ಟೊಯೊಟಾದ ಹೊಸ ಬಂಡಿ ‘ಯಾರಿಸ್’
ಬಲುದಿನಗಳಿಂದ ಯಾವುದೇ ಬಂಡಿಯನ್ನು ಬೀದಿಗಿಳಿಸದೇ ಸುಮ್ಮನಿದ್ದ ಟೊಯೋಟಾ ಕೂಟದವರು ಇದೀಗ ಹೊಸ ಮಾದರಿಯನ್ನು ಬಾರತದ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಟೊಯೋಟಾ ಕೂಟದ ಹೊಚ್ಚ ಹೊಸ ಕೊಡುಗೆಯೇ ಯಾರಿಸ್.
ಬಿಣಿಗೆ ಮತ್ತು ಸಾಗಣಿ(Engine and Transmission):
ಟೊಯೊಟಾದ ಈ ಹೊಸ ಬಂಡಿಗೆ ಯಾವುದೇ ಡೀಸೆಲ್ ಬಿಣಿಗೆ ಅಳವಡಿಸಲಾಗಿಲ್ಲ. ಕೇವಲ ಪೆಟ್ರೋಲ್ ಬಿಣಿಗೆ ಮಾತ್ರ ನೀಡಲಾಗಿದ್ದು, ಅದಕ್ಕೆ ಎರಡು ಬೇರೆಯಾದ ಸಾಗಣಿಗಳ ಆಯ್ಕೆ ಇದೆ. 1.5 ಲೀಟರ್ ಅಳತೆಯ 4 ಉರುಳೆಗಳ ಪೆಟ್ರೋಲ್ ಬಿಣಿಗೆ 107 ಕುದುರೆಬಲ ನೀಡಿದರೆ, 140 ನ್ಯೂಟನ್ ಮೀಟರ್ ತಿರುಗುಬಲ ಹುಟ್ಟುಹಾಕಲಿದೆ. 6-ವೇಗದ ಓಡಿಸುಗನಿಡಿತದ ಸಾಗಣಿ(Manual Transmission) ಅಳವಡಿಸಿದ ಬಂಡಿ 17.1 ಕಿ.ಮೀ.ಪ್ರತಿ ಲೀಟರ್ ಮಯ್ಲಿಯೋಟ ನೀಡಿದರೆ, ಸಿವಿಟಿ-ಐ ಚಳಕದ 7-ವೇಗದ ಸಾಗಣಿ ಪಡೆದಿರುವ ಬಂಡಿಗಳ ಮಯ್ಲಿಯೋಟ, ಪ್ರತಿ ಲೀಟರ್‌ಗೆ 17.8 ಕಿಮೀ ಆಗಿರಲಿದೆ.
ಮೈಮಾಟ:
ಮೈಮಾಟದ ವಿಶಯದಲ್ಲಿ ಯಾರಿಸ್ ಪರಿಪೂರ‍್ಣ ಸೆಡಾನ್. ಸುಮಾರು 4.4 ಮೀಟರ್ ಉದ್ದ, 1.73 ಮೀಟರ್ ಅಗಲ ಮತ್ತು ಸುಮಾರು 1.49 ಮೀಟರ್ ಎತ್ತರದ ಆಯಗಳು ಇದಕ್ಕೆ ಸಾಕ್ಶಿಯಾಗಿವೆ. ಉದ್ದ, ಸಪೂರವಾದ ಮುಂದೀಪಗಳು, ತೆಳುವಾದ ಮುನ್ಕಂಬಿ ತೆರೆ(Front Grill) ಬಂಡಿಗೆ ಅಚ್ಚುಕಟ್ಟಾದ ನೋಟ ತಂದಿವೆ. ಟೊಯೋಟಾದವರು ಯಾರಿಸ್ ಬಂಡಿಯ ಈಡುಗಾರಿಕೆಯನ್ನು ಆದಶ್ಟು ಸಾಮಾನ್ಯ ಸೆಡಾನ್‌ನಂತೆ ಉಳಿಸಿಕೊಂಡಿದ್ದಾರೆ, ಹೀಗಾಗಿ ಈಡುಗಾರಿಕೆಯಲ್ಲಿ(Design) ಹೆಚ್ಚಿನ ಹೊಸತುಗಳು ನೋಡಲು ಕಂಡುಬರುವುದಿಲ್ಲ.
ಬಂಡಿಯ ಒಳಬಾಗದತ್ತ ಕಣ್ಣು ಹಾಯಿಸಿದರೆ ಸಾಕಶ್ಟು ವಿಶೇಶತೆಗಳು ಕಂಡು ಬರುತ್ತವೆ. ಯಾರಿಸ್‌ನ ಒಳಬಾಗ ಬೀಜ್(Beige) ಬಣ್ಣದಿಂದ ಕಂಗೊಳಿಸುತ್ತದೆ. ಹೊಸ ಸೊಗಸಾದ ತೋರುಮಣೆ(Dash Board), ತೋರುಮಣೆಯಲ್ಲಿ ಜೋಡಿಸಲ್ಪಟ್ಟ ಓಟದಳಕ(Odometer), ವೇಗದಳಕದ(Speedometer) ಅಕ್ಶರಗಳ ಗಾತ್ರ ದೊಡ್ಡದಾಗಿದ್ದು, ಓಡಿಸುಗರಿಗೆ ಇದು ಅನುಕೂಲ. 7 ಇಂಚಿನ ಸೋಕು ತೆರೆಯ(Touch Screen) ತಿಳಿನಲಿ ಏರ‍್ಪಾಟು(Infotainment System) ನೀಡಲಾಗಿದೆ. ಇದರೊಂದಿಗೆ ಚೂಟಿಯುಲಿ(Smart Phone) ಹೊಂದಿಸಿಕೊಂಡು, ನಮ್ಮ ಚೂಟಿಯೂಲಿ ಬಳಸಬಹುದು. ಆದರೆ ಸೋಕು ತೆರೆಯ ಗುಣಮಟ್ಟ ಅಶ್ಟಕಶ್ಟೇ. ಹಾಡು, ರೇಡಿಯೋಗಳ ದನಿ ಮಟ್ಟವನ್ನು ಕೈಸನ್ನೆ ಮೂಲಕ ಹೆಚ್ಚು ಕಡಿಮೆ ಮಾಡಬಹುದಾದ ‘ಗೆಶ್ಚರ್ ಕಂಟ್ರೋಲ್(Gesture Control)’ ಎಂಬ ವಿಶೇಶತೆ ನೀಡಿದ್ದಾರೆ. ಓಡಿಸುಗ ಮತ್ತು ಪಕ್ಕದ ಸೀಟಿನವರು ಸಾಮಾನ್ಯವಾಗಿ ಕೈಗಳನ್ನು ಆಚೀಚೆ ಆಡಿಸಿದರೂ, ಈ ‘ಗೆಶ್ಚರ್ ಕಂಟ್ರೋಲ್’ ವಿಶೇಶತೆ ಅದನ್ನೇ ಸನ್ನೆಯಾಗಿ ಗುರುತಿಸಿ ಹಾಡಿನ ಮಟ್ಟ ಏರಿಳಿತ ಮಾಡಿ ಎಡವಟ್ಟಾಗುವ ಸಾದ್ಯತೆ ಅಲ್ಲಗಳೆಯುವಂತಿಲ್ಲ. ಬಂಡಿಯ ತಿಳಿನಲಿ ಏರ‍್ಪಾಟಿನಲ್ಲಿ ಯಾವುದೇ ತಲುಪುದಾರಿ ಏರ‍್ಪಾಟನ್ನು(Navigation System) ನೀಡದೇ ಇರುವುದು ಅಚ್ಚರಿಯ ಸಂಗತಿ. ತಲುಪುದಾರಿ ಬಳಸಬೇಕೆನ್ನುವರು ಬ್ಲೂಟೂತ್ ಮೂಲಕ ತಮ್ಮ ಚೂಟಿಯುಲಿ ಜೋಡಿಸಿ, ಅದರಲ್ಲಿನ ತಲುಪುದಾರಿಯನ್ನೇ ಸೋಕು ತೆರೆಯ ಮೇಲೆ ನೋಡಬಹುದು.
ಯಾರಿಸ್, ಒಳಗೆ ಸಾಕಶ್ಟು ಜಾಗ ಹೊಂದಿದೆ. ಓಡಿಸುಗನ ಕೂರುಮಣೆಯನ್ನು ತನಗೆ ಒಗ್ಗುವಂತೆ ಮೇಲೆ, ಕೆಳಗೆ, ಮುಂದೆ, ಹಿಂದೆ ಹೀಗೆ ಜೋಡಿಸಿಕೊಳ್ಳಬಹುದು. ಈ ಗುಂಪಿಗೆ ಸೇರುವ ಇತರೆ ಕೂಟಗಳ ಯಾವುದೇ ಬಂಡಿಗಳಲ್ಲೂ ಇಂತ ಏರ‍್ಪಾಟು ಇಲ್ಲ, ಇದೇ ಮೊಟ್ಟ ಮೊದಲು. ಹಿಂಬದಿ ಪಯಣಿಸುವವರಿಗೂ ಕೈ, ಕಾಲು ಚಾಚಿಕೊಳ್ಳಲು ಬೇಕಾದಶ್ಟು ಜಾಗವಿದೆ. ಹಿಂಬದಿಯಲ್ಲಿ ಬಂಡಿಯ ಎತ್ತರ ಸಾಕಶ್ಟು ಇಲ್ಲದೇ ಇರುವುದರಿಂದ, ಬಲು ಎತ್ತರದವರು ಕುಳಿತುಕೊಳ್ಳಲು ತುಸು ತೊಂದರೆ. ಮುಂಬದಿಯ ತೋಳು ಊರುಕದ ಕಟ್ಟೆ(Arm Rest Console) ತುಸು ಹಿಂದಕ್ಕೆ ಚಾಚಿದ್ದರಿಂದ , ಹಿಂಬದಿಯ ಕೂರುಮಣೆಯ ಮದ್ಯದಲ್ಲಿ ಕುಳಿತುಕೊಳ್ಳುವವರಿಗೆ ಅದು ತೊಡಕಾಗಿರಲಿದೆ. ಸಾಮಾನ್ಯವಾಗಿ ಹಿಂಬದಿಯ ಪಯಣಿಗರಿಗೆಂದೇ ಹಿಂಬದಿಯ ಗಾಳಿಪಾಡಿನ ಕಿಂಡಿಗಳನ್ನು(Air Condition Vents) ಕೂರುಮಣೆಯ ಎದುರು ಬಾಗದಲ್ಲಿ ಜೋಡಿಸಿರುತ್ತಾರೆ. ಈ ಗಾಳಿಪಾಡಿನ ಕಿಂಡಿಗಳನ್ನು ಹಿಂಬದಿಯ ಸಾಲಿಗೆ ಎದುರಾಗಿ ಮೇಲಗಡೆ ಜೋಡಿಸಿ, ಟೊಯೋಟಾ ಬಿಣಿಗೆಯರಿಗರು ಇಲ್ಲಿ ತಮ್ಮ ಜಾಣ್ಮೆ ಮೆರೆದಿದ್ದಾರೆ. ಇದು ತಂಪು ಗಾಳಿಯನ್ನು ಹಿಂಬದಿಯ ಮೂಲೆ ಮೂಲೆಗೂ ತಲುಪಿಸಿ ಹಿತ ನೀಡಲಿದೆ.
ಸರಕು ಸಾಗಿಸಲು 476 ಲೀಟರ್ ಅಳತೆಯ ದೊಡ್ಡದಾದ ಸರಕುಚಾಚಿಕೆ(Boot Space), ಬಂಡಿಯ ಎಲ್ಲ ಬಾಗಿಲಲ್ಲೂ 2 ಬಾಟಲಿ ಸೇರುವೆಗಳನ್ನು(Bottle Holders) ಒದಗಿಸಿದ್ದಾರೆ. ಓಡಿಸುಗನ ಪಕ್ಕದಲ್ಲಿ 2 ಕಪ್ ಸೇರುವೆಗಳು(Cup holders) ಮತ್ತು ಮೊಬೈಲ್ ಕೂಡಿಡಲು ಜಾಗ ಒದಗಿಸಿದ್ದಾರೆ. ಅಗಲವಾದ ಸರಕುಗೂಡನ್ನು(Glove Box) ಇಬ್ಬಾಗ ಮಾಡಿ, ತಂಪು ಕುಡಿಗೆಗಳನ್ನು(Drink) ಸೇರಿಸಿಡಲು ಒಂದು ಬಾಗ ಮತ್ತು ಇತರೆ ಸರಕು ಕೂಡಿಡಲು ಇನ್ನೊಂದು ಬಾಗವಾಗಿ ಮಾಡಲಾಗಿದೆ. ಸುತ್ತಮುತ್ತ ಕೇಳಿಬರುವ ಬೇಡದ ಸದ್ದು, ಗದ್ದಲವನ್ನು ಕಡಿತಗೊಳಿಸುವ ವಿಶೇಶ ಗಾಜನ್ನು ಗಾಳಿತಡೆಗೆ(Wind Shield) ಜೋಡಿಸಿದ್ದು ಮತ್ತೊಂದು ವಿಶೇಶ. ಅಶ್ಟೇ ಅಲ್ಲದೇ ಗಾಳಿತಡೆಯ ಈ ಗಾಜು ನೇಸರನ ಬಿಸುಪಿನ ಕದಿರುಗಳಿಂದ ಹೆಚ್ಚಿನ ಹಾನಿಯಾಗದಂತೆ ತಡೆಯಬಲ್ಲದು. ಯಾರಿಸ್ ಬಂಡಿ ಸುಯ್ ಅಂಕೆ ಏರ‍್ಪಾಟು(Cruise Control) ಕೂಡ ಪಡೆದಿದೆ. ಸಿವಿಟಿ ಚಳಕದ ಸಾಗಣಿ ಹೊಂದಿರುವ ಬಂಡಿಗಳಿಗೆ ತಿಗುರಿ(Steering) ಕೆಳಗಡೆ, ಓಡಿಸುಗನಿಗೆ ನೆರವಾಗುವಂತೆ ಕೈ-ತುಳಿಗೆಗಳನ್ನು(Paddle Shifters) ನೀಡಲಾಗಿದ್ದು, ಇದರ ಮೂಲಕ ಹಲ್ಲುಗಾಲಿ(Gear) ಬದಲಾಯಿಸಿ ಜುಮ್ಮನೆ ಸಾಗಬಹುದು.
ಬಂಡಿಯ ಕಾಪಿನ ವಿಶಯದಲ್ಲಂತೂ ಯಾರಿಸ್ ಯಾವುದೇ ರಾಜಿ ಮಾಡಿಕೊಂಡಂತಿಲ್ಲ, ಅದಕ್ಕೆ ಎನ್‌ಕ್ಯಾಪ್(NCAP) ಸಂಸ್ತೆಯಿಂದ 5 ಚುಕ್ಕೆ ಪಡೆದಿದೆ. ಬಾರತದ ಸೆಡಾನ್‌ಗಳಲ್ಲಿ ಯಾರೂ ನೀಡದ, 7-ಗಾಳಿ ಚೀಲಗಳನ್ನು(Air Bag) ಮೊಟ್ಟ ಮೊದಲ ಬಾರಿ ಟೊಯೋಟಾ ಸೆಡಾನ್ ಬಂಡಿಯೊಂದರಲ್ಲಿ ನೀಡುತ್ತಿದೆ. ಸಿಲುಕದ ತಡೆತದ ಏರ‍್ಪಾಟು(Antilock Brake System) ಯಾರಿಸ್‌ನಲ್ಲಿರಲಿದೆ. ಗುಡ್ಡ-ಬೆಟ್ಟಗಳನ್ನೇರುವಾಗ ಬಂಡಿ ಹಿಂದುರಳದಂತೆ ನೆರವು ಒದಗಿಸುವ ಏರ‍್ಪಾಟು (Hill Launch Assist System) ಕೂಡ ಯಾರಿಸ್ ಬಂಡಿಯಲ್ಲಿರುವ ಕಾಪಿನ ವಿಶೇಶ. ಟಯರ್‌ಗಳ ಗಾಳಿಯೊತ್ತಡ ತಿಳಿಸುವ ಏರ‍್ಪಾಟು (Tyre Monitoring System), ನಿಲುಗಡೆಗೆ ನೆರವಾಗುವ ಅರಿವಿಕ ಮತ್ತು ತಿಟ್ಟಕಗಳು(Parking Sensors and Camera), ಹಿಂಬದಿಯ ಮಂಜಿಳಕ(Defogger), ತಂತಾನೇ ಹೊತ್ತಿಕೊಳ್ಳಬಲ್ಲ ಮುಂದೀಪಗಳು(Automatic Headlamps), ತಂತಾನೇ ಕೆಲಸ ಮಾಡುವ ಒರೆಸುಕಗಳು(Automatic Wipers), ಕೆಲವು ಮೇಲ್ಮಟ್ಟದ ಮಾದರಿಗಳಲ್ಲಿ ಅಳವಡಿಸಲಾಗಿದೆ.
ಪಯ್ಪೋಟಿ ಮತ್ತು ಹೋಲಿಕೆ:
ಹೋಂಡಾ ಸಿಟಿ ಮತ್ತು ಹ್ಯುಂಡಾಯ್ ವೆರ‍್ನಾ ಬಂಡಿಗಳಿಗೆ ಯಾರಿಸ್ ಎದುರಾಳಿಯಾಗಿ ನಿಲ್ಲಲಿದೆ. ಆಯಗಳ ಹೋಲಿಕೆಯನ್ನು ಒಮ್ಮೆ ನೋಡಿದಾಗ ಯಾರಿಸ್ ಬಂಡಿ, ಸಿಟಿ ಮತ್ತು ವೆರ‍್ನಾಗಳ ನಡುವೆ ಹೆಚ್ಚಿನ ಬೇರ‍್ಮೆ ಕಂಡುಬರುವುದಿಲ್ಲ. ಉದ್ದ ಮತ್ತು ಗಾಲಿಗಳ ನಡುವಿನ ದೂರ, ಈ ಆಯಗಳಲ್ಲಿ ಯಾರಿಸ್ ತುಸು ಕಿರಿದೆನಿಸಬಹುದು. ಆದರೆ ಅಗಲ ಮತ್ತು ಎತ್ತರ ಇವೆರಡರಲ್ಲಿ ಮುಂದಿದೆ. ಗಾಲಿಗಳ ಗಾತ್ರ ಸಿಟಿ ಮತ್ತು ವೆರ‍್ನಾಗಳಿಗಿಂತ , ಯಾರಿಸ್‌ನಲ್ಲಿ ಒಂದಿಂಚು ಚಿಕ್ಕದಿವೆ. 510 ಲೀಟರ್ ಸರಕು ಚಾಚಿಕೆ ಹೊಂದಿರುವ ಹೋಂಡಾ ಸಿಟಿ ದೊಡ್ಡದಾಗಿದೆ. ವಿವರಗಳಿಗೆ ಕೆಳಕಂಡ ಪಟ್ಟಿ ನೋಡಿ.
ಬಿಣಿಗೆ ಮತ್ತು ಸಾಗಣಿಗಳ ಹೋಲಿಕೆಯತ್ತ ಒಂದೊಮ್ಮೆ ಕಣ್ಣುಹಾಯಿಸಿದಾಗ, ಯಾರಿಸ್ ಮತ್ತು ಸಿಟಿ ಬಂಡಿಗಳ ಬಿಣಿಗೆ ಒಂದೇ ಅಳತೆಯುಳ್ಳದ್ದಾಗಿವೆ. ತುಸು ದೊಡ್ಡದಾದ ವೆರ‍್ನಾ ಬಿಣಿಗೆ 1.6 ಲೀಟರ್ ಅಳತೆಯದ್ದು, ಮೂರು ಬಿಣಿಗೆಗಳ ಪೈಕಿ ಹೆಚ್ಚಿನ ಕಸುವು ಮತ್ತು ತಿರುಗುಬಲ ಪಡೆದಿದೆ. ಕಸುವು ಮತ್ತು ತಿರುಗುಬಲದಲ್ಲಿ ಯಾರಿಸ್ ಮೂರರಲ್ಲಿ ಕೊನೆಯ ಸ್ತಾನ ಪಡೆದಿದೆ. ಹೆಚ್ಚಿನ ವಿವರಗಳು ಈ ಪಟ್ಟಿಯಲ್ಲಿ ಕಾಣಬಹುದು.
ಬೆಲೆ:
ಕೆಂಪು, ಬೆಳ್ಳಿ, ಕಂದು, ಬೂದು, ಮುತ್ತಿನಂತ ಬಿಳಿ ಮತ್ತು ಬಿಳಿ ಹೀಗೆ 6 ಬಣ್ಣಗಳಲ್ಲಿ ಯಾರಿಸ್ ಮಾರಾಟಕ್ಕಿದೆ. ಸುಮಾರು 8.75 ಲಕ್ಶ ರೂಪಾಯಿಗಳ ಆರಂಬಿಕ ಮೊತ್ತದಿಂದ 14.07 ಲಕ್ಶ ರೂಪಾಯಿಗಳಲ್ಲಿ ಯಾರಿಸ್ ಹಲವು ಮಾದರಿಗಳು ದೊರೆಯಲಿವೆ. ಪಟ್ಟಿಯಲ್ಲಿ ವಿವಿದ ಮಾದರಿ ಮತ್ತು ಅವುಗಳ ಬೆಲೆಯನ್ನು ನೀಡಲಾಗಿದೆ. ಪಟ್ಟಿಯಲ್ಲಿರುವ ಬೆಲೆ- ಬೆಂಗಳೂರಿನ ಮಾರಾಟದ ಬೆಲೆಯಾಗಿರುತ್ತದೆ.
(ಮಾಹಿತಿ ಮತ್ತು ತಿಟ್ಟ ಸೆಲೆ: toyotabharat.com, autocarindia.com)
ಇತ್ತೀಚಿನ ಅನಿಸಿಕೆಗಳು