ನೀವು ನೋಡಲೇಬೇಕಾದ ಕನ್ನಡದ 10 ಕಿರುಚಿತ್ರಗಳು!

– ನರೇಶ್ ಬಟ್.

ಕಿರುಚಿತ್ರ, Short Film

ಕನ್ನಡದಲ್ಲಿ ಬಹಳಶ್ಟು ಕಿರುಚಿತ್ರಗಳು ಮೂಡಿಬಂದಿದ್ದು, ಸಾಕಶ್ಟು ಸದ್ದು ಮಾಡಿದ ಮತ್ತು ಹೆಚ್ಚು ಮಂದಿ ಮೆಚ್ಚುಗೆ ಗಳಿಸಿದ ಕೆಲವು ಕಿರುಚಿತ್ರಗಳ ಬಗ್ಗೆ ಕಿರುನೋಟ ಬೀರುವ ಪ್ರಯತ್ನವಿದು.

1. ಪಟಿಂಗ

ಶಶಾಂಕ್ ಸೋಗಾಲ್ ನಿರ‍್ದೇಶಿಸಿ, ಪೂರ‍್ಣಚಂದ್ರ ಮೈಸೂರು ಮುಕ್ಯ ಪಾತ್ರದಲ್ಲಿ ನಟಿಸಿರುವ ಕಿರುಚಿತ್ರ – ಪಟಿಂಗ. ಪಿಜ್ಜಾ ತಂದುಕೊಡುವ ಹುಡುಗ 5 ನಿಮಿಶ ತಡಮಾಡಿದರೂ ‘ಉಚಿತ ಪಿಜ್ಜಾ ಕೊಡು’ ಎಂದು ಗದರುವ ಜನರೇ ಎಲ್ಲೆಡೆ ಇರುವಾಗ, ಸೇರಿಗೆ ಸವ್ವಾಸೇರು ಎಂಬಂತೆ ಚಾಲಾಕಿಯಾಗಿರುವ ಪಿಜ್ಜಾ ಡೆಲಿವರಿ ಹುಡುಗನ ಕತೆ ಇದು. ಬಹಳ ಕೂತೂಹಲ ಮೂಡಿಸುವ ಚಿತ್ರಕತೆ ಇದರ ಜೀವಾಳ. ಸೊಗಸಾದ ಸಿನೆಮಾಟೋಗ್ರಾಪಿ, ಮೇಕಿಂಗ್ ಮತ್ತು ನಟನೆ ಮುದ ನೀಡುತ್ತವೆ.

 

2. ಚದ್ಮವೇಶ

ಶಶಾಂಕ್ ಸೋಗಾಲ್ ನಿರ‍್ದೇಶಿಸಿ, ವರ‍್ಶಾ ಅವರು ಮುಕ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ ಚದ್ಮವೇಶ. ಎಚ್.ಎಸ್.ವೆಂಕಟೇಶ್ ಮೂರ‍್ತಿಯವರ ‘ಉರಿಯ ಉಯ್ಯಾಲೆ’ ಆದರಿಸಿದ ಕಿರುಚಿತ್ರವಿದು. ಮಹಾಬಾರತದ ದ್ರೌಪದಿಯ ಪಾತ್ರವನ್ನ ಈ ಕಾಲಕ್ಕೆ ಒಗ್ಗುವಂತೆ ಚಿತ್ರಕತೆ ಬರೆದು, ಈ ಕಾಲದ ಆಗುಹೋಗುಗಳನ್ನು ಪ್ರಶ್ನಿಸುವ ಈ ಕಿರುಚಿತ್ರ ಬಹಳವಾಗಿ ಕಾಡುವುದರಲ್ಲಿ ಅನುಮಾನವಿಲ್ಲ.

 

3. 100₹

ಹಲವಾರು ಬಹುಮಾನ ಮತ್ತು ಮನ್ನಣೆಗಳನ್ನು ಗಳಿಸಿದ ಪ್ರಶಾಂತ್ ರಾಜ್ ನಿರ‍್ದೇಶನದ ಚಿತ್ರವಿದು. ಈ ಚಿತ್ರದ ಪುಟ್ಟ ಹುಡುಗನ ನಟನೆಗೆ ನೀವು ಮನಸೋಲದೆ ಇರಲಾರಿರಿ! ಬ್ರಶ್ಟಾಚಾರವನ್ನ ಮುಗ್ದತೆಯಿಂದ ಮಟ್ಟ ಹಾಕುವ ಕತೆಯಿದು. ತುಂಬಾ ಸೊಗಸಾದ ಕತೆಯೇ ಇದರ ಜೀವಾಳ. ಗಟ್ಟಿ ಕತೆ, ನೈಜವಾದ ನಟನೆ  ಮನ ಕಲಕುತ್ತದೆ.

 

4. ಪ್ರೆಸೆಂಟ್ ಸರ್

ಆಕರ‍್ಶ ಕಮಲ ನಿರ‍್ದೇಶಿಸಿ, ಗೋಪಾಲಕ್ರಿಶ್ಣ ದೇಶಪಾಂಡೆ ಮುಕ್ಯ ಪಾತ್ರದಲ್ಲಿ ನಟಿಸಿರುವ ಕಿರುಚಿತ್ರ – ಪ್ರೆಸೆಂಟ್ ಸರ್. ಜಾಗತೀಕರಣ, ಇಂಗ್ಲೀಶ್ ವ್ಯಾಮೋಹಗಳ ನಡುವೆ ನಡುನಾಡಿನ ಕನ್ನಡ ಶಾಲೆಗಳೇ ನಡುಗುತ್ತಿರುವಾಗ ಗಡಿ ನಾಡಿನ ಕನ್ನಡ ಶಾಲೆಯ ಸ್ತಿತಿಗತಿಯನ್ನು ಮನಕ್ಕೆ ನಾಟುವಂತೆ ಈ ಚಿತ್ರ ಕಟ್ಟಿಕೊಡುತ್ತೆ. ಗೋಪಾಲಕ್ರಿಶ್ಣರ ನಟನೆ ಕಣ್ಣೀರು ತರಿಸುವುದು ಕಂಡಿತ.

 

5. ಪನ್ಮಂಡ್ರಿ ಕ್ರಾಸ್

ಅರ‍್ಜುನ್ ಕುಮಾರ್ ನಿರ‍್ದೇಶಿಸಿದ, ಕನ್ನಡದ ಕಿರುಚಿತ್ರಗಳಲ್ಲಿ ಬಹುಶಹ ಅತೀ ಹೆಚ್ಚು ನೋಟಗಳಿಸಿದ ಕಿರುಚಿತ್ರ ಪನ್ಮಂಡ್ರಿ ಕ್ರಾಸ್. ನೋಡುಗನನ್ನು ಕಾತುರದಿಂದ ಕುರ‍್ಚಿಯ ತುದಿಯಲ್ಲಿ ಕೂರಿಸುವ ರೋಚಕ ಚಿತ್ರವಿದು. ಗುಣಮಟ್ಟದ ಮೇಕಿಂಗ್, ಗಟ್ಟಿ ಚಿತ್ರಕತೆಯಿಂದ ಇದು ಹೆಸರುವಾಸಿ.

 

6. ಜಯನಗರ 4ನೇ ಬ್ಲಾಕ್

‘ರಾಮಾ ರಾಮಾ ರೆ’ ಕ್ಯಾತಿಯ ಸತ್ಯಪ್ರಕಾಶ್ ನಿರ‍್ದೇಶಿಸಿ, ‘ಡಾಲಿ’ ದನಂಜಯ ಮುಕ್ಯಪಾತ್ರದಲ್ಲಿ ನಟಿಸಿರುವ ಕಿರುಚಿತ್ರವಿದು‌. ಗೆಳೆತನಕ್ಕೆ ಯಾವುದೇ ವಯಸ್ಸು, ಅಂತಸ್ತು, ವರ‍್ಗಗಳ ಪರಿದಿ ಇಲ್ಲವೆಂದು ಸಾರುತ್ತ, ಅಪರಿಚಿತರೊಂದಿಗೆ ಮಾತನಾಡಲು ಹಿಂದೇಟು ಹಾಕುವವರು ತಮ್ಮನ್ನೊಮ್ಮೆ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡಿ ಮುದ ನೀಡುವ ಚಿತ್ರವಿದು.

 

7. ಮನೀಶೆ

ಮನೀಶ್ ಅವರು ನಿರ‍್ದೇಶಿಸಿ,  ಶ್ರವಣ್ ನಟಿಸಿರುವ ಕಿರುಚಿತ್ರವಿದು. ಹೆಸರಾಂತ ಬರಹಗಾರರಾದ ವಸುದೇಂದ್ರ ಅವರ ಕತೆಯನ್ನು, ಚಿತ್ರಕತೆಯನ್ನಾಗಿಸಿ ಮಾಡಿದ ಕಿರುಚಿತ್ರ. ನಮ್ಮ ಬಗ್ಗೆ, ನಮ್ಮ ಅಹಂಕಾರದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತೆ. ನೈಜ ನಟನೆ, ಸುಂದರ ಕತಾಹಂದರ ಇದರ ಜೀವಾಳ.

 

8. ಗೋಣಿಚೀಲ

ನವನ್ ಶ್ರೀನಿವಾಸ್ ನಿರ‍್ದೇಶನದ ಮಲೆನಾಡಿನಲ್ಲಿ ಸೆರೆ ಹಿಡಿದ ಸುಂದರ ಕಿರುಚಿತ್ರ ಗೋಣಿಚೀಲ. ಗಟ್ಟಿ ಕತೆ ಹೊಂದಿರುವ , ಒಳ್ಳೆಯ ವಿಶುವಲ್ಸ್ ನಿಂದ, ಮಜಾ ಮಾತುಗಳಿಂದ ಮನ ತಣಿಸುತ್ತ ಕೊನೆಯಲ್ಲಿ ಕಣ್ಣಂಚಲ್ಲಿ ನೀರು ತರಿಸುವ ಕಿರುಚಿತ್ರವಿದು.

 

9. ಗಮ್ಯ

ಕವಲುದಾರಿಗಳಲ್ಲಿ ನಮ್ಮ ಮುಂದೆ ಎರಡು ದಾರಿ ಇದ್ದು ಯಾವ ದಾರಿಯನ್ನು ನಾವು ಆಯ್ದುಕೊಳ್ಳತ್ತೇವೆ ಎಂಬ ಪ್ರಶ್ನೆಯ ಜೊತೆ ಸರಿ ತಪ್ಪು ಗಳ ಗೊಂದಲಗಳೊಡನೆ ಸಾಗುವ ಕಿರುಚಿತ್ರ – ಗಮ್ಯ. ಗಣೇಶ್ ಹೆಗ್ಡೆಯವರ ನಿರ‍್ದೇಶನ ಮತ್ತು ಕ್ಯಾಮೆರಾ ಕಣ್ಣು ಈ ಕಿರುಚಿತ್ರದ ಬೆನ್ನೆಲುಬು.

 

10. ಶರಾವತಿ

ಇತ್ತೀಚಿಗಶ್ಟೇ ಯುಟ್ಯೂಬಿಗೆ ಬಂದ ಬಹುನಿರೀಕ್ಶಿತ ಕಿರುಚಿತ್ರ – ಶರಾವತಿ. ನಾ.ಡಿಸೋಜರ ಕತೆಯಾದಾರಿತ ಈ ಕಿರುಚಿತ್ರವನ್ನ ಪ್ರಶಾಂತ ಸಾಗರವರು ಬಹಳ ಸೊಗಸಾಗಿ ತೆರೆಯ ಮೇಲೆ ಮೂಡಿಸಿದ್ದಾರೆ. ಇದರಲ್ಲಿನ ವಿಶುವಲ್ಸ್ ಬೆರಗು ಮೂಡಿಸುವಂತದ್ದು! ಕೊನೆಯಲ್ಲಿ ಕಿರುಚಿತ್ರ ನಮ್ಮ ಮುಂದಿಡುವ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಮೌನ ಆವರಿಸುವುದು ಕಂಡಿತಾ!

ಈ 10 ಕಿರುಚಿತ್ರಗಳ ಜೊತೆಗೆ ಇನ್ನೂ ಹಲವಾರು ಕಿರುಚಿತ್ರಗಳು ನೋಡುಗನ ಮನ ಸೂರೆ ಮಾಡಿವೆ, ನಗಿಸಿವೆ, ಅಳಿಸಿವೆ, ಪ್ರಶ್ನೆಗಳನ್ನು ಎತ್ತಿವೆ. ರಂಜಿಸುವ, ಎಲ್ಲರನ್ನೂ ಸೆಳೆಯುವ ಒಳ್ಳೊಳ್ಳೆಯ ವೆಬ್ ಕಂಟೆಂಟ್ ಗಳು ಕನ್ನಡದಲ್ಲಿ ಹೆಚ್ಚಲಿ, ಈ ತಂಡಗಳಿಂದ ಇನ್ನೂ ಒಳ್ಳೊಳ್ಳೆಯ ಕಿರುಚಿತ್ರ/ಚಿತ್ರಗಳು ಬರಲಿ ಎಂಬುದೇ ನನ್ನ ಬಯಕೆ!

( ಚಿತ್ರ ಸೆಲೆ:  thepitcher.org )

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.