ಮನೋವಲ್ಲಬೆಯರ ಪ್ರಿಯ ಮಾದವ

– ವಿನು ರವಿ.

ಕ್ರುಶ್ಣ, ರಾದೆ, ಬಾಮೆ, ಪಾರಿಜಾತದ ಹೂವು

ಮಾದವನ ಕೈ ತುಂಬಾ
ಮುದ್ದಾಗಿ ಅರಳಿ
ಕಂಪು ಸೂಸುತ್ತಾ
ಹಾಲಿನಲ್ಲಿ ಕೇಸರಿ
ಸೇರಿದಂತೆ ಬಿರಿದ
ಮ್ರುದು ಕೋಮಲ
ಪಾರಿಜಾತ ಹೂಗಳು

ತಂಗಾಳಿಯಲಿ ತೇಲಿ
ಬಂದ ಹೂ ನರುಗಂಪಿಗೆ
ಓಡೋಡಿ ಬಂದರು
ಬಾಮೆ ರುಕ್ಮಿಣಿಯರು

ಅದರ ಚೆಲುವಿಗೆ ಮೈಮರೆತು
ನನಗೇ ಮುಡಿಸುವ
ಮಾದವನೆಂದು
ಒಲವಿನಿಂದ ಕಾತರಿಸಿದರು

ಬೊಗಸೆ ತುಂಬಿದಾ
ಹೂವೆಲ್ಲಾ ರುಕ್ಮಿಣಿಯ
ಮಡಿಲೊಳಗೆ ಸುರಿದಾ
ಮಾದವನ ಕಂಡು
ಕಡು ಮುನಿಸು ತೋರಿದಾ
ಬಾಮೆಗೆ ದೇವಲೋಕದ
ಪಾರಿಜಾತ ಮರವನ್ನೇ
ವರವಾಗಿ ಕರುಣಿಸಿದಾ ಕೇಶವ

ತಮ್ಮೊಲವೆಲ್ಲಾ ಈ
ಸುಂದರ ಹೂವಿಗೆ
ಮೀಸಲಾಗಿಸಿ ಹೊರಟೇ
ಬಿಟ್ಟರು ವಾಸುದೇವನ
ಮನದೊಡತಿಯರು

ಅದೇಕೊ ವಿಶಾದದಿ
ನಿಂತ ಮದುಸೂದನನ
ಮನದೊಳಗೆ ಹಳೆನೆನಪುಗಳ
ನವಿಲುಗರಿಯು ಮೆಲುವಾಗಿ
ಮನವ ಸವರಿತು

ಪ್ರಿಯಸಕಿ ಚೆಲುವಿನರಸಿ
ರಾದೆಯ ಹೂ ನಗೆ
ಕಣ್ಮುಂದೆ ಮಿಂಚಲು
ಹ್ರುದಯದೊಡತಿಯಾಗಿ
ಕೊಳಲದನಿಯಾಗಿ
ಒಲವ ದಾರೆ ಸುರಿಸಿದಾ
ಪ್ರೇಮಸಕಿಯ ಕಣ್ಣತುಂಬಾ
ನೀಲಮೇಗ ಶ್ಯಾಮನದೇ
ಪ್ರತಿಬಿಂಬ

ಪಾರಿಜಾತಕ್ಕಾಗಿ
ಕ್ರಿಶ್ಣನನ್ನೇ ಮರೆತು
ಹೊರಟ ಮನೋ
ವಲ್ಲಬೆಯರ ಮುಂದೆ
ಪ್ರಿಯ ಮಾದವನಲ್ಲದೇ
ಬೇರೇನೂ ಒಲ್ಲೆನೆನುವಾ
ರಾದೆಯ ನಿಜ ಒಲವ
ನೆನೆದ ಮದುಸೂದನ
ಕಣ್ತುಂಬಿ ನಿಂತ

(ಚಿತ್ರ ಸೆಲೆ: vardhmanvacations.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: