ಕಜಕಿಸ್ತಾನದಲ್ಲಿವೆ ಹಾಡುವ ಮರಳಿನ ದಿಬ್ಬಗಳು!

– ಕೆ.ವಿ.ಶಶಿದರ.

ಕಜಕಿಸ್ತಾನದ ಅತ್ಯಂತ ಅತೀಂದ್ರಿಯ ಸ್ತಳಗಳಲ್ಲಿ ಹಾಡುವ ಮರಳಿನ ದಿಬ್ಬಗಳು (Singing dunes) ಕೂಡ ಒಂದು. ಐಲಿ ನದಿಯ ದಂಡೆಯ ಮೇಲಿರುವ ಈ ದಿಬ್ಬ ಮೂರು ಕಿಲೋಮೀಟರ್ ಉದ್ದವಿದ್ದು ಎರಡು ನೂರು ಮೀಟರ್ ಎತ್ತರವಿದೆ. ಕಜಕಿಸ್ತಾನದ ಆಲ್ಮಾಟಿ ಓಬ್ಲಾಸ್ಟ್ ನಲ್ಲಿರುವ ರಾಶ್ಟ್ರೀಯ ಉದ್ಯಾನವನ ಆಲ್ಟಯ್ನ್-ಎಮೆಲ್‍ನಲ್ಲಿ ಈ ಮರಳಿನ ದಿಬ್ಬವಿದ್ದು ಇದು ಆಲ್ಮಾಟಿಯಿಂದ ಈಶಾನ್ಯ ದಿಕ್ಕಿನೆಡೆ 182 ಕಿಲೋಮೀಟರ್ ದೂರದಲ್ಲಿದೆ.

ಜೆಟ್ ಇಂಜಿನ್‍ನಿಂದ ಹೊರಹೊಮ್ಮುವ ಗುಂಯ್ ಗುಡುವ ಶಬ್ದದಂತಹ ಅತವಾ ಬಾನ್ಗುಂಗಿಯ (Drone) ತಿರುಗಣೆಗಳು ಕಂಪಿಸುವ ಶಬ್ದದಂತಹ ದ್ವನಿ ಈ ದೈತ್ಯ ಮರಳು ದಿಬ್ಬಗಳಿಂದ ಹೊರಹೊಮ್ಮುತ್ತದೆ. ಸಣ್ಣದಾಗಿ ಆರಂಬವಾಗುವ ಈ ದ್ವನಿ ಕ್ರಮೇಣ ಸುತ್ತ ಮುತ್ತಲಿನ ನೆಲ ಕಂಪಿಸುವಶ್ಟು ಜೋರಾಗುತ್ತದೆ! ಈ ಶಬ್ದದ ಪ್ರಕರತೆ ಹಲವಾರು ಕಿ.ಮಿ.ದೂರದವರೆಗೂ ಆಲಿಸುವಶ್ಟಿರುತ್ತದೆ.

ಹುಲ್ಲುಗಾವಲಿನ ಮದ್ಯದಲ್ಲಿ ಮರಳಿನ ದಿಬ್ಬಗಳು ರೂಪುಗೊಂಡ ಬಗ್ಗೆ ಜಿಜ್ನಾಸೆಯಿದೆ. ಇರುವ ಮಾಹಿತಿ ಅಸ್ಪಶ್ಟ. ವಿಜ್ನಾನಿಗಳ ಪ್ರಕಾರ ಗಾಳಿ ಬೀಸಿದಾಗ ನದಿಯ ಕಣಿವೆಯಲ್ಲಿನ ಮರಳು ಸಂಗ್ರಹವಾಗಿ ಈ ದಿಬ್ಬದ ಹುಟ್ಟಿಗೆ ಕಾರಣವಾಗಿರಬಹುದು ಎಂಬುದು, ಆದರೆ ಇದಕ್ಕೆ ನಿರ‍್ದಿಶ್ಟ ಪುರಾವೆಗಳಿಲ್ಲ. ಈ ಮರಳಿನ ದಿಬ್ಬಗಳು ಹುಲ್ಲುಗಾವಲಿನಲ್ಲಿ ಚಲಿಸುತ್ತವೆ ಎನ್ನುತ್ತಾರೆ ನೆಲದರಿಗರು. ಇದಕ್ಕೆ ಯಾವುದೇ ವೈಜ್ನಾನಿಕ ಪುರಾವೆ ಇಲ್ಲ. ಇಲ್ಲಿನ ಹಿರಿಯರು ಚೆಂಗೀಸ್ ಕಾನ್‍ನ ಕಳೆಬರದ ಮೇಲೆ ಈ ಮರಳಿನ ದಿಬ್ಬವಿದೆ ಎಂದು ನಂಬಿದ್ದಾರೆ.

ಕಜಕಿಸ್ತಾನದ ಇತರೆ ದಾರ‍್ಮಿಕ ಪಂತೀಯರ ಪ್ರಕಾರ ಮರಳಿನ ದಿಬ್ಬ ಶೈತಾನನ ಅಡಗುತಾಣವಂತೆ. ದೇವರ ಕ್ರೋದದಿಂದ ತಪ್ಪಿಸಿಕೊಳ್ಳಲು ದಿಬ್ಬದ ಅಡಿಯಲ್ಲಿ ಶೈತಾನ್ ಹುದುಗಿಕೊಂಡಿತಂತೆ. ಮುಂದೆ ಎಶ್ಟೇ ಪ್ರಯತ್ನಪಟ್ಟರೂ ಹೊರಬರಲು ಸಾದ್ಯವಾಗಲಿಲ್ಲವಂತೆ. ಈಗಲೂ ಶೈತಾನ್ ಹೊರಬರುವ ಪ್ರಯತ್ನವನ್ನು ಪ್ರತಿ ರಾತ್ರಿಯೂ ಮಾಡುತ್ತಾನಂತೆ. ಹೂಂಕಾರ ಮಾಡುತ್ತಾ ತನ್ನ ಬಾಲವನ್ನು ಸೆಳೆದುಕೊಳ್ಳುತ್ತಾನಂತೆ.

ಮರಳಿನ ದಿಬ್ಬದ ದಕ್ಶಿಣ ಬಾಗವು ತೆಳ್ಳಗಿದೆ. ಹೊದಿಕೆ ಹೊದ್ದ ಬಾಲದಂತೆ ಕಾಣುವುದೇ ಈ ನಂಬಿಕೆಗೆ ಕಾರಣವಾಗಿರಬೇಕು. ತೆಳ್ಳಗಿರುವ ಕಾರಣ ದಿಬ್ಬದ ಈ ಬಾಗವು ಬಲವಾದ ಗಾಳಿ ಬೀಸಿದಾಗ ಗಾಳಿಯ ದಿಕ್ಕನ್ನು ಆದರಿಸಿ ಸ್ತಾನ ಬದಲಾಯಿಸುತ್ತದೆ. ಈ ವಿದ್ಯಮಾನವೇ ಶೈತಾನ್, ಬಾಲ ಮುಂತಾದವುಗಳ ಕಲ್ಪನೆಗೆ ಅವಕಾಶ ಮಾಡಿಕೊಟ್ಟಿರುವುದು.

ಕಜಕಿಸ್ತಾನದ ಹಾಡುವ ಮರಳಿನ ದಿಬ್ಬಗಳ ವಿದ್ಯಮಾನ ನೈಸರ‍್ಗಿಕವಾದದ್ದು. ಗಾಳಿಯ ತೇವಾಂಶವು ಒಂದು ನಿರ‍್ದಿಶ್ಟ ಮಟ್ಟದಲ್ಲಿದ್ದಾಗ ಮರಳ ದಿಬ್ಬವು ಬಾನ್ಗುಂಗಿಯ ತರಹದ ಶಬ್ದವನ್ನು ಹೊರಸೂಸುತ್ತದೆ. ಮರಳಿನ ಕಣಗಳು ಗುಂಡಾಗಿದ್ದು ಅದರೊಂದಿಗೆ ಸಿಲಿಕಾ ಇದ್ದಲ್ಲಿ ಬಾನ್ಗುಂಗಿಯ ತರಹದ ಶಬ್ದವನ್ನು ಹೊರಸೂಸುವುದನ್ನು ಯಾರು ಬೇಕಾದರೂ ಎಲ್ಲಿಯೂ ಕೇಳಬಹುದು ಎಂದು ವಿಜ್ನಾನಿಗಳು ಸಾಬೀತು ಪಡಿಸಿದ್ದಾರೆ. ಮರಳಿನ ದಿಬ್ಬಗಳು ಹಾಡುವ ಕಾರ‍್ಯವಿದಾನದ ಬಗ್ಗೆ ಹಲವಾರು ಸಿದ್ದಾಂತಗಳಿವೆ.

ಕಜಕಿಸ್ತಾನದಲ್ಲಿನ ಎಲ್ಲಾ ಪರ‍್ವತದ ಇಳಿಜಾರುಗಳೂ ಸಾಕ್ಸುಲ್ ಎಂಬ ವಿಶಿಶ್ಟವಾದ ಸಸ್ಯದ ಪೊದೆಗಳಿಂದ ಸುತ್ತುವರೆದಿದೆ. ಈ ಸಸ್ಯವನ್ನು ಹೊರತುಪಡಿಸಿದರೆ ಬೇರಾವುದೇ ಗಿಡ, ಬಳ್ಳಿ, ಮರ ಇಲ್ಲಿಲ್ಲ. ಅವಕಾಶವನ್ನು ಬಿಡದೆ ದಿಬ್ಬದ ಮೇಲಕ್ಕೆ ಹೋದಲ್ಲಿ ಶೈತಾನನ ಮೊರೆ ಆಲಿಸಬಹುದು!

(ಮಾಹಿತಿ ಸೆಲೆ: aboutkazakhstan.com, caravanistan.com, tripfreakz.com)
(ಚಿತ್ರ ಸೆಲೆ: aboutkazakhstan.com,)

1 ಅನಿಸಿಕೆ

  1. ನನ್ನಿ ತಿಳಿಸಿದ್ದಕ್ಕೆ . ದಿಟವಾಗಿಯೂ ಇದು ಒಂದು ಅಚ್ಚರಿ!!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.