ಕನ್ನಡ ಸಿನಿಮಾ ರಂಗ ಕಂಡ ಮೇರು ನಿರ‍್ದೇಶಕ ಸಿದ್ದಲಿಂಗಯ್ಯ

– ಸುನಿಲ್ ಮಲ್ಲೇನಹಳ್ಳಿ.

ಕನ್ನಡ ಸಿನಿಮಾ ರಂಗ ಕಂಡ ಅತ್ಯುತ್ತಮ ಹಾಗೂ ಮೇರು ಪ್ರತಿಬೆಯ ನಿರ‍್ದೇಶಕರಲ್ಲಿ ಸಿದ್ದಲಿಂಗಯ್ಯನವರು ಒಬ್ಬರು. ಅವರ ಬಗ್ಗೆ ಅಶ್ಟಾಗಿ ಅಲ್ಲದಿದ್ದರೂ, ಕೆಲ ವಿಶಯಗಳನ್ನು ಕೇಳಿ ತಿಳಿದಿದ್ದೆ. ‘ಬಂಗಾರದ ಮನುಶ್ಯ’, ‘ಬೂತಯ್ಯನ ಮಗ ಅಯ್ಯು’, ‘ಮೇಯರ್ ಮುತ್ತಣ್ಣ’… ಇಂತಹ ಜನಪ್ರಿಯ ಚಲನಚಿತ್ರಗಳನ್ನು ಕನ್ನಡಿಗರಿಗೆ ನೀಡಿದ ಅವರ ಸಾದನೆ ಅಸಾದಾರಣವಾದದ್ದು ಎಂದು ಗೊತ್ತಾಗಿದ್ದು ಇತ್ತೀಚೆಗಶ್ಟೇ.

ಇತ್ತೀಚೆಗೆ ಸಿದ್ದಲಿಂಗಯ್ಯನವರ ಜನ್ಮದಿನದ ಪ್ರಯುಕ್ತ ಕನ್ನಡ ರೇಡಿಯೋ ವಾಹಿನಿಯಲ್ಲಿ ಅವರ‌ ಕುರಿತು ಸುದೀರ‍್ಗವಾಗಿ ಮೂಡಿಬಂದ ಕಾರ‍್ಯಕ್ರಮವನ್ನು ಕೇಳಿದಾಗಲೇ ಹಲವು ವಿಶಯಗಳು ತಿಳಿದಿದ್ದು. ಇಂತಹ ಒಬ್ಬ ಪ್ರತಿಬಾವಂತ ನಿರ‍್ದೇಶಕರ ಬಗ್ಗೆ ಇದುವರೆಗೂ ಹೆಚ್ಚಿನದ್ದೇನನ್ನೂ ತಿಳಿಯದೇ ಇದ್ದಿದ್ದಕ್ಕೆ ಬೇಸರ ಪಟ್ಟೆ. ಇದಾದ ಮೇಲೆ ಸಿದ್ದಲಿಂಗಯ್ಯನವರ ಕುರಿತಾಗಿರುವ ವಿವಿದ ಬರಹಗಳನ್ನು ಓದುವ ಮೂಲಕ ಅವರ ಬಗ್ಗೆ ತಿಳಿದುಕೊಂಡೆ. ಮೇಯರ್ ಮುತ್ತಣ್ಣ, ಬಂಗಾರದ ಮನುಶ್ಯ ಸಿನಿಮಾಗಳನ್ನು ಮತ್ತೊಮ್ಮೆ ನೋಡಿದೆ.

ಅವರ ಬಗ್ಗೆ ನಾನು ಕಲೆ ಹಾಕಿದ ಒಂದಶ್ಟು ಮಾಹಿತಿಯನ್ನು ‌ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವೇ ಈ ಬರಹ.

‘ಮೇಯರ್ ಮುತ್ತಣ್ಣ’ – ಸಿದ್ದಲಿಂಗಯ್ಯನವರು ನಿರ‍್ದೇಶಿಸಿದ ಮೊದಲ ಚಿತ್ರ

1936 ಡಿಸೆಂಬರ್ 15ರಂದು ಜನಿಸಿದ ಸಿದ್ದಲಿಂಗಯ್ಯನವರು ಮೂಲತಹ ತುಮಕೂರು‌ ಜಿಲ್ಲೆಯ‌ ಶಿರಾ ತಾಲೂಕಿನ ತರೂರಿನವರು. ಅವರ ತಂದೆ ಲಿಂಗಣ್ಣ, ತಾಯಿ‌ ಸಿದ್ದಬಸಮ್ಮ. ಎಳೆಯ ವಯಸ್ಸಿನಲ್ಲೇ ತಾತ ಹಾಗೂ ಸೋದರ ಮಾವನವರ ಕಲಾಬಿರುಚಿಯ ಪ್ರಬಾವಕ್ಕೊಳಗಾಗಿ ಸಿನಿಮಾರಂಗದಲ್ಲಿ ಆಸಕ್ತಿ ಬೆಳೆಸಿಕೊಂಡರು. ಮೈಸೂರಿನಲ್ಲಿದ್ದ ಬಸವರಾಜಯ್ಯನವರ ನವಜ್ಯೋತಿ ಸ್ಟುಡಿಯೋದಲ್ಲಿ (ಅದೇ ನಂತರದ ಪ್ರೀಮಿಯರ್ ಸ್ಟುಡಿಯೋ) ಲೈಟ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ನಂತರ ಆಗಿನ ಹೆಸರಾಂತ ನಿರ‍್ದೇಶಕರಾದ ಶಂಕರ್ ಸಿಂಗ್, ವಿಟಲಾಚಾರ‍್ಯ ಅವರ ಬಳಿ ಕಿರಿಯ ನಿರ‍್ದೇಶಕರಾಗಿ ಕೆಲಸ ಮಾಡಿ, ಅಲ್ಲಿ ಸಾಕಶ್ಟು ಅನುಬವವನ್ನು ಪಡೆದುಕೊಳ್ಳುತ್ತಾರೆ. ಮುಂದೆ ಹಾಸ್ಯನಟ ಬಾಲಣ್ಣ ಅವರ ಬೆಂಬಲ ಹಾಗೂ ಪ್ರೋತ್ಸಾಹದಿಂದಾಗಿ 1969ರಲ್ಲಿ ‘ಮೇಯರ್ ಮುತ್ತಣ್ಣ’ ಚಲನಚಿತ್ರವನ್ನು ನಿರ‍್ದೇಶಿಸುತ್ತಾರೆ.

ಸಿದ್ದಲಿಂಗಯ್ಯನವರ ನಿರ‍್ದೇಶನದ ಮೊದಲ ಚಿತ್ರ ‘ಮೇಯರ್ ಮುತ್ತಣ್ಣ’. ದ್ವಾರಕೀಶ್ ನಿರ‍್ಮಾಣದ, ರಾಜನ್-ನಾಗೇಂದ್ರ ಸಂಗೀತ ನೀಡಿರುವ ಹಾಗೂ ಡಾ. ರಾಜ್, ಬಾರತಿ ಅಬಿನಯಿಸಿರುವ  ಈ ಚಿತ್ರ ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ‌ ಸೆಳೆತ ಸ್ರುಶ್ಟಿಸುತ್ತದೆ. ಹಳ್ಳಿಗಾಡಿನಿಂದ ಪಟ್ಟಣಕ್ಕೆ ಬರುವ ಮುಗ್ದ ಯುವಕ ತನ್ನ ಸ್ವಂತ ಸಾಮರ‍್ತ್ಯ ಹಾಗೂ ಸಹಾಯ ಮನೋಬಾವದಿಂದ ಪಟ್ಟಣದ ಮೇಯರಾಗುವ ಕತೆಯನ್ನು ಅತ್ಯಂತ ಮನೋಗ್ನವಾಗಿ ಚಿತ್ರಿಸಲಾಗಿದೆ.

ಸಿದ್ದಲಿಂಗಯ್ಯನವರಿಗೆ ಹೆಸರು ತಂದುಕೊಟ್ಟ ಚಿತ್ರಗಳು

ಸಿದ್ದಲಿಂಗಯ್ಯನವರ ನಿರ‍್ದೇಶನದಲ್ಲಿ  1972ರಲ್ಲಿ ತೆರೆಕಂಡ ‘ಬಂಗಾರದ ಮನುಶ್ಯ’ ಚಲನಚಿತ್ರವು ಕನ್ನಡ ಚಿತ್ರೋದ್ಯಮವು ಹಿಂದೆಂದೂ ಕಂಡರಿಯದ ದಾಕಲೆಗಳನ್ನು ಸ್ರುಶ್ಟಿಸಿತು. ಈ ಸಿನಿಮಾ ಪ್ರಸಿದ್ದ ಪತ್ತೇದಾರಿ ಕಾದಂಬರಿಕಾರ ಟಿ.ಕೆ. ರಾಮರಾವ್ ಅವರ ‘ಬಂಗಾರದ ಮನುಶ್ಯ’ ಕಾದಂಬರಿ ಆದಾರಿತವಾದುದು.  ಈ ಚಲನಚಿತ್ರ ನಿರ‍್ಮಿಸಿರುವ ಎಶ್ಟೋ ದಾಕಲೆಗಳನ್ನು ಇಂದಿಗೂ‌ ಕೂಡ ಬೇರ‍್ಯಾವ ಕನ್ನಡ ಚಲನಚಿತ್ರ ಮುರಿಯಲಾಗಿಲ್ಲ. ಬಂಗಾರದ ಮನುಶ್ಯದಲ್ಲಿನ ಚಿತ್ರಕತೆ, ಚಿತ್ರಗೀತೆಗಳು ಹಾಗೂ ರಾಜೀವ ಪಾತ್ರದಲ್ಲಿ ಡಾ. ರಾಜ್ ಅವರ‌ ಅಮೋಗ ಅಬಿನಯ ಎಲ್ಲವೂ ನೋಡುಗರ ಕಣ್ಣೆಗೆ ಕಟ್ಟುವಂತೆ ಮೂಡಿಬಂದಿದೆ.

ಇದಾದ ನಂತರ 1974 ರಲ್ಲಿ ತೆರೆಕಂಡ ‘ಬೂತಯ್ಯ ಮಗ ಅಯ್ಯು’ ಚಲನಚಿತ್ರ ಕನ್ನಡ ಚಲನ ಚಿತ್ರರಂಗವು ಕಂಡ ಅತ್ಯುತ್ತಮ ಚಿತ್ರಗಳಲ್ಲೊಂದು. ಪ್ರಸಿದ್ದ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಾದಂಬರಿ ಆದಾರಿತವಾದ ಈ ಚಿತ್ರದ ಕತಾವಸ್ತು, ಸಿದ್ದಲಿಂಗಯ್ಯನವರ ನಿರ‍್ದೇಶನ,  ವಿಶ್ಣುವರ‍್ದನ್, ಲೋಕೇಶ್, ಎಂ.ಪಿ. ಶಂಕರ್ ಅವರುಗಳ ಅಮೋಗವಾದ ನಟನೆ ಎಲ್ಲವೂ ಪರಿಪೂರ‍್ಣ ಎನ್ನುವಂತೆ ಮೂಡಿಬಂದಿವೆ. ಕನ್ನಡಿಗರು ಎಂದಿಗೂ ಮರೆಯಲಾಗದ ಸಿನಿಮಾ ಇದಾಗಿದೆ. ಕನ್ನಡದ ನಂತರ ಈ ಚಲನಚಿತ್ರವು ತೆಲುಗು, ತಮಿಳು ಹಾಗೂ ಹಿಂದಿ ಬಾಶೆಗಳಲ್ಲೂ ಹೊರಬಂದಿತು.

ಸಿದ್ದಲಿಂಗಯ್ಯನವರ ಚಲನಚಿತ್ರಗಳಲ್ಲಿ ಸಂದೇಶ

ಸಿದ್ದಲಿಂಗಯ್ಯನವರ ನಿರ‍್ದೇಶಿಸಿರುವ ಬಹುತೇಕ ಚಲನಚಿತ್ರಗಳಲ್ಲಿ ಚಿತ್ರಕತೆಯು ಬಹಳ ಸರಳವಾಗಿ ಹಾಗೂ ಮಾರ‍್ಮಿಕವಾಗಿರುತ್ತದೆ.

ಆಗದು ಎಂದು, ಕೈಲಾಗದು ಎಂದು‌ ಕೈಕಟ್ಟಿ ಕುಳಿತರೆ, ಸಾಗದು ಕೆಲಸವು ಮುಂದೆ…

ನಗುನಗುತಾ ನಲಿ, ಏನೇ ಆಗಲಿ… ಎಲ್ಲ ದೇವನ‌ ಕಲೆ ಎಂದೇ ನೀ ತಿಳಿ.

ಹೀಗೆ ಅವರ ನಿರ‍್ದೇಶನದ ಬಹಳಶ್ಟು ಚಿತ್ರಗೀತೆಗಳು ಸಾಮಾಜಿಕ ಬದ್ದತೆ ಸಾರುತ್ತವೆ.

ಹೆಚ್ಚಾಗಿ ಹಳ್ಳಿಗಾಡಿನ ಪರಿಸರದ ಸೊಗಡಿನಲ್ಲಿ ಮೂಡಿಬಂದಿರುವ ಅವರ ಚಿತ್ರಗಳಲ್ಲಿ ಬಡತನದ ಬೇಗೆ, ಸಿರಿತನದ ದರ‍್ಪ, ಕುಟುಂಬದೊಳಗಿರುವ ಪ್ರೀತಿ, ನೋವು-ನಲಿವು ಹಾಗೂ ಜನ ಸಮುದಾಯದ ‌ನಡುವೆ ಇರಬೇಕಾದ ಸಹಬಾಳ್ವೆ, ಸಾಮಾಜಿಕ‌ ಸೌಹಾರ‍್ದತೆ ಇತ್ಯಾದಿ ಅಂಶಗಳನ್ನು ಎತ್ತಿಹಿಡಿದು, ನೋಡುಗರಲ್ಲಿ ಆದರ‍್ಶಯುತವಾದ ಜೀವನ ಮೌಲ್ಯಗಳನ್ನು‌ ಹಂಚುವ ಪ್ರಯತ್ನ ಕಂಡು ಬರುತ್ತದೆ.

ಹಳ್ಳಿಯಾದರೇನು ಶಿವ, ದಿಲ್ಲಿಯಾದರೇನು ಶಿವ, ಜನರೆಲ್ಲಾ‌ ಒಂದೇ ಶಿವ….

ಒಂದೇ ನಾಡು, ಒಂದೇ‌ ಕುಲವು, ಒಂದೇ ದೈವವೂ….

‘ಮೇಯರ್ ಮುತ್ತಣ್ಣ’ ಚಿತ್ರದ ಈ ಅರ‍್ತಪೂರ‍್ಣ ಗೀತೆಗಳು ಜನ ಸಮುದಾಯದಲ್ಲಿ ಬಾವೈಕ್ಯತೆ ಮನೋಬಾವವನ್ನು ತರುತ್ತವೆ.

ಅಚ್ಚುಕಟ್ಟುತನಕ್ಕೆ ಹೆಸರಾಗಿದ್ದ ಸಿದ್ದಲಿಂಗಯ್ಯನವರು

ಆಗಿನ ದಿನಗಳಲ್ಲಿ ಬಹಳಶ್ಟು ಯುವ ನಿರ‍್ದೇಶಕರಿಗೆ ಸಿದ್ದಲಿಂಗಯ್ಯನವರ ಜೊತೆ ಕೆಲಸ ಮಾಡುವ ಹಂಬಲವಿದ್ದದ್ದು ಸಹಜವೇ ಸರಿ. ಅದರಲ್ಲಿ ಕನ್ನಡ ಚಲನ ಚಿತ್ರರಂಗದ ಜನಪ್ರಿಯ ನಿರ‍್ದೇಶಕರಾದ ಬಗವಾನ್ ಕೂಡ ಒಬ್ಬರು.  “ಸಿದ್ದಲಿಂಗಯ್ಯನವರಿಂದ ಕಲಿತಿದ್ದು ಬಹಳ. ಚಾಯಾಗ್ರಹಣದ ಕೆಲಸವಾಗಲಿ, ಸೆಟ್ಟಿಗೆ ಬೇಕಾದ ಸಿದ್ದತೆ ಮಾಡಿಸುವುದಾಗಲಿ, ನೆರಳು-ಬೆಳಕನ್ನು ಬಳಸಿಕೊಳ್ಳುವುದಾಗಲಿ ಎಲ್ಲದ್ದಕ್ಕು ವಿಶೇಶವಾದ ಒತ್ತು ‌ಕೊಡುತ್ತಿದ್ದರು. ಅವರನ್ನು ನನ್ನ ವ್ರುತ್ತಿ ಬದುಕಿನ ಗುರು” ಎಂದು ಬಗವಾನ್ ಹೇಳುತ್ತಾರೆ. ‘ಬೂತಯ್ಯನ‌ ಮಗ ಅಯ್ಯು’ ಸಿನಿಮಾದಲ್ಲಿ ಲೋಕನಾತ್  ಉಪ್ಪಿನಕಾಯಿ ತಿನ್ನುವ ದ್ರುಶ್ಯವನ್ನು ಸಿದ್ಯಲಿಂಗಯ್ಯ ಹತ್ತನೇ ಶಾಟ್‌ನಲ್ಲಿ ಓಕೆ ಮಾಡಿದ್ದರಂತೆ. ಲೋಕನಾತ್ ಅಶ್ಟು ಬಾರಿಯೂ ಉಪ್ಪಿನಕಾಯಿ ತಿಂದಿದ್ದರಂತೆ!

ತೀವ್ರತರ ಸೋಂಕಿನ ರೋಗದಿಂದ ಬಳಲುತ್ತಿದ್ದ ಅವರು 2015ರಲ್ಲಿ ತಮ್ಮ 79ನೇ ವಯಸ್ಸಿನಲ್ಲಿ ಬೆಂಗಳೂರಿನ ಸುಗುಣ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕನ್ನಡ ಸಿನಿಮಾರಂಗಕ್ಕೆ ಬೆಟ್ಟದಶ್ಟು ಕೊಡುಗೆ ನೀಡಿದ ಇಂತಹ ಮೇರು ಪ್ರತಿಬೆಯ ನಿರ‍್ದೇಶಕರು ಕನ್ನಡ ನಾಡಿನಲ್ಲಿ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸೋಣ.

(ಚಿತ್ರ ಸೆಲೆ: wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications