ಕನಸು ಕಾಣೋಣ, ನನಸಾಗಿಸಲು ಶ್ರಮಿಸೋಣ

– ವೆಂಕಟೇಶ ಚಾಗಿ.

dream, aim, ಕನಸು ಕಾಣುವುದು

ಅಂದು ಯಾಕೋ ಯಾವುದೇ ಕೆಲಸಗಳಿಲ್ಲದೆ ಮನೆಯಲ್ಲೇ ಇದ್ದೆ. ಮನೆಯವರೊಂದಿಗೆ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದೆ. ಮನೆಗೆ ಬಂದ ಸ್ನೇಹಿತ ರಮೇಶ, ಹಿಂದಿನ ರಾತ್ರಿ ತಾನು ಕಂಡ ಕನಸಿನ ಬಗ್ಗೆ ವಿಸ್ತಾರವಾಗಿ ಹೇಳತೊಡಗಿದ. ತನಗೆ ಲಾಟರಿ ಹೊಡೆದಂತೆ, ತಾನೊಬ್ಬ ಲಕ್ಶಾದಿಪತಿಯಾದಂತೆ ಕಂಡ ಕನಸನ್ನು, ಸ್ವಲ್ಪ ಮಸಾಲೆ ಸೇರಿಸಿ ಹೇಳುತ್ತಿದ್ದರೆ ನಮ್ಮ ಮನೆಯವರೆಲ್ಲಾ ಬಿಟ್ಟ ಕಣ್ಣು ಬಿಟ್ಟಂತೆ ಅವನ ಮಾತನ್ನು ಕೇಳತೊಡಗಿದ್ದರು. ಹಣಕ್ಕಾಗಿ ಯಾವಾಗಲೂ ಹಪಹಪಿಸುತ್ತಿದ್ದ ಅವನಿಗೆ, ಇಂತಹ ಬೇರೆ ದಾರಿಯಿಂದ ಲಕ್ಶಾದಿಪತಿಯಾಗುವ ಕನಸುಗಳೇ ಬೀಳುತ್ತಿದ್ದವು. ದುಡಿಯುವ ಆಸಾಮಿಯಂತೂ ಅಲ್ಲ. ಸರಕಾರಿ ಕೆಲಸ ಅಶ್ಟಕ್ಕಶ್ಟೇ ಮಾಡಿ, ಇಲ್ಲ ಸಲ್ಲದ ನೆಪ ಹೂಡಿ ಕಾಲಹರಣ ಮಾಡುತ್ತಿದ್ದ. ಆದರೆ ಅವನ ಮಾತಿನಲ್ಲಿ ಅದೇನು ಮಾಯೆಯೋ ಕಾಣೆ. ತನ್ನ ಮಾತಿನ ಕಲೆಯಿಂದಲೇ ಎಲ್ಲರನ್ನೂ ನಂಬಿಸುತ್ತಿದ್ದ. “ಲೋ, ಚೆನ್ನಾಗಿ ದುಡಿದು ಲಕ್ಶಾದೀಶನಾಗೋ ಕನಸು ಕಾಣು” ಎಂದು ಅವನಿಗೆ ತಿಳಿ ಹೇಳುತ್ತಿದ್ದೆ. ಅದಕ್ಕೆಲ್ಲಾ ಅವನು ಡೋಂಟ್ ಕೇರ್! ಅವನ ಆರ‍್ತಿಕ ಪರಿಸ್ತಿತಿ ಚೆನ್ನಾಗಿರಲಿಲ್ಲ, ಮನೆಯಲ್ಲಿ ಬಡತನವಿತ್ತು.

ಕನಸು ಕಾಣುವುದು ತಪ್ಪೇ? ಇಲ್ಲ. ನಿದ್ದೆಯಲ್ಲಿ ಕಾಣುವ ಕನಸಿಗೂ, ಪ್ರಗ್ನಾವಸ್ತೆಯಲ್ಲಿ ಇದ್ದಾಗ ಕಾಣುವ ಕನಸಿಗೂ ವ್ಯತ್ಯಾಸವಿದೆ. ನಿದ್ದೆಯಲ್ಲಿ ಕಾಣುವ ಕನಸಿನಲ್ಲಿ ನಾವು ಸಿರಿವಂತರಾಗಬಹುದು, ದೊಡ್ಡ ವ್ಯಕ್ತಿಗಳಾಗಬಹುದು. ಆದರೆ ವಾಸ್ತವದಲ್ಲಿ ಕಾಣುವ ಕನಸುಗಳನ್ನು ನೈಜ ರೂಪಕ್ಕೆ ತರುವುದು ಅಶ್ಟು ಸುಲಬವಲ್ಲ. ದ್ರುಡ ಸಂಕಲ್ಪ ಮಾಡಿದರೆ ಅದು ಕಶ್ಟವೇನೂ ಅಲ್ಲ. ಕನಸಿಗೆ ತಕ್ಕ ಹಾಗೆ ಶ್ರಮ ಪಡಬೇಕು. ನಾವಶ್ಟೇ ಅಲ್ಲ, ನಮ್ಮ ಬಗ್ಗೆ ತಂದೆ-ತಾಯಿ, ಕುಟುಂಬ , ಸ್ನೇಹಿತರು, ಗುರುಗಳು ಹಲವಾರು ಬಗೆಯ ಕನಸುಗಳನ್ನು ಕಂಡಿರುತ್ತಾರೆ. ಅವುಗಳ ಸಾಕಾರಕ್ಕೆ ಶ್ರಮ ಅತ್ಯಗತ್ಯ. ರಾತ್ರಿಯ ಕನಸುಗಳು ನಮ್ಮ ಮನಸ್ಸಿನ ತೊಳಲಾಟದ ಕೂಸುಗಳಾದರೆ ವಾಸ್ತವಿಕ ಕನಸುಗಳು ಜೀವನವನ್ನು ರೂಪಿಸುತ್ತವೆ. ರಾತ್ರಿ ಕಂಡ ಕನಸಿನಲ್ಲಿ ಸಿಗುವ ಸಂತೋಶ ಯಾವುದಕ್ಕೂ ಬಾರದು. ಆದರೆ ದ್ರುಡ ಸಂಕಲ್ಪದಿಂದ ಕಂಡ ಕನಸನ್ನು ನನಸು ಮಾಡಿದಾಗ ಅದರಿಂದ ಸಿಗುವ ಸಂತೋಶ, ಅಶ್ಟಿಶ್ಟಲ್ಲ.

“ನಿದ್ದೆಯಲ್ಲಿ ಕನಸು ಕಾಣುವುದಕ್ಕಿಂತ, ನಿದ್ದೆ ಬರದಂತೆ ಮಾಡುವ ಕನಸು ನಮ್ಮದಾಗಬೇಕಿದೆ. ಕನಸು ಕಾಣಿರಿ, ನನಸಾಗಲು ದರ‍್ಮದ ಹಾದಿಯಲ್ಲಿ ನಡೆಯಿರಿ” ಎಂಬುದು ಹಿರಿಯರ ಹೇಳಿಕೆ. ಈ ಮಾತು ಅದೆಶ್ಟು ಅರ‍್ತಗರ‍್ಬಿತವಾಗಿದೆ ಅಲ್ಲವೇ.

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: