ಪತ್ರಿಕಾ ಸ್ವಾತಂತ್ರ್ಯ

– ಅಜಯ್ ರಾಜ್.

ಅಮೇರಿಕದ ಸಂಸ್ತಾಪಕ ಪಿತಾಮಹರುಗಳಲ್ಲೊಬ್ಬರಾದ ತಾಮಸ್ ಜೆಪರ‍್ಸನ್ “ಸರ‍್ಕಾರವಿಲ್ಲದ ಪತ್ರಿಕೋದ್ಯಮ ಮತ್ತು ಪತ್ರಿಕೋದ್ಯಮವಿಲ್ಲದ ಸರ‍್ಕಾರ ಎಂಬ ಎರಡು ಆಯ್ಕೆಗಳಿದ್ದರೆ ನಾನು ಮೊದಲನೆಯದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ” ಎನ್ನುತ್ತಾರೆ. ಪತ್ರಿಕಾ ಸ್ವಾತಂತ್ರ್ಯವೆನ್ನುವುದು ದಶಕಗಳಿಂದಲೂ ಚರ‍್ಚೆಗೆ ಗ್ರಾಸವಾಗುತ್ತಾ ಬಂದಿದೆ. ಪತ್ರಿಕಾ ಸ್ವಾತಂತ್ರ್ಯವೆಂದರೆ ಯಾವುದೇ ಕಟ್ಟುಪಾಡುಗಳಿಲ್ಲದೆ, ಅಡಚಣೆಗಳಿಲ್ಲದೆ, ಯಾರ ಒತ್ತಡ ಮತ್ತು ಹಸ್ತಕ್ಶೇಪವಿಲ್ಲದೆ ಮುಕ್ತವಾಗಿ ಸುದ್ದಿಯನ್ನು ಬಿತ್ತರಿಸುವುದು ಮತ್ತು ವಿಶ್ಲೇಶಿಸುವುದು. ಪತ್ರಿಕೋದ್ಯಮ ಪ್ರಜಾಪ್ರಬುತ್ವದ ಕಾವಲು ನಾಯಿ. ಪ್ರಜಾಪ್ರಬುತ್ವಕ್ಕೆ ದಕ್ಕೆಯಾಗುವಂತಹ ಯಾವುದೇ ವಿಚಾರಗಳ ಜೊತೆ ರಾಜಿ ಮಾಡಿಕೊಳ್ಳದೆ ಬದಲಿಗೆ ಅವುಗಳನ್ನು ನ್ಯಾಯದ ಚೌಕಟ್ಟಿನಲ್ಲಿ ಟೀಕಿಸುತ್ತಾ, ಜನಾಬಿಪ್ರಾಯಕ್ಕೆ ತರುವುದು ಪತ್ರಿಕೋದ್ಯಮದ ಆದ್ಯ ಕರ‍್ತವ್ಯ.

ಪತ್ರಿಕೋದ್ಯಮದ ಈ ಕರ‍್ತವ್ಯಗಳನ್ನು ಕಾರ‍್ಯಗತ ಮಾಡುವುದು ಒಂದು ದೊಡ್ಡ ಸವಾಲು. ಅದು ಒಬ್ಬನ ಒಳಿತಿಗಿರಬಹುದು ಅತವಾ ರಾಶ್ಟ್ರದ ಒಳಿತಿಗಿರಬಹುದು – ಯಾವುದಾದರೂ ವಿಗ್ನ ಅತವಾ ಅಡಚಣೆಗಳು ಸಂಬವಿಸುತ್ತವೆ. ಈ ಅಡಚಣೆಗಳು ಬಹುತೇಕ ರಾಜಕೀಯ ಪ್ರೇರಿತವೆನ್ನುವುದು ಜಗಜ್ಜಾಹೀರಾಗಿರುವ ಸಂಗತಿ.

ಇನ್ನು ಪತ್ರಿಕಾ ಸ್ವಾತಂತ್ರ್ಯದ ವಿಶಯಕ್ಕೆ ಬಂದಾಗ ಇದು ಸಾಕಶ್ಟು ಏಳು ಬೀಳುಗಳನ್ನು ಕಂಡಿದೆ. ಸಾಕಶ್ಟು ಪತ್ರಕರ‍್ತರು ತಮ್ಮ ಜೀವ ತೆತ್ತಿದ್ದಾರೆ. ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ನೋಡಿದಾಗ ನಮಗೆ ಸಾಕಶ್ಟು ನಿದರ‍್ಶನಗಳು ಕಾಣ ಸಿಗುತ್ತವೆ. ಆ ನಿದರ‍್ಶನಗಳಲ್ಲಿ ಕೆಲವನ್ನು ಇಲ್ಲಿ ನಮೂದಿಸುವುದಾದರೆ 1663 ರಲ್ಲಿ ಜಾನ್ ಗ್ವಿನ್(John Gwyn) ಎಂಬ ಲೇಕಕ ಹಾಗೂ ಪ್ರಕಾಶಕ, ಇಂಗ್ಲೆಂಡಿನ ರಾಜನಾದ ದ್ವಿತೀಯ ಚಾರ‍್ಲ್ಸ್ (Charles II ) ಆಡಳಿತವನ್ನು ಮತ್ತು ಆತನ ನ್ಯಾಯಾಂಗ ವ್ಯವಸ್ತೆಯನ್ನು ಟೀಕಿಸಿ ಬರೆದಿದ್ದಕ್ಕೆ ಆತನನ್ನು ಕೊಂದು,ರುಂಡ ಮುಂಡಗಳನ್ನು ಬೇರ‍್ಪಡಿಸಿ ಇಂಗ್ಲೆಂಡಿನ ಮಹಾದ್ವಾರಕ್ಕೆ ಹೀನಾಯಾಮಾನವಾಗಿ ನೇತು ಹಾಕಿದ್ದರು.

ಪತ್ರಕರ‍್ತರ ಕೊಲೆಗಳು ಕೇವಲ ರಾಜಪ್ರಬುತ್ವ ವ್ಯವಸ್ತೆಗೆ ಸೀಮಿತವಾಗದೆ ಪ್ರಜಾಪ್ರಬುತ್ವದಲ್ಲಿಯೂ ಪ್ರಸ್ತುತವಿರುವುದು ನಮ್ಮಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಎಶ್ಟರಮಟ್ಟಿಗೆ ಅವಕಾಶ ಮತ್ತು ರಕ್ಶಣೆಯಿದೆ ಎಂಬುದನ್ನು ಸಾಬೀತುಪಡಿಸಿದೆ. ತೀರಾ ಇತ್ತೀಚಿಗೆ ಅಂದರೆ 1990 ಮತ್ತು 2000 ದಶಕಗಳಲ್ಲಿ ಶ್ರೀಲಂಕಾ ದೇಶದಲ್ಲಿ ಪತ್ರಕರ‍್ತನಾಗುವುದೆಂದರೆ ಅತಿ ದೊಡ್ಡ ಸವಾಲಾಗಿತ್ತು. ಪ್ರಾಣದ ಮೇಲಿನ ಆಸೆಯನ್ನು ತೊರೆದು ಪತ್ರಕರ‍್ತನ ಕೆಲಸವನ್ನು ಮಾಡಬೇಕಿತ್ತು. ಆಗ ನಡೆಯುತ್ತಿದ್ದ ಸಿವಿಲ್ ವಾರ್ ಅದೆಶ್ಟೋ ಪತ್ರಕರ‍್ತರನ್ನು ಮುಗಿಸಿ ಬಿಟ್ಟಿತು. ಪತ್ರಕರ‍್ತರನ್ನು ಮನೆಯಿಂದಾಚೆ ಎಳೆದು ಬರ‍್ಬರವಾಗಿ ಹತ್ಯೆಗೈಯ್ಯಲಾಯಿತು.

ಇದಲ್ಲದೆ ಸದಾ ಯುದ್ದ ಪೀಡಿತ ದೇಶಗಳಾದ ಸಿರಿಯಾ ಮತ್ತು ಲಿಬಿಯಾ ದೇಶಗಳಲ್ಲಿ ಪತ್ರಕರ‍್ತರ ಮಾರಣ ಹೋಮವಾಯಿತು. ಪತ್ರಿಕಾ ಸ್ವಾತಂತ್ರ್ಯಕ್ಕೆ ಎಡೆಯೇ ಇಲ್ಲವಾಯಿತು. ಈಗಲೂ ಸಹ ಐಸಿಸ್ ಎಂಬ ಉಗ್ರ ಸಂಗಟನೆಗಳ ಪಾರುಪತ್ಯವಿರುವ ದೇಶಗಳಲ್ಲಿ ಇಂದಿಗೂ ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದ್ದಾರೆ ಮತ್ತು ಪತ್ರಕರ‍್ತರ ಅಪಹರಣ ಹಾಗು ಶಿರಚ್ಚೇದನಗಳು ಸುದ್ದಿಯಾಗುತ್ತಲೇ ಇವೆ.

ಪತ್ರಿಕಾ ಸ್ವಾತಂತ್ರ್ಯ ಒಂದು ದೇಶದ ಏಳಿಗೆಯ ಸಾಕ್ಶ್ಯಚಿತ್ರವನ್ನು ಕಟ್ಟಿಕೊಡುತ್ತದೆ. ಒಂದು ದೇಶದ ಏಳಿಗೆ, ಆರ‍್ತಿಕ ವ್ಯವಸ್ತೆ ಆ ದೇಶದ ಪತ್ರಿಕಾ ಸ್ವಾತಂತ್ರ್ಯತೆಯಲ್ಲಿ ಹುದುಗಿರುತ್ತವೆ. ಅಬಿವ್ರುದ್ದಿಯಾಗಿರುವ ರಾಶ್ಟ್ರಗಳನ್ನೇ ಉದಾಹರಣೆಗೆ ಗಮನಿಸಿದಾಗ ಆ ದೇಶಗಳಲ್ಲಿ ಪತ್ರಿಕೋದ್ಯಮ ಮುಕ್ತವಾಗಿರುತ್ತದೆ. ಎಲ್ಲರಿಗೂ ತಮ್ಮ ಅನಿಸಿಕೆ ಅಬಿಪ್ರಾಯಗಳನ್ನು ಮುಕ್ತ ಬಾವದಿಂದ ಸಾಂವಿದಾನಿಕ ಚೌಕಟ್ಟಿನಲ್ಲಿ ಹಂಚಿಕೊಳ್ಳುವ ವಾಕ್ ಸ್ವಾತಂತ್ರ್ಯವಿದೆ. ಇದಕ್ಕೆ ಪೂರಕವೆಂದರೆ ಅಮೇರಿಕ ಸಂಯುಕ್ತ ಸಂಸ್ತಾನ (United States Of America ). ಅಮೇರಿಕ ಇಂದು ವಿಶ್ವದಲ್ಲಿಯೇ ಮುಂಚೂಣಿಯಲ್ಲಿರುವ ದೇಶ. ಇಂದು ಇದು ಈ ಹಂತಕ್ಕೆ ತಲುಪಲು ಆ ದೇಶದ ಪತ್ರಿಕಾ ಸ್ವಾತಂತ್ರ್ಯವೆಂದರೆ ಅತಿಶಯೋಕ್ತಿಯಾಗಲಾರದು. ಅಮೇರಿಕಾದ ಸಂವಿದಾನದಲ್ಲಿಯೇ ಪತ್ರಿಕಾ ಸ್ವಾತಂತ್ರ್ಯಕ್ಕೆ ಸೂಕ್ತ ಮನ್ನಣೆ ದೊರಕಿದೆ. ಪತ್ರಿಕಾ ಸ್ವಾತಂತ್ರ್ಯ ಅಮೇರಿಕಾದಲ್ಲಿ ಸಾಂವಿದಾನಿಕ ಹಕ್ಕು ( Constitutional Right ). ಇದರಿಂದ ಯಾವುದೇ ಬಯ ಅಡಚಣೆಗಳಿಲ್ಲದೆ ಪತ್ರಕರ‍್ತರು ತಮ್ಮ ಕೆಲಸವನ್ನು ನಿಬಾಯಿಸಬಹುದು. ಇದರಿಂದ ಸಮಾಜದಲ್ಲಿನ ಬ್ರಶ್ಟರ ಬಂಡವಾಳಗಳು ಬಯಲಾಗುತ್ತವೆ. ಹಿಂದುಳಿದವರ ವಿಕಸನವಾಗುತ್ತದೆ. ಅಸಮರ‍್ತರ ಸೊಲ್ಲಡಗುತ್ತದೆ. ಅಹಂಕಾರಿಗಳ ದೌರ‍್ಜನ್ಯಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಈ ಎಲ್ಲಾ ಅಂಶಗಳು ಪ್ರಜಾಪ್ರಬುತ್ವದ ಹಕ್ಕನ್ನು ಪ್ರತಿಪಾದಿಸುತ್ತದಲ್ಲದೆ ಸಮಾಜದ ಅಬಿವ್ರುದ್ದಿಗೆ ಪೂರಕವಾಗುತ್ತದೆ.

ಬಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ

ಸಂವಿದಾನದ 19ನೇ ವಿದಿಯ ಪ್ರಕಾರ ಬಾರತದ ಪ್ರತಿಯೊಬ್ಬ ಪ್ರಜೆಗೂ ವಾಕ್ ಸ್ವಾತಂತ್ರ್ಯ ಮತ್ತು ಅಬಿವ್ಯಕ್ತಿ ಸ್ವಾತಂತ್ರ್ಯದ (Freedom of Speech and Expression) ಹಕ್ಕನ್ನು ಸಂವಿದಾನ ನೀಡಿದೆ. ಅಮೇರಿಕಾದಂತೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಬಾರತದಲ್ಲಿ ಪ್ರತ್ಯೇಕ ಕಾನೂನಿಲ್ಲದಿದ್ದರೂ ಸಂವಿದಾನದ 19ನೇ ವಿದಿ ಪತ್ರಿಕಾ ಸ್ವಾತಂತ್ರ್ಯಕ್ಕೂ ಅನ್ವಯಿಸುತ್ತದೆ ಎಂದು ಪರಿಗಣಿಸಲಾಗಿದೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ಬಾರತದಲ್ಲಿ ಕೆಲವು ಅಡಚಣೆಗಳಿವೆ. ಈ ಅಡಚಣೆಗಳು ಕಾನೂನಿನ ಮಾನದಂಡಗಳು ಕೂಡ ಆಗಿರಬಹುದು. ಈ ಕಾನೂನುಗಳ ನಡುವೆ ಬಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ನೂರಕ್ಕೆ ನೂರರಶ್ಟು ಪ್ರವೇಶವಿಲ್ಲ. ಬಾರತದಲ್ಲಿ ಮುಕ್ತ ಪತ್ರಿಕಾ ಸ್ವಾತಂತ್ರ್ಯತೆ ನಿರ‍್ಮಾಣವಾಗ ಬೇಕಾದರೆ ನಮ್ಮ ರಾಜಕೀಯ, ನ್ಯಾಯಾಂಗ, ಆರ‍್ತಿಕತೆಯ ಗುಣಮಟ್ಟ ಬದಲಾಗ ಬೇಕು. ವಿಶಯಗಳನ್ನು ತಾತ್ವಿಕ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಪರಿಶೀಲಿಸುವಂತಾಗಬೇಕು.

( ಚಿತ್ರಸೆಲೆ: intelligencesquaredus.org )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *