ನಾನು ಕಿಡ್ನಾಪ್ ಆಗಿರುವೆ, ದಯವಿಟ್ಟು ಹುಡುಕಿಕೊಡಿ
– ಈಶ್ವರ ಹಡಪದ.
ಕಿಡ್ನಾಪ್ ಎಂದಾಕ್ಶಣ ಏನೆಲ್ಲಾ ಕಲ್ಪನೆಗಳಲ್ಲ ನಮ್ಮಲ್ಲಿ ಬರುತ್ತವಲ್ಲವೇ? ಹೌದು, ಹಳೇ ಚಲನಚಿತ್ರಗಳಲ್ಲಿ ಕಪ್ಪು ಮಾಸ್ಕ್ ಹಾಕಿಕೊಂಡು ಚಿಕ್ಕ ಮಕ್ಕಳನ್ನು, ನಾಯಕಿಯನ್ನು ಎತ್ತಿಕೊಂಡು ಹೋಗುವ ದ್ರುಶ್ಯಗಳೇ ಕಣ್ಮುಂದೆ ಬರುತ್ತವಲ್ಲಾ? ನಾನು ತಿಳಿದಿದ್ದೇ ಹಾಗೆ! ಕಿಡ್ನಾಪ್ ಅಂದ್ರೆ ಯಾರೋ ಒಬ್ಬ ಬಂದು, ಕುತ್ತಿಗೆಗೆ ಕತ್ತಿ ಇಟ್ಟು, ಓಮ್ನಿ ಕಾರ‍್‌ನಲ್ಲಿ ಎತ್ತಿಕೊಂಡು ಹೋಗುವುದೆಂದು. ಚಿಕ್ಕವನಿದ್ದಾಗ ಓಮ್ನಿ ಕಾರ್ ಕಂಡು ಅಂಜಿ ಓಡಿಹೋಗಿದ್ದೂ ಆಗಿದೆ. ಅದೆಲ್ಲ ಆವಾಗ ಬಿಡಿ. ಈಗ ಹೇಳ್ತಿರೋದು ಕಿಡ್ನಾಪ್ ಆಗಿರುವೆ ವಾಸ್ತವದಲ್ಲಿ ಎಂದು. ನೀನೆಲ್ಲಿ ಕಿಡ್ನಾಪ್ ಆಗಿರುವೆ ಅಂತ ಕೇಳ್ತಿದೀರಾ? ನಾನಿಲ್ಲಿ ಹೇಳುತ್ತಿರುವುದು ದೈಹಿಕವಾಗಿ ಕಿಡ್ನಾಪ್ ಆಗಿಲ್ಲ, ಮಾನಸಿಕವಾಗಿ ಕಿಡ್ನಾಪ್ ಆಗಿರುವೆ ಎಂದು.
ಇದೇನಪ್ಪ ಕಿಡ್ನಾಪ್ ಅಲ್ಲೂ ಎರಡು ತರಾ ಅಂತಿದೀರಾ? ಹೂಂ ನಿಜ, ಯಾರೋ ಒಬ್ಬ ದುಡ್ಡಿನ ಆಸೆಗಾಗಿ ಅತವಾ ಇನ್ನೇನಕ್ಕೋ ಮನುಶ್ಯರನ್ನ ಕಿಡ್ನಾಪ್ ಮಾಡೋದು ದೈಹಿಕವಾದ ಕಿಡ್ನಾಪ್ ಆದರೆ, ನಮ್ಮನ್ನು ನಾವೇ ಮರೆತು, ನಾವೇನಲ್ಲವೋ ಅದನ್ನ ಪ್ರಪಂಚಕ್ಕೆ ತೋರಿಸಿ, ನಮ್ಮ ಮನಸಿನ ಕುಶಿ ಮುಚ್ಚಿಟ್ಟು, ನಾವೇ ಬೇರೆಯವರಾಗಿ ಬದುಕಿ ಮತ್ತೆ ನಮಗೆ ನಾವೇ ಸಿಗಲು ಹಪಹಪಿಸೋದು. ಇದು ಮಾನಸಿಕ ಕಿಡ್ನಾಪ್ ಅಲ್ಲದೆ ಮತ್ತೇನು ನೀವೇ ಹೇಳಿ…?
ಹೌದು, ಬದುಕಲ್ಲಿ ಏನನ್ನೋ ಸಾದಿಸಲು ಹೋಗಿ ಅಲ್ಲಿ ಬರುವ ಸಮಸ್ಯೆಗಳನ್ನೂ ಎದುರಿಸಲು ನಾವು ನಂಬಿರೋ ಸಿದ್ದಾಂತವನ್ನು ಬದಿಗೂತ್ತಿ, ಆ ಗುರಿಯನ್ನು ಸಾದಿಸಿದಾಗ ಆಗುವ ಕುಶಿಗಿಂತ, ನಂಬಿರೋ ಸಿದ್ದಾಂತವನ್ನೇ ಮರೆತೆ ಎನ್ನುವ ನೋವು ಕಾಡದೆಯೇ ಇರದು. ಎಲ್ಲರೂ ಹೇಳ್ತಾರೆ ‘Everything is fair in love and war’ ಅಂತ. ಸುಳ್ಳು ಹೇಳಿ ಯುದ್ದ ಗೆಲ್ಲಬಹುದು, ಆದರೆ ಆ ಸುಳ್ಳನ್ನೇ ನಮ್ಮ ಮನಸ್ಸಿಗೆ ಒಪ್ಪುವಂತೆ ತಿಳಿಹೇಳಲು ಆಗದು. ನನಗೆ ಇಂತ ವಿಶಯದಲ್ಲಿ ಗೊಮ್ಮಟೇಶ್ವರ ಒಬ್ಬ ತುಂಬಾ ಇಶ್ಟ. ತಮ್ಮನ ಮೇಲೆ ಯುದ್ದ ಗೆದ್ದಮೇಲೂ ತನ್ನ ಮನಸ್ಸು ಹೇಳಿದ್ದನ್ನ ಅನುಸರಿಸಿ ತಾನು ಮಾಡಿದ್ದು ತಪ್ಪೆಂದು ರಾಜ್ಯವನ್ನು ಬಿಟ್ಟು ಜೈನ ಸನ್ಯಾಸಿಯಾದದ್ದು ನಮಗೆ ಗೊತ್ತೇ ಇದೆ. ಈಗಿನ ದಿನದಲ್ಲಿ ಆ ತರ ಮನಸ್ಸು ಹೇಳಿದ್ದನ್ನು ಕೇಳುವ ಜನ ಸಿಗೋದು ತುಂಬಾ ವಿರಳ.
ಇತ್ತೀಚಿನ ದಿನಗಳಂತೂ ಅಂತರ‍್ಜಾಲ ಅನ್ನೋ ಮಾಯಾಜಗತ್ತು ಒಬ್ಬಂಟಿಯಾಗಿ ನಗೋದನ್ನು, ಒಬ್ಬಂಟಿಯಾಗಿ ಆಡುವುದನ್ನು ಕಲಿಸಿಕೊಟ್ಟಿದೆ. ಸಂಬಂದಗಳೆಂದರೆ ಪೇಸ್ಬುಕ್, ಇನ್ಸ್ಟಾಗ್ರಾಮ್‌ಗಳಲ್ಲಿ ಹಾಕುವ ಚಿತ್ರಗಳನ್ನು ಲೈಕ್ ಮಾಡುವುದು ಎನ್ನುವಂತಾಗಿದೆ. ನಾವು ಎಶ್ಟೇ ಮುಂದುವರೆದರೂ ಚಿಕ್ಕವರಿದ್ದಾಗ ಅಜ್ಜ-ಅಜ್ಜಿ ಮನೆಯಲ್ಲಿ ಬೇಸಿಗೆ ರಜೆಗೆಂದು ಹೋಗಿದ್ದ ನೆನಪು ಇನ್ನೂ ಅಚ್ಚುಮೆಚ್ಚು. ಆ ನಿಸರ‍್ಗ, ಬೆಳಗೆದ್ದಾಗ ನೋಡಲು ಸಿಗುತ್ತಿದ್ದ ಮಂಜಿನ ದಿಬ್ಬಗಳು, ಪಕ್ಶಿಗಳು, ಗೆಳೆಯರು ಮತ್ತೆ ಆ ಬದುಕು ಸಿಗಬೇಕು ಎಂದು ಅನಿಸದೇ ಇರದು.
ಗುರಿಯನ್ನು ಬೆನ್ನಟ್ಟುವ ಬರದಲ್ಲಿ, ಯಾರನ್ನೋ ಇಂಪ್ರೆಸ್ ಮಾಡುವುದರಲ್ಲಿ, ನಮ್ಮ ಗೆಳೆಯರನ್ನೇ ಗೆಲ್ಲುವ ಚಲದಲ್ಲಿ, ಈ ಇಂಟರ್‌ನೆಟ್ಅನ್ನೋ ಮಾಯಾಜಗತ್ತಿನಲ್ಲಿ ನಮ್ಮ ಅಸಲಿ ಮನಸ್ಸು ಕಿಡ್ನಾಪ್ ಆಗಿದೆಯೆಂದರೆ ಅತಿಶಯೋಕ್ತಿ ಏನಲ್ಲಾ.
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು