ಏಳಿಗೆಯ ಹೆಸರಿನಲ್ಲಿ ವಿನಾಶದೆಡೆಗೆ?

– ಶಾಂತ್ ಸಂಪಿಗೆ.

ಅಬಿವ್ರುದ್ದಿ, ವಿನಾಶ, ವಾಯುಮಾಲಿನ್ಯ, development, pollution

ಈ ಬೂಮಿ ಒಂದು ಸುಂದರ ಗೂಡು, ಸಕಲ ಜೀವರಾಶಿಗಳಿಗೂ ಆಶ್ರಯ ತಾಣ, ಈ ಸುಂದರ ಸ್ರುಶ್ಟಿಯಲ್ಲಿ ಮಾನವರಾದ ನಾವು ಅತ್ಯಂತ ವಿಬಿನ್ನ ಮತ್ತು ವಿಶಿಶ್ಟವಾದ ಜೀವಿಗಳು. ಈ ಬೂಮಿಯಲ್ಲಿ ಸ್ರುಶ್ಟಿಯ ಉದ್ದೇಶವೇನು, ಈ ಅನೇಕ ಜೀವರಾಶಿಗಳು ಹೇಗೆ ಬದುಕುತ್ತಿವೆ ಮತ್ತು ನಾವು ಮನುಶ್ಯರು ಹೇಗೆ ಬದುಕುತ್ತಿದ್ದೇವೆ ಎಂದು ಚಿಂತಿಸಿದಾಗ ತುಂಬ ಆತಂಕವಾಗುತ್ತದೆ. ನಾನು ದಿನನಿತ್ಯ ಮುಂಜಾನೆಯಲ್ಲಿ ಹಕ್ಕಿಗಳ ಕಲರವ ಆಲಿಸುತ್ತೇನೆ, ಅನೇಕ ಪ್ರಾಣಿಗಳ ಜೀವನ ಕ್ರಮವನ್ನು ನೋಡಿದ್ದೇನೆ. ಎಲ್ಲ ಜೀವಿಗಳ ಬದುಕಿಗೆ ಅರ್ತ ಇರುವುದು, ತಾವು ಸಂತೋಶವಾಗಿ ಬದುಕುವುದು ಮತ್ತು ಬೇರೆ ಜೀವಿಗಳಿಗೆ ಬದುಕಲು ಬಿಡುವುದರಲ್ಲಿಯೇ ಇದೆ.

ಗುಡ್ಡ, ಕಾಡು ಎಲ್ಲಾ ಕರಗುತ್ತಿದ್ದರೂ ಮನುಜನಿಗೆ ದಣಿವಾಗಿಲ್ಲ

ಈ ಬೂಮಿಯಲ್ಲಿ ಸಕಲ ಜೀವರಾಶಿಗಳಿಗೂ ಸಮಾನವಾದ ಬದುಕುವ ಹಕ್ಕು ಇದೆ ಎಂದು ಸ್ರುಶ್ಟಿ ಹೇಳುತ್ತದೆ. ಆದರೆ ಇಂದು ನಾವು ಸ್ರುಶ್ಟಿಯನ್ನು ನಿಯಂತ್ರಿಸುತ್ತಿದ್ದೇವೆ. ಸಕಲ ಪಾಂಡಿತ್ಯವನ್ನು ಪಡೆದಿದ್ದೇವೆ, ಬೂಮಿಯನ್ನು ಅಗೆಯುತ್ತೇವೆ, ಆಕಾಶಕ್ಕೆ ಹಾರುತ್ತೇವೆ, ನೀರನ್ನು ಕಲುಶಿತಗೊಳಿಸುತ್ತೇವೆ, ಗಾಳಿಗೆ ವಿಶ ಸೇರಿಸುತ್ತಿದ್ದೇವೆ ಮತ್ತು ನಮ್ಮನ್ನು ನಾವು ನಿಯಂತ್ರಿಸಲು ಕಾನೂನು ಮಾಡಿಕೊಳ್ಳುತ್ತೇವೆ. ಆದರೆ ಅಬಿವ್ರುದ್ದಿಯ ಹೆಸರಲ್ಲಿ ಕಾನೂನನ್ನು ಮುರಿಯುತ್ತೇವೆ. ನಮ್ಮ ಆಸೆಗಳಿಗೆ ಮಿತಿಯೇ ಇಲ್ಲ. ಬೆಟ್ಟ, ಗುಡ್ಡ, ಕಾಡು ಎಲ್ಲಾ ಕರಗುತ್ತಿದ್ದರೂ ನಮಗೆ ದಣಿವಾಗಿಲ್ಲ, ಹಟ ಬಿಟ್ಟಿಲ್ಲ.

ಬದುಕು ಮನುಶ್ಯ ಸೇರಿದಂತೆ ಎಲ್ಲ ಪ್ರಾಣಿ ಪಕ್ಶಿಗಳಿಗೂ ಒಂದೇ

ಬದುಕು ಮನುಶ್ಯ ಸೇರಿದಂತೆ ಎಲ್ಲ ಪ್ರಾಣಿ ಪಕ್ಶಿಗಳಿಗೂ ಒಂದೇ. ಆದರೆ ಮನುಶ್ಯ ಈ ಸತ್ಯವನ್ನು ಅರ‍್ತಮಾಡಿಕೊಳ್ಳುತ್ತಿಲ್ಲ. ಎಲ್ಲ ಜೀವಿಗಳ ಜೀವನ ಕ್ರಮ ತಾನು ಸುಂದರವಾಗಿ ಬದುಕುವುದು ಮತ್ತು ತನ್ನ ಸಂತತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು. ಯಾವ ಪ್ರಾಣಿ ಪಕ್ಶಿಯೂ ವಿಶ್ವವಿದ್ಯಾಲಯಕ್ಕೆ ಪದವಿ ಪಡೆಯಲು ಹೋಗಿಲ್ಲ ಆದರೆ ತನ್ನ ಬದುಕನ್ನು ಯಾರಿಗೂ ತೊಂದರೆಯಾಗದಂತೆ, ಸುಂದರವಾಗಿ ತಾನು ಬದುಕಿ, ತನ್ನ ಹಸಿವು ನೀಗಿಸಿಕೊಂಡು, ಸರಳವಾಗಿ ಬದುಕಿ ಕೊನೆ ಉಸಿರೆಳೆಯುತ್ತದೆ. ಮನುಶ್ಯನ ಜೀವನದಲ್ಲಿ ಹಣ ಗಳಿಕೆಯ ಲೆಕ್ಕಾಚಾರ ಎಶ್ಟು ಮಿತಿಮೀರಿದೆ ಎಂದರೆ ಬದುಕಿನ ಸ್ತರವನ್ನು ಹಣದಿಂದಲೇ ಅಳೆಯುತ್ತೇವೆ. ಹಣಕ್ಕೋಸ್ಕರ ಎಲ್ಲವನ್ನು ನಾಶಮಾಡುತ್ತೇವೆ, ಹಣಗಳಿಸಲು ವಿಶ್ವವಿದ್ಯಾಲಯಕ್ಕೆ ತೆರಳಿ ಗ್ನಾನ ಪಡೆಯುತ್ತೇವೆ, ವೈಬವದ ಜೀವನ ಶೈಲಿಗೆ ಜೋತುಬಿದ್ದು ಅತಿಯಾದ ಅವಶ್ಯಕತೆಗಳಿಗಾಗಿ ಕೈಗಾರಿಕೆ ಸ್ತಾಪಿಸುತ್ತೇವೆ. ಬೂಮಿಯ ಎಲ್ಲ ಸಂಪತ್ತನ್ನು ಯಾರಿಗೂ ಕೇಳದೆ ನಾವುಗಳೇ ಅನುಬವಿಸುತ್ತಿದ್ದೇವೆ. ಆದುನಿಕತೆಯ ಬರದಲ್ಲಿ ಕೆಲವೇ ವರ‍್ಶಗಳಲ್ಲಿ ನಾವು ಈ ಬೂಮಿಯ ಪರಿಸರವನ್ನು ಎಶ್ಟು ಹಾಳುಮಾಡಿದ್ದೇವೆ ಅಲ್ಲವೇ?

ಎಶ್ಟೋ ವರುಶಗಳಿಂದ ಈ ಬೂಮಿಯಲ್ಲಿ ಜೀವರಾಶಿಗಳು ಮನುಶ್ಯನನ್ನೂ ಸೇರಿಸಿಕೊಂಡು ಸುಂದರವಾಗಿ ಬದುಕು ಸವೆಸಿವೆ. 20ನೇ ಶತಮಾನದ ಕೈಗಾರಿಕಾ ಕ್ರಾಂತಿಯ ಬಳಿಕ ಕೇವಲ ಒಂದೇ ಒಂದು ಶತಮಾನದಲ್ಲಿ ಈ ಬೂಮಿಯನ್ನು ಎಶ್ಟು ಮಲಿನಗೊಳಿಸಿದ್ದೇವೆ ಎನ್ನುವುದನ್ನು ನೋಡಿದರೆ ಮರುಕವುಂಟಾಗುತ್ತದೆ.

ಮನುಶ್ಯನ ಅತಿಯಾಸೆಗೆ ಬಲಿಯಾಗುತ್ತಿರುವ ಪರಿಸರ

ಮೊದಲು ಪ್ರಕ್ರುತಿಯ ಮಡಿಲಲ್ಲಿ ಬೂತಾಯಿಯನ್ನು ಪೂಜಿಸುತ್ತ ಹಸಿವನ್ನು ನೀಗಿಸಿಕೊಂಡು, ಆಶ್ರಯ ಪಡೆಯಲು ಸಣ್ಣ ಮನೆಯನ್ನು ಪ್ರಕ್ರುತಿಗೆ ಪೂರಕವಾಗಿ ನಿರ‍್ಮಿಸಿಕೊಂಡು, ಬಕ್ತಿ, ಸತ್ಯ ಎನ್ನುವ ಸಂಸ್ಕಾರದಿಂದ ಜೀವನ ನಡೆಸುತ್ತಿದ್ದ ನಮ್ಮ ಪೂರ‍್ವಜರ ಬದುಕು ಸರಳ ಮತ್ತು ಸುಂದರವಾಗಿತ್ತು. ಈಗ ನೋಡಿದರೆ ಕಾಡೆಲ್ಲ ನಾಡಾಗುತ್ತಿದೆ, ಹಳ್ಳಿಗಳೆಲ್ಲ ಪಟ್ಟಣಗಳಾಗುತ್ತಿವೆ, ಬ್ರುಹತ್ ನಗರಗಳು ಬೆಳೆದು ಕಸದ ರಾಶಿಯನ್ನೇ ಉತ್ಪಾದಿಸುತ್ತಿವೆ. ಹೀಗೆಯೇ ಮುಂದುವರೆದರೆ ನಾವು ಉತ್ಪಾದಿಸುವ ತ್ಯಾಜ್ಯವಸ್ತುಗಳನ್ನು ವಿಲೇವಾರಿಮಾಡಲು ಈ ಬೂಮಿ ಸಾಕಾಗದು.

ನಾವು ಮನುಶ್ಯರು ಈ ಅಬಿವ್ರುದ್ದಿಯ ಹೆಸರಿನಲ್ಲಿ ವಿನಾಶದೆಡೆಗೆ ಸಾಗುತ್ತಿರುವ ವೇಗ ಗಮನಿಸಿದರೆ ಆತಂಕವಾಗುತ್ತದೆ. ಇನ್ನು ಕೆಲವೇ ವರ‍್ಶಗಳಲ್ಲಿ ದೈವದತ್ತವಾದ ಪಂಚಬೂತಗಳನ್ನು ಮಲಿನಗೊಳಿಸಿ, ಪ್ರಾಣಿ-ಪಕ್ಶಿಗಳನ್ನು ಕೊಂದು, ಕಾಡನ್ನೆಲ್ಲ ಕಡಿದು, ಪರಿಸರದ ಏರುಪೇರಿಗೆ ಕಾರಣೀಬೂತರಾಗುತ್ತಿದ್ದೇವೆ.  ಅಬಿವ್ರುದ್ದಿ ಮತ್ತು ಸುಬದ್ರತೆಯ ನೆಪದಲ್ಲಿ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಶೇಕರಿಸಿ ಮನುಶ್ಯರ ನಡುವೆ ದ್ವೇಶಗಳನ್ನು ಬಿತ್ತುತ್ತ ಮನುಕುಲದ ಜೊತೆಗೆ ಜೀವ ಸಂಕುಲಗಳನ್ನು ನಾಶಮಾಡುತ್ತ ಅವನತಿಯತ್ತ ಸಾಗುತ್ತಿದ್ದೇವೆ.

ನಮ್ಮ ಅವನತಿಯ ಆರಂಬದಲ್ಲಿ ನಾವಿದ್ದೇವೆ ಎಂದೆನಿಸುತ್ತಿದೆ

ನಮ್ಮ ಅಬಿವ್ರುದ್ದಿಗೆ ಕೊನೆ ಯಾವಾಗ ಎಂದು ಯೋಚಿಸಿದರೆ ಏನೂ ಉತ್ತರ ದೊರೆಯುವುದಿಲ್ಲ. ಆದರೆ ನಮ್ಮ ಅವನತಿಯ ಆರಂಬದಲ್ಲಿ ನಾವಿದ್ದೇವೆ ಎಂದೆನಿಸುತ್ತಿದೆ. ಅಬಿವ್ರುದ್ದಿ ಎಂದರೆ ಬೂಮಿಯ ಮೇಲೆ ಮನುಕುಲ ಮತ್ತು ಜೀವಸಂಕುಲಕ್ಕೆ ಆಹಾರ ಬದ್ರತೆ ಒದಗಿಸಿ, ಹಸಿವು ಮುಕ್ತ ಗೊಳಿಸುವುದು. ಅಬಿವ್ರುದ್ದಿ ಎಂದರೆ ವಿಶ್ವದಲ್ಲಿ ಶಾಂತಿ ಸ್ತಾಪಿಸುವುದು. ಅಬಿವ್ರುದ್ದಿ ಎಂದರೆ ಪ್ರಕ್ರುತಿಯನ್ನು ಉಳಿಸುವುದು, ಬೆಳೆಸುವುದು ಮತ್ತು ಪ್ರಾಣಿ, ಪಕ್ಶಿ ಸಂಕುಲಗಳನ್ನು ಸಂರಕ್ಶಿಸುವುದು. ಅಬಿವ್ರುದ್ದಿ ಎಂದರೆ ಎಲ್ಲರಲ್ಲಿಯೂ ಸಮಾನತೆ, ಪ್ರೀತಿ ಮತ್ತು ಬ್ರಾತ್ರುತ್ವ ನೆಲೆಸುವಂತೆ ಮಾಡುವುದು. ಅಬಿವ್ರುದ್ದಿ ಎಂದರೆ ಸ್ವಾಬಾವಿಕ ಸಂಪನ್ಮೂಲಗಳನ್ನು ಸಂರಕ್ಶಿಸಿ ಮುಂದಿನ ಪೀಳಿಗೆಗೆ ಉಡುಗೊರೆ ನೀಡುವುದು. ನಮ್ಮೆಲ್ಲರ ದ್ಯೇಯ ಅತ್ಯುತ್ತಮ ಶಾಂತಿಯುತ ಬದುಕು ಅಶ್ಟೇ. ಆದ್ದರಿಂದ ಈ ಬದುಕಿಗೆ ಪೂರಕವಾದ, ಪರಿಸರಕ್ಕೆ ಹಾನಿಯಾಗದಂತಹ ಅನ್ವೇಶಣೆಗಳನ್ನು ಮಾಡಿ ಜನರ ಜೀವನಕ್ರಮವನ್ನು ಉತ್ತಮಗೊಳಿಸಬೇಕು.

ಬದುಕು ಎಂದರೆ ಎಲ್ಲ ಜೀವರಾಶಿಗಳಂತೆ ನಾವೂ ಸಹ ಅದಮ್ಯ ಪ್ರಕ್ರುತಿಯ ಮಡಿಲಲ್ಲಿ ಶಾಂತಿ-ನೆಮ್ಮದಿಯಿಂದ ಜೀವನ ನಡೆಸುವುದು ಅಲ್ಲವೇ? ಅಬಿವ್ರುದ್ದಿಯ ಹೆಸರಿನಲ್ಲಿ ಪರಿಸರ ನಾಶ ಮಾಡಬಾರದು ಮತ್ತು ಅಗತ್ಯಕ್ಕೆ ತಕ್ಕಂತೆ ಮಾತ್ರ ಉತ್ಪಾದಿಸಬೇಕು. ಸರಳ ಮತ್ತು ಸಮ್ರುದ್ದ ಜೀವನ ನಡೆಸಿ ಪ್ರತಿಯೊಬ್ಬರಲ್ಲಿಯೂ ಗ್ನಾನಜ್ಯೋತಿ ಬೆಳಗುತ್ತಿರಬೇಕು. ಈ ಪ್ರಕಾಶಮಾನವಾದ ಬೆಳಕಲ್ಲಿ ಎಲ್ಲ ಜೀವರಾಶಿಗಳು ಬದುಕುಳಿಯಬೇಕು.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: