ಕೊಡಿ ಹಬ್ಬದಲ್ ಒಂದ್ ಗಮ್ಮತ್!
![ಕೊಡಿ ಹಬ್ಬ, Kodi Festival](https://i0.wp.com/honalu.net/wp-content/uploads/2018/07/kodihabba-2.jpg?resize=300%2C167&ssl=1)
ಹ್ವಾಯ್ ನಮಸ್ಕಾರ! ಉಡುಪಿ ಜಿಲ್ಲೆ ಕುಂದಾಪ್ರ ತಾಲೂಕಲ್, ನಮ್ಮೂರ್, ಬಹಳ ಚಂದದ್ ಊರ‍್; ಕೋಟೇಶ್ವರ ಅಂದೇಳಿ ಇತ್. ಕೊಟೇಶ್ವರದಲ್ ಸಿಕ್ಕಾಪಟ್ಟೆ ಹಳಮೆ ಇಪ್ಪು ಕೋಟಿಲಿಂಗೇಶ್ವರ ಗುಡಿ ಇತ್. ಅದ್ರದ್ ವರ‍್ಶಕ್ ಒಂದ್ಸಲ ತೇರ್ ನಡಿತ್. ಅದನ್ನ ‘ಕೊಡಿ ಹಬ್ಬ’ ಅಂದೇಳಿ ಕರಿತ್ರ್. ಸುತ್ ಮುತ್ ಇಪ್ಪು ಎಲ್ಲ ಊರಲ್ಲೂ ಕೊಡಿ ಹಬ್ಬ ಹೆಸರುವಾಸಿ! ಹೊಸ್ತಾಯ್ ಮದಿ (ಮದ್ವೆ) ಆದವ್ರ್ ಕೊಡಿ ಹಬ್ಬಕ್ ಬಂದ್ ಕಬ್ಬು ತೆಕಂಡ್ ಹ್ವಾರೆ ಅವ್ರ್ ಜೀವ್ನ ಚಂದ ಇರತ್ ಅಂದೇಳಿ ಪ್ರತೀತಿ ಇತ್. ಒಂದ್ ವರ‍್ಶ ಡಿಸೆಂಬರಲ್ ಇನ್ನೊಂದ್ ವರ‍್ಶ ನವೆಂಬರ್ ಅಲ್ ಬಪ್ಪು ಈ ಕೊಡಿ ಹಬ್ಬಕ್ಕೆ ನಾವೆಲ್ಲ ಕಾಯ್ಕಂಡ್ ಇರತ್. ಮುಂಚೆ ಆಯಿರೆ ಊರಲ್ಲೇ ಇಪ್ಪೊತಿಗೆ ಹಬ್ಬ ನಮ್ಗೆ ಇನ್ನೂ ಗೌಜ್ ಇರ‍್ತಿದಿತ್. ಈಗ ನಾ ಬೆಂಗಳೂರಲ್ ಇಪ್ಪುಕ್ಕೋಯ್ ಅಳವೆಡೆಗ್ ರಜಿ ಹಾಕಿ ಹಬ್ಬ ಮತ್ ಅದ್ರ್ ಮಾರನೇ ದಿನ ನಡು ಓಕುಳಿ ಮಾತ್ರ ಕಂಡ್ಕಂಡ್ ಬಪ್ಪು ಹಾಂಗ್ ಆಯ್ತ್!
ಕೊಡಿ ಹಬ್ಬ ಅಂದ್ರೆ ಸಿಕ್ಕಾಪಟ್ಟೆ ಸಡಗರ. ಸುಮಾರ್ ಒಂದ್ ವಾರ ಗಡ್ಜ್ (ಜೋರು) ಆಯ್ ನಡಿತ್. ಅದ್ರಲ್ಲೂ ತೇರ್ ಎಳು ದಿನ ಮತ್ತೆ ಅದ್ರ್ ಮಾರನೇ ದಿನ ನಡು ಓಕುಳಿ ಕಂಡಾಪಟ್ಟೆ ಗಡ್ಜ್. ತೇರ್ ಎಳು ದಿನ ಕಾಲ್ ಹಾಕುಕ್ ಜಾಗ ಇಪ್ಪುದಿಲ್ಯೆ! ಆ ಪಾಟಿ ಜನ ಬತ್ರ್! ಊರಲ್ ಇಪ್ಪು ನಾಕ್ ರಸ್ತೆಯಲ್ಲೂ ಅಂಗ್ಡಿಗಳ್ ರಾಶಿ. ಎಂತ ಬೇಕೊ ಎಲ್ಲ ಸಿಕ್ಕತ್! ನಾವ್ ಸಣ್ಣಕ್ಕಿಪ್ಪತಿಗೆ ಮನೆಯಲ್ ಸೈಕಲ್ ತೆಗ್ಸಿ ಕೊಡಿ, ಬೈಕ್ ತೆಗ್ಸಿ ಕೊಡಿ ಅಂದ್ರೆ “ಕೊಡಿ ಹಬ್ಬ ತಡಾ ಇತ್ತಲಾ ಗಡಾ.. ಕೊಡಿ ಹಬ್ದಲ್ ತೆಕಂಬಾ ಅಕಾ” ಅಂದೇಳಿ ಕುಶಾಲ್ ಮಾಡ್ತಿದ್ದಿರ್. ಹಬ್ಬದ್ ಪ್ಯಾಟಿಯಲ್ ನಾವ್ ದೋಸ್ತಿಗಳೆಲ್ಲ ಒಟ್ ಸೇರಿ ಗರ ಬರ ತಿರ‍್ಗ್ತಾ ಇರ‍್ತೊ. ಒಂದ್ ಸಲ ಹೋಯಿ ಗೋಬಿ ಮಂಚೂರಿ ತಿಂಬುದ್, ಇನ್ನೊಂದ್ ಸಲ ಹೋಯಿ ಕರೆಂಟ್ ತೊಟ್ಲಲ್ (giant wheel) ಕೂತ್ಕೊಂಬ್ದ್, ಮುಂಡಕ್ಕಿ ಉಪ್ಕರಿ ತಿಂಬುದ್.. ಕಿಸೆಯಲ್ ಇಪ್ಪು ದುಡ್ಡೆಲ್ಲ ಹುಡಿ ಎಬ್ಸುದ್! ಹಬ್ಬದ್ ಪ್ಯಾಟಿ ಸುತ್ತುವತಿಗೆ ನಮ್ ಒಟ್ಟಿಗೆ ಶಾಲಿಯಲ್ ಓದದ್ ಮಕ್ಕಳ್, ಪಾಟ ಮಾಡದ್ ಮಾಶ್ಟ್ರ್, ನಾವ್ ಲೈನ್ ಹೊಡಿತಿದ್ ಹುಡ್ಗೀರ್ ಎಲ್ಲ ಸಿಕ್ಕುದಿರತ್. ಹಾಂಗಾಯ್ ಕಣ್ ದೊಡ್ಡದ್ ಮಾಡ್ಕಂಡೆ ನಡೀತಿರತ್ ನಾವ್. ಆರೆ ಈಗೀತ್ಲೆ (ಇತ್ತೀಚೆಗೆ) ಆ ಹೆಣ್ಗಳ್, ಅವ್ರ್ ಗಂಡನ್ ಒಟ್ಟಿಗೆ ಮಕ್ಳನ್ ಎತ್ಕಂಡ್ ಬಪ್ಪು ಹಾಂಗ್ ಆಯ್ತ್ ಮಾರ‍್ರೆ! ಕೆಲವ್ ಸಲ ಕೆಲವ್ರನ್ ಕಂಡ್ ನಮ್ ಕತಿ ಹಯ್ಲ್ (flop) ಆಪುದಿರತ್!
ಹಬ್ಬದ್ ಸುರಿಗೆ ಕಮ್ಮಿ ಅಂದ್ರೂ ಮೂರ್ ಬದಿಗೆ ಸ್ಟೇಜ್ ಹಾಕಿ ಸಾಂಸ್ಕ್ರುತಿಕ ಕಾರ‍್ಯಕ್ರಮ ನಡಿತ್ತೆ. ನಾಟಕ, ಯಕ್ಶಗಾನ, ಆರ‍್ಕೆಸ್ಟ್ರಾ, ತಾಳ ಮದ್ದಳೆ, ಡ್ಯಾನ್ಸ್.. ಎಂತ ಕೇಂತ್ರೊ ಎಲ್ಲಾ ಇರತ್! ಹ್ವಾದ್ ವರ‍್ಶ ಶಾಲಿ ಬ್ಯಾಣದಲ್ (ಬಯಲು) ದೊಡ್ದ್, ಚಂದ ಸ್ಟೇಜ್ ಹಾಕಿದ್ದಿರ್. ಬೆಂಗಳೂರಿನವ್ರ್ ಒಬ್ರದ್ ಹಾಡ್ಕೂಡುಗೆ ಹಮ್ಮುಗೆ (fusion music) ಇದಿತ್. ನಾ ಅಶ್ಟ್ ವರ‍್ಶ ಹಬ್ಬದ್ ಸುರಿಗೆ ಅಂತ ಸಾಪ್ ಸ್ಟೇಜ್ ಕಂಡವ್ನಲ್ಲ, ಅವತ್ ಕಂಡ್ ಸಿಕ್ಕಾಪಟ್ಟೆ ನಲಿವಾಯ್ತೆ. ಬೆಂಗಳೂರಿನವ್ರೆಲ್ಲ ಹಾಡುಕ್ ಬತ್ರ್ ಅಂದೇಳಿ ನನ್ ಗೆಳಯನ್ ಅಪ್ಪ ಅಮ್ಮ ಎಲ್ಲ ಕಾರ‍್ಯಕ್ರಮ ಶುರು ಆಪು ಮುಂಚೆಯೇ ಹೋಯಿ ಮೊದಲ್ನೇ ಸಾಲಲ್ ಜಾಗ ಹಿಡ್ಕಂಡ್ ಕೂತ್ಕಂಡ್ರ್. ನಾನು ಮತ್ ನನ್ ದೋಸ್ತಿಗಳ್ ಹಮ್ಮುಗೆ ಶುರು ಆಪು ಸಮ್ಯಕ್ಕೆ ಶಾಲಿ ಬ್ಯಾಣಕ್ ಬಂತ್. ಎಂತ ಜನ ಅಂತ್ರಿ!
ನಮ್ಗ್ ಕೂತ್ಕೊಂಬ್ಕ್ ಕುರ‍್ಚಿ ಗಿರ‍್ಚಿ ಸಿಗ್ದೆ ಹಿಂದ್ ಹೋಯ್ ನಿಂತ್ಕಂಡ್ ಹಾಡ್ ಕೇಂತಾ ಇದಿತ್. ಗಾಯಕಿ ‘ನಾ ನಿನ್ನ ಮರೆಯಲಾರೆ’ ಹಾಡ್ ಶುರು ಮಾಡಿ ಅದ್ರದ್ ಪಲ್ಲವಿ ಹಾಡಿ ರಪ್ ಅಂದೆಳಿ ಹಿಂದಿ ಹಾಡಿಗ್ ಜಂಪ್ ಮಾಡಿ ಅದ್ರದ್ ಚರಣ ಹಾಡ್ಲ್! ಯಾವ್ದೊ ಇಂಗ್ಲಿಶ್ ಹಾಡಿಂದ್ ಪಲ್ಲವಿ ಶುರುಮಾಡಿ ರಪ್ ಅಂದೆಳಿ ‘ಜೊತೆಯಲಿ ಜೊತೆ ಜೊತೆಯಲಿ’ ಹಾಡಿಂದ್ ಚರಣಕ್ಕೆ ಹಾರಿದ್ಲ್. ಇಂಗ್ಲಿಶಿದ್ ಯಾವ್ದೋ ಹಾಡಿನ್ ಮ್ಯೂಸಿಕ್ಕಿಗೆ ಕನ್ನಡದ್ ಹಾಡ್ ಹಾಡ್ಲ್. ಹೀಂಗೆ ಸಕ್ಕತ್ ಬಗೆ ಬಗೆಯಾಯ್ ಹಾಡ್ತಾ ಇದ್ದಿಲ್. ನಾನು ಗೆಳ್ಯರೆಲ್ಲ ಚಪ್ಪಾಳಿ ತಟ್ಕಂಡ್ “ಎಂತಾ ಟ್ಯಾಲೆಂಟ್ ಮಾರೆ! ಆ ಹಾಡಿಂದ ಇದ್ಕ್ ಹ್ಯಾಂಗ್ ಜಂಪ್ ಮಾಡ್ಲ್ ಮಾರೆ.. ಇಂಗ್ಲಿಶ್ ಹಾಡಿಂದ್ ಕ್ಯಾರಿಯೋಕೆ ಹಾಯ್ಕಂಡ್ ಕನ್ನಡದ್ ಹಾಡ್ ಹಾಡ್ಲಲಾ ಮಾರೆ.. ಇಮ್ಯಾಜಿನ್ನೂ ಮಾಡುಕ್ ಆತಿಲ್ಲ.. ಶಬಾಶ್” ಅಂದೇಳಿ ವಿಸೆಲ್ ಎಲ್ಲ ಹಾಕ್ತಾ ನಿಂತ್ಕಂತ್. 6-7 ಹಾಡ್ ಕೇಂಡಾರ್ ಮೇಲೆ ಮತ್ ಹಬ್ಬದ್ ಪ್ಯಾಟಿ ಸುತ್ತುಕ್ ಹೋಯ್ತ್.
ಹಾಂಗೇ ಸುತ್ತುವತಿಗೆ ಮೊದಲ್ನೆ ಸಾಲಲ್ ಕೂತಿದ್ದಿರಲಾ, ಆ ಗೆಳ್ಯನ್ ಅಪ್ಪ ಅಮ್ಮ ಸಿಕ್ರ್. ಮುಂದ್ ಕೂತಿದ್ದಿರಲಾ ಇನ್ನೂ ಲಾಯ್ಕ್ ಮಾಡಿ ಎಂಜಾಯ್ ಮಾಡಿಪ್ಪುಕ್ ಸಾಕ್ ಅಂದೇಳಿ “ಹ್ವಾಯ್ ಪ್ರೋಗ್ರಾಂ ಲಾಯ್ಕ್ ಇದಿತ್ತಲಾ.. ಸುಪರ್ ಹಾಡ್ಲಲಾ ಮಾರ‍್ರೆ” ಅಂತ್. “ಎಂತಾ ಲಾಯ್ಕಾ? ಕಿಚ್ ಹಿಡುಕೆ! ಯಾವ್ ಯಾವ್ದೊ ಮ್ಯೂಸಿಕ್ಕಿಗೆ ಯಾವ್ ಯಾವ್ದೋ ಹಾಡ್ ಹಾಡ್ತ್ಲಲಾ ಮಾರೆ! ಒಂದ್ ಹಾಡೂ ಸಮಾ ಹಾಡುಕ್ ಬತ್ತಿಲ್ಯಾ ಆ ಹೆಣ್ಣಿಗೆ? ಯಾವ್ ಯಾವ್ದೋ ಶುರು ಮಾಡಿ ಲಾಯ್ಕ್ ಇತ್ ಅಂಬುದ್ರೊಳಗ್ ಇನ್ಯಾವ್ದೊ ಹಾಡ್ತ್ಲಪಾ.. ಇವ್ರನ್ನೆಲ ಯಾರ್ ಕರ‍್ಸದ್ದಾ? ಕೊಳ್ಕಟಿ (ಗಲೀಜ್) ಎಲೊ!” ಅಂದ್ರ್!
ನಮ್ಗೆಲ್ಲ ಎಂತಾ ಹೇಳುದೊ ಗೊತ್ತಾಯ್ಲಾ. ಪ್ಯೂಶನ್ ಮ್ಯೂಸಿಕ್ ಅಂದ್ರೆ ಹೀಂಗೆ ಮಾರ‍್ರೆ ಅಂದೇಳಿ ಹೇಳುವ ಅಂದ್ಕಂತ್, ಆರೆ ಅದ್ ಆಯ್ ಹ್ವಾಪುದಲ್ಲ ಅಂದೆಳಿ ಸುಮ್ನೆ ತಲಿ ಹಂದಾಡ್ಸಿ ಮುಂದ್ ಹೋಯ್ತ್! ಕಾರ‍್ಯಕ್ರಮದ್ ಬಗ್ಗೆ ನಾವ್ ಹೀಂಗ್ ಅಂದ್ಕಂತ್, ಅವ್ರ್ ಹಾಂಗ್ ಅಂದ್ಕಂಡ್ರ್, ಇನ್ ಯಾರ್ ಯಾರ್ ಹ್ಯಾಂಗ್ ಹ್ಯಾಂಗ್ ಅಂದ್ಕಂಡ್ರೋ ಆ ಕೋಟಿಲಿಂಗೇಶ್ವರನೇ ಬಲ್ಲ! ಒಟ್ರಾಶಿ ಇದ್ ಉಳಿದವರು ಕಂಡಂತೆ. ಅಲ್ದಾ 😉
ತುಂಬಾ ಚೆಂದ ಬರೆದದ್ದು…. ??
ನನ್ನಿ 🙂