ಕಿರಿದಾದ ಬಾನೋಡ ತಾಣಕ್ಕೊಂದು ದುಂಡಾಕಾರದ ಓಡುದಾರಿ

ಜಯತೀರ‍್ತ ನಾಡಗವ್ಡ.

ಹೆಚ್ಚು ಮಂದಿಯ ಓಡಾಟ, ಬಾನೋಡ ಸಾರಿಗೆಯ ಮೇಲೂ ದಟ್ಟಣೆ ಹೆಚ್ಚಿಸಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ಇಂಡಿಯಾದ ಪ್ರಮುಕ ಬಾನೋಡ ತಾಣಗಳು ಇಂದು ಕಿಕ್ಕಿರಿದಿರುತ್ತವೆ. ದುಬೈ, ಪ್ರಾಂಕ್‌ಪರ‍್ಟ್, ಪ್ಯಾರಿಸ್, ಲಂಡನ್, ಸಿಂಗಪುರ್, ನ್ಯೂಯಾರ‍್ಕ್ ಮುಂತಾದ ಬಾನೋಡ ತಾಣಗಳ ಮೂಲಕ ಪ್ರತಿ ವರುಶ ಕೋಟಿಗಟ್ಟಲೆ ಪ್ರವಾಸಿಗರು ಓಡಾಡುತ್ತಾರೆ. ದಿನವೊಂದಕ್ಕೆ ನೂರಾರು ಬಾನೋಡಗಳು ಇಲ್ಲಿಗೆ ಬಂದಿಳಿಯುತ್ತವೆ ಮತ್ತು ಇಲ್ಲಿಂದ ಬೇರೆಡೆಗೆ ಹಾರುತ್ತವೆ. ಹೀಗಾಗಿ ಈ ಬಾನೋಡ ತಾಣಗಳ ಓಡುದಾರಿ(Runway) ಯಾವಾಗಲೂ ಬ್ಯುಸಿ. ಲಂಡನ್ ಬಾನೋಡತಾಣದಲ್ಲಿ ಪ್ರತಿ 45 ಸೆಕೆಂಡ್‌ಗಳಿಗೊಮ್ಮೆ ಬಾನೋಡವೊಂದು ಮುಗಿಲಿನತ್ತ ಹಾರುತ್ತದೆ. ದಿನವೊಂದಕ್ಕೆ ಹಾರುವ ಮತ್ತು ಬಂದಿಳಿಯುವ ಒಟ್ಟು ಬಾನೋಡಗಳು 1400, ಅಂದರೆ ಪ್ರತಿ ವರುಶಕ್ಕೆ 5 ಲಕ್ಶಕ್ಕೂ ಹೆಚ್ಚು ಬಾನೋಡಗಳು. ನಮ್ಮ ಬೆಂಗಳೂರಿನ ಕೆಂಪೇಗೌಡ ಬಾನೋಡತಾಣದ ಅಂಕಿ ಸಂಕೆಗಳತ್ತ ಗಮನ ಹಾಯಿಸಿದರೆ, ಪ್ರತಿ ವರುಶ 2 ಕೋಟಿಗೂ ಹೆಚ್ಚಿನ ಪ್ರಯಾಣಿಕರು ಇಲ್ಲಿ ಓಡಾಟ ನಡೆಸುತ್ತಾರೆ. ಅಂದರೆ ದಿನವೊಂದಕ್ಕೆ ಸುಮಾರು 55 ಸಾವಿರ ಪ್ರಯಾಣಿಕರು. ಒಂದೇ ದಿನದಲ್ಲಿ ಸುಮಾರು 500 ಬಾನೋಡಗಳು ಕೆಂಪೇಗೌಡ ಬಾನೋಡತಾಣದಲ್ಲಿ ಓಡಾಟ ನಡೆಸುತ್ತವೆ.

ಈ ಓಡುದಾರಿಗಳು ಬ್ಯುಸಿಯಾಗಿರುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಬಾನೋಡ ತಾಣಗಳನ್ನು ಕಟ್ಟುವ ಅಗತ್ಯವಿದೆ. ಹೊಸ ಬಾನೋಡ ತಾಣಗಳನ್ನು ಕಟ್ಟಲು ಸಾವಿರಾರು ಎಕರೆಗಳಶ್ಟು ಜಾಗಬೇಕು. ಬಾನೋಡತಾಣಗಳ ಈ ಸಮಸ್ಯೆಯ ಬಗ್ಗೆ ಆಳವಾದ ಅರಕೆ ನಡೆಸುತ್ತಿರುವ ನೆದರ್‌ಲ್ಯಾಂಡ್ಸ್ ಏರ್‌ಪೋರ‍್ಟ್ಸ್ ಸೆಂಟರ್‌ನ(NLR) ಮುಕ್ಯ ಅರಕೆಗಾರ ಹೆಂಕ್ ಹೆಸ್ಸಿಲಿಂಕ್(Henk Hesselink), ಒಂದು ಹೊಸದಾದ ಹೊಳಹನ್ನು(Concept) ಮುಂದಿಟ್ಟಿದ್ದಿದ್ದಾರೆ. ಅದೇ “ದುಂಡಾಕಾರದ ಓಡುದಾರಿ”  ಇಂಗ್ಲಿಶ್‌ನಲ್ಲಿ ಎಂಡ್‌ಲೆಸ್ ರನ್‍ವೇ ಇಲ್ಲವೇ ಸರ‍್ಕ್ಯುಲರ್ ರನ್‍ವೇ (Endless Runway/Circular Runway) ಎಂಬುದು.

ಒಂದು ಬಾನೋಡ ಹಾರುವುದು ಇಲ್ಲವೇ ನೆಲಕ್ಕೆ ಬಂದಿಳಿಯುವುದು ಸುಲಬದ ಕೆಲಸ ಅಲ್ಲ. ಒಂದು ಬಾನೋಡ ನೆಲಕ್ಕಿಳಿಯುತ್ತಿರುವಾಗ ಅದು ಸಾಕಶ್ಟು ಗಾಳಿಯೊತ್ತಡಕ್ಕೆ ಒಳಗಾಗುತ್ತದೆ. ಹೀಗಾಗಿ ಬಾನೋಡವೊಂದು ಗಾಳಿ ಬೀಸುವ ದಿಕ್ಕಿಗೆ ವಿರುದ್ದವಾಗಿ ಕೆಳಗಿಳಿಸುವುದು ಕಶ್ಟ. ಹೆಚ್ಚಿನ ಬಾನೋಡಗಳು ಗಾಳಿ ಬೀಸುವ ದಿಕ್ಕಿನಲ್ಲೇ ಇಳಿಯುತ್ತವೆ. ಅದಕ್ಕೆಂದೇ ಬಾನೋಡವೊಂದನ್ನು ಕೆಳಗಿಳಿಸುವಾಗ ನಿದಾನಕ್ಕೆ ಅದನ್ನು ಗಾಳಿ ಬೀಸುವ ದಿಕ್ಕಿಗೆ ತರುತ್ತ ಇಳಿಸುತ್ತಾರೆ. ಇಂತಹದ್ದಕ್ಕೆಲ್ಲ ನಾಲ್ಕಾರು ಕಿಲೋಮೀಟರ್ ಗಟ್ಟಲೆ ಓಡುದಾರಿ ಕಟ್ಟಿಸಬೇಕು. ಇವುಗಳಿಗೆ ಸಾಕಶ್ಟು ಜಾಗ ತಗಲುತ್ತದೆ. ಹೆಸ್ಸಿಲಿಂಕ್ ಅವರ ದುಂಡಾಕಾರದ ಓಡುದಾರಿಗೆ ಕೇವಲ 3.5 ಕಿಲೋಮೀಟರ್ ನಡುಗೆರೆಯುಳ್ಳ(Diameter) ದುಂಡಶ್ಟೇ ಸಾಕಂತೆ. ಈ ದುಂಡಿನ ಸುತ್ತಲೂ ಒಂದೇ ಕಾಲಕ್ಕೆ 3 ಬಾನೋಡಗಳು ಹಾರಬಹುದು ಮತ್ತು 3 ಬಾನೋಡಗಳು ಕೆಳಗಿಳಿಯಬಹುದು. ಹೆಸ್ಸೆಲಿಂಕ್ ಅವರ ದುಂಡಾಕಾರದ ಓಡುದಾರಿಯ ಪ್ರಮುಕ ಸಲೆಗಳು(Advantages) ಹೀಗಿವೆ:

  1. ಈಗಿರುವ ಬಾನೋಡತಾಣಗಳಿಗಿಂತ, ದುಂಡನೆಯ ಓಡುದಾರಿಯ ಬಾನೋಡ ತಾಣಗಳು 2/3ರಶ್ಟು ಜಾಗವನ್ನು ಉಳಿತಾಯ ಮಾಡುತ್ತವೆ.
  2. ಸಾಮಾನ್ಯವಾಗಿ ಬಾನೋಡ ತಾಣಗಳಲ್ಲಿ ಬಾನೋಡಗಳು ಒಂದೇ ಕಡೆಯಿಂದ ಮೇಲೇರುವುದು ಮತ್ತು ಬಂದಿಳಿಯುವುದರಿಂದ ಒಂದೆಡೆ ಹೆಚ್ಚು ಸದ್ದು ಇರುತ್ತದೆ. ಓಡುದಾರಿ ದುಂಡಿನ ಸುತ್ತಲೂ ಬಾನೋಡಗಳು ಏರುವುದು-ಇಳಿಯುವುದು ಮಾಡುವುದರಿಂದ, ಸದ್ದಿನ ಪರಿಣಾಮ ಎಲ್ಲೆಡೆ ಒಂದೇ ಸಮನಾಗಿರುತ್ತದೆ. ಹೀಗಾಗಿ ಬಾನೋಡ ತಾಣಗಳ ಅಕ್ಕ ಪಕ್ಕದ ಮನೆ ಮಾಡಿಕೊಂಡಿರುವವರಿಗೆ ಸದ್ದು ಗದ್ದಲ ಕಡಿಮೆಯಾಗಲಿದೆ.
  3. ಒಂದೇ ಹೊತ್ತಿಗೆ ಹಲವಾರು ಬಾನೋಡಗಳು ಹಾರಲು-ಇಳಿಯಲು ಸಾದ್ಯವಾಗುವುದರಿಂದ, ಒಂದೇ ಬಾನೋಡತಾಣ ಕಡಿಮೆ ಹೊತ್ತಿನಲ್ಲಿ ಹೆಚ್ಚಿನ ಸಂಕ್ಯೆಯ ಬಾನೋಡಗಳ ಹಾರಾಟಕ್ಕೆ ಅನುವು ಮಾಡಿಕೊಟ್ಟು, ಬಾನೋಡತಾಣಗಳ ಸಿಬ್ಬಂದಿ ಮತ್ತು ಪ್ರಯಾಣಿಕರ ಹೊತ್ತು ಉಳಿತಾಯವಾಗಲಿದೆ.
  4. ಬಾನೋಡತಾಣಗಳ ಅಳವು(Capacity) ಹೆಚ್ಚಲಿದೆ.
  5. ಬಾನೋಡಗಳು ಗಾಳಿಯ ಒತ್ತಡಕ್ಕೆ ತಕ್ಕಂತೆ ಇಳಿಯಬೇಕೆಂಬ ತೊಂದರೆಯೂ ಇರುವುದಿಲ್ಲ.

ಹೆಸ್ಸಿಲಿಂಕ್ ಮತ್ತು ತಂಡ, ಈ ಹಮ್ಮುಗೆಗಾಗಿ ಎಣ್ಣುಕಗಳ ಮೂಲಕ ಅಣುಕು(Simulations) ಮಾಡಿನೋಡಿದ್ದಾರೆ. “ಈ ಹಮ್ಮುಗೆಗೆ ಹೆಚ್ಚಿನ ಹೊತ್ತು ತಗುಲುತ್ತದೆ. ದುಂಡಗಿನ ಓಡುದಾರಿ ಇನ್ನೂ ಈಗ ತಾನೆ ಹುಟ್ಟಿದ ಮಗುವಿನ ಹಂತದಲ್ಲಿದೆ. ಅಣುಕುಗಳ ಮೂಲಕ ಕೆಲವು ಮಾದರಿಗಳನ್ನು ತಯಾರಿಸಿ, ಡ್ರ‍ೋನ್‌ಗಳನ್ನು ಬಳಸಿ ಒರೆಗೆಹಚ್ಚುವ ಕೆಲಸವಾಗಬೇಕು. ನಂತರ ಮಾದರಿ ಬಾನೋಡ ತಾಣ ಕಟ್ಟಿಸಿ ಅಲ್ಲಿ ಎಲ್ಲವನ್ನು ಒರೆಗೆಹಚ್ಚುವ ಕೆಲಸವಾಗಬೇಕು. ಇದೆಲ್ಲ ಕೂಡಲೇ ಆಗುವಂತ ಕೆಲಸವಲ್ಲ, ಏನಿಲ್ಲವೆಂದರೂ 20 ವರುಶ ಬಳಿಕವೇ ಇಂತ ಒಂದು ಬಾನೋಡ ತಾಣವನ್ನು ನಾವು ನೋಡಬಹುದು” ಎನ್ನುತ್ತಾರೆ ಹೆಸ್ಸಿಲಿಂಕ್. ಪ್ಯಾರಿಸ್‌ನ ಸಿ.ಡಿ.ಜಿ.(Charles de Gaulle) ಬಾನೋಡ ತಾಣದಲ್ಲಿ ಹೆಚ್ಚಿನ ಪ್ರಯಾಣಿಕರು, ಬಾನೋಡಗಳು ತುಂಬಿ ಗಿಜಿಗಿಡುವ ದಿನವನ್ನೇ ನಮ್ಮ ಅಣುಕುಗಳಿಗೆ ಬಳಸಿಕೊಂಡಿದ್ದೇವೆ. ಒಳ್ಳೆಯ ದೊರೆತಗಳು(Results) ಕಂಡುಬಂದಿವೆ ಎಂದು ಹಿಗ್ಗಿನಿಂದ ಹೇಳಿಕೊಂಡಿದ್ದಾರೆ ಹೆಸ್ಸಿಲಿಂಕ್.

ಈ ದುಂಡಾಕಾರದ ಓಡುದಾರಿಯ ಬಗ್ಗೆ ಸಾಕಶ್ಟು ಕೇಳ್ವಿಗಳು ಬಂದಿವೆ. ಇದೆಲ್ಲದಕ್ಕೂ ತಕ್ಕ ಹೇಳ್ವಿಗಳನ್ನು ಹೆಸ್ಸಿಲಿಂಕ್ ಮತ್ತವರ ತಂಡದವರು ಕಂಡುಕೊಂಡಿದ್ದಾರೆ. ಕ್ರಾಸ್‌ವಿಂಡ್ ಲ್ಯಾಂಡಿಗ್ ಮಾಡುವಾಗ ಉಂಟಾಗುವ ತೊಂದರೆಗಳ ಬಗ್ಗೆಯೂ ಈ ತಂಡ ಪರಿಹಾರ ಕಂಡುಕೊಂಡಿದೆ. [ಕ್ರಾಸ್‌ವಿಂಡ್ ಲ್ಯಾಂಡಿಗ್ ಅಂದರೆ ಓಡುದಾರಿಗೆ ನೇರಡ್ಡವಾಗಿ (Perpendicular) ಗಾಳಿ ಬೀಸುತ್ತಿರುತ್ತದೆ, ಆಗ ಬಾನೋಡ ಓಲಾಟಕ್ಕೆ(Yaw), ಉರುಳಾಟಕ್ಕೆ (Rolling) ಒಳಪಡುವ ಸಾದ್ಯತೆ ಹೆಚ್ಚು. ಇದು ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತದೆ]. ನೆದರ್‌ಲ್ಯಾಂಡ್ಸ್ ಬಾನೋಡ ಅರಕೆಮನೆಯ ಈ ಕೆಲಸಕ್ಕೆ ಜರ‍್ಮನಿ, ಪ್ರಾನ್ಸ್, ಪೋಲ್ಯಾಂಡ್ ಮತ್ತು ಸ್ಪೇನ್ ನಾಡುಗಳ ವಿವಿದ ಬಾನೋಡ ಅರಕೆಮನೆಗಳು ಕೈಜೋಡಿಸಿವೆ. ಇಂತ ಓಡುದಾರಿಯುಳ್ಳ ಬಾನೋಡ ತಾಣ ಕಟ್ಟಿಸಲು , ಈಗಿರುವ ಬಾನೋಡ ತಾಣಗಳಿಗಿಂತ ಅರ‍್ದ ಪಟ್ಟು ಹೆಚ್ಚು ಹಣ ಹೂಡಬೇಕಾಗಬಹುದಂತೆ. ಆದರೆ ಇದರಿಂದ ಸಾಕಶ್ಟು ಜಾಗ/ಬೂಮಿ ಉಳಿತಾಯವಾಗಲಿದೆ ಮತ್ತು ಮೇಲೆ ತಿಳಿಸಿದ ಸಲೆಗಳ ಲಾಬ ಪಡೆಯಬಹುದಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: internationalairportreview.comendlessrunway-project.eunlr.orgbengaluruairport.comexpress.co.uk)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: