ಅಸ್ಸಾಮಿನ ಬಸ್ ನಿಲ್ದಾಣವೊಂದು ಚೆಂದದ ಓದುಮನೆಯಾದಾಗ…

– ಕೆ.ವಿ.ಶಶಿದರ.

ಹಲವಾರು ನಗರಗಳಲ್ಲಿ ರಸ್ತೆ ಸಾರಿಗೆ ಬಸ್ಸುಗಳಿಗೆ ಕಾಯುವುದು ಬಹಳ ತ್ರಾಸದಾಯಕ ಹಾಗೂ ಬೇಸರ ತರಿಸುವ ಕೆಲಸ. ಕಾದೂ ಕಾದೂ ಕಣ್ಣು ಬೆಳ್ಳಗಾದರೂ ಸರಿಯಾದ ಬಸ್ಸು ಬರುವುದಿಲ್ಲ. ಅದರಲ್ಲೂ ಬೆಳಗಿನ ಹೊತ್ತು ಕಚೇರಿಗೆ ಹೋಗುವಾಗ ಹೀಗಾದಲ್ಲಿ ಅಂದಿನ ಕೆಲಸದಲ್ಲಿ ಯಾವುದೇ ಆಸಕ್ತಿಯೂ ಉಳಿಯುವುದಿಲ್ಲ. ಇಂತಹ ಸಮಸ್ಯೆ ಬಹುಶಹ ಬಾರತದ ಬಹುತೇಕ ಎಲ್ಲಾ ನಗರಗಳಲ್ಲಿ ಕಾಣಬಹುದು. ಅನಿವಾರ‍್ಯತೆಯ ಮತ್ತೊಂದು ಹೆಸರೇ ಕಾಯುವುದು ಎಂದಾದಲ್ಲಿ, ಕಾಯುವಿಕೆಯನ್ನು ಸಾರ‍್ತಕವಾಗಿಸುವುದು ಸೂಕ್ತವಲ್ಲವೆ?

ಇದಕ್ಕಾಗಿ ಬಸ್‍ ನಿಲ್ದಾಣದಲ್ಲೇ ಒಂದು ಓದುಮನೆಯನ್ನು ತೆರೆದರೆ ಹೇಗೆ? ಎಂಬ ಹೊಸ ಆಲೋಚನೆ ಬಂದಿದ್ದು ಗೌಹತಿಯ ಹೊರಾಂಗಣ ಜಾಹೀರಾತು ಕಂಪನಿಯೊಂದರ ನಿರ‍್ದೇಶಕರಾದ 50 ವರ‍್ಶ ವಯಸ್ಸಿನ ಅನೂಪ್ ಕನ್ನಾ ಅವರಿಗೆ.

ಇದಕ್ಕೂ ಕಾರಣವಿದೆ. ಅಸ್ಸಾಮಿನ ಗೌಹತಿಯಲ್ಲಿ ಹಿಂದೆಂದೂ ಕಾಣದಶ್ಟು ದೇಶದ ಹಾಗೂ ಹೊರದೇಶದ ಲೇಕಕರು, ಬರಹಗಾರರು, ವಿಮರ‍್ಶಕರು, ಪುಸ್ತಕ ಪ್ರಿಯರು, ಓದುವ ಆಸಕ್ತಿಯಿರುವವರು, ಪುಸ್ತಕ ಹುಳುಗಳು ಎಲ್ಲರೂ ಜನವರಿ 2017ರ ಕೊನೆಯಲ್ಲಿ ಒಮ್ಮೆಲೆ ಸೇರಿದ್ದು ಒಂದಾದರೆ, ನ್ಯಾಶನಲ್ ಬುಕ್ ಟ್ರಸ್ಟ್ ಹಾಗೂ ಅಸ್ಸಾಮ್ ಸರ‍್ಕಾರ ಜೊತೆಗೂಡಿ ಬ್ರಹ್ಮಪುತ್ರ ಲಿಟ್ರೇಚರ್ ಪೆಸ್ಟಿವಲ್ ಆಯೋಜಿಸಿದ್ದು ಎರಡನೆಯದು. ಅಂತರರಾಶ್ಟ್ರೀಯ ಮಟ್ಟದ ಲಿಟ್ರೇಚರ್ ಪೆಸ್ಟಿವಲ್‍ನಂತಹ ದೊಡ್ಡ ಸಮ್ಮೇಳನವನ್ನು ಮೊದಲ ಬಾರಿಗೆ ಗೌಹತಿಯಲ್ಲಿ ಆಯೋಜಿಸಲಾಗಿತ್ತು.

ನಾವಿರುವ ಪ್ರಸ್ತುತ ಕಾಲದಲ್ಲಿ ಅತಿ ಹೆಚ್ಚು ಸಮಯ ಮೊಬೈಲ್ ಪೋನ್ ಹಾಗೂ ಸಂಬಂದಿಸಿದ ಸಂವಹನ ಮಾದ್ಯಮದಲ್ಲಿ ಕಳೆಯಲಾಗುತ್ತಿದೆ. ಓದುವ ಹವ್ಯಾಸ ಮೂಲೆಗುಂಪಾಗಿದೆ. ಇದಕ್ಕೆ ಎರಡು ಮುಕ್ಯ ಕಾರಣಗಳನ್ನು ಹೆಸರಿಸಬಹುದು. ಒಂದು ಸಮಯದ ಅಬಾವ. ಎರಡು ಬೆರಳಂಚಿನಲ್ಲಿ ಎಲ್ಲವೂ ಸಿಗುತ್ತಿರುವುದು. ಬಹಳಶ್ಟು ಜನ ಕಚೇರಿ, ಮನೆ ಹೊರತು ಪಡಿಸಿ ಉಳಿದಂತೆ ಅತಿ ಹಚ್ಚು ಸಮಯವನ್ನು ಕಳೆಯುವ ಸ್ತಳ ಬಸ್ ನಿಲ್ದಾಣಗಳಲ್ಲಿ ಬಸ್ಸಿಗಾಗಿ ಕಾಯಲು ಹಾಗೂ ಸಂಚಾರ ದಟ್ಟಣೆಯ ಸಮಯದಲ್ಲಿ ದೀರ‍್ಗ ಬಸ್ಸಿನ ಪ್ರಯಾಣದಲ್ಲಿ.

ಬಸ್ ನಿಲ್ದಾಣದಲ್ಲೇ ಓದುಮನೆಯಿದ್ದರೆ, ಪ್ರಯಾಣಿಕರು ಬಸ್ಸು ಬರುವವರೆಗಿನ ಸಮಯವನ್ನು ಕಳೆಯಲು ಶೆಲ್ಪ್ ಮೇಲಿರುವ ಪುಸ್ತಕದ ಕಡೆ ಕಣ್ಣು ಹಾಯಿಸಲು ಮುಜುಗರ ಪಡುವುದಿಲ್ಲ. ಅಲ್ಲೇ ಅವರಿಗೆ ಪುಸ್ತಕಗಳು ಕರೀದಿಗೆ ದೊರಕುವಂತಾದಲ್ಲಿ ಅದರ ಮಜಲೇ ಬೇರೆ. ಇಂತಹ ಆಲೋಚನೆ ಸುಳಿದಾಗ ಅದನ್ನು ಕಾರ‍್ಯರೂಪಕ್ಕೆ ತರಲು ಹಂಬಲಿಸಿದವರು ಅನೂಪ್ ಕನ್ನಾ. ಕಾಯುವ ಪ್ರಯಾಣಿಕರ ಮನಗೆಲ್ಲಲು ಅವರು ಮಾಡಿದ ಮೊದಲು ಕೆಲಸ ಗಣೇಶಗುರಿ ಬಸ್ ನಿಲ್ದಾಣದ ಪ್ರಮುಕ ಬಾಗದಲ್ಲಿ ‘ದ ವರ‍್ಲ್ಡ್ ಬಿಲಾಂಗ್ಸ್ ಟು ದೋಸ್ ಹು ರೀಡ್’ ಎಂದು ಆಂಗ್ಲ ಬಾಶೆಯ ದೊಡ್ಡ ಪ್ಲೆಕ್ಸ್ ಮಾಡಿಸಿ ಹಾಕಿದ್ದು. ಬಸ್ ನಿಲ್ದಾಣದಲ್ಲಿ ಸಣ್ಣ ಸಣ್ಣ ಕಪಾಟನ್ನು ಮಾಡಿಸಿ ಅದರಲ್ಲಿ 200 ರಿಂದ 250 ಪುಸ್ತಕ ಜೋಡಿಸಿದರು. ಬಣ್ಣದ ದೀಪಗಳಿಂದಾದ ಶ್ರುಂಗಾರ ಜನರ ಕುತೂಹಲವನ್ನು ಕೆರಳಿಸಿ ಮತ್ತೂ ಹೆಚ್ಚಾಗಿ ಆಕರ‍್ಶಿಸಿತು.

ಬ್ರಹ್ಮಪುತ್ರ ಲಿಟ್ರೇಚರ್ ಪೆಸ್ಟಿವಲ್‍ನಲ್ಲಿ ಸುಮಾರು 60 ವಿವಿದ ಹಾಗೂ ವಿಬಿನ್ನ ವಿಶಯಗಳ ಬಗ್ಗೆ ಚರ‍್ಚಾ ಗೋಶ್ಟಿಗಳು, ಪುಸ್ತಕ ಬಿಡುಗಡೆ ಸಮಾರಂಬ, ಸಾಂಸ್ಕ್ರುತಿಕ ಕಾರ‍್ಯಕ್ರಮ ಮತ್ತು ಪುಸ್ತಕ ಆದಾರಿತ ಚಲನಚಿತ್ರಗಳ ಪ್ರದರ‍್ಶನಗಳು ನಡೆದವು. ಈ ಸಮಯದಲ್ಲಿ ಬಸ್‍ ನಿಲ್ದಾಣದ ಪುಸ್ತಕ ಮಳಿಗೆ ಯುವ ಹಾಗೂ ಹಿರಿಯ ಬಹರಗಾರರಲ್ಲಿ ಸ್ರುಶ್ಟಿಸಿದ ಕುತೂಹಲ ಕನ್ನಾರವರನ್ನು ನಿಬ್ಬೆರಗಾಗಿಸಿತು.

ಬಸ್‍ ನಿಲ್ದಾಣದ ಓದುಮನೆಯಲ್ಲಿರುವ ಪುಸ್ತಕಗಳನ್ನು ತಮ್ಮ ಬಳಿಯಿರುವ ಯಾವುದಾದರೂ ಪುಸ್ತಕದ ಬದಲಿಯಾಗಿ ಪಡೆಯಬಹುದು. ಇದರ ಬಗ್ಗೆ ಕನ್ನಾ ನಗುತ್ತಾ ಹೇಳುವುದೇನೆಂದರೆ ‘ಒಬ್ಬ ಗ್ರುಹಿಣಿ ಈ ಓದುಮನೆಯಿಂದ ಪುಸ್ತಕವನ್ನು ಪಡೆಯಲು ಬದಲಿಯಾಗಿ ತನ್ನ ಬಳಿ ಇದ್ದ, ಪ್ರೆಶರ್ ಕುಕ್ಕರ್ ಜೊತೆ ಉಚಿತವಾಗಿ ನೀಡುವ ಅಡುಗೆಯ ಪುಸ್ತಕವನ್ನು ನೀಡಿದ್ದಳಂತೆ’ ಇದರಂತೆ ಅನೇಕ ಸಿಹಿ ಹಾಗೂ ಕಹಿ ಅನುಬವಗಳನ್ನು ಅವರು ಹಂಚಿಕೊಳ್ಳುತ್ತಾರೆ.

ಪುಸ್ತಕಗಳನ್ನು ಬದಲಿಯಾಗಿ ಪಡೆಯುವುದೊಂದು ವಿದವಾದರೆ, ಕೇವಲ ಒಂದು ರೂಪಾಯಿ ನೀಡಿ ಯಾವುದೇ ಪುಸ್ತಕವನ್ನು ಅಲ್ಲೇ ಓದುವ ವ್ಯವಸ್ತೆ ಸಹ ಮಾಡಲಾಗಿತ್ತು. ಇದರಿಂದ ಬಹಳಶ್ಟು ಜನ ಆಕರ‍್ಶಿತರಾಗಿದ್ದನ್ನು ಕನ್ನಾ ಸ್ಮರಿಸುತ್ತಾರೆ. ಇದರಿಂದ ಉತ್ತೇಜಿತರಾದಂತೆ ಕಂಡುಬಂದ ಕನ್ನಾ ತಮ್ಮ ಮುಂದಿನ ಯೋಜನೆಯ ರೂಪುರೇಶೆಗಳನ್ನು ಬಿಟ್ಟುಕೊಡಲಿಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ:  scoopwhoop.com, thenortheasttoday.com)Categories: ನಡೆ-ನುಡಿ

ಟ್ಯಾಗ್ ಗಳು:, , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s