ ತರಬೇತಿಯನ್ನು ನೀಡಿ ಅಶೋಕ್ ಲೇಲ್ಯಾಂಡ್ ಕಂಪನಿಯಲ್ಲಿ ಕೆಲಸ ದೊರಕಿಸಿಕೊಟ್ಟಿದೆ.

ಮಲೆನಾಡಿನ ಮಂದಿಮೆಚ್ಚುಗೆ ಗಳಿಸಿರುವ ಈ ಕೂಟವು ಹಲವಾರು ಸಮಾಜ ಸೇವೆಗಳನ್ನೂ ಮಾಡುತ್ತಿದೆ.

ಸ್ವಾತಂತ್ರ್ಯ ಹೋರಾಟಗಾರರಲ್ಲದೇ ಕರ‍್ನಾಟಕ ಏಕೀಕರಣಕ್ಕೆ ಹೋರಾಡಿದವರಿಗೂ ಈ ಬಸ್ಸಿನಲ್ಲಿ ಹಣ ತೆಗೆದುಕೊಳ್ಳುವುದಿಲ್ಲ. ಅಂಗವಿಕಲ ಹಾಗೂ ಹಿರಿಯ ನಾಗರೀಕರಿಗೆ ಪ್ರಯಾಣದ ದರದಲ್ಲಿ 50% ರಿಯಾಯಿತಿ ಕೊಡುತ್ತದೆ. ಸ್ಕೂಲು ಕಾಲೇಜಿಗೆ ಹೋಗುವ ಸೊಸೈಟಿಯ ಕೆಲಸಗಾರರ ಮಕ್ಕಳಿಗೆ ಪ್ರಯಾಣದ ದರದಲ್ಲಿ 100% ರಿಯಾಯಿತಿ! ಚೆನ್ನಾಗಿ ಓದುವ ಮಕ್ಕಳನ್ನು ಗುರುತಿಸಿ ಗೌರವಿಸುತ್ತದೆ.

ಟಿಸಿಎಸ್ ಬಳಗಕ್ಕೆ ಬಂದಿರುವ ಪ್ರಶಸ್ತಿಯ ಪಟ್ಟಿಗಳನ್ನು ಮಾಡಲು ಹೆಚ್ಚಿನ ಪುಟಗಳೇ ಬೇಕಾಗುವುದು, ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳು, ಜಿಲ್ಲಾಮಟ್ಟದ ನೂರಾರು ಪ್ರಶಸ್ತಿಗಳು ಹರಿದುಬಂದಿವೆ. 25 ವರುಶಗಳನ್ನು ಪೂರೈಸಿರುವ ಟಿಸಿಎಸ್ ಕೂಟವು ಜನವರಿ 3, 2017 ರಂದು ತನ್ನ ಬೆಳ್ಳಿಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದೆ.

ಮಲೆನಾಡಿನ ಮೂಲೆ ಮೂಲೆಗೂ ಬಸ್ಸಿನ ಏರ‍್ಪಾಡನ್ನು ಮಾಡಿ ಅಲ್ಲಿನ ಮಕ್ಕಳ ಕಲಿಕೆಗೆ ಹಾಗು ಮಂದಿಯ ಬದುಕಿಗೆ ನೆರವಾಗಬೇಕು ಎಂಬುದು ಈ ಕೂಟದ ಗುರಿಯಾಗಿದೆ. ಆದರೆ ಬೇರೆ ಕಂಪನಿಯ ಬಸ್ಸುಗಳ ಜೊತೆಗೆ ದೊಡ್ಡ ನಗರಗಳಲ್ಲಿ ಕೆಎಸ್‍ಆರ್‍ಟಿಸಿ ಬಸ್ಸುಗಳ ಎಣಿಕೆ ಹೆಚ್ಚಿರುವುದು ಟಿಸಿಎಸ್ ಕೂಟಕ್ಕೆ ದೊಡ್ಡ ಪೈಪೋಟಿಯನ್ನು ತಂದೊಡ್ಡಿವೆ. ಕಾರು-ಜೀಪುಗಳ ಎಣಿಕೆ ಕೂಡ ಹೆಚ್ಚುತ್ತಿದೆ. ಇವೆಲ್ಲಾ ಪೈಪೋಟಿಯ ನಡುವೆ ನಮ್ಮ ಸಹಕಾರ ಸಾರಿಗೆಯು ಹೇಗೆ ಮೈಕೊಡವಿ ನಿಲ್ಲುತ್ತದೆ ಎಂದು ಕಾದು ನೋಡಬೇಕಿದೆ. ಆಡಳಿತದಲ್ಲಿ ಉಳಿದ ಕೂಟಗಳಿಗೆ ಮಾದರಿ ಆಗಿರುವ ಟಿಸಿಎಸ್ ಇವೆಲ್ಲವನ್ನು ಮೀರಿ ನಿಂತು ತನ್ನ ಹೆಗ್ಗುರಿಯಂತೆ ‘ಇಂಡಿಯಾದ ಮಾದರಿ ಕೂಟವಾಗಲಿ’.

(ಚಿತ್ರ ಸೆಲೆ: skyscrapercity.com, ಟಿಸಿಎಸ್ ಕೂಟದವರಿಂದ ಪಡೆದ ಚಿತ್ರಗಳು)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: