ಹರಸಿ ಬರಲಿ ಹೊಸ ವರುಶ

– ವೆಂಕಟೇಶ ಚಾಗಿ.

ಹಳತು ಹೊಸತು ಜಗದ ನಿಯಮ
ನವ ವರುಶವು ಬಂದಿದೆ
ಹೊಸ ದಿನಗಳ ಹೊಸ ಹರುಶವು
ಹೊಸ ನಿರೀಕ್ಶೆ ಬದುಕಿಗಾಗಿ ತಂದಿವೆ

ಹಳೆಯ ಕೊಳೆಯ ಕಳೆದು ಹಾಕಿ
ಹೊಸ ಹೊಳವು ನೀಡಬಯಸಿದೆ
ಮನದ ಕೋಪ ತಾಪ ಕಳೆದು
ಶಾಂತಿ ಮಂತ್ರ ಜಪಿಸಬೇಕಿದೆ

ಕಳೆದು ಹೋದ ಕ್ಶಣವ ನೆನೆದು
ನಾಳೆಗಿಂದು ಮಾಡಬೇಕು ಮಂತನ
ಅಂದು ಮಾಡಿದಂತ ತಪ್ಪು ಕಳೆದು
ಹಾಡಬೇಕು ಎಚ್ಚರಿಕೆ ಪ್ರಾರ‍್ತನೆ

ಜಾತಿ ದರ‍್ಮ ಮೇಲು ಕೀಳು
ಮರೆಯಾಗಲಿ ಮನದ ಸ್ವಾರ‍್ತ
ರವಿಯ ಬೆಳಕು ಸಮತೆ ಹರಡಿ
ಹಸಿರಾಗಲಿ ಮಾನವತೆಯ ಅರ‍್ತ

ಹಿರಿಯ ಕಿರಿಯ ಮನಸು ಮಿಡಿಯಲಿ
ಪ್ರಗತಿ ಪತಕೆ ಮುನ್ನುಡಿ
ಜ್ನಾನವೆಂಬ ದೀಪ್ತಿ ಬೆಳಗಿ
ನಿಜವಾಗಲಿ ಜಗದ ತಾಯ್ನುಡಿ

ಬದುಕ ಪಯಣ ಹಲವು ತರಹ
ಸರಸ ವಿರಸ ಸರಿಸಮ
ಅರಿತು ಬರೆತು ಮರೆತು ಕಲಿತು
ಸಾಗುವಂತ ಬದುಕೆ ಒಂದು ಸಂಬ್ರಮ

ವರುಶ ವರುಶ ಹರಸಿ ಬರಲಿ
ಜಗದ ತುಂಬಾ ನಗುವ ತರಲಿ
ಏನೇ ಬರಲಿ ದೈರ‍್ಯ ಇರಲಿ
ಬದುಕ ಪಯಣ ಸಾಗುತಿರಲಿ

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Akash Lokhande says:

    ಪದಗಳ ಜೋಡಣೆ ಚೆನ್ನಾಗಿ ಇದೆ.. ಹೀಗೆ ಮುಂದುವರೆಯಲಿ..

ಅನಿಸಿಕೆ ಬರೆಯಿರಿ:

%d bloggers like this: