ನಗೆಬರಹ: ಬಸ್ ಪ್ರಯಾಣದ ಅನುಬವಗಳು!

– ವೀರೇಶ.ಅ.ಲಕ್ಶಾಣಿ.

ಬಸ್, ಬಸ್ಸು, Bus

ಇತ್ತೀಚಿನ ದಿನಗಳಲ್ಲಿ ಪ್ರಯಾಣ ಸುಕಕರವಾಗಿರದೇ, ಪ್ರಯಾಸದ ಪ್ರಯಾಣವೇ ಸತ್ಯವೆನಿಸುತ್ತಿದೆ. ಎಲ್ಲಿಯೇ ನೋಡಲಿ ಬಾರದವರ ಹೆಸರಿನಲ್ಲಿ ಅವರವರಿಂದಲೇ ಬಸ್ಸುಗಳಲ್ಲಿ ಆಸನಗಳ ಮೇಲೆ ಶಾಲಾ ಬ್ಯಾಗುಗಳೋ, ಪುಸ್ತಕ-ಪತ್ರಿಕೆಗಳೋ ಆಸೀನವಾಗಿ ಮೊದಲು ಬಂದವರಿಗೆ ಜಾಗ ನೀಡದೇ ನಿರಾಸೆ ಮೂಡಿಸುತ್ತವೆ. ಇದು ಪ್ರಯಾಣದ ಆರಂಬದ ಪಾಡು. ಹಾಗೂ ಹೀಗೂ ಕೆಲವೊಮ್ಮೆ ಪರಿಚಿತರ ಸದರ ಯಾ ಪ್ರೇಮದಿಂದಲೋ, ಗೌರವದಿಂದಲೋ ಆಸನ ಸಿಕ್ಕು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗುವುದು. ಇನ್ನೂ ಕೆಲವು ಸಲ ಅನಿವಾರ‍್ಯವೆಂಬಂತೆ ವಾಹನದ ಕೊನೆಯ ಆಸನಗಳು ದೊರಕಿ ಸಿನಿಮಾ ತಿಯೇಟರಿನ ಬಾಲ್ಕನಿಗಳೆಂಬಂತೆ ಕಲ್ಪಿಸಿಕೊಂಡು, ಪೌಡರ್ ಮತ್ತು ಕುಲುಕಾಟವನ್ನು ಹಣತೆತ್ತು ಉಚಿತವಾಗಿ ಪಡೆದಂತೆ ಪ್ರಯಾಣಿಸುವ ಅನಿವಾರ‍್ಯತೆ ಅಸಹನೀಯವಾದರೂ ಸಹಿಸಿಕೊಂಡು ಪ್ರಯಾಣಿಸಲೇಬೇಕು. ಇಲ್ಲದಿದ್ದಲ್ಲಿ ಆ ಕ್ಶಣಕ್ಕೆ ಪಾಸಿ ಶಿಕ್ಶೆಗಿಂತಲೂ ಗೋರವೆನಿಸುವಂತೆ ಒಂಟಿ ಕಾಲಲ್ಲಿ ನಿಂತು ಕುಂಯ್ಯೋ ಮರ‍್ರೋ ಎಂದು ಒದ್ದಾಡಲಾಗದೇ, ಮೌನ ಯಾತನೆ ಅನುಬವಿಸುತ್ತಾ ಪಕ್ಕದಲ್ಲಿ ಯಾವುದಾದರೂ ಆಸನ ಸಿಕ್ಕೀತೇ ಎಂಬ ಆಸೆಗಣ್ಣಿನಿಂದ ನೋಡುತ್ತಾ ಬೇಗನೇ ನಾವಿಳಿವ ತಾಣ ಬಂದರೆ ಸಾಕು ಎನ್ನಿಸದಿರದು.

ಪ್ರಯಾಣದ ಈ ಮದ್ಯೆ ಬಸ್ಸೆಂಬುದು ಮತ್ತೊಂದು ಲೋಕವಾಗಿಯೇ ಪರಿವರ‍್ತನೆಯಾಗಿಬಿಡುತ್ತದೆ. ನಿನ್ನೆ ಮೊನ್ನೆ ನಡೆದ ಗಟನೆಗಳಿಗೆ ಮಸಾಲೆ ಹಾಕಿ ವಟಗುಟ್ಟುವ ಪ್ರಯಾಣಿಕರ ಪ್ರಾಸಂಗಿಕ ಕತಾ ಲೋಕವೇ ಅಲ್ಲಿ ಸ್ರುಶ್ಟಿಯಾಗುತ್ತದೆ. ಕೆಲಸ ಮಾಡುವ ಕಮಲಿಯ ಮಗಳು ಯಾವನೊಂದಿಗೋ ಓಡಿಹೋದ ಕತೆಯಿಂದ ಆರಂಬವಾಗಿ, ದಿಲ್ಲಿಯ ಸಂಸತ್ ಆಡಳಿತದವರೆಗಿನ ಸ್ವಾರಸ್ಯಕರ (ಮಿತ್ಯವಾಗಿದ್ದರೂ, ಕಲ್ಪಿತವಾಗಿ) ಕತಾ ಸಂಚಿಕೆಗಳು ಗರಿ ಬಿಚ್ಚುತ್ತವೆ. ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಾ ಕುಳಿತ ಮಹನೀಯರ ಕತೆಯೂ ಇಲ್ಲಿ ಒಮ್ಮೊಮ್ಮೆ ಚರ‍್ವಿತ ಚರ‍್ವಣ ವಸ್ತುವಾಗುತ್ತದೆ.

ಇದು ಒಂದು ಕಡೆಯಾದರೆ ಮೊಬೈಲ್ ಮಹನೀಯರ ಕತೆಯೇ ಬೇರೆ. ತಮಗೆ ಇಶ್ಟವಾದ ವೀಡಿಯೋ ಗೇಮ್ ಗಳಲ್ಲಿ ಕೆಲವು ತಲೆಗಳು ಮೇಲೆತ್ತದೆ ಶಿರಬಾಗಿ ಮೊಬೈಲ್ ಗೆ ಶರಣು ಹೊಡೆಯುತ್ತಿರುತ್ತವೆ. ಮತ್ತೆ ಕೆಲ ಪಡ್ಡೆ ಹೈಕಳೋ, ತಮಗೆ ಇಶ್ಟವಾದ ಕಲ್ಪನಾಲೋಕದ ವಿಹಾರಿಗಳಾಗಿ ತೊಡಗಿಕೊಂಡು ಮೈ ಮರೆತರೆ, ಕೆಲವು ಹುಚ್ಚುಕೋಡಿಗಳು ಮನಗಳ ಕಯಾಲಿ ಹಾಡುಗಳನ್ನು ತಾವು ಕೇಳುವುದಕ್ಕಿಂತ ಇತರರಿಗೆ ಕೇಳಿಸುತ್ತೇವೆಂಬ ಹುಚ್ಚು ಬ್ರಮೆಯಲ್ಲಿ ಮೈ ಮರೆತಿರುತ್ತವೆ. ಸದ್ಯ ಹೊಡೆತ ಮಾತ್ರ ತಿನ್ನುವುದಿಲ್ಲ. ಮತ್ತೆ ಕೆಲ ಮನಸುಗಳು ದ್ವಂದ್ವ ಸಂಬಾಶಣೆಯಲ್ಲಿ ನಿರತವಾಗಿ, ಕೇಳುವವರಿಗೆ ಮುಜುಗರ ಉಂಟು ಮಾಡುತ್ತಿದ್ದರೂ, ಅವರ ಗತ್ತು ಗೈರತ್ತು, ದಬ್ಬಾಳಿಕೆಯ ಮನೋಪ್ರವ್ರುತ್ತಿಗೆ ಇಲ್ಲದ ಉಸಾಬರಿ ಮೈ ಮೇಲೆಳೆದುಕೊಳ್ಳದೆ ಗಪ್ ಚುಪ್ಪಾಗಿ ಕುಳಿತುಕೊಳ್ಳದೆ ಗತ್ಯಂತರವಿಲ್ಲ. ಇತ್ತೀಚಿನ ರಿಮೇಕ್ ಹಾಡುಗಳು ಹಾಗೂ ಹೈಬ್ರೀಡ್ ಜಾನಪದ ಹಾಡುಗಳಂತೂ ಕೇಳದೇ ಕೇಳಬೇಕಾದ ಅನಿವಾರ‍್ಯತೆಯಂತೂ ಕೆಲ ಮನಸುಗಳನ್ನು ಕುದಿವ ಕಡಾಯಿಯಲ್ಲಿ ಕೆಡವಿದರೆ, “ಕೆಂದುಟಿಯ ಪಕ್ಕದಲಿ, ತುಂಬಾ ಹತ್ತಿರದಲ್ಲಿ …” ಎಂದುಲಿವ ಹದಿವಯದ ಹೈಕಳ ಮೊಬೈಲ್ ಅವರವರ ಕನಸುಗಣ್ಣಿನ ಆಸೆ ಹೇಳುತ್ತೇನೋ ಅಂತ ಅನಿಸುತ್ತಿರುತ್ತದೆ.

ಪಕ್ಕದ ಆಸನದಿಂದ ಯಾವುದೊ ಊರಿನಲ್ಲಿಯ ಮದುವೆ ತಯಾರಿಯ ತರಹೇವಾರಿ ಜವಾಬ್ದಾರಿಯ ಸಂಗತಿ ಸಂಬ್ರಮದಲ್ಲಿಯೇ ತೇಲುತ್ತಿದ್ದರೆ, ಅದರ ಪಕ್ಕದ ಆಸನದ ಆಸಾಮಿಗಳ ಬಾಯಿಂದ ವಿವಾಹ ವಿಚ್ಚೇದನದ ನೋವು-ಸಂಕಟಗಳ ದನಿ ಕೇಳುತ್ತಿರುತ್ತವೆ. ಮತ್ತೆಲ್ಲೋ ಮೂಲೆಯ ಆಸನದಿಂದ ಯಾವ ಊರಲ್ಲಿಯೋ ಯಾರೋ ತೀರಿಹೋದ ಸುದ್ದಿ ಅವರ ಸಂಬಂದಿಕರ ಮಾತಲ್ಲಿ ದುಕ್ಕವಾಗಿ ಮಡುಗಟ್ಟಿರುತ್ತದೆ. ಇನ್ನಾವುದೋ ಆಸನದಿಂದ ಆಗಾಗ ಬಾಣ ಬಿರುಸುಗಳಂತೆ ಬಿಡುವ ನಗೆ ಚಟಾಕಿಗಳು, ಗಕ್ಕನೆ ಮರೆವಿನ ಲೋಕವನ್ನೇ ಜಾಗ್ರುತಗೊಳಿಸಿ ಎಲ್ಲರ ಮನಸುಗಳು ಒಂದರೆಕ್ಶಣ ವಾಸ್ತವಕ್ಕೆ ಕಾಲೂರಿ ವಿರಮಿಸುವಂತೆ ಮಾಡುತ್ತವೆ. ಇನ್ನಾವುದೋ ಆಸನದಲ್ಲಿ ಇದಾವುದರ ಪರಿವೆ ಇಲ್ಲದೇ ಮತ್ತೆ ಕೆಲ ಮನಸುಗಳು ಓದಿನಲ್ಲೋ, ಮೊಬೈಲ್ ತಂತ್ರಾಂಶದ ಬರಹದಲ್ಲಿ ತೊಡಗಿ ಬೆರ‍್ಚಪ್ಪಗಳಾಗಿ ಕುಳಿತಿರುತ್ತವೆ.

ಪ್ರಯಾಣದ ನಡುವೆ ರಸ್ತೆಯ ಗುಂಡಿಗಳಿಗೆ ಬಿದ್ದು ಎದ್ದೋಡುವ ವಾಹನ, ಕೊನೆ ಆಸನದ ಸರದಾರರನ್ನು ಎತ್ತೆತ್ತಿ ಕುಕ್ಕಿ ಕುಲುಕಿಸಿ ದೂಳೆಬ್ಬಿಸಿ ಅಂದದ ಮುಕಕ್ಕೆ ಪೌಡರ್ ಬಳಿದು ಸುರ ಸುಂದರಾಂಗ/ಗಿಯರ ಅಂದಗೆಡಿಸುತ್ತವೆ. ಸದ್ಯ ಆ ಹಿಂದಿನ ಆಸನಗಳಲ್ಲಿ ಗರ‍್ಬಿಣಿಯರು ಇಲ್ಲವೆಂಬ ಸಂಗತಿ ಸಕಲರನ್ನೂ ನೆಮ್ಮದಿಯಿಂದಿಡುತ್ತದೆ. ಇಲ್ಲದಿದ್ದರೆ ಹೆರಿಗೆಯೂ ಉಚಿತವಾಗಿ ವೈದ್ಯರ ವಂತಿಗೆಯೂ ಉಳಿಯುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ನಮ್ಮ ಹಳ್ಳಿ ರಸ್ತೆಗಳೇ ಹಾಗೆ, ಅಂತರರಾಶ್ಟ್ರೀಯ ಗುಣಮಟ್ಟದಲ್ಲಿ ಕಳಪೆ ಕಾಮಗಾರಿಗಳಿಗೇ ಸಡ್ಡು ಹೊಡೆಯುತ್ತವೆ. ಇನ್ನು ಬಾಗಿಲು ಸಾಮ್ರಾಜ್ಯದ ಅನಬಿಶಿಕ್ತ ದೊರೆಗಳ ದರ‍್ಬಾರು ಇಲ್ಲಿ ಉಲ್ಲೇಕನೀಯ. ಮೇಲಕ್ಕೆ ಬನ್ನಿ ಎಂದು ನಿರ‍್ವಾಹಕ ಗೋಗರೆದರೂ ಜಪ್ಪಯ್ಯ ಎನ್ನದೆ ತೋಳ್ಬಾವಲಿಗಳಂತೆ ಜೋತುಬಿದ್ದು ಅಪಾಯಕಾರಿಯೆಂಬುರ ಅರಿವಿದ್ದೂ ತಮ್ಮ ಶೌರ‍್ಯ ಮೆರೆಯುತ್ತಾರೆ. ಗುಟುಕಾ ಜಗಿಯುವವರೋ ಕಿಟಕಿಬಳಿ ಪಟ್ಟಬದ್ರರಾಗಿ ಕುಳಿತುಕೆಲವೊಮ್ಮೆ ಪಕ್ಕದವರ ಲೆಕ್ಕಿಸದೇ ಪಿಚಕಾರಿ ಸಿಂಚನಗೈಯ್ಯುವಂತೆ ಉಗುಳುತ್ತಾ ಮೂಕರಂತೆ ಸನ್ನೆಯಿಂದ ಮಾತನಾಡುತ್ತ ತಮ್ಮಿರುವಿಕೆಯನ್ನು ಸಾರುತ್ತಾರೆ.

ಬಸ್ಸಿನ ವಾತಾವರಣವನ್ನೇ ಗಮಲಿಸುವ ಮದ್ಯಪಾನಿಗಳು ಅಲ್ಲಲ್ಲಿ ಆಸೀನರಾಗಿ ಪಕ್ಕದ ಪ್ರಯಾಣಿಕರಿಗೆ ಕಿರಿಕಿರಿಯೆನಿಸುತ್ತಾರೆ. ಇಂತಹ ಕೆಲವು ಕುಡುಕರ ಪ್ರತಾಪವಂತೂ ಹೇಳತೀರದು. ತಾವೇನು ಮಾತನಾಡುತ್ತಿದ್ದೇವೆಂಬ ಪರಿವೆಯಿಲ್ಲದೇ, ಏನೇನೋ ಗೊಣಗುತ್ತಾ, ಯಾರನ್ನೋ ಬಯ್ಯುತ್ತ, ಕೆಲವೊಮ್ಮೆ ಅಲ್ಲಿದ್ದವರನ್ನೋ, ನಿರ‍್ವಾಹಕರನ್ನೋ ಬಯ್ಯತ್ತಿರುವಾಗ ಕೊರಳಪಟ್ಟಿ ಹಿಡಿದು ಕೆಳಗೆ ದಬ್ಬಿಸಿಕೊಂಡ ಎಶ್ಟೋ ಪ್ರಸಂಗಗಳಿವೆ. ಸಾಮಾನ್ಯವಾಗಿ ಇಂತಹ ಮದ್ಯಪಾನಿ ಮಹಾಶಯರು ತಡರಾತ್ರಿ ಕೊನೆಯ ವಸ್ತಿ ಬಸ್ಸನ್ನೇರಿ, ಕುಲುಕುವ ಬಸ್ಸಿನ ಜೊತೆ ತಾವೂ ಜೋಲಿಹೊಡೆಯುತ್ತಾ, ಗಬ್ಬು ವಾಸನೆಯ ಜೊತೆ ಏರು ದನಿಯ ಮಾತುಗಳಿಂದ ಯಾರನ್ನೋ ಬಯ್ಯುತ್ತಲೇ ತಮ್ಮ ಪ್ರಪಂಚದಿರುವನ್ನು ಗುರುತಿಸಿಕೊಳ್ಳುತ್ತಾರೆ. ಇಂತಹ ದೂಮಪಾನಿಗಳೇ ಹೆಚ್ಚಾಗಿ ಪ್ರಯಾಣಿಸುವ ತಡರಾತ್ರಿಯ ಬಸ್ಸುಗಳಲ್ಲಿ ಸಾಮಾನ್ಯವಾಗಿ ಸಬ್ಯರು ಪ್ರಯಾಣಿಸುವದು ಅನಿವಾರ‍್ಯವಾಗಿಯಾದರೂ ವಿರಳ. ಮದ್ಯಪಾನಿಗಳ ಪ್ರಯಾಣದ ಇಂತಹ ತಡರಾತ್ರಿಯ ಬಸ್ಸುಗಳು ಹಳ್ಳಿಗರಿಂದ “ಜೋಲಿಬಸ್ಸು”ಗಳೆಂಬ ಅನ್ವರ‍್ತನಾಮ ಪಡೆದಿವೆ. ಇಂತಹ ಬಸ್ಸುಗಳ ಚಾಲಕ ಮತ್ತು ನಿರ‍್ವಾಹಕರ ಪಾಡು ಹೇಳತೀರದು. ಕೆಲವೊಮ್ಮೆ ಯಾವ ಪ್ರಯಾಣಿಕರು ಎಲ್ಲಿ ಇಳಿಯಬೇಕೆಂಬುದು ಗೊತ್ತಿರದಿದ್ದರೂ, ಕುಡುಕರು ಎಲ್ಲಿಳಿಯಬೇಕೆಂಬುದನ್ನು ನೆನಪಿಟ್ಟು ಅವರನ್ನು ನಿಲ್ದಾಣದ ಕಟ್ಟೆಯ ಮೇಲೋ, ಬೀದಿ ಬದಿಯ ಸುರಕ್ಶಿತ ಜಾಗದಲ್ಲೋ ಎತ್ತಿಹಾಕಿ ಮುಂದೆ ಸಾಗಿದ ಎಶ್ಟೋ ಪ್ರಸಂಗಗಳುಂಟು.

ಎಶ್ಟು ಹೇಳಿದರೂ ಮುಗಿಯದ ಬಸ್ಸೆಂಬ ಪುಟ್ಟಲೋಕ, ವಿಸ್ಮಯದ ತಾಣವೇ ಸರಿ. ಅಲ್ಲಿ ಕಸದಿಂದ ಹಿಡಿದು ಕಸವರದವರೆಗೆ ಸಾಗಾಣಿಕೆಯಾಗುವ ಜೊತೆಗೆ ಚರ‍್ಚೆಯೂ ಆಗುತ್ತಾ, ಸೂರ‍್ಯನನ್ನು ಸುತ್ತುವ ಬೂಮಿಯಂತೆ, ಸೌರ‍್ಯವ್ಯೂಹದ ಗ್ರಹವನ್ನೇ ಸುತ್ತಿಬರುವ ಮತ್ತೊಂದು ಗ್ರಹವಾಗಿ ಬಸ್ಸು ಗೋಚರಿಸಿದರೆ ಅತಿಶಯೋಕ್ತಿಯೇನಲ್ಲ. ಪ್ರಪಂಚದಲ್ಲಿಯೇ ಪುಟ್ಟ ಪ್ರಪಂಚವಾಗಿ ತೋರುವ ಮಾಯಾಲೋಕದ ಪ್ರಯಾಣದ ಅನುಬವ ಅನುಬವಿಸಿಯೇ ಮೆರೆಯಬೇಕು. ಈ ಪ್ರಯಾಣ ಕೆಲವೊಮ್ಮೆ ತೊಂದರೆದಾಯಕ, ಕಿರಿಕಿರಿಯಾದರೂ ಮಜಾ ನೀಡುತ್ತದೆ.

( ಚಿತ್ರ ಸೆಲೆ: stockphotos.ro )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: