ಕಾರುಗಳಿಂದ ಸಿಗಲಿದೆಯೇ ಕುಡಿಯುವ ನೀರು?

ಜಯತೀರ‍್ತ ನಾಡಗವ್ಡ.

ಕುಡಿಯುವ ನೀರು ಬಲು ಮುಕ್ಯ. ಅದರಲ್ಲೂ ಬೇಸಿಗೆಯಲ್ಲಿ ಬೇರೆನೂ ಸಿಗದೇ ಇದ್ದರೂ ಇರಬಹುದು, ಆದರೆ ನೀರು ಇಲ್ಲದಿದ್ದರೆ ಬಾಳು ಊಹಿಸಿಕೊಳ್ಳಲು ಆಗದು. ಹಲವೆಡೆ ನೀರು ಸಿಗದೇ ಮಂದಿಯ ಪರದಾಟ ಇನ್ನೂ ಮುಂದುವರೆಯುತ್ತಲೇ ಇದೆ. ಮರಳುಗಾಡಿನಲ್ಲಿ ಕಾರಿನಲ್ಲಿ ಕುಳಿತು ಸಾಗುತ್ತಿದ್ದೀರಿ ಅಂತ ಅಂದುಕೊಳ್ಳಿರಿ. ಹೊರಗೆ ಎಲ್ಲೂ ಕುಡಿಯಲು ನೀರು ಸಿಗದಿದ್ದರೂ, ಬಾಯಾರಿಕೆಯನ್ನು ಹೇಗೆ ತಣಿಸುವುದು ಎಂದು ಚಿಂತಿಸಬೇಕಿಲ್ಲ. ಈಗ ಕಾರಿನ ಮೂಲಕವೇ ಕುಡಿಯುವ ನೀರನ್ನು ಪಡೆಯಬಹುದು! ಹೌದು ನೂರಾರು ವರುಶಗಳ ಹಳಮೆ ಹೊಂದಿರುವ ಜಗತ್ತಿನೆಲ್ಲೆಡೆ ಹೆಸರುವಾಸಿಯಾಗಿರುವ ಪೋರ‍್ಡ್ ಕಾರು (Ford) ತಯಾರಕ ಕೂಟ ಇಂತದೊಂದು ಹೊಳಹನ್ನು(Concept) ಎಲ್ಲರ ಮುಂದಿಟ್ಟಿದೆ.

ಎಲ್ಲ ಕಾರುಗಳಲ್ಲಿ ಇದೀಗ ಗಾಳಿ ಪಾಡುಕದ ಏರ‍್ಪಾಟನ್ನು(Air conditioning system) ಅಳವಡಿಸಿರುತ್ತಾರೆ. ನೀರಾವಿಯು ಗಾಳಿ ಪಾಡುಕ ಏರ‍್ಪಾಟಿನ ಇಂಗುಕದ(Condenser) ಮೇಲೆ ಕೂಡಿಕೊಳ್ಳುತ್ತವೆ. ಹೀಗೆ ಕೂಡಿಕೊಂಡ ನೀರಾವಿ ಸುತ್ತ ಮುತ್ತಲಿನ ವಾತಾವರಣದ ಬಿಸುಪಿನಿಂದ ನೀರಾಗಿ ಮಾರ‍್ಪಟ್ಟು ನೆಲಕ್ಕೆ ಬೀಳುತ್ತದೆ. ಈ ರೀತಿ ನೀರು ನೆಲಕ್ಕೆ ಬಿದ್ದು ಪೋಲಾಗುವ ಬದಲು ಅದನ್ನೇಕೆ ಬಳಸಬಾರದೆಂದು ಪೋರ‍್ಡ್ ಕಂಪನಿಯ ಬಿಣಿಗೆಯರಿಗ ಡೌಗ್ ಮಾರ‍್ಟಿನ್(Doug Martin) ಅವರಿಗೆ ಅನಿಸಿತು. ಈ ದಿಕ್ಕಿನಲ್ಲಿ ಕೆಲಸ ಮಾಡಿ, ನೀರಾವಿಯನ್ನು ಬಳಸಿಕೊಂಡು ಕಾರಿನ ಒಳಗಡೆಯೇ ಕುಡಿಯುವ ನೀರು ಸಿಗುವ ಹಾಗೆ ಮಾಡಬಹುದೆಂದು ಮಾರ‍್ಟಿನ್ ತೋರಿಸಿಕೊಟ್ಟಿದ್ದಾರೆ.

ಪೆರು ನಾಡಿನ ಬಿಲ್‌ಬೋರ‍್ಡ್‌ಗಳೇ (Billboard) ಈ ಹೊಳಹಿನ ಹಿಂದಿನ ಸ್ಪೂರ‍್ತಿ ಎಂದು ಮಾರ‍್ಟಿನ್ ಹೇಳಿಕೊಂಡಿದ್ದಾರೆ. ಬಿಲ್‌ಬೋರ‍್ಡ್ ಎಂಬ ಬಯಲರಿಕೆ ಹಲಗೆಗಳು(Advertising Boards/Hoardings) ವಾತಾವರಣದ ಆವಿಯನ್ನು ಕೂಡಿಟ್ಟು, ಆ ನೀರನ್ನು ಸೋಸಿ, ಕುಡಿಯುವ ನೀರನ್ನು ಒದಗಿಸಿಕೊಡುತ್ತವೆ. ಇದೇ ಬಗೆಯಲ್ಲಿ, ಬಂಡಿಯ ಗಾಳಿ ಪಾಡುಕದ ಏರ‍್ಪಾಟಿನ ನೀರಾವಿಯನ್ನು ಕೂಡಿಟ್ಟು, ಅದೇ ನೀರನ್ನು ಸೋಸಿ, ನೀರಿನ ಚೀಲದಲ್ಲಿ ಕೂಡಿಟ್ಟು ಬೇಕೆಂದಾಗ ಕುಡಿಯಬಹುದು. ಸಂಗಡಿಗ ಜಾನ್ ರೊಲಿಂಗರ‍್(John Rollinger) ಜೊತೆಗೂಡಿ ಮೊದಲ ಮಾದರಿಯನ್ನು ತಯಾರಿಸಿ ಓಡಿಸುಗನ ಪಕ್ಕದಲ್ಲಿ ಚಿಕ್ಕ ನಲ್ಲಿಯೊಂದರ ಮೂಲಕ ನೀರನ್ನು ಒದಗಿಸುವ ಏರ‍್ಪಾಟು ಅಣಿ ಮಾಡಿ ತೋರಿಸಿದ್ದಾರೆ ಮಾರ‍್ಟಿನ್.

https://youtu.be/mxmjdx_Rg_c

ಈ ಏರ‍್ಪಾಟು ಎಶ್ಟು ನೀರನ್ನು ಕೊಡುತ್ತದೆ ಎಂಬ ಕೇಳ್ವಿಗೆ, ಸುಮಾರು 1.9ಲೀಟರ್ ಎಂದು ಮಾರ‍್ಟಿನ್ ವಿವರಿಸಿದ್ದಾರೆ. ಬಂಡಿಯ ಗಾಳಿ ಪಾಡುಕದ ಏರ‍್ಪಾಟಿಗೆ ತಕ್ಕಂತೆ ನೀರಿನ ಪ್ರಮಾಣ ಹೆಚ್ಚು ಕಡಿಮೆಯಾಗುತ್ತದೆ. ದೂರದ ಪಯಣಗಳಿಗೆ ಇದು ನೆರವಾಗಲಿದೆ. ಬಂಡಿಯಲ್ಲೇ ನೀರು ಸಿಗುವುದರಿಂದ ನೀರಿಗಾಗಿ ಹೆಚ್ಚು ಅಲೆದಾಡಬೇಕಿಲ್ಲ. ಈಗಾಗಲೇ ಮಾದರಿಯೊಂದನ್ನು ಸಿದ್ದಪಡಿಸಿ ತೋರಿಸಿರುವ ಮಾರ‍್ಟಿನ್ ಮತ್ತು ಅವರ ತಂಡ, ಇಂತ ಏರ‍್ಪಾಟು ಹೊಂದಿರುವ ಕಾರು ಯಾವಾಗ ಹೊರಬರಲಿದೆ ಎಂಬುದನ್ನು ಇನ್ನೂ ಕಚಿತ ಪಡಿಸಿಲ್ಲ.

(ಮಾಹಿತಿ ಮತ್ತು ತಿಟ್ಟ ಸೆಲೆ: newatlas.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *