ಮುದನೀಡುವ ಗೀಜುಗನ ಗೂಡು

– ಗಿರೀಶ್ ಬಿ. ಕುಮಾರ್.

ಗೀಜುಗನ ಗೂಡು Baya weaver

ಕನ್ನಡನಾಡಿನ ಹಕ್ಕಿಗಳಲ್ಲೆಲ್ಲಾ ಗೀಜುಗನ ಹಕ್ಕಿಗಳು ಸುಂದರವಾದ ಗೂಡುಗಳನ್ನ ಕಟ್ಟುವುದರಲ್ಲಿ ತುಂಬಾ ಪ್ರಸಿದ್ದಿ ಪಡೆದಿವೆ. ಗಾತ್ರದಲ್ಲಿ ನೋಡಲು ಗುಬ್ಬಚ್ಚಿಯಂತಿರುವ ಈ ಹಕ್ಕಿಗಳಲ್ಲಿ ಗಂಡುಹಕ್ಕಿಯು ಹೆಣ್ಣುಹಕ್ಕಿಗಳನ್ನು ಒಲಿಸಿಕೊಳ್ಳಲು ತನಗಿಂತಲೂ ಹತ್ತು ಪಟ್ಟು ದೊಡ್ಡದಾದ ಗೂಡುಗಳನ್ನ ಹೆಣೆಯುತ್ತದೆ.

ಮುಂಗಾರಿನಲ್ಲಿ ಈ ಹಕ್ಕಿಗಳ ಸಂತಾನೋತ್ಪತ್ತಿ ಕ್ರಿಯೆ ಶುರುವಾಗುತ್ತದೆ. ಹಳ್ಳಗಳ ಪಕ್ಕದ ಮರ, ಈಚಲು ಮರ, ತೆಂಗಿನ ಮರ, ವಿದ್ಯುತ್ ತಂತಿ ಹಾಗೂ ಟೆಲಿಪೋನ್ ತಂತಿಗಳ ಉದ್ದಕ್ಕೂ ಗೂಡು ಕಟ್ಟಿರುವುದನ್ನ ನಾವು ನೋಡಬಹುದು. ನಾವು ಒಂದರ ಪಕ್ಕ ಒಂದು ಮನೆಗಳನ್ನ ಕಟ್ಟಿಕೊಳ್ಳುವ ಹಾಗೆ ಹತ್ತಾರು ಹಕ್ಕಿಗಳು ಒಂದೆಡೆ ಸೇರಿ ಅಕ್ಕಪಕ್ಕದಲ್ಲೇ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ. ಹೊಸದಾಗಿ ಕಟ್ಟಿದ ಗೂಡುಗಳು ಸ್ವಲ್ಪ ಹಸಿರು ಬಣ್ಣದಲ್ಲಿರುವುದರಿಂದ ನೋಡಲು ಆಕರ‍್ಶಕವಾಗಿ ಕಾಣುತ್ತವೆ. ಕ್ರಮೇಣ ಬಿಸಿಲಿಗೆ ಆ ಗೂಡಿನ ಬಣ್ಣ ಮಾಸುತ್ತಾ ಹೋಗುತ್ತದೆ. ನೀರು, ಊಟ ಮತ್ತು ಗೂಡುಕಟ್ಟಲು ಬೇಕಾಗುವ ಗರಿಯ ಎಳೆಗಳು ಹೆಚ್ಚು ಸಿಗುವ ಸ್ತಳಗಳನ್ನ ಆಯ್ಕೆ ಮಾಡಿಕೊಂಡು ಗೂಡುಗಳನ್ನ ಕಟ್ಟುವುದರಲ್ಲಿ ಈ ಹಕ್ಕಿಗಳು ತೋರುವ ಜಾಣ್ಮೆ ತುಂಬಾ ವಿಶೇಶ.

ಒಂದು ಗೂಡು ಕಟ್ಟಲು 25 ರಿಂದ 50 ಸೆ.ಮೀ. ಉದ್ದದ ಸುಮಾರು 500-600 ಎಳೆಗಳು ಬೇಕಾಗುತ್ತವೆ. ಒಂದೊಂದೇ ಎಳೆಯನ್ನು ತಂದು ತಾಳ್ಮೆಯಿಂದ ಚೆಂದವಾಗಿ ಪೋಣಿಸಿ ಮಳೆ, ಗಾಳಿ, ಚಳಿ ಮತ್ತು ಬಿಸಿಲಿನಿಂದ ಕಾಪಾಡಿಕೊಳ್ಳಲು ಕಟ್ಟಿದ ಈ ಗೂಡುಗಳ ವಾಸ್ತುಶಿಲ್ಪಕ್ಕೆ ಸಾಟಿಯಿಲ್ಲ. ಈ ವಿಶಯದಲ್ಲಿ ಮನುಶ್ಯ ಎಂದಿಗೂ ಹಕ್ಕಿಗಳ ಜೊತೆ ಪ್ರತಿಸ್ಪರ‍್ದೆಗೆ ಇಳಿಯಲು ಮನಸ್ಸು ಮಾಡಲಾರ ಎಂಬುದಂತೂ ಸತ್ಯ. ಗೀಜುಗನ ಹಕ್ಕಿಯ ಗೂಡುಗಳನ್ನ ನೋಡುತ್ತಿದ್ದರೆ ಪೂರ‍್ಣಚಂದ್ರ ತೇಜಸ್ವಿಯವರು ಹೇಳಿದ ಒಂದು ಮಾತು ನೆನಪಾಗುತ್ತದೆ –

ಹಕ್ಕಿಗಳಿಗೆ ಗೂಡು ಕಟ್ಟುವುದಾಗಲಿ ಅದರ ವಾಸ್ತುಶಿಲ್ಪವಾಗಲೀ ನಮ್ಮಂತೆ ಪ್ರಜ್ನಾಪೂರ‍್ವಕ ಕೆಲಸವಲ್ಲ ಎನ್ನಿಸುತ್ತದೆ. ಮೊಟ್ಟೆ ಇಡುವ ಹಾಗೆ, ಮರಿ ಮಾಡುವ ಹಾಗೆ, ಉಸಿರಾಡುವ ಹಾಗೆ, ಊಟ ಮಾಡುವ ಹಾಗೆ, ಅದು ಅವುಗಳ ಅನುಶಂಗಿಕ ಪ್ರವ್ರುತ್ತಿಯೇ ಇರಬಹುದು. (ಮಿಂಚುಳ್ಳಿ ಪುಸ್ತಕದಿಂದ).

ಗೀಜುಗನ ಗೂಡು Baya weaver

ಗಂಡು ಗೀಜುಗ ಹಕ್ಕಿ ಅರ‍್ದ ಗೂಡು ಕಟ್ಟಿ ಹೆಣ್ಣು ಗೀಜುಗನ ಹಕ್ಕಿಗಳನ್ನ ತನ್ನತ್ತ ಸೆಳೆಯಲು ಗೂಡುಗಳ ಮೇಲೆ ಕುಳಿತು ಚೀರಾಡುತ್ತಿರುತ್ತದೆ. ಇದರಿಂದ ಆಕರ‍್ಶಿತವಾಗುವ ಹೆಣ್ಣುಹಕ್ಕಿಗಳು ಗಂಡುಹಕ್ಕಿಗಳು ಕಟ್ಟಿರುವ ಗೂಡುಗಳನ್ನ ಕೂಲಂಕುಶವಾಗಿ ಪರಿಶೀಲಿಸಿ ತನಗೆ ಅದು ಒಪ್ಪಿಗೆ ಆಗಿದೆ ಎಂದಾಗ ಮಾತ್ರ ಗಂಡುಹಕ್ಕಿಗಳೊಡನೆ ಸಂತಾನೋತ್ಪತ್ತಿಗೆ ಮುಂದಾಗುತ್ತವೆ. ಬಳಿಕ ಎರಡೂ ಹಕ್ಕಿಗಳೂ ಸೇರಿ ಗೂಡನ್ನು ಪೂರ‍್ತಿ ಮಾಡುತ್ತವೆ. ಹೊಸದಾಗಿ ನೇಯ್ದ ಗೂಡಲ್ಲಿ ಹೆಣ್ಣುಹಕ್ಕಿ ಮೊಟ್ಟೆ ಇಟ್ಟು ಕಾವು ಕೊಡಲು ಶುರುಮಾಡುತ್ತಿದ್ದ ಹಾಗೆ ಗಂಡುಹಕ್ಕಿ ಆ ಗೂಡನ್ನ ಹೆಣ್ಣುಹಕ್ಕಿಗೆ ಬಿಟ್ಟುಕೊಟ್ಟು, ಮತ್ತೊಂದು ಹೊಸ ಗೂಡನ್ನು ಕಟ್ಟಿ ಹೊಸ ಸಂಗಾತಿಯನ್ನ ಕೂಡಲು ಹೊರಡುತ್ತದೆ.

ಬಿಡದಿ ಬಳಿಯ ಗಾಣಕಲ್ಲು ಹಳ್ಳಿಯ ಹತ್ತಿರ ಗೀಜುಗನ ಹಕ್ಕಿ ಗೂಡು ಕಟ್ಟುವಾಗ ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದ ಗೀಜುಗನ ಕೆಲವು‌ ಪೋಟೊಗಳನ್ನು ಈ ಬರಹದ ಜೊತೆ ಹಾಕಲಾಗಿದೆ. ನೋಡಿ, ಕಣ್ತುಂಬಿಕೊಳ್ಳಿ 🙂

ಗೀಜುಗನ ಗೂಡು Baya weaver nest

ಗೀಜುಗನ ಗೂಡು Baya weaver Nest

(ಚಿತ್ರ ಸೆಲೆ: ಗಿರೀಶ್ ಬಿ. ಕುಮಾರ್ )

ನಿಮಗೆ ಹಿಡಿಸಬಹುದಾದ ಬರಹಗಳು

5 Responses

  1. Kuberappa Pujar says:

    ಅವತರಣಿಕೆ ಚೆನ್ನಾಗಿ ಮೂಡಿಬಂದಿದೆ ಗಿರೀಶ್…

  2. Sandeep A says:

    ಸೊಗಸಾಗಿ ಮೂಡಿ ಬಂದಿದೆ

  3. Gireesh Kumar says:

    Thank u kuber

  4. eshwar Hadapada says:

    ನಿಮ್ಮ ಪಟ ಸೆರೆಹಿಡಿಯುವ ಚಾಣಾಕ್ಷತನಕ್ಕೆ ಒಂದು ಸಲಾಂ. ಬರಹವು ಅಷ್ಟೇ ಸೂಗಸಾಗಿದೆ

  5. ರವಿಚಂದ್ರ ಹರ್ತಿಕೋಟೆ says:

    ತುಂಬಾ ಚೆನಾಗಿದೆ ಲೇಕನ????

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *