ಕತೆ: ನನ್ನ ಸ್ಪೂರ‍್ತಿಯ ಚಿಲುಮೆ

– ಪ್ರಿಯದರ‍್ಶಿನಿ ಶೆಟ್ಟರ್.

ಸಂಜೆ ಆರು ಗಂಟೆಯಾದರೂ ನಾನಿನ್ನೂ ಲ್ಯಾಬ್‍ನಲ್ಲಿಯೇ ಇದ್ದೆ. ಇನ್ನೇನು ಹೊರಡಬೇಕು ಎನ್ನುವಶ್ಟರಲ್ಲಿ ಮೊಬೈಲ್ ರಿಂಗಣಿಸಿತು. ನೋಡಿದರೆ ಅದು ಗೆಳೆಯ ವಿನೀತನ ಕರೆ. ಉಳಿದ ಅಲ್ಪ ಸ್ವಲ್ಪ ಕೆಲಸಗಳನ್ನು ಮುಗಿಸಿ ಹೊರಡುವ ಅವಸರದಲ್ಲಿ ಇದ್ದಿದ್ದರಿಂದ ಪೋನ್ ಕಟ್ ಮಾಡಿದೆ. ಕೆಲಸ ಮುಗಿಸಿ ಬಸ್ ಸ್ಟಾಪ್‍ನತ್ತ ನಡೆಯುತ್ತಾ ಅವನಿಗೆ ಕೊಂಚ ಆತಂಕದಲ್ಲೇ ಪೋನ್ ಮಾಡಿದೆ. ಕಾರಣ ವಿನೀತನ ಪತ್ನಿ ಗರ‍್ಬಿಣಿ. ಏನಾದರೂ ತೊಂದರೆ…? ಏನೆನೋ ವಿಚಾರಗಳು ಬರತೊಡಗಿದವು. ಅಶ್ಟರಲ್ಲಿ ಕರೆ ಸ್ವೀಕರಿಸಿದ ವಿನೀತ್, “ನಾಳೆ ರವಿವಾರ ಪ್ರೀ ಇದ್ದರೆ ಮನೆಗೆ ಬಾ” ಎಂದ. ಮನೆಗೆ ಬರಲು ಕಾರಣ ಏನೆಂದು ಕೇಳಿದೆ. ಯಾವ ತೊಂದರೆಯೂ ಇಲ್ಲವೆಂದ ಆತ ನನ್ನ ಪತ್ನಿ ಸ್ಪೂರ‍್ತಿಯನ್ನೂ ಕರೆತರಲು ತಿಳಿಸಿದ. “ಆಯಿತು” ಅಂದೆ.

ವಿನೀತ್ ಯುವ ಅಡ್ವೋಕೇಟ್. ನನ್ನ ಬಿ.ಎಸ್ಸಿ. ಸಹಪಾಟಿ ಹಾಗೂ ಸಮಾನ ಮನಸ್ಕ ಸ್ನೇಹಿತ. ಬಿ.ಎಸ್ಸಿ. ನಂತರ ಆತ ಪೋರೆನ್ಸಿಕ್ ಸೈನ್ಸ್, ನಾನು ಬಯೊಟೆಕ್ನಾಲಜಿ ಆಯ್ಕೆ ಮಾಡಿಕೊಂಡೆವು. ನಾವಿಬ್ಬರೂ ಆಗಾಗ ನಮ್ಮ ವಿಬಾಗ, ವಿಶಯಗಳ ಕುರಿತು ಗಂಟೆಗಟ್ಟಲೇ ಮಾತನಾಡುತ್ತಿದ್ದೆವು. ಪರಸ್ಪರ ಮಾಹಿತಿ ಹಂಚಿಕೊಳ್ಳುವುದು ನಮ್ಮ ಹವ್ಯಾಸವಾಗಿತ್ತು. ನಂತರ ಆತ ಎಲ್.ಎಲ್.ಬಿ. ಕೋರ‍್ಸ್ ಸೇರಿಕೊಂಡ ನಾನು ಪಿ.ಎಚ್.ಡಿ. ಎಂದು ಪ್ರಯೋಗಾಲಯ ಸೇರಿಕೊಂಡೆ. ಇತ್ತೀಚೆಗೆ ಆತನೊಂದಿಗೆ ಕಾಲ ಕಳೆಯುವುದೂ ಅಪರೂಪವಾಗಿತ್ತು. ಆತನ ಪತ್ನಿ ಸಂದ್ಯಾ ವೈದ್ಯೆ. ಇವನ ತಂದೆ-ತಾಯಿಯರನ್ನೂ ಬೇಟಿಯಾಗದೇ ಬಹಳ ದಿನಗಳಾಗಿದ್ದವು.

ಮಾರನೆ ದಿನ ನಾವಿಬ್ಬರೂ ಮದ್ಯಾಹ್ನದ ಹೊತ್ತಿಗೆ ಅವರ ಮನೆಗೆ ಹೋದೆವು. ಉಬಯ ಕುಶಲೋಪರಿಯ ಬಳಿಕ ವಿನೀತನ ತಾಯಿ ನಮ್ಮನ್ನೆಲ್ಲ ಊಟಕ್ಕೆ ಕರೆದರು. ವಿನೀತ್ ಎಂದಿನಂತಿರಲಿಲ್ಲ. ಊಟದ ನಂತರ ಎಲ್ಲರೂ ಮಾತಾಡುತ್ತಾ ಕುಳಿತರು. ವಿನೀತ್ ನನ್ನನ್ನು ಮೇಲಿನ ಕೋಣೆಗೆ ಕರೆದೊಯ್ದ. ನಾವಿಬ್ಬರೂ ಬೇಟಿಯಾದಾಗಲೆಲ್ಲ ತನ್ನ ವಕೀಲಿಕೆ ವ್ರುತ್ತಿಯಲ್ಲಿ ಕಂಡ ವಿಬಿನ್ನ ವಕೀಲರು, ವಿಚಿತ್ರ ಕಕ್ಶಿದಾರರ ಕುರಿತ ಸ್ವಾರಸ್ಯಕರ ಕತೆಗಳನ್ನು ಹೇಳುತ್ತಿದ್ದ. ಆತ ಒಳ್ಳೆಯ ಮಾತುಗಾರ ಬೇರೆ! ನಾನು ‘ನನ್ನ ಹೆಂಡತಿಯೊಟ್ಟಿಗೆ ಹೋದ ಊಟಿ ಪ್ರವಾಸ, ನನ್ನ ಅಕ್ಕನ ಮದುವೆ’ – ಎಂದು ಮಾತಿಗಾರಂಬಿಸಿದರೂ, ಈತನ ಬಾಯಿಂದ “ಹೂಂ” ಬಿಟ್ಟರೆ ಬೇರೆ ಮಾತೇ ಇಲ್ಲ. ಕೊನೆಗೆ, ನನಗೆ ಹೆಚ್ಚು ಸಮಯ ಇಲ್ಲವೆಂದೂ, ಏನಾದರೂ ಸಮಸ್ಯೆ ಇದ್ದಲ್ಲಿ ಸಹಾಯ ಬೇಕಾದರೆ ಸಂಕೋಚವಿಲ್ಲದೆ ಹೇಳಬೇಕೆಂದು ಒತ್ತಾಯಿಸಿದೆ. ಆದದ್ದು ಇಶ್ಟೇ – ಕೆಲವು ದಿನಗಳ ಹಿಂದೆ ದಂಪತಿಗಳಿಬ್ಬರು ಇವನಲ್ಲಿಗೆ ವಿಚ್ಚೇದನ ಪಡೆಯಲು ಬಂದಿದ್ದರು. ಈತನ ಸಲಹೆಯ ಮೇರೆಗೆ ಹೊಂದಾಣಿಕೆಯಿಂದಿರಲು ಪ್ರಯತ್ನಿಸಿದ ಇಬ್ಬರೂ ಅದು ಸಾದ್ಯವಾಗದೇ, ಬೇರ‍್ಪಡಲು ತೀರ‍್ಮಾನಿಸಿದ್ದರು. ಆಕೆ ಗಾಯಕಿ; ಗಂಡ ವರ‍್ತಕ. ಹೆಂಡತಿಯ ಏಳಿಗೆ ಸಹಿಸದೇ ಈ ನಿರ‍್ದಾರಕ್ಕೆ ಬಂದಿರುವುದನ್ನು ಆ ವ್ಯಕ್ತಿಯೇ ವಕೀಲರಲ್ಲಿ ಹೇಳಿಕೊಂಡಿದ್ದನಂತೆ. ಅವರಿಗಿಬ್ಬರು ಮಕ್ಕಳು. ಅದೂ ಅಲ್ಲದೇ ವಿಚ್ಚೇದನದ ನಂತರ ಮಗ ಹಾಗೂ ಮಗಳನ್ನು ಯಾರು ನೋಡಿಕೊಳ್ಳಬೇಕೆಂಬುದು ಇನ್ನೊಂದು ಸಮಸ್ಯೆ.

ಬೇರೆ ಸಮಯವಾಗಿದ್ದರೆ ವಿನೀತ್ ಇಶ್ಟೊಂದು ಚಿಂತಿಸುತ್ತಿರಲಿಲ್ಲ. ತಮ್ಮವರೇ ಯಾರೋ ಬೇರ‍್ಪಟ್ಟಂತೆ, ಅವರ ಮಕ್ಕಳ ಬವಿಶ್ಯದ ಬಗ್ಗೆ ಚಿಂತಿಸುತ್ತಿದ್ದ. ದೊಡ್ಡಮಗಳು ಎರಡನೇ ತರಗತಿ; ಚಿಕ್ಕ ಮಗುವಿಗೆ ಮೂರು ವರ‍್ಶ. ಹೆಂಗರುಳಿನ ಮಿತ್ರ ಯಾರದೋ ಮನೆಯ ಸಮಸ್ಯೆಯನ್ನು ಇಶ್ಟು ಗಂಬೀರವಾಗಿ ತೆಗೆದುಕೊಂಡಿದ್ದು ನನಗೆ ಅಚ್ಚರಿಯೆನಿಸಿತ್ತು.

ನಾನೆಂದೆ – “ಆ ವ್ಯಕ್ತಿಯೊಡನೆ ಆತನ ಹೆಂಡತಿಯ ಪ್ರವ್ರುತ್ತಿ, ಮಕ್ಕಳ ಬವಿಶ್ಯದ ಕುರಿತು ಚರ‍್ಚಿಸಿದರೆ ಆಗದೇ?” ಅದಕ್ಕವನು “ಎಲ್ಲ ಪ್ರಯತ್ನಗಳೂ ಆದವು” ಅಂದ. ಇವನಿಗೆ ತಂದೆ-ತಾಯಿಯ ಜವಾಬ್ದಾರಿ, ಹೆಂಡತಿಯ ಆರೋಗ್ಯ, ತನ್ನ ಕೆಲಸ ಅಶ್ಟೇ ಅಲ್ಲದೇ ಈಗ ಸಂದ್ಯಾಳನ್ನು ರೋಗಿಗಳ ಮನೆಗೆ, ಆಸ್ಪತ್ರೆಗೆ ಕರೆದೊಯ್ಯುವುದು… ಇವುಗಳ ಮದ್ಯ ಇನ್ನೊಬ್ಬರ ಮನೆಯ ಉಸಾಬರಿ ಯಾಕೆ ಬೇಕು ಅಂತ ನನಗೆನಿಸಿತು. ನನ್ನ ತಾಳ್ಮೆ ಮುಗಿಯತೊಡಗಿತ್ತು. ಕೊನೆಯದಾಗಿ ನಾನೇನು ಮಾಡಬೇಕೆಂದೆ. ಆತ “ಇದಕ್ಕೆ ನೀನೇ ಒಂದು ಪರಿಹಾರ …” ಎನ್ನುತ್ತಿದ್ದಂತೆ, ನನಗೆ ಸಹನೆ ಮೀರಿ, “ನಾನು ನನ್ನ ಸಂಶೋದನೆ, ಸಂಸಾರ, ಇತ್ಯಾದಿಗಳಿಗೇ ಸಮಯ ನೀಡಲು ಅಸಾದ್ಯ. ಹಾಗೂ ನನಗೆ ಈ ವಿಶಯದಲ್ಲಿ ಕಿಂಚಿತ್ತೂ ಆಸಕ್ತಿ ಇಲ್ಲ” ಎಂದು ನೇರವಾಗಿ ಹೇಳಿದೆ. ಆದರೂ ತನ್ನೆಲ್ಲ ತಾಪತ್ರಯಗಳ ಮದ್ಯೆ ಇವನು ಅವರ ಕುರಿತು ಚಿಂತಿಸುವುದನ್ನು ಕಂಡು ಮರುಕ ಹುಟ್ಟಿತು.

ಸಂಜೆ ಮನೆಗೆ ಬಂದು ಪ್ರೆಶ್ ಆಗಿ ನನ್ನ ಕೆಲಸದಲ್ಲಿ ತೊಡಗಿಕೊಂಡೆ. ಯಾಕೋ ವಿನೀತನ ಮಾತುಗಳೇ ನೆನಪಾದವು. ಜೊತೆಗೆ ನನ್ನ ತಪ್ಪುಗಳೂ…

ವಾರದ ಹಿಂದೆ ನನ್ನವಳು ತನ್ನದೊಂದು ಪೇಂಟಿಂಗ್ ಎಗ್ಸಿಬಿಶನ್ ಮಾಡಬೇಕು ಎಂದಿದ್ದಳು. ಆಗೊಮ್ಮೆ ಈಗೊಮ್ಮೆ ಪೇಂಟಿಂಗ್ ಮಾಡಿ ಮನೆಯ ಗೋಡೆ, ವರಾಂಡ, ಸ್ವಿಚ್ ಬೋರ‍್ಡ್, ಬಾಗಿಲಿಗೆ ಹಾಕಿದ ಪರದೆ – ಹೀಗೆ ಎಲ್ಲದರ ಮೇಲೂ ಏನಾದರೊಂದು ಬರೆದು, ಬಣ್ಣ ತುಂಬಿ ಎಲ್ಲರಿಗೂ ತೋರಿಸಿ ಕುಶಿಪಡುತ್ತಿದ್ದಳು. ನಾನು ಮಾತ್ರ ಆಕೆ ಚಿತ್ರಕಲೆಯನ್ನು ಅಶ್ಟು ಸೀರಿಯಸ್ ಆಗಿ ತೆಗೆದುಕೊಂಡಿರಬಹುದೆಂದು ಊಹಿಸಿಯೂ ಇರಲಿಲ್ಲ. ಇದ್ದಕ್ಕಿದ್ದಂತೆ ಚಿತ್ರಕಲೆ ಪ್ರದರ‍್ಶನ ಎಂದಾಗ ಅವಳ ಮೇಲೆ ಹಾಗೆ ಕೂಗಾಡಬಾರದಿತ್ತು. ಚಿಕ್ಕ ಜಗಳದ ನಂತರ ಆಕೆಯೊಂದಿಗೆ ಮಾತಾಡದೇ ಮೂರ‍್ನಾಲ್ಕು ದಿನಗಳಾಗಿದ್ದವು. ಆದರೂ ನಾನು ಕರೆದಾಗ ಒಲ್ಲದ ಮನಸ್ಸಿನಿಂದಲೇ ನನ್ನೊಂದಿಗೆ ವಿನೀತನ ಮನೆಗೆ ಬಂದಿದ್ದಳು. ಅದೇನೋ ‘ಕ್ಯಾನ್‍ವಾಸ್, ಅಕ್ರಿಲಿಕ್….’ ಎನ್ನತೊಡಗಿದಳು. ವಿನೀತ್ ಹೇಳಿದ್ದೆಲ್ಲವನ್ನೂ ಆಕೆಗೆ ಹೇಳಬೇಕೆಂದುಕೊಂಡೆ. ಆದರೆ ನಾನೂ ಆ ಕಕ್ಶಿದಾರನಂತೆ ನನ್ನ ಪತ್ನಿ ಸ್ಪೂರ‍್ತಿಯ ಕಲೆಗೆ ಪ್ರೋತ್ಸಾಹ ನೀಡದೇ ಆಕೆಯನ್ನು ಹೀಯಾಳಿಸುತ್ತಿದ್ದುದು ನೆನಪಾಗಿ ತೆಪ್ಪಗಾದೆ. ನನಗೆ ಕಸಿವಿಸಿಯಾಗುತ್ತಿರುವುದನ್ನು ಗಮನಿಸಿದ ಆಕೆ ಮೌನವಾದಳು. ಈ ಬಾರಿ ಸುಮ್ಮನಿರಲು ಸಾದ್ಯವಾಗದೇ ವಿನೀತ ಹೇಳಿದ್ದೆಲ್ಲವನ್ನೂ ಒಂದೊಂದಾಗಿ ಹೇಳತೊಡಗಿದೆ. ಆಕೆ ಎಲ್ಲವನ್ನೂ ಕತೆಯಂತೆ ಕೇಳಿಸಿಕೊಂಡು ‘ಗುಡ್‍ನೈಟ್’ ಹೇಳಿ ಮಲಗಿಯೇಬಿಟ್ಟಳು! ನಾನೂ ಮೂರ‍್ಕನಂತೆ ‘ಗುಡ್‍ನೈಟ್’ ಹೇಳಿ ಅವಳನ್ನೇ ನೋಡುತ್ತಾ ಮಲಗಿದೆ.

ಕೆಲವು ದಿನಗಳ ನಂತರ ವಿನೀತ್ ಮತ್ತೆ ಕರೆ ಮಾಡಿದಾಗ ಆತ ಬಹಳ ಕುಶಿಯಾಗಿರುವಂತೆ ಕಂಡಿತು. “ಸಂಜೆ ಮನೆ ಬರುತ್ತೇನೆ” ಅಂದ. ಸಮ್ಮತಿಸಿದೆ. ಸಂಜೆ ಸಮಯ. ಅದೂ ಇದೂ ತಿನ್ನುತ್ತಾ ಆ ವಿಚ್ಚೇದನದ ಪ್ರಕರಣದ ಬಗ್ಗೆ ಹೇಳತೊಡಗಿದ. ನಾನಂತೂ ಅವನಿಗೆ ಏನೂ ಸಹಾಯ ಮಾಡಲಾಗಿರಲಿಲ್ಲ. ಆದರೆ ಇಂದು ಆತನ ಮಾತುಗಳನ್ನು ತಾಳ್ಮೆಯಿಂದ ಕೇಳತೊಡಗಿದೆ. ಆ ಕಕ್ಶಿದಾರನ ಮನೆಗೆ ಇವನು, ಸಂದ್ಯಾ ಹೋಗಿದ್ದರಂತೆ. ಇವರನ್ನು ಕಂಡ ದಂಪತಿ ಆದರದಿಂದ ಬರಮಾಡಿಕೊಂಡು, ಆದಶ್ಟು ಬೇಗ ಎಲ್ಲವನ್ನೂ ಮುಗಿಸಿಬಿಡಬೇಕು ಎಂದರಂತೆ. ಇವರ ಮಾತಿನ ಮದ್ಯೆ ಅಲ್ಲಿಗೆ ಬಂದ ಅವರ ಮಗನನ್ನು ಡಾ. ಸಂದ್ಯಾ ಆಡಿಸತೊಡಗಿದರು. ವಿನೀತ್ ಅವರ ದಾಕಲೆಗಳನ್ನು ಪಡೆದು ಎಲ್ಲವೂ ಇತ್ಯರ‍್ತವಾಗುವುದೆಂದು ಹೇಳಿ ಇಬ್ಬರೂ ಹೊರಡಲು ಅಣಿಯಾಗುತ್ತಿದ್ದಂತೇ ಆ ಮನೆಯ ಸೊಸೆ ಸಂದ್ಯಾಳಿಗೆ ಕುಂಕುಮ ನೀಡಿ ಉಡಿ ತುಂಬಲು ಬಂದಳಂತೆ. ಆದರೆ ಸಂದ್ಯಾ ನಿರಾಕರಿಸಿದಾಗ ಅವರ ಮನೆಯವರಿಗೆ ಸಿಟ್ಟು, ಬೇಸರ ಬಂದು ಕೊಂಚ ಒತ್ತಾಯಿಸಿದಾಗಲೂ ಸಂದ್ಯಾ ಕುಂಕುಮ ಪಡೆಯದೇ ಪ್ರಯಾಸಪಟ್ಟು ಎದ್ದು ಹೊರಡುವಾಗ ಆ ಮನೆಯಾಕೆ ಇದು ಅಶುಬವೆಂದೂ,ತುಂಬಿದ ಗರ‍್ಬಿಣಿ ಇದನ್ನೆಲ್ಲ ನಿರಾಕರಿಸುವುದು ಶ್ರೇಯಸ್ಸಲ್ಲವೆಂದೂ ಹೇಳಿದಾಗ, ಸಂದ್ಯಾ “ಇನ್ನು ಕೆಲವೇ ದಿನಗಳಲ್ಲಿ ನೀವೂ ಇವೆಲ್ಲವನ್ನೂ ಕಳೆದುಕೊಳ್ಳಲಿದ್ದೀರಿ. ಹೀಗಿರುವಾಗ ನಿಮ್ಮಿಂದ ಹೇಗೆ ಕುಂಕುಮ ಪಡೆಯಲಿ?” ಎಂದು ಕೇಳಿದಾಗ, ಆಕೆ ದುಕ್ಕ ತಡೆಯಲಾರದೇ ಅಲ್ಲಿಂದ ಓಡಿ ಕೊಟಡಿ ಸೇರಿಕೊಂಡು ಜೋರಾಗಿ ಅಳಲಾರಂಬಿಸಿದಾಗ ಅವಳ ಮಗು ಬೆದರಿ, ಸಂದ್ಯಾಳ ಕೈಯಿಂದ ಬಿಡಿಸಿಕೊಂಡು ಅಮ್ಮನ ಬಳಿ ಹೋಗಿ ಏನೂ ತಿಳಿಯದಾಗಿ ಅಮ್ಮನನ್ನು ಅಪ್ಪಿಕೊಂಡು ಅಳಲಾರಂಬಿಸಿತು. ಅಲ್ಲಿಯವರೆಗೆ ಸುಮ್ಮನಿದ್ದ ಆಕೆಯ ಅತ್ತೆ ಸಂದ್ಯಾಳ ಮಾತಿನ ಅರ‍್ತ ತಿಳಿದು ಮಾತೇ ಬರದಂತಾಗಿ ಸೊಸೆಯನ್ನು ರಮಿಸಲು ಒಳಹೋಗಿ ಆಕೆಯನ್ನು ಕರೆತಂದಳಂತೆ. ತಮ್ಮ ತಪ್ಪಿನ ಅರಿವಾದ ಆಕೆ ಹಾಗೂ ಆಕೆಯ ಗಂಡ ಕ್ಶಮೆ ಕೇಳಿ, ಒಳ್ಳೆಯ ನಿರ‍್ದಾರಕ್ಕೆ ಬರುವುದಾಗಿ ಹೇಳಿ, ಉಡಿ ತುಂಬಿ ಬೀಳ್ಕೊಟ್ಟರಂತೆ.

ಇಶ್ಟು ಹೇಳಿ ವಿನೀತ್ ನಮ್ಮಿಬ್ಬರನ್ನೂ ಸೀಮಂತ ಕಾರ‍್ಯಕ್ಕೆ ಆಹ್ವಾನಿಸಿ, ನಿಮ್ಮಿಂದ ತುಂಬಾ ಸಹಾಯವಾಯಿತೆಂದೂ, ನಿನ್ನ ಬಿಡುವಿಲ್ಲದ ದಿನಚರಿ ಮದ್ಯೆಯೂ ಸಹಕರಿಸಿದ್ದಕ್ಕೆ ದನ್ಯವಾದ ತಿಳಿಸಿದ. ಏನೂ ಸಹಾಯ ಮಾಡದ ನನ್ನನ್ನು ಈತ ಅಬಿನಂದಿಸುವುದೇಕೆ? ಎಂದು ತಿಳಿಯದಾದೆ. ರಾತ್ರಿ ಸ್ಪೂರ‍್ತಿಯೊಂದಿಗೆ ಮಾತನಾಡುತ್ತಾ ವಿನೀತ್ ಹೇಳಿದ್ದೆಲ್ಲವನ್ನೂ ಹೇಳತೊಡಗಿದೆ. ಆದರೆ ಇವಳು ಮಾತ್ರ ಮೊಬೈಲ್ ಹಿಡಿದು ಆಗೀಗ ಸ್ಪಂದಿಸುತ್ತಾ ಕುಳಿತಿದ್ದಳು. ಎಲ್ಲವನ್ನೂ ಹೇಳಿಯಾದ ಮೇಲೆ ಸಂತೋಶದಿಂದ ಕುಪ್ಪಳಿಸತೊಡಗಿದಳು. ನಾನು ಗಾಬರಿಯಾಗಿದ್ದನ್ನು ನೋಡಿ, ನಗುತ್ತಾ, ತನ್ನ ವಾಟ್ಸ್‌ಆಪ್‍ನಲ್ಲಿ ಸಂದ್ಯಾಳೊಂದಿಗೆ ಈ ವಿಶಯದ ಕುರಿತು ಚಾಟ್ ಮಾಡಿ ಸಮಸ್ಯೆಗೆ ಪರಿಹಾರ ನೀಡಿದ್ದನ್ನು ಹುರುಪಿನಿಂದ ತೋರಿಸಿದಳು. ಎಲ್ಲವನ್ನೂ ನೋಡಿದ ನಂತರ ಪ್ರತ್ಯಕ್ಶವಾಗಿ ಅಲ್ಲದಿದ್ದರೂ ಪರೋಕ್ಶವಾಗಿ ಸಹಾಯ ಮಾಡಿದ ನನಗೆ ವಿನೀತನ ಅಬಿನಂದನೆಗೆ ಕಾರಣ ತಿಳಿದು ನಿರಾಳವಾಗಿ, ಆಕೆಯನ್ನೇ ದಿಟ್ಟಿಸಿದೆ.

ಮರುದಿನ ವಿನೀತನ ಮನೆಗೆ ಹೋದಾಗ ಅಲ್ಲಿ ಆ ಕುಟುಂಬವೂ ಬಂದಿತ್ತು. ಸೀಮಂತ ಕಾರ‍್ಯ ಸಂಬ್ರಮದಿಂದ ಸಾಗಿತು. ನನ್ನ ಸ್ಪೂರ‍್ತಿಯ ಚಿಲುಮೆಯತ್ತ ನೋಡಿದೆ. ಎಂದಿನಂತೆ ಅವರಿವರೊಡನೆ ಮಾತನಾಡುತ್ತ, ನಗುಮೊಗದಿಂದ ಇದ್ದಳು. ಅವಳಿಗೇನಾದರೂ ಸರ‍್ಪ್ರೈಸ್ ನೀಡಬೇಕೆನಿಸಿ, ಮನೆಗೆ ಹಿಂದಿರುಗಿ “ಪೇಂಟಿಂಗ್ ಪ್ರದರ‍್ಶನ ಎಲ್ಲಿ, ಯಾವಾಗ ಮಾಡೋಣ” ಎಂದು ಕೇಳಿದೆ. ಆಶ್ಚರ‍್ಯಚಕಿತಳಾಗಿ ನನ್ನಾಕೆ ನನ್ನತ್ತ ತುಂಟ ನಗೆ ಬೀರಿದಳು.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications