ಜೀರುಂಡೆಗಳ ಬಗ್ಗೆ ಗೊತ್ತಿರದ ಕೆಲವು ಸಂಗತಿಗಳು

– ನಾಗರಾಜ್ ಬದ್ರಾ.

ಊಸರವಳ್ಳಿಯು ವೈರಿಯಿಂದ ತಪ್ಪಿಸಿಕೊಳ್ಳಲು ತನ್ನ ಮೈ ಬಣ್ಣವನ್ನೇ ಬದಲಿಸಿ ನುಣುಚಿಕೊಳ್ಳುತ್ತದೆ. ತನ್ನನ್ನು ತಿನ್ನಲು ಬರುವ ಹಕ್ಕಿಗಳನ್ನು ಕಂಡಕೂಡಲೇ ಕಂಬಳಿಹುಳವು ಮೈ ಮೇಲಿನ ತೇಪೆಗಳಿಂದ ಸೋಗಿನ ಕಣ್ಣುಗಳನ್ನು ರೂಪಿಸಿ ಮರಿಹಾವಿನ ಹಾಗೆ ಬದಲಾಗಿ ತಪ್ಪಿಸಿಕೊಳ್ಳುತ್ತದೆ. ಚಿಪ್ಪುಹಂದಿಯು ಮೈಯನ್ನು ಚೆಂಡಿನ ಆಕಾರದಂತೆ ಸುರುಳಿ ಸುತ್ತಿಕೊಂಡು ಬೇಟೆಗೆ ಹೆಸರುವಾಸಿಯಾದ ಹುಲಿಯನ್ನೇ ಯಾಮರಿಸುತ್ತದೆ. ಹೀಗೆ ಈ ನೆಲದಲ್ಲಿ ಒಂದೊಂದು ಉಸಿರಿಯು ಅಪಾಯದ ಹೊತ್ತಿನಲ್ಲಿ ತನ್ನನ್ನು ಕಾಪಾಡಿಕೊಳ್ಳಲು ತನ್ನದೇ ಆದ ಏರ‍್ಪಾಡುಗಳನ್ನು ಹೊಂದಿರುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ಜೀರುಂಡೆಗಳು (ರೆಕ್ಕೆಹುಳು, ಬಂಗಾರದ ಹುಳು ಎಂದೂ ಕರೆಯುತ್ತಾರೆ) ಕೂಡ ಇಂತಹುದೇ ಕೆಲವೊಂದು ಏರ‍್ಪಾಡುಗಳನ್ನು ಹೊಂದಿವೆ!

ಜೀರುಂಡೆಗಳು ಅಪಾಯದ ಹೊತ್ತಿನಲ್ಲಿ ಮೈಯಿಂದ ಹರಿವಣಿ (liquid) ರೂಪದಲ್ಲಿರುವ ನಂಜನ್ನು ಹೊರಹಾಕುತ್ತವೆ. ಇದು ಹಳದಿ ಬಣ್ಣದಲ್ಲಿದ್ದು ಅವುಗಳ ಕಾಲುಗಳ ಸಂದಿನಿಂದ ಬಿಡುಗಡೆಯಾಗುತ್ತದೆ. ಈ ಹರಿವಣಿ ತುಂಬಾ ಹೊಲಸು ವಾಸನೆಯಿಂದ ಕೂಡಿರುವುದರಿಂದ ಇವನ್ನು ಬೇಟೆಯಾಡಲು ಬಂದ ಉಸಿರಿಗಳು ವಾಸನೆಯನ್ನು ತಡೆದುಕೊಳ್ಳಲಾಗದೆ ದೂರ ಹೋಗುತ್ತವೆ. ಇವುಗಳ ಮರಿಹುಳುಗಳು (larva) ಕೂಡ ಅಪಾಯದ ಸಮಯದಲ್ಲಿ ಹೊಟ್ಟೆಯಿಂದ ಕೆಟ್ಟ ವಾಸನೆಯ ಹರಿವಣಿಯನ್ನು ಹೊರಹಾಕುತ್ತವೆ.

ಕೆಲವೊಂದು ಬಾರಿ ಅಪಾಯದ ಹೊತ್ತಿನಲ್ಲಿ ಇವುಗಳು ಮೇಲಿಂದ ನೆಲಕ್ಕೆ ಬಿದ್ದು ಸತ್ತಂತೆಯೂ ನಟಿಸುತ್ತವೆ.

ಸಾಮಾನ್ಯವಾಗಿ ಪರಿಸರದಲ್ಲಿ ಕೆಂಪು ಹಾಗೂ ಕಪ್ಪು ಬಣ್ಣಗಳನ್ನು ಎಚ್ಚರಿಕೆಯ ಸಂದೇಶಗಳಂತೆ ನೋಡಲಾಗುತ್ತದೆ, ಹಾಗೂ ಈ ಬಣ್ಣದ ಗಿಡ ಹಾಗೂ ಉಸಿರಿಗಳನ್ನು ತಿನ್ನಲು ಒಗ್ಗದವು ಎಂದು ನಂಬಲಾಗುತ್ತದೆ. ಆದ್ದರಿಂದ ಬೇಟೆಯಾಡಲು ಬಂದ ಉಸಿರಿಗಳು ಜೀರುಂಡೆಯ ಕಪ್ಪು ಚುಕ್ಕೆಗಳಿಂದ ಕೂಡಿದ ಕೆಂಪು ಮೈ ಬಣ್ಣವನ್ನು ಕಂಡಕೂಡಲೇ ಇದು ತಿನ್ನಲು ಆಗದ್ದು ಎಂದು ದೂರ ಹೋಗುತ್ತವೆ. ಇದು ಕೂಡ ಜೀರುಂಡೆಗಳಿಗೆ ತನ್ನನ್ನು ಕಾಪಾಡಿಕೊಳ್ಳಲು ಇರುವ ಒಂದು ದಾರಿ.

ರೈತರ ಗೆಳೆಯ!

ರೈತರಿಗೆ ದೊಡ್ಡ ತಲೆ ನೋವು ಎಂದರೆ ಅವರು ಬೆಳೆದ ಪಯಿರನ್ನು ಹಾಳು ಮಾಡುವ ಗಿಡಹೇನು (aphids), ಬಿಳಿಯ ನೊಣ (white flies) ಮುಂತಾದ ಹುಳುಗಳು. ಜೀರುಂಡೆಗಳು ಇಂತಹ ಹುಳುಗಳನ್ನು ತಿನ್ನುವುದರ ಮೂಲಕ ರೈತರಿಗೆ ನೆರವಾಗುತ್ತವೆ. ಒಂದು ವಯಸ್ಕ ಜೀರುಂಡೆಯು ದಿನಕ್ಕೆ 50 ಗಿಡಹೇನುಗಳನ್ನು ತಿನ್ನುತ್ತದೆ, ಅದು ತನ್ನ ಜೀವಿತಾವದಿಯಲ್ಲಿ ಸುಮಾರು 5,000 ಗಿಡಹೇನುಗಳನ್ನು ತಿನ್ನಬಹುದು ಎಂದು ಹೇಳಲಾಗುತ್ತದೆ.

ಹಾಗೆಯೇ ಇವು ತಮ್ಮ ಕಾಲೋನಿಯಲ್ಲಿ ನೂರಾರು ಮೊಟ್ಟೆಗಳನ್ನು ಹಾಕುತ್ತವೆ. ಈ ಮೊಟ್ಟೆಗಳಿಂದ ಹೊರಬರುವ ಮರಿಹುಳುಗಳು ಕೂಡ ಗಿಡಹೇನು ಮುಂತಾದವುಗಳನ್ನು ತಿನ್ನುತ್ತವೆ. ಆದ್ದರಿಂದ ಇವುಗಳನ್ನು ರೈತರ ಗೆಳೆಯ ಎಂದು ಕರೆಯಲಾಗುತ್ತದೆ.

ಕ್ಯಾಲಿಪೋರ‍್ನಿಯಾದಲ್ಲಿ ಹಲವಾರು ವರ‍್ಶಗಳ ಹಿಂದೆ ಅಲ್ಲಿನ ರೈತರು ಬೆಳೆದ ಹತ್ತಿಯು ಹುಳುಗಳ ಕಾಟದಿಂದ ಹಾಳಾಗಿ ಹೋಗಿತ್ತು. ಇದರಿಂದಾಗಿ ಹತ್ತಿಯನ್ನು ಆದರಿಸಿದ್ದ ಉದ್ದಿಮೆಯೂ ಕೂಡ ತುಂಬಾ ನಶ್ಟಕ್ಕೆ ತುತ್ತಾಗಿತ್ತು. ಈ ಹುಳುಗಳ ಕಾಟವನ್ನು ತಡೆಯಲು ಏನು ಮಾಡಬೇಕೆಂದು ಯೋಚಿಸಿ ಅಲ್ಲಿನ ಜನರು ತುಂಬಾ ತಲೆಕೆಡಿಸಿಕೊಂಡಿದ್ದರು. ಆ ಹೊತ್ತಿನಲ್ಲಿ ಅವರಿಗೆ ಉಪಾಯವೊಂದು ಹೊಳೆಯಿತು, ಅದೇ ಹುಳುಗಳನ್ನು ತಿನ್ನುವ ರೋಡಾಲಿಯಾ ಕಾರ‍್ಡಿನಾಲಿಸ್ ಜಾತಿಯ ಜೀರುಂಡೆಗಳನ್ನು ಆಸ್ಟ್ರೇಲಿಯಾದಿಂದ ತರಿಸಿಕೊಂಡರು. ಜೀರುಂಡೆಗಳನ್ನು ತರಿಸಿ ಹತ್ತಿ ಬೆಳೆಯುವ ಜಾಗಗಳಲ್ಲಿ ಸಾಕಣೆಮಾಡಿದ ಬಳಿಕ ಹುಳುಗಳ ಸಮಸ್ಯೆಯು ಬಗೆಹರಿದಿತ್ತು.

ಜೀರುಂಡೆಗಳು ಒಂದು ವರ‍್ಶದ ವರೆಗೂ ಬದುಕುತ್ತವೆ. ಆದರೆ ಏಶಿಯನ್ ಜೀರುಂಡೆಗಳು (Asian Lady Beetle) ತಮಗೆ ಬದುಕಲು ಅನುಕೂಲಕರವಾದ ಪರಿಸರದಲ್ಲಿ ಸುಮಾರು 2 – 3 ವರುಶದವರೆಗೂ ಬದುಕುತ್ತವೆ ಎಂದು ಹೇಳಲಾಗುತ್ತದೆ.

ಮತ್ತಶ್ಟು ಸಂಗತಿಗಳು!

• ಜೀರುಂಡೆಗಳು ಬೆಳಗಿನ ಹೊತ್ತಿನಲ್ಲಿ ಹುರುಪಿನಿಂದಿದ್ದರೆ, ಇರುಳಲ್ಲಿ ಗಾಡವಾದ ನಿದ್ದೆಗೆ ಜಾರಿರುತ್ತವೆ. ಈ ಹೊತ್ತಿನಲ್ಲಿ ತಮ್ಮ ಸುತ್ತಮುತ್ತಲಿನ ಯಾವುದೇ ವಿಶಯಗಳಿಗೂ ಇವು ಸ್ಪಂದಿಸುವುದಿಲ್ಲ.

• ಜಗತ್ತಿನಾದ್ಯಂತ ಸುಮಾರು 5000 ಜಾತಿಯ ಜೀರುಂಡೆಗಳಿದ್ದು, ಎಲ್ಲವೂ ಕಪ್ಪು ಚುಕ್ಕೆಗಳೊಂದಿಗೆ ಕೆಂಪು ಮೈ ಬಣ್ಣವನ್ನು ಹೊಂದಿಲ್ಲ. ಕೆಲವೊಂದು ಜಾತಿಯವು ಹಳದಿ, ಕಿತ್ತಳೆ, ಕಂದು, ಗುಲಾಬಿ ಹಾಗೂ ಕಪ್ಪು ಮೈ ಬಣ್ಣವನ್ನು ಕೂಡ ಹೊಂದಿವೆ.

• ಸಾಮಾನ್ಯವಾಗಿ ಮೇ ತಿಂಗಳಿನಿಂದ ಜೂನ್‍ ಹೊತ್ತಿನಲ್ಲಿ ಗಂಡು ಹಾಗೂ ಹೆಣ್ಣು ಜೀರುಂಡೆಗಳು ಒಂದಾಗುತ್ತವೆ. ಈ ಹೊತ್ತಿನಲ್ಲಿ ಹೆಣ್ಣು ಜೀರುಂಡೆಯು ಸುಮಾರು 2000 ಮೊಟ್ಟೆಗಳನ್ನು ಇಡುವುದು.

• ಇವುಗಳ ಬಣ್ಣಬಣ್ಣದ ಗುಮ್ಮಟಾಕಾರದ ಬೆನ್ನು ವಿಶೇಶವಾದ ರೆಕ್ಕೆಗಳಿಂದ ತಯಾರಿಸಲ್ಪಟ್ಟಿದ್ದು, ಇದು ಗಟ್ಟಿಯಾದ ಹೊದಿಕೆಯ ಹಾಗೆ ಕೆಲಸ ಮಾಡುತ್ತದೆ. ಹಾರಾಟದ ಹೊತ್ತಿನಲ್ಲಿ ಬೆನ್ನನ್ನು ಎತ್ತಿ ಹಿಡಿದು, ಬೆನ್ನಿನ ಕೆಳ ಬಾಗದಲ್ಲಿರುವ ತೆಳುವಾದ ಮತ್ತೊಂದು ಜೋಡಿ ರೆಕ್ಕೆಗಳನ್ನು ಬಳಸಿ ಹಾರಾಡುತ್ತವೆ.

• ಜೀರಂಡೆಗಳು ಹಾರಾಡುವಾಗ ಒಂದು ನಿಮಿಶಕ್ಕೆ ಸುಮಾರು 5100 ಬಾರಿ ರೆಕ್ಕೆಗಳನ್ನು ಬಡಿಯುತ್ತವೆ. ಅಂದರೆ ಒಂದು ಸೆಕೆಂಡಿಗೆ ಸುಮಾರು 85 ಬಾರಿ ರೆಕ್ಕೆಗಳನ್ನು ಬಡಿಯಬಹುದು ಎಂದು ಹೇಳಲಾಗುತ್ತದೆ. ಇವುಗಳು ಗಂಟೆಗೆ ಸುಮಾರು 13 ಮೈಲಿ ವೇಗದಲ್ಲಿ ಹಾರಾಡುತ್ತವೆ.

• ಜೀರುಂಡೆಗಳ ದವಡೆ ಹಲ್ಲುಗಳು ಮನುಶ್ಯರಂತೆ ಮೇಲೆ ಕೆಳಗೆ ಅಗಿಯುವುದಿಲ್ಲ, ಬದಲಿಗೆ ಅವುಗಳು ಒಂದು ಬದಿಯಿಂದ ಇನ್ನೊಂದು ಬದಿಗೆ ಅಗಿಯುತ್ತವೆ.

• ತಮ್ಮ ಕಾಲು ಹಾಗೂ ಅರಿವುಕಗಳಿಂದ (antennae) ಜೀರುಂಡೆಗಳು ವಾಸನೆಯನ್ನು ಕಂಡುಹಿಡಿಯುತ್ತವೆ.

(ಮಾಹಿತಿ ಸೆಲೆ: wiki/Defense_in_insects, sites.google.comwiki/Coccinellidae , todayifoundout.comlovethegarden.comlostladybug.org , pestwiki.com ,  list25.com)
(ಚಿತ್ರ ಸೆಲೆ: thinglink.com, pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: