ಪ್ರತಿಬೆಗೆ ಬೇಕಿದೆ ಪ್ರೋತ್ಸಾಹದ ಟಾನಿಕ್

ಬೆಂಬಲ, ಪ್ರೋತ್ಸಾಹ, Support, Encouragement

ನಮ್ಮ ಅಜ್ಜಿಗೆ ವಯಸ್ಸಾದರೂ ಸಹ ಅದೆಶ್ಟು ಚೆನ್ನಾಗಿ ಹಾಡುತ್ತಿದ್ದಳೆಂದರೆ ಅವಳ ಹಾಡಿಗೆ ಮಾರು ಹೋಗದವರೇ ಇರಲಿಲ್ಲ. ಜನಪದ ಗೀತೆಗಳು, ಬಕ್ತಿ ಗೀತೆಗಳು, ಸೋಬಾನೆ ಪದಗಳು, ಒಗಟುಗಳು, ಹೀಗೆ ಜನಪದ ಸಂಸ್ಕ್ರುತಿಯ ಗೀತೆಗಳನ್ನು ತುಂಬಾ ಸೊಗಸಾಗಿ ಹಾಡುತ್ತಿದ್ದಳು. ನಮ್ಮ ಹಳ್ಳಿಯಲ್ಲಿ ನಡೆಯುವ ನಾಮಕರಣ, ಉಡಿ ತುಂಬುವ ಕಾರ‍್ಯಕ್ರಮ, ಪೂಜೆ ಪುನಸ್ಕಾರ – ಹೀಗೆ ಬೇರೆ ಬೇರೆ ಕಾರ‍್ಯಕ್ರಮಗಳಲ್ಲಿ ನಮ್ಮ ಅಜ್ಜಿಗೆ ಆಹ್ವಾನ ಇದ್ದೇ ಇರುತ್ತಿತ್ತು.

ಆದರೆ ಇಂದು ನನ್ನ ಅಜ್ಜಿ ನನ್ನೊಡನೆ ಇಲ್ಲ. ಅವಳ ಪ್ರತಿಬೆಯನ್ನು ಇನ್ನೂ ಹೆಚ್ಚು ಮಂದಿಗೆ ಪರಿಚಯಿಸುವಂತಹ ಅವಕಾಶಗಳು ಆಗ ಅವಳಿಗೆ ದೊರೆಯಲಿಲ್ಲ. ವಯಸ್ಸಾದಂತೆ, ಅಜ್ಜಿ ಮನೆ ಬಿಟ್ಟು ಹೋಗುವುದೇ ಕಡಿಮೆಯಾಗಿತ್ತು. ಅಜ್ಜಿ ಸಂಪಾದಿಸಿದ್ದ ಅಪೂರ‍್ವ ಜನಪದ ಸಾಹಿತ್ಯ,  ಆಕೆಯಲ್ಲಿದ್ದ ಪ್ರತಿಬೆ ಎಲೆ ಮರೆ ಕಾಯಿಯಂತಾಗಿ ಕಣ್ಮರೆಯಾಯಿತು.

ಇಂತಹ ಅನೇಕ ಪ್ರತಿಬೆಗಳು ನಮ್ಮೊಂದಿಗೆ ಇರುವುದು ನಮಗೆ ತಿಳಿದ ವಿಶಯ. ಕುರಿ ಕಾಯುವ ಹುಡುಗ ಸಿನಿಮಾ ಹಾಡುಗಳನ್ನು ಸೊಗಸಾಗಿ ಹೇಳಿರುವುದು, ಹಳ್ಳಿ ಹೆಣ್ಣು ಮಗಳು ಚೆನ್ನಾಗಿ ಹಾಡು ಹೇಳಿರುವುದು, ಗದ್ದೆ ಕೆಲಸ ಮಾಡುತ್ತಿದ್ದ ಹಿಮಾ ದಾಸ್ ಕ್ರೀಡಾ ಕ್ಶೇತ್ರದಲ್ಲಿ ಸಾದನೆ ಮಾಡಿದ್ದು, ಬಾಗಲಕೋಟ ಜಿಲ್ಲೆಯ ಒಬ್ಬ ಯುವಕ ಹೆಚ್ಚು ಮೈಲೇಜ್ ನೀಡುವ ಬೈಕ್ ತಯಾರಿಸಿದ್ದು, ತಮ್ಮ ಹಾಸ್ಯಪ್ರಗ್ನೆಯಿಂದ ಜಗತ್ತನ್ನೇ ನಗಿಸುವ ಶೂರರು, ಕರಕುಶಲ ಕಲೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿದವರು – ಹೀಗೆ ಇವರಂತೆ ಇನ್ನೂ ಹಲವಾರು ಪ್ರತಿಬೆಗಳು ಎಲ್ಲಾ ಕ್ಶೇತ್ರಗಳಲ್ಲಿದ್ದಾರೆ. ಆದರೆ ಇವರು ಬೆಳಕಿಗೆ ಬರುವುದೇ ಅಪರೂಪ. ಕಾರಣ ಅವರ ಪ್ರತಿಬೆಗೆ ದೊರೆಯದ ಪ್ರೋತ್ಸಾಹ, ಜನರಲ್ಲಿರುವ ಕಾಲೆಳೆಯುವ ಬುದ್ದಿ, ನಿರ‍್ಲಕ್ಶ್ಯ ಮನೋಬಾವ, ಜಾತೀಯತೆ, ಹಣಕಾಸಿನ ಪರಿಸ್ತಿತಿ, ಸೂಕ್ತ ಮಾರ‍್ಗದರ‍್ಶನದ ಕೊರತೆ, ಹೀಗೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಬಹುದು.

ಅನೇಕರಿಗೆ ತಮ್ಮ ಪ್ರತಿಬೆಯನ್ನು ಜಗತ್ತಿಗೆ ಪರಿಚಯಿಸಲು ಅವಕಾಶವೇ ಇಲ್ಲವಾಗಿವೆ. ಇತ್ತೀಚಿಗೆ ಹಳ್ಳಿ ಹಳ್ಳಿಗೂ ಇಂಟರ‍್ನೆಟ್ ಕಾಲಿಡುತ್ತಿರುವುದರಿಂದ ಕೆಲವು ಪ್ರತಿಬೆಗಳು ಜಗತ್ತಿಗೆ ಪರಿಚಯವಾಗುತ್ತಿರುವುದು ಸಂತೋಶದ ವಿಶಯ. ಇಂತಹ ಪ್ರತಿಬೆಗಳನ್ನು ಗುರುತಿಸಿ ಬೆಳೆಸುವ ಜವಾಬ್ದಾರಿ ನಮ್ಮದೇ ಆಗಿದೆ ಅಲ್ಲವೇ? ಸರಕಾರ, ಸರಕಾರೇತರ ಸಂಸ್ತೆಗಳು, ಸ್ತಳೀಯ ಸಂಗಟನೆಗಳು, ಸಂಸ್ತೆಗಳು ಈ ಕೆಲಸವನ್ನು ಮಾಡಬೇಕಾಗಿದೆ. ಬೇರೆ ಬೇರೆ ಕ್ಶೇತ್ರಗಳಲ್ಲಿನ ಉತ್ತಮ ಪ್ರತಿಬೆಗಳಿಗೆ ಪ್ರೋತ್ಸಾಹದ ಟಾನಿಕ್ ನೀಡುತ್ತಿದ್ದರೆ ಅವರ ಪ್ರತಿಬೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಬಹುದಾಗಿದೆ. ಆಗ ಮಾತ್ರ ಎಲೆಮರೆಕಾಯಿಯಂತಿರುವ ಪ್ರತಿಬೆಗಳು ಮಿಂಚಲು ಸಾದ್ಯ.

( ಚಿತ್ರ ಸೆಲೆ: pexels.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks