ಜಾರ‍್ಜ್ ಸ್ಟಿನ್ನೀ – ಮರಣದಂಡನೆಗೆ ಗುರಿಯಾದ ಅತ್ಯಂತ ಕಿರಿಯ

– ಕೆ.ವಿ.ಶಶಿದರ.

ಜಾರ‍್ಜ್ ಸ್ಟಿನ್ನೀ

ಯುನೈಟೆಡ್ ಸ್ಟೇಟ್ಸ್ ಆಪ್ ಅಮೇರಿಕಾದಲ್ಲಿ ಮರಣದಂಡನೆಗೆ ಗುರಿಯಾಗಿ ಎಲೆಕ್ಟ್ರೋಕ್ಯೂಶನ್ ಮೂಲಕ ಪ್ರಾಣ ತೆತ್ತ ಅತ್ಯಂತ ಕಿರಿಯ ಎಂದರೆ ಜಾರ‍್ಜ್ ಸ್ಟಿನ್ನೀ. ಮರಣದಂಡನೆಗೆ ಗುರಿಯಾಗಲು ಈತ ಎಸಗಿದ ಗೋರ ಅಪರಾದ ಎಂದರೆ ಜೋಡಿ ಕೊಲೆ (ಪ್ರಾಸಿಕ್ಯೂಶನ್ ಪ್ರಕಾರ). ಈ ಹದಿಹರೆಯದ ಬಾಲಕನನ್ನು ಎಲೆಕ್ಟ್ರೋಕ್ಯೂಶನ್‍ಗೆ ಗುರಿಪಡಿಸಿದಾಗ ಅವನ ವಯಸ್ಸು ಕೇವಲ 14 ವರುಶ. ಜೂನ್ 16, 1944ರಂದು ವಿದ್ಯುತ್ ಕುರ‍್ಚಿಯಲ್ಲಿ ಕುಳ್ಳಿರಿಸಿ ಸ್ಟಿನ್ನೀಯನ್ನು ಮರಣದಂಡನೆಗೆ ಗುರಿಪಡಿಸಲಾಯಿತು.

ಇಶ್ಟು ಚಿಕ್ಕ ವಯಸ್ಸಿನಲ್ಲಿ ಕೊಲೆ ಮಾಡುವಂತಹ ಸಂದಿಗ್ದ ಪರಿಸ್ತಿತಿ ಎದುರಾಗಿದ್ದಾದರೂ ಹೇಗೆ?

ಅಂದು ಮಾರ‍್ಚ್ 24, 1944. ಹನ್ನೊಂದು ವರುಶದ ಬೆಟ್ಟಿ ಜೂನ್ ಬಿನ್ನಿಕರ್ ಮತ್ತು ಏಳು ವರುಶದ ಎಮ್ಮಾ ತೇಮ್ಸ್ ಎಂಬ ಇಬ್ಬರು ಮೇಪಾಪ್ಸ್ ಹಣ್ಣುಗಳನ್ನು ಹುಡುಕುತ್ತಾ ಮೈದಾನದಲ್ಲಿ ಹೊರಟಿದ್ದರು. ಹಾದಿಯಲ್ಲಿ ಅವರಿಗೆ ಅಡ್ಡವಾಗಿದ್ದು ಜಾರ‍್ಜ್ ಸ್ಟಿನ್ನೀ ಹಾಗೂ ಅವನ ಸಹೋದರಿ ಏಮೀ.

‘ಮೇಪಾಪ್ಸ್ ಎಲ್ಲಿ ಸಿಗುತ್ತದೆ?’ ಎಂದು ಬೆಟ್ಟಿ ಹಾಗೂ ಎಮ್ಮಾ ಇವರನ್ನು ಪ್ರಶ್ನಿಸಿದರು. ಅದರ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಕಾರಣ ಜಾರ‍್ಜ್ ಹಾಗೂ ಏಮೀ ತಮಗೆ ತಿಳಿದಿಲ್ಲ ಎಂದು ಹೇಳುತ್ತಾ ತಮ್ಮ ಪಾಡಿಗೆ ತಾವು ಹೋದರು. ಬೆಟ್ಟಿ ಹಾಗೂ ಎಮ್ಮಾ ಮೇಪಾಪ್ಸ್ ಗಳನ್ನು ಅರಸುತ್ತಾ ತಮ್ಮ ದಾರಿಯತ್ತ ಸಾಗಿದರು. ಮಾರನೆಯ ದಿನ ಮೇಪಾಪ್ಸ್ ಹುಡುಕುತ್ತಾ ಹೋಗಿದ್ದ ಬೆಟ್ಟಿ ಹಾಗೂ ಎಮ್ಮಾರ ಮ್ರುತ ದೇಹಗಳು ಕೆಸರಿನ ಕೊಳ್ಳದಲ್ಲಿ ಕಂಡುಬಂದಿತು. ತಲೆ ಮತ್ತು ಮುಕಕ್ಕೆ ಮೊಂಡು ಆಯುದದಿಂದ ಬಿದ್ದ ಬಲವಾದ ಹೊಡೆತ ಹಾಗೂ ಆಗಾತಕ್ಕೆ ಆ ಪುಟ್ಟ ಮಕ್ಕಳಿಬ್ಬರೂ ಬಲಿಯಾಗಿದ್ದು ಮರಣೋತ್ತರ ಪರೀಕ್ಶೆಗಳ ನಂತರ ದ್ರುಡಪಟ್ಟಿತು.

ಈ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿದ ಸಂಶಯದ ಮೇಲೆ ಜಾರ‍್ಜ್ ಸ್ಟಿನ್ನೀ ಮತ್ತು ಅವನ ಹಿರಿಯ ಸಹೋದರ ಜಾನಿಯನ್ನು ಅಪರಾದ ವಿಬಾಗದ ಪೋಲೀಸರು ಬಂದಿಸಿದರು. ಜಾರ‍್ಜ್ ಸ್ಟೀನ್ನೀಯನ್ನು ಮಾತ್ರ ಬಂದನದಲ್ಲೇ ಇರಿಸಿಕೊಂಡು, ಕಿಂಚಿತ್ತು ಪುರಾವೆ ಇಲ್ಲದ ಕಾರಣ ಜಾನಿಯನ್ನು ಬಂದನದಿಂದ ಬಿಡುಗಡೆ ಮಾಡಿದರು. ಜಾರ‍್ಜ್‍ಗೆ ಪೋಶಕರನ್ನು ಬೇಟಿಯಾಗಲೂ ಸಹ ಆನುಮತಿ ನಿರಾಕರಿಸಲಾಯಿತು.

ಜಾರ‍್ಜ್ ತನ್ನ ಶಾಲೆಯಲ್ಲಿ ಇತರ ಶಾಲಾ ಮಕ್ಕಳೊಂದಿಗಿನ ಮಾಡಿಕೊಂಡಿದ್ದ ಸಣ್ಣ ಪುಟ್ಟ ಗರ‍್ಶಣೆಯನ್ನು ಹಾಗೂ ಒಬ್ಬ ಮಹಿಳೆ ಹಾಗೂ ಆಕೆಯ ಗೆಳತಿಗೆ ಜಾರ‍್ಜ್ ಬೆದರಿಕೆ ಹಾಕಿದ್ದ ಕಾರಣ ಸಿಕ್ಕಿಬಿದ್ದು, ಬರೆದುಕೊಟ್ಟಿದ್ದ ತಪ್ಪೊಪ್ಪಿಗೆ ಪತ್ರವನ್ನು ಇವನ ವಿರುದ್ದ ಬಲವಾದ ಸಾಕ್ಶ್ಯವಾಗಿ ಆರೋಪವನ್ನು ಸಾಬೀತು ಪಡಿಸಲು ಪೋಲೀಸರು ಬಳಸಿಕೊಂಡರು.

ಜಾರ‍್ಜ್ ಸ್ಟಿನ್ನೀಯನ್ನು ಕೊಲೆ ಅಪರಾದದಲ್ಲಿ ಬಂದಿಸಿದ ಪರಿಣಾಮ ಅತನ ತಂದೆಯನ್ನು ಕೆಲಸದಿಂದ ವಜಾ ಮಾಡಲಾಯಿತು. ಆತನ ಉದ್ಯೋಗದಾತ ನೀಡಿದ್ದ ಮನೆಯಿಂದಲೂ ಸಹ ಅವನ ಕುಟುಂಬವನ್ನು ಹೊರಹಾಕಲಾಯಿತು. ಜಾರ‍್ಜ್‍ಗೆ ಯಾರ ಸಂಪರ‍್ಕವೂ ಇಲ್ಲದಂತೆ ಮಾಡಿ, ಅವನ ಪರವಾಗಿ ವಕಾಲತ್ತು ವಹಿಸಲು ಯಾರಿಗೂ ಅವಕಾಶ ನೀಡದೆ, ಏಕಾಂಗಿಯಾದ ಅವನನ್ನು ತೀವ್ರವಾಗಿ ಪ್ರಶ್ನಿಸಲಾಯಿತು. ಅವನಿತ್ತ ಉತ್ತರಗಳ ಆದಾರದ ಮೇಲೆ ಸ್ಟಿನ್ನೀಯನ್ನು ತಪ್ಪಿತಸ್ತ ಎಂದು ಗೋಶಿಸಿದರು. ತೀರ‍್ಪುಗಾರರು ಇದಕ್ಕೆ ತೆಗೆದುಕೊಂಡ ಅವದಿ ಕೇವಲ ಹತ್ತು ನಿಮಿಶ ಮಾತ್ರ.

ಜಾರ‍್ಜ್ ಹನ್ನೊಂದು ವರ‍್ಶದ ಬೆಟ್ಟಿ ಜೂನ್ ಬಿನ್ನಿಕರ್ ಮೇಲೆ ಬಲಾತ್ಕಾರ ಮಾಡಿ ಕೊಲೆ ಮಾಡಿದ್ದಾನೆ ಎಂಬುದು ಅವನ ಮೇಲೆ ಹೊರಿಸಿದ್ದ ಗೋರ ಅಪರಾದ. ಜಾರ‍್ಜ್ ಮಾಡಿದ ಈ ಅಪರಾದಕ್ಕೆ ಎಲೆಕ್ಟ್ರೋಕ್ಯೂಶನ್ ಮೂಲಕ ಪ್ರಾಣ ಹರಣ ಮಾಡುವ ತೀರ‍್ಪು ನೀಡಲಾಯಿತು. ಹದಿನಾಲ್ಕು ಹರೆಯದ ಜಾರ‍್ಜ್ ಸ್ಟಿನ್ನೀಯ ಎತ್ತರ ಐದು ಅಡಿ ಒಂದು ಅಂಗುಲ ಹಾಗೂ ತೂಕ 90 ಪೌಂಡ್. ಇವನು ತೀರಾ ಪೀಚಾಗಿದ್ದ ಕಾರಣ ಕುರ‍್ಚಿಯಲ್ಲಿನ ಎಲೆಕ್ಟ್ರೋಡ್‍ಗಳನ್ನು ಹೊಂದಿಸಲು ಹರಸಾಹಸಪಟ್ಟರು. ಎಲೆಕ್ಟ್ರೋಡ್‍ಗಳ ಮೂಲಕ ಹರಿದ ಬಾರೀ ಪ್ರಮಾಣದ ವಿದ್ಯುತ್‍ನ ಆಗಾತಕ್ಕೆ ಅಲ್ಲಾಡಿ ಹೋದ ರಬಸಕ್ಕೆ ಜಾರ‍್ಜ್‍ಗೆ ತೊಡಿಸಿದ್ದ ಮುಕವಾಡ ಸಹ ಕಳಚಿ ಬಿದ್ದಿತ್ತು. ಕೇವಲ ನಾಲ್ಕು ನಿಮಿಶಗಳಲ್ಲಿ ಜಾರ‍್ಜ್ ಹೆಣವಾಗಿದ್ದ.

ಇಬ್ಬರು ಹೆಣ್ಣು ಮಕ್ಕಳ ಕೊಲೆ ನಡೆಯತೆನ್ನಲಾದ ದಿನದಿಂದ ಎಂಬತ್ತಮೂರು ದಿನಗಳ ನಂತರ ಅಂದರೆ 1944ರ ಜೂನ್ 16ರಂದು ಸಂಜೆ 7.30ಕ್ಕೆ ಕೊಲಂಬಿಯಾದ ಕೇಂದ್ರ ತಿದ್ದುಪಡಿ ಸಂಸ್ತೆಯಲ್ಲಿ ಎಲೆಕ್ಟ್ರೋಕ್ಯೂಶನ್ ಮೂಲಕ ಜಾರ‍್ಜ್ ಸ್ಟಿನ್ನೀ ಸಾವನ್ನಪ್ಪಿದ್ದ.

70 ವರುಶಗಳ ಬಳಿಕ ಮರುಜೀವ ಪಡೆದ ಪ್ರಕರಣ!

ಜಾರ‍್ಜ್ ಸ್ಟಿನ್ನೀಯ ಒಡಹುಟ್ಟಿದವರು ವರ‍್ಶಗಳ ಕಾಲ ಕಲೆಹಾಕಿ ಒದಗಿಸಿದ ಹೊಸ ಹೊಸ ಪುರಾವೆಗಳ ಆದಾರದ ಮೇಲೆ ಈ ಪ್ರಕರಣವನ್ನು 2014ರಲ್ಲಿ ಮತ್ತೆ ತೆರೆಯಲಾಯಿತು. ಸ್ತಳೀಯ ಪಾದ್ರಿ ನೀಡಿದ ಪ್ರಮಾಣ ಪತ್ರ ಹಾಗೂ ತಮ್ಮ ಜೊತೆಗೆ ಜಾರ‍್ಜ್ ಇದ್ದ ಬಗ್ಗೆ ಸಹೋದರರು ನೀಡಿದ ದಾಕಲಾತಿಗಳ ಮೇಲೆ ಕೊಲೆಯಲ್ಲಿ ಜಾರ‍್ಜ್‍ನ ಪಾತ್ರವನ್ನು ಮರುಪ್ರಶ್ನಿಸಲಾಯಿತು. ಬದಲಾದ ಜನಾಂಗೀಯ ದೋರಣೆ ಈ ಪ್ರಕರಣವನ್ನು ಅತ್ಯಂತ ಜಾಗರೂಕವಾಗಿ ಪರಿಶೀಲಿಸುವಂತೆ ಮಾಡಿತು.

ಜಾರ‍್ಜ್‍ಗೆ ವಿದಿಸಿದ್ದ ಮರಣದಂಡನೆಯನ್ನು ಡಿಸೆಂಬರ್ 2014ರಲ್ಲಿ ನ್ಯಾಯಾದೀಶ ಕಾರ‍್ಮೆನ್ ಮುಲ್ಲೆನ್ ಅನೂರ‍್ಜಿತಗೊಳಿಸಿದರು. ಜಾರ‍್ಜ್ ಸ್ಟಿನ್ನೀ ನಿರ‍್ದೋಶಿ ಎಂದು ತೀರ‍್ಮಾನಿಸಿದರು. ಮರಣದಂಡನೆಗೆ ಒಳಗಾಗಿ ಎಲೆಕ್ಟ್ರೋಕ್ಯೂಶನ್ ಮೂಲಕ ಸಾವನ್ನಪ್ಪಿದ 70 ವರುಶಗಳ ನಂತರ ಜಾರ‍್ಜ್ ಸ್ಟಿನ್ನೀ ಕುಲಾಸೆಗೊಳಿಸಿದ್ದು ವಿಪರ‍್ಯಾಸವಲ್ಲವೆ?

ಎಲೆಕ್ಟ್ರೋಕ್ಯೂಟ್ ಆದ ಅಮೇರಿಕಾದ ಅತ್ಯಂತ ಕಿರಿಯ ಎಂಬ ಪಟ್ಟವೇನೋ ಜಾರ‍್ಜ್ ಸ್ಟಿನ್ನೀಗೆ ದೊರಕಿತು. ಅದು ಕ್ಯಾತಿಯೋ, ಕುಕ್ಯಾತಿಯೋ ಅಪಕ್ಯಾತಿಯೋ ಇತಿಹಾಸವೇ ನಿರ‍್ದರಿಸಬೇಕು.

(ಮಾಹಿತಿ ಸೆಲೆ: independent.co.uk, washingtonpost.comstorycorps.org)
(ಚಿತ್ರ ಸೆಲೆ:  wiki )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. gautham hegde says:

    ಓದಿ ಬೇಸರವಾಯಿತ್ತು.ಉತ್ತಮ ಬರವಣಿಗೆ

  2. ರವಿಚಂದ್ರ ಹರ್ತಿಕೋಟೆ says:

    ನಿರಪರಾದಿಗಳು ಶಿಕ್ಶೆಗೆ ಒಳಗಾಗಿ ಸಾವು ಕಾಣುವುದು ನೋವಿನ ಸಂಗತಿ. ಸಮಾಜದಲ್ಲಿ ಒಬ್ಬಂಟಿಗರನ್ನ ಶಿಕ್ಶಿಸುವುದು ಇನ್ನೂ ನಿಂತಿಲ್ಲ.

ಅನಿಸಿಕೆ ಬರೆಯಿರಿ:

Enable Notifications