ಕಲಬುರಗಿ ಸ್ಟೇಶನ್ ಬಂತೇನ್ರೀ?

– ಮಾರಿಸನ್ ಮನೋಹರ್.

ರೈಲು ಪ್ರಯಾಣ, train journey

ಮಾರ‍್ಚ್ ತಿಂಗಳು, ‘ಇಯರ್ ಎಂಡ್’ ಕೆಲಸ ಜೋರಾಗಿತ್ತು. ಒಂದು ವಾರದಿಂದ ಆಪೀಸಿನಲ್ಲಿ ಕೈತುಂಬ ಮೈತುಂಬ ತಲೆ ತುಂಬ ಕೆಲಸ. ನಡು ಹೊತ್ತಿನ ಬುತ್ತಿಯನ್ನೂ ತಪ್ಪಿಸಿ ಕೆಲಸ ಮಾಡುತ್ತಿದ್ದೆವು. ಎಲ್ಲ ರಿಪೋರ‍್ಟಗಳನ್ನು ಪೈಲ್ ಮಾಡುವ ಸಣ್ಣ ಕೆಲಸಕ್ಕೆ ರಾತ್ರಿ ಹನ್ನೊಂದರವರೆಗೆ ಆಪೀಸಿನಲ್ಲಿ ಇರಬೇಕಾಯಿತು. ಒಂದು ವಾರ ಎಲ್ಲರೂ ದೆವ್ವಗಳ ಹಾಗೆ ದುಡಿದು ಕೆಲಸ ಮುಗಿಸಿದ ಮೇಲೆ ಬ್ರಾಂಚ್ ಮ್ಯಾನೇಜರ್ ಬಂದು “ನಿಮಗೆ ಕೆಲಸ ಮಾಡುವುದಕ್ಕೆ ಬರುವುದೇ ಇಲ್ಲ” ಅಂತ ಹುರಿದುಂಬಿಸಿದ್ದರು! ಇರಲಿ. ಶನಿವಾರ ಬೇಗನೆ ಕೆಲಸ ಮುಗಿಸಿ ನಾನು ಆಪೀಸಿನಿಂದ ಹಾರಿ ಹೋಗಬೇಕು ಅಂದುಕೊಂಡಿದ್ದೆ. ಬೇಗನೆ ಅಂದರೆ ಸಂಜೆ ಐದೂವರೆ! ಆಗ ಯಾದಗಿರಿಯಿಂದ ಕಲಬುರಗಿಗೆ ಹೊರಡುವ ಟ್ರೇನನ್ನು ನಾನು ಹಿಡಿಯಬೇಕು, ಹೇಗೆ ಹಿಡಿಯಬೇಕು? ಆಪೀಸಿನಿಂದ ಬಿಟ್ಟರೆ ತಾನೆ? ಮ್ಯಾನೆಜರ್ ಅವರಿಗೆ ಪಟಕ್ಕನೆ ಹೇಳಿ ಹಿಂದಿರುಗಿ ನೋಡದೆ ಆಪೀನಿಂದ ಹೊರಬಿದ್ದಿದ್ದೆ.

ಹೊರಗೆ ಬಂದು ಮೇನ್ ರೋಡಿನ ಬಳಿ ಕೈಮಾಡಿ “ಆಟೋ ಆಟೋ ..” ಅಂತ ಕಿರುಚಿದೆ. ನಮಗೆ ಬೇಕಾದಾಗ ಆಟೋ ಬರುವುದೇ ಇಲ್ಲ. ಬಂದವುಗಳೆಲ್ಲ ನಾವು ರೈಲ್ವೇ ಸ್ಟೇಶನ್ ಕಡೆ ಹೋಗುವುದಿಲ್ಲ ಅಂದರು. ಕೊನೆಗೆ ತುಂಬಿ ತುಳುಕುತ್ತಿದ್ದ ಆಟೋ ಬಂತು, ಕಣ್ಣು ಕಿರಿದು ಮಾಡಿ ನೋಡಿದೆ ಅದರಲ್ಲಿ ಜಾಗವೇ ಇಲ್ಲ. ಆಟೋದವ ತನ್ನ ಇಶ್ಟದ ನೆಂಟನನ್ನು ಕರೆಯುವ ಹಾಗೆ ನನ್ನನ್ನು ಒಲವಿನಿಂದ ಕರೆದು “ಕೂತುಕೊಳ್ಳಿ ಸರ‍್” ಅಂದ. ಎಲ್ಲಿ ಕುಳಿತುಕೊಳ್ಳಬೇಕು ಆ ಕೋಳಿ ಪಾರಂನಂತಹ ಆಟೋದಲ್ಲಿ? ಆಟೋದವ ಪೂರಾ ಸರಿದು ತನ್ನ ಸೀಟಿನಲ್ಲಿಯೇ ಜಾಗ ಮಾಡಿ ಕೊಟ್ಟ. ನನಗೆ ಬೇರೆ ಹಾದಿಯಿಲ್ಲದೇ ಆಟೋದ ಸರಳನ್ನು ಹಿಡಿದು ಕಶ್ಟಪಟ್ಟು ಕುಳಿತುಕೊಂಡೆ. ಆಟೋದವನ ಅರ‍್ದ ಮೈ ಆಟೋದ ಹೊರಗೆ ಅರ‍್ದ ಆಟೋದ ಒಳಗೆ. ರೋಡಿನ ಆಚೆ ಈಚೆ ಇದ್ದ ಮಂದಿ ನಮ್ಮ ಈ ಸರ‍್ಕಸ್ ಕಂಪನಿ ಸ್ಟಂಟ್ ನೋಡಿ ಚಪ್ಪಾಳೆ ತಟ್ಟುವುದು ಒಂದೇ ಬಾಕಿ ಇತ್ತು. ಸರಿಯಾಗಿ ಎಣಿಸಿದೆ ಒಂದು… ಎರಡು… ಮೂರು… ಬರೋಬ್ಬರಿ ಒಂಬತ್ತು ಮಂದಿ ಆಟೋದಲ್ಲಿ ಇದ್ದೆವು, ಡ್ರೈವರ್ ನ ಸೇರಿಸಿ ಹತ್ತು ಮಂದಿ. ಆಟೋದ ಸೈಡಿನಲ್ಲಿ “ಮೂರು ಪ್ಲಸ್ ಒಂದು” ಅಂತ ಬರೆದ ಸಾಲು ನಮ್ಮನ್ನು ನೋಡಿ ಗಹಗಹಿಸಿ ನಗುತ್ತಿತ್ತು. ಯಾದಗಿರಿಯ ಕಡುಬೇಸಿಗೆಯಲ್ಲಿ ಹೀಗೆ ಹೋಗುತ್ತಿದ್ದ ನಾವು ಆಟೋದಲ್ಲಿ ಪಾಪ್ ಕಾರ‍್ನ್ ತರಹ ಕುದಿಯುತ್ತಿದ್ದೆವು. ಆಟೋದವ ಗರ‍್ರ… ಗರ‍್ರ… ಅಂತ ಸ್ಪೀಡಾಗಿ ಆಟೋ ಓಡಿಸುತ್ತಾ, ಇನ್ನೂ ಕೆಲವು ಪ್ಯಾಸೆಂಜರ್ ಗಳು ಬರುತ್ತಾರೇನೋ ಅಂತ ರೋಡಿನ ಆಚೆ ಈಚೆ ಹದ್ದು ನೋಡಿದ ಹಾಗೆ ನೋಡುತ್ತಿದ್ದ. ರಾಜಸ್ತಾನಿಗಳು ನಡೆಸುವ ಇಡ್ಲಿವಡೆ ಹೋಟೇಲ್ ದಾಟಿ ಯಾದಗಿರಿ ರೈಲ್ವೇ ಸ್ಟೇಶನ್ ಮುಟ್ಟಿದೆವು.

“ನೋಡಿ ಸರ್.. ನಿಮ್ಮನ್ನು ಎಶ್ಟು ಬೇಗ ಸ್ಟೇಶನ್ ಗೆ ತಂದುಬಿಟ್ಟೆ, ನಮಗೂ ಗೊತ್ತು ಇವತ್ತು ಶನಿವಾರ ಎಲ್ಲರೂ ಕಲಬುರಗಿಗೆ ಹೋಗಲು ಗಡಿಬಿಡಿ ಮಾಡುತ್ತಾರೆ ಅಂತ ಅದಕ್ಕೆ ಎಲ್ಲಿಯೂ ಪ್ಯಾಸೆಂಜರ್ ಆಸೆಗೆ ನಾನು ಆಟೋ ನಿಲ್ಲಿಸಲೇ ಇಲ್ಲ ನೋಡಿ” ಅಂದ. “ನಿನಗೆ ಸೋಮವಾರ ನಮಸ್ಕಾರ ಮಾಡುತ್ತೇನೆ” ಅಂತ ಮನಸಿನಲ್ಲಿ ಅಂದುಕೊಂಡೆ. ನನ್ನ ಎಲ್ಲ ಗಮನ ಕಲಬುರಗಿಗೆ ಹೋಗುವ ಟ್ರೇನಿನ ಮೇಲೆ ಇತ್ತು. ಅವನ ಮಾತನ್ನು ಅವನ ಬಳಿಯೇ ಬಿಟ್ಟು ಹತ್ತು ರೂಪಾಯಿ ಕೊಟ್ಟು ಟಿಕೆಟ್ ಕೌಂಟರ್ ಕಡೆಗೆ ಓಡಿದ್ದೆ. ಅಲ್ಲಿಂದ ಟಿಕೆಟ್ ಪಡೆದು ಟ್ರೇನಿನ ನಂಬರ್ ಕೇಳಿಕೊಂಡು ಪ್ಲಾಟಪಾರಂ ಕಡೆ ಬಂದೆ, ಅಲ್ಲಿಯೇ ನಿಂತಿತ್ತು ಯಾದಗಿರಿ – ಕಲಬುರಗಿ – ಸೋಲಾಪುರ ಟ್ರೇನ್! ಮನಸಿಗೆ ತುಂಬ ಸಂತಸವಾಗಿ ನೂಕು ನುಗ್ಗಲನ್ನು ತಳ್ಳಿಕೊಂಡು ಒಳ ಸೇರಿದ್ದೆ.

ಯಾದಗಿರಿಯಿಂದ ಕಲಬುರಗಿಗೆ ತುಂಬಾ ಟ್ರೇನುಗಳು ಇವೆ. ಅಂದು ಟ್ರೇನು ಮಂದಿಯಿಂದ ತುಂಬಿ ತುಳುಕುತ್ತಾ ಇತ್ತು. ಅತ್ತ ಮಹಾರಾಶ್ಟ್ರ ಇತ್ತ ಬೆಂಗಳೂರಿಗೆ ಹೋಗುವ ಟ್ರೇನ್ ಇದು. ಹೀಗಾಗಿ ಯಾವ ದಿಕ್ಕಿನ ಕಡೆಯಿಂದಲೂ ಮಂದಿ ತುಂಬಿರುತ್ತಿದ್ದರು. ಆವತ್ತು ಶನಿವಾರ ಆಗಿದ್ದರಿಂದ ಟ್ರೇನಿನಲ್ಲಿ ಕಾಲು ಇಡಲೂ ಜಾಗ ಇರಲಿಲ್ಲ. ರೈಲ್ವೇ ಕೌಂಟರಿನಲ್ಲಿ ಕಲಬುರಗಿಗೆ ಟಿಕೆಟ್ ಕೊಡಿ ಅಂತ ಕನ್ನಡದಲ್ಲಿ ನಾನು ಕೇಳಿದೆ, ಸ್ಟೇಶನ್ ಕ್ಲರ‍್ಕ ಹಿಂದಿಯಲ್ಲಿ ಏನೇನೋ ಅನ್ನುತ್ತಾ ಟಿಕೆಟ್ ಕೊಟ್ಟ. ಅದನ್ನು ತೆಗದುಕೊಂಡು ಜೇಬಲ್ಲಿ ತುರುಕಿ ಟ್ರೇನಿನ ಬಳಿ ಬಂದೆ, ಟ್ರೇನು ಅದಾಗಲೇ ಹೊರಡಲು ಸದ್ದು ಮಾಡುತ್ತಿತ್ತು. ಎಲ್ಲ ಕಡೆ ಜನವೋ ಜನ. ನಾನು ನನ್ನ ವಾಲೆಟ್ ಅನ್ನು ಮರೆತು ಹಿಂದಿನ ಜೇಬಲ್ಲಿ ಇಟ್ಟಿದ್ದೆ! ಅದರಲ್ಲಿ ಆಸುಪಾಸು 2000 ರೂಪಾಯಿ ಇದ್ದವು. ನನಗೆ ಹೆದರಿಕೆ ಆಯ್ತು, ಯಾರಾದರೂ ನನ್ನ ವಾಲೆಟ್ ಅನ್ನು ಎಗರಿಸಿಬಿಟ್ಟರೆ? ಅಂತ.

ಟ್ರೇನು ಮುಂದಕ್ಕೆ ಜಾರತೊಡಗಿತು, ವೀಕೆಂಡ್ ಆದ್ದರಿಂದ ಜನ ಬೆಲ್ಲಕ್ಕೆ ಇರುವೆ ಮುತ್ತಿದ ಹಾಗೆ ಟ್ರೇನಿಗೆ ಮುತ್ತಿದ್ದರು. ನನ್ನನ್ನೂ ಬೋಗಿಯ ಒಳಗೆ ತಳ್ಳಿದರು, ನಾನು ಮತ್ತೊಬ್ಬರನ್ನು ತಳ್ಳುತ್ತಾ ಒಳಗೆ ಹೋದೆ. ಎಲ್ಲಿದೆ ಸೀಟು? ಎಲ್ಲ ಸೀಟುಗಳ ಮೇಲೆ ಆರು ಏಳು ಮಂದಿ ಕೂತಿದ್ದಾರೆ! ಕೆಳಗಿನ ಬರ‍್ತ್ ಮೇಲಿನ ಬರ‍್ತ್ ಎಲ್ಲ ಕಡೆ ಜನರಿದ್ದರು. ಮೇಲೆ ಕುಳಿತ ಮಂದಿ ಕೆಳಗೆ ನಾವು ಸೀಟು ಹುಡುಕುವುದು ಸಂತಸದಿಂದ ನೋಡಿ ತಮಗೆ ಸೀಟು ಸಿಕ್ಕಿರುವುದಕ್ಕೆ ತ್ರುಪ್ತಿ ಪಟ್ಟುಕೊಳ್ಳುತ್ತಿದ್ದರು. ನಾನು ಒಳಗೆ ನುಗ್ಗುತ್ತಿರುವಾಗಲೇ ಈ ‘ಜಾರಮುರಿ’ ಮಂಡಕ್ಕಿ (ಅರಳು) ಮಾರುವವ ಎದುರಾದ‌. ಟ್ರೇನಿನಲ್ಲಿ ನಿಮ್ಮ ಮುಂದೆ ಈ ಜಾರಮುರಿ ಮಂಡಕ್ಕಿ ಮಾರುವವ ಎದುರಾದರೆ, ನಿಮ್ಮ ಸೀಟು ತಪ್ಪಿತು ಅಂತ ತಿಳಕೊಳ್ಳಬೇಕು. ಯಾದಗಿರಿಯ ಮಂದಿ ತುಂಬಾ ಗಟ್ಟಿ , ಜನರಲ್ ಬೋಗಿಯಲ್ಲಿ ಯಾರಾದರೂ ಸೀಟಿನ ಮೇಲೆ ಮಲಗಿದ್ದರೆ ಅವರ ಮೇಲೆಯೇ ಅಕ್ಕಿ ಚೀಲ, ತೊಗರಿ ಬೇಳೆ ಚೀಲ, ಅವರ ಕೂಸುಗಳು, ಪಾತ್ರೆ ಪಗಡ , ಬಟ್ಟೆಗಳು ಇರುವ ಚೀಲ ಇಟ್ಟು ಬಿಡುತ್ತಾರೆ. ನಿಮ್ಮ ಬದುಕಿನಲ್ಲಿ ಎಲ್ಲಿಯೂ ಕೇಳಿರದ ಬೈಗುಳ ಕೇಳಬೇಕಾಗುತ್ತದೆ. ಅಂತಹ ಪದಗಳು ಕಿಟ್ಟೆಲ್ಲರ ಡಿಕ್ಶನರಿಯಲ್ಲಿಯೂ ಸಿಗಲಿಕ್ಕಿಲ್ಲ! ಆದ್ದರಿಂದ ಯಾದಗಿರಿ ಟ್ರೇನಿನ ಜನರಲ್ ಬೋಗಿಯ ಕೆಳಗಿನ ಬರ‍್ತ್‌ನಲ್ಲಿ ಮಲಗಲು ಹೋಗಬೇಡಿ.

ಶನಿವಾರ ಆಗಿದ್ದರಿಂದ ಟ್ರೇನಿನ ತುಂಬ ಜನವೋ ಜನ. ಬಹುತೇಕ ನಿಂತವರೆಲ್ಲ ಕಲಬುರಗಿ ಸ್ಟೇಶನ್ ನಲ್ಲಿ ಇಳಿಯುವವರಿದ್ದರು. ನಾನು ಕಲಬುರಗಿ ಸೇರಲು ಇನ್ನೂ ಎರಡು ಗಂಟೆಯಾದರೂ ಅಗುತ್ತದೆ ಅಂದುಕೊಂಡೆ. ನೀರಿನ ಬಾಟಲ್ ಕರೀದಿಸಿದೆ, ಜನರಲ ಬೋಗಿ ಆಗಿದ್ದರಿಂದ ಜಾರಮುರಿ ಮಂಡಕ್ಕಿ, ಪಾಪ್‌ಕಾರ‍್ನ್, ಪಕೋಡಾ, ಮದ್ದೂರು ವಡೆ, ಲೋಕಲ ಬ್ರಾಂಡ ಕೋಲ್ಡ ಡ್ರಿಂಕ್ಸ್ , ಟೀ ಹಾಗೂ ಕಾಪಿ, ಅಗ್ಗದ ಸರ, ವಾಲೆಟ್, ಈಯರ್ ಪೋನುಗಳು ಬಂದು ಬಂದು ಹೋದವು. ವಾಲೆಟ್ ಮಾರುವವನನ್ನು ನೋಡಿದ ತಕ್ಶಣ ನನ್ನ ವಾಲೆಟ್ ಕಡೆ ನನ್ನ ಗಮನ ಹೋಯಿತು. ದಡಬಡಾಯಿಸಿ ಹಿಂದಿನ ಜೇಬಲ್ಲಿ ಕೈಹಾಕಿದೆ, ನನ್ನ ವಾಲೆಟ್ ಅಲ್ಲಿ ಇತ್ತು! ನನಗಾದ ಸಂತಸಕ್ಕೆ ಮಿತಿ ಇರಲಿಲ್ಲ. ಅದರಲ್ಲಿ 2000 ರೂಪಾಯಿ ಇತ್ತಲ್ಲಾ. ರೂಂಮಿನಲ್ಲಿ ಇಟ್ಟು ಮಾಡುವುದೇನು ಅಂತ ವಾಲೆಟ್‌ನಲ್ಲಿಯೇ ಇಟ್ಟುಕೊಂಡಿದ್ದೆ.

ಟ್ರೇನಿನ ಒಳಗೆ ಜಾಗ ಹುಡುಕುತ್ತಾ ಹುಡುಕುತ್ತಾ ಹೋದ ಹಾಗೆಲ್ಲ ಅದು ನನ್ನಿಂದ ದೂರವಾಯಿತು. ಮುಂದಿನ ಬರ‍್ತ್‌ನಲ್ಲಿ ಜಾಗ ಸಿಗಬಹುದೇನೂ ಅಂತ ಕೊನೆ ಬರ‍್ತ ವರೆಗೂ ಹೋದೆ ಸಿಗಲಿಲ್ಲ.ಮೇಲೆ ನೋಡಿದೆ , ಒಂದು ಮೇಲಿನ ಬರ‍್ತ್‌ನಲ್ಲಿ ಕಾಲಿ ಜಾಗ ಕಾಣಿಸಿತು. ಸಿಕ್ಕಿದ್ದು ಸೀರುಂಡೆ ಅಂತೆ ಏರಿ ಕುಳಿತುಕೊಂಡೆ. ನೀರನ್ನು ಗಟಗಟನೆ ಕುಡಿದೆ. ಹೊರಗಿನ ಬೇಸಿಗೆಗೆ ಒಳಗಿನ ದಗೆಗೆ ತಣ್ಣನೆಯ ನೀರು ತುಂಬಾ ಸರಿಯಾಗಿತ್ತು. ಹಿಂದಿನ ದಿನ ಅಂದರೆ ಶುಕ್ರವಾರ ರಾತ್ರಿ ಹನ್ನೊಂದು ಗಂಟೆಯವರೆಗೆ ಆಪೀಸಿನಲ್ಲಿಯೇ ಇದ್ದುದರಿಂದ ಹಿಂದಿನ ದಿನ ರಾತ್ರಿ ನಿದ್ದೆ ಸರಿಯಾಗಿ ಆಗಿರಲಿಲ್ಲ. ಶನಿವಾರ ಮುಂಜಾನೆ ಎಂಟೂವರೆಗೇ ಆಪೀಸ್ ತಲುಪಿ ಮತ್ತೆ ಸಂಜೆಯವೆರೆಗೆ ಕೆಲಸ ಮಾಡಿದ್ದರಿಂದ ಮೈ ದಣಿದು ಹೋಗಿತ್ತು. ಕಳೆದ ಒಂದು ವಾರದಿಂದ ಇದೇ ಟೈಂ ಶಿಪ್ಟಿನಲ್ಲಿ ಕೆಲಸ ನಡೆಯುತ್ತಿತ್ತು. ಮೇಲಿನ ಬರ‍್ತ್‌ನಲ್ಲಿ ನನ್ನ ಆಚೆ ಈಚೆ ಕುಳಿತ್ತಿದ್ದ ಮಂದಿ ಮುಂದಿನ ಸ್ಟೇಶನ್ ನಲ್ಲಿ ಇಳಿದರು. ಆಗ ನಾನು ಮೇಲಿನ ಬರ‍್ತ ಆಗಿದ್ದರಿಂದ ಸ್ವಲ್ಪ ಮಲಗೋಣ ಅಂತ ದೈರ‍್ಯ ತಂದುಕೊಂಡು ಮಲಗಿದೆ. ಅಶ್ಟು ಮಂದಿ ಬಂದು ಹೋಗುತ್ತಿದ್ದರು. ನನ್ನ ಆಶ್ಚರ‍್ಯಕ್ಕೆ ಯಾರೂ ನನ್ನನ್ನು ಎಬ್ಬಿಸಲಿಲ್ಲ! ಕೆಳಗಿನ ಬರ‍್ತ್‌ನಲ್ಲಿ ಮಲಗಿದ್ದರೆ ಕಂಡಿತಾ ಎಬ್ಬಿಸಿರುತ್ತಿದ್ದರು. ನನಗೆ ಟ್ರೇನಿನ ಕುಲುಕಾಟದಿಂದ ಯಾವಾಗಲೂ ಚೆನ್ನಾಗಿ ನಿದ್ದೆ ಬರುತ್ತದೆ. ಟ್ರೇನು ಓಡುವಾಗ ಸೆಕೆಯಾಗಲಿಲ್ಲ, ಪ್ಯಾನ್ ಸನಿಹದಲ್ಲಿಯೇ ಇತ್ತು. ಗಾಳಿ ಚೆನ್ನಾಗಿ ಬಡಿಯುತ್ತಿತ್ತು, ಕುಲುಕಾಟ ತೊಟ್ಟಿಲು ತೂಗಿದಂತೆ ಇತ್ತು. ನಾನು ಚಿಕ್ಕ ಮಗುವಿನ ಹಾಗೆ ಮಲಗಿ ಬಿಟ್ಟೆ.

ಎಶ್ಟು ಗಂಟೆ ಮಲಗಿದೆನೋ ನನಗೆ ಇಲ್ಲಿಯವರೆಗೂ ಗೊತ್ತಿಲ್ಲ. ಮಂದಿಯ ಮಾತಿನ ಸಪ್ಪಳ ಗುಜುಗುಜು ಕೇಳಿ ನನಗೆ ದಡಕ್ಕನೇ ನಿದ್ದೆಯಿಂದ ಎಚ್ಚರವಾಯಿತು! ನನ್ನೊಂದಿಗೆ ಬರ‍್ತ್‌ನಲ್ಲಿ ಇದ್ದ ಯಾರೂ ಕಾಣಿಸಲಿಲ್ಲ ಎಲ್ಲ ಹೊಸ ಮುಕಗಳೇ,. ನನ್ನ ಎದುರಿಗೆ ಕಲಬುರಗಿಗೆ ಇಳಿಯಬೇಕಿದ್ದ ಒಬ್ಬನನ್ನು ಗುರುತು ಮಾಡಿಕೊಂಡಿದ್ದೆ, ಅವನೂ ಇರಲಿಲ್ಲ. ನನ್ನ ಗುಂಡಿಗೆ ಬಡಿತ ನನಗೆ ಕೇಳಿಸುವಶ್ಟು ಜೋರಾಗತೊಡಗಿತು. ಮೇಲಿಂದ ಟ್ರೇನು ಓಡದೆ ಒಂದು ಕಡೆ ನಿಂತಿತ್ತು. ನಾನು ಸರಕ್ಕನೇ ಮೇಲಿಂದ ಕೆಳಗೆ ಇಳಿದು ಬಾಗಿಲ ಬಳಿ ಹೋಗಿ ನಿಂತೆ. ಆಚೆ ಈಚೆ ಎಲ್ಲ ಕಾಲಿ ಕಾಲಿ ಹೊಲಗಳು ಕಾಣಿಸಿದವು. ಹೊಲಗಳನ್ನು ನೋಡಿ ಯಾವ ಸಿಟಿ, ಯಾವ ಹಳ್ಳಿ ಅಂತ ಗುರುತು ಹಿಡಿಯಬೇಕು? ಹೊರಗೆ ಸಂಜೆಯಾಗುತ್ತಾ ಕತ್ತಲಾಗುತ್ತಿತ್ತು. ಬೋಗಿಯ ಬಾಗಿಲ ಬಳಿ ನಿಂತಿದ್ದ ಒಬ್ಬನನ್ನು “ಕಲಬುರಗಿ ಸ್ಟೇಶನ್ ಬಂತೇನ್ರಿ ?” ಅಂತ ಕೇಳಿದೆ. ಅವನು ನನ್ನ ಕಡೆ ನೋಡಿ “ಕಲಬುರಗಿ ಸ್ಟೇಶನ್ನಾ ? ಅದು ಯಾವಾಗಲೋ ಹೋಯ್ತು !” ಅಂತ ಗಹಗಹಿಸಿ ನಕ್ಕ. ನನಗೆ ಇಡೀ ಬರ‍್ತ್ ನನ್ನನ್ನೇ ನೋಡುತ್ತಿದೆ ನಗುತ್ತಿದೆ ಅನ್ನಿಸಿತು. “ಮುಂದಿನ ಸ್ಟೇಶನ್ ಯಾವುದಯ್ಯಾ ?!” ಅಂತ ಕೇಳಿದ್ದಕ್ಕೆ ಅವನು ಇನ್ನೂ ನಗುತ್ತಾ “ಸೋಲಾಪುರ ಇರಬೇಕು” ಅಂದ. ಟ್ರೇನು ನಿಂತಿತ್ತು ಯಾಕೆಂದರೆ ಮುಂದಿನಿಂದ ಬರುತ್ತಿದ್ದ ಬೆಂಗಳೂರು ಎಕ್ಸಪ್ರೆಸ್ ಟ್ರೇನಿಗೆ ದಾರಿ ಕೊಡುವುದಕ್ಕೆ.

ನಾನು ಹಿಂದೆ ಮುಂದೆ ನೋಡದೆ ಟ್ರೇನಿನಿಂದ ಕೆಳಗೆ ಇಳಿದೆ. ಈಗ ಇಡೀ ಟ್ರೇನಿನ ಎಡ ಬಾಗದ ಮಂದಿ ನಾನು ಇಳಿದ್ದದ್ದನ್ನು ನೋಡಿದರು. ನಾನು ಕೆಳಗೆ ಇಳಿದ ಹತ್ತು ಸೆಕೆಂಡುಗಳಲ್ಲಿ ಟ್ರೇನು ಮತ್ತೆ ಓಡತೊಡಗಿತು. ನಾನು ಹಾಗೆ ಮುಂದೆ ನಡೆಯುತ್ತಾ ಹೋದೆ ಅಲ್ಲಿ ಒಂದು ಚಿಕ್ಕ ಹಾದಿ ಕಾಣಿಸಿತು. ಅದರಲ್ಲಿ ಹಾಗೆ ನಡೆಯುತ್ತಾ ಮುಂದೆ ಹೋದೆ. ದೂರದಲ್ಲಿ ರೈಲ್ವೇ ಸಿಬ್ಬಂದಿಯ ಐದಾರು ಕ್ವಾಟರ‍್ಸಗಳು ಕಾಣಿಸಿದವು. ಬೋರ‍್ಡುಗಳು ಕನ್ನಡದಲ್ಲಿ ಇದ್ದವು, ನಾನು ಇನ್ನೂ ಕರ‍್ನಾಟಕ ದಲ್ಲಿಯೇ ಇದ್ದೇನೆ ಅಂತ ದ್ರುಡವಾಯ್ತು. ಆ ಕ್ವಾರ‍್ಟರ‍್ಸಗಳಲ್ಲಿ ಯಾರಿಗಾದರೂ ಕಲಬುರಗಿಗೆ ಹೋಗುವ ದಾರಿ ಕೇಳೋಣ ಅಂತ ಮನಸಿನಲ್ಲಿ ಯೋಚಿಸಿದೆ. ಹಾಗೆ ಅದರ ಕಡೆಗೆ ಹೋಗುವಾಗ ಹಾದಿಯಲ್ಲಿ ಒಬ್ಬ ಹಿರಿಹರೆಯದ ವ್ಯಕ್ತಿ ಸಿಕ್ಕ. ನೀಲಿ ಲುಂಗಿ ಸುತ್ತಿಕೊಂಡಿದ್ದ , ಕಣ್ಣಿಗೆ ದಪ್ಪ ಕನ್ನಡಕ, ಬಿಳಿ ಕೂದಲು ಬಿಳಿ ಹಾಪ ಶರ‍್ಟ್ ಹಾಕಿಕೊಂಡಿದ್ದ. ಅವನನ್ನು ನೋಡಿ “ಕಲಬುರಗಿಗೆ ಹೇಗೆ ಹೋಗಬೇಕು?” ಅಂತ ಕೇಳಿದೆ, ಆಗಲೇ ಹೊತ್ತು ಮುಳುಗುತ್ತಿತ್ತು. ಸಣ್ಣ ಬೆಳಕು ಇನ್ನೂ ಇತ್ತು. ಆ ವ್ಯಕ್ತಿ ನನ್ನನ್ನು ನೋಡುತ್ತಾ “ಹೀಗೆ ಮುಂದೆ ನಡೆಯುತ್ತಾ ಹೋಗು, ಅಲ್ಲಿ ದೂರಕ್ಕೆ ಒಂದು ಪಕ್ಕಾ ಡಾಂಬರು ರೋಡು ಕಾಣಿಸುತ್ತೆ ಅಲ್ಲಿ ಯಾರಿಂದಾದರೂ ಲಿಪ್ಟ ಕೇಳಿಕೊ, ಕೊಡುತ್ತಾರೆ, ಆ ರೋಡು ಕಲಬುರಗಿಗೇ ಹೋಗುತ್ತೆ” ಅಂತ ಹೇಳಿದ. ನಾನು ಆ ಅಡವಿಯಂತಹ ಜಾಗದಲ್ಲಿ ಕೂಡ ಪೆದ್ದನಂತೆ “ಅಂಕಲ್ ಆ ರೋಡಿನಿಂದ ಕಲಬುರಗಿಗೆ ಹೋಗುವ ಆಟೋ ಸಿಗೋದಿಲ್ಲವಾ?” ಅಂತ ಕೇಳಿದೆ. ಓಲಾ, ಊಬರ್ ಸಿಗೋದಿಲ್ಲವಾ ಅಂತ ಕೇಳಲಿಲ್ಲ! ಅದಕ್ಕೆ ಆ ವ್ಯಕ್ತಿ ಏನೂ ಹೇಳಲಿಲ್ಲ.

ಸಿಕ್ಕ ಮಾಹಿತಿ ಸಾಕು ಅಂತ ನಾನು ಬಿರಬಿರನೆ ಹೆಜ್ಜೆ ಹಾಕುತ್ತಾ ಅವನು ತೋರಿಸಿದ ದಿಕ್ಕಿನ ಕಡೆಗೆ ನಡೆದೆ. ನಾನು ಕಾಲಿ ಹೊಲಗಳನ್ನು ದಾಟಿ ಆ ರೋಡಿನ ಕಡೆಗೆ ಹೋಗುವಾಗ ಪೂರಾ ಕತ್ತಲಾಯ್ತು. ನನ್ನ ಹಾಗೂ ಇರುಳಿನ ನಡುವೆ ಪೋಟಿಯಂತೆ. ನಾನು ಅಲ್ಲಿಂದ ಹಾದು ಹೋಗುವಾಗ ನನ್ನ ಹಿಂದಿನ ಜೇಬಲ್ಲಿ ಇರುವ ನನ್ನ ವಾಲೆಟ್ ನಲ್ಲಿ 2000 ರೂಪಾಯಿ, ನನ್ನ ಎಟಿಎಮ್ ಕಾರ‍್ಡ ಇರುವುದು ಸಿಡಿಲಿನಂತೆ ನನಗೆ ನೆನಪಿಗೆ ಬಂತು. ಇಂತಹ ಕಂಗೆಟ್ಟ ಪರಿಸ್ತಿತಿಯಲ್ಲಿ ಪಾಸಿಟಿವ್ ಮಾತುಗಳು ನೆನಪಿಗೆ ಬರಲಿಲ್ಲ. ಆದರೆ ಐದು ನೂರು ರೂಪಾಯಿಗಾಗಿ ಕಳ್ಳರಿಂದ ಸಿಕ್ಕಾಪಟ್ಟೆ ಹೊಡೆಸಿಕೊಂಡ ಕತೆ ಹೇಳಿದ ನನ್ನ ಕಾಲೇಜಿನ ಗೆಳೆಯ ಪವನ ಕುಮಾರ್ ನೆನಪಿಗೆ ಬಂದ. ಪಾಸಿಟಿವೋ ನೆಗೆಟಿವೋ ನಾನು ಎಲ್ಲಕ್ಕೂ ರೆಡಿಯಾಗಿದ್ದೆ! ಕಲಬುರಗಿಗೆ ಹೋಗುವ ಆ ರೋಡು ಮುಟ್ಟುವಶ್ಟರಲ್ಲಿ ಸಂಪೂರ‍್ಣ ಕತ್ತಲಾಗಿತ್ತು. ಲಿಪ್ಟ್ ಕೊಡುವುದು ಹೋಗಲಿ, ಕಿರುಚಿಕೊಂಡರೆ ಕೇಳಲೂ ಆ ರೋಡಿನಲ್ಲಿ ಯಾರೂ ಇರಲಿಲ್ಲ. ಆ ರೋಡಿನ ಎರಡೂ ಪಕ್ಕಗಳಲ್ಲಿ ಇದ್ದ ಕಾಡಿನ ಮರ, ಹುಣಸೇ ಮರಗಳಲ್ಲಿ ಯಾವುದಾದರೂ ಒಂದನ್ನು ಏರಿ ಇರುಳು ಕಳೆಯಬಹುದು ಅಂತ ಡಿಸ್ಕವರಿ ಚಾನೆಲ್ ಗ್ನಾನ ನೆನಪಿಗೆ ಬಂತು.

ರೋಡು ಮುಟ್ಟಿ ಅದೇ ದಾರಿಯಲ್ಲಿ ಮುಂದೆ ನಡೆದೆ, ಹಾಗೇ ನಡೆಯುತ್ತಲೇ ಕಲಬುರಗಿ ಮುಟ್ಟುತ್ತೇನೆ ಅಂದುಕೊಂಡೆ. ಹಿಂದೆಯೂ ಯಾರೂ ಇಲ್ಲ ಮುಂದೆಯೂ ಯಾರೂ ಇಲ್ಲ. ಇರುಳು ಮುಗಿಲಿನಲ್ಲಿ ಚುಕ್ಕಿಗಳು ಕಾಣಿಸಿದವು. ಪೋಲ್ ಸ್ಟಾರ್ ನೆರವಿನಿಂದ ಕೊಲಂಬಸ್ ಅಮೆರಿಕವನ್ನು ಮುಟ್ಟಿದ, ವಾಸ್ಕೋ ಡಿ ಗಾಮಾ ಗೋವಾ ಮುಟ್ಟಿದ ಹಾಗೇ ನಾನೂ ಕಲಬುರಗಿ ಮುಟ್ಟುತ್ತೇನೆ ಅಂತ ಹುರುಪು ತಂದುಕೊಂಡೆ. ಆದರೆ ಅಶ್ಟು ಚುಕ್ಕಿಗಳಲ್ಲಿ ಪೋಲ್ ಸ್ಟಾರ್ ಯಾವುದು ಅಂತ ನನಗೆ ಗೊತ್ತಾಗಲಿಲ್ಲ! ನಾನು ಮುಂದೆ ಹೋಗುತ್ತಲೇ ಇದ್ದೆ, ಮುಂದಿಂದ ಒಂದು ಬೈಕ್ ಬರುತ್ತಿತ್ತು ಅದರ ಮೇಲೆ ಇಬ್ಬರು ಇದ್ದರು. ಬೈಕ್ ಓಡಿಸುತ್ತಿದ್ದವ ಮುಕಕ್ಕೆ ಬಟ್ಟೆ ಕಟ್ಟಿಕೊಂಡಿದ್ದ. ನನಗೆ ಪಕ್ಕಾ ಆಯಿತು ಅವರು ತಮ್ಮ ಎರಡು ಸಾವಿರ ರೂಪಾಯಿ ತೆಗೆದುಕೊಳ್ಳಲು ನನ್ನ ಬಳಿ ಬರುತ್ತಿದ್ದಾರೆ ಅಂತ. ಆದರೆ ನಾನು ಮನಸಿನಲ್ಲಿ ದ್ರುಡ ಮಾಡಿಕೊಂಡಿದ್ದೆ ಯಾರಪ್ಪನಿಗೂ ನನ್ನ ಎಟಿಎಮ್ ಕಾರ‍್ಡ್ ಮಾತ್ರ ಕೊಡುವುದಿಲ್ಲ ಅಂತ. ಬೈಕ್ ನನ್ನನ್ನು ಪಾಸ್ ಮಾಡಿಕೊಂಡು ಹೋಯಿತು. ಅವರ ಎರಡು ಸಾವಿರ ರೂಪಾಯಿ ನನ್ನ ಬಳಿಯೇ ಉಳಿದವು.

ಅಡ್ರಿನಲಿನ್ ರಶ್ ಮೈತುಂಬಾ ಬೇಕಾಬಿಟ್ಟಿ ಆಗುತ್ತಿತ್ತು. ಆಗಲೇ ಗೊತ್ತಾಗಿತ್ತು ಅಡ್ರಿನಲಿನ್ ಅಂದರೆ ಏನು ಅಂತ. ನಾನು ಮುಂದೆ ನಡೆಯುತ್ತಲೇ ಇದ್ದೆ , ಒಮ್ಮೆ ಹಿಂದಕ್ಕೆ ನೋಡಿದೆ , ಬೈಕ್ ನನ್ನ ಕಡೆ ಬರುವುದು ಕಾಣಿಸಿತು! ನಾನು ಅಲ್ಲಿಯೇ ನಿಂತು ಲಿಪ್ಟ್ ಕೇಳುವ ಕೈಸನ್ನೆ ಮಾಡಿದೆ. ಇದು ಬೇರೆ ಬೈಕ್ ಆಗಿತ್ತು. ಅವನು ಗಾಡಿ ನಿಲ್ಲಿಸಿದ, ನನ್ನ ಸಂತಸ ಮುಗಿಲು ಮುಟ್ಟಿತು. “ಕಲಬುರಗಿಗೆ ಹೋಗ್ತಾ ಇದ್ದಿರೇನು?” ಅಂತ ಕೇಳಿದೆ.ಅವನು “ಹೌದು, ಬನ್ನಿ ಕೂತುಕೊಳ್ಳಿ” ಅಂದ. ನಾನು ಯಾವ ಯೋಚನೆ ಕೂಡ ಮಾಡದೆ, ಹಿಂದೆ ಕೂತುಕೊಂಡೆ. ಅವನೂ ಏನೂ ಕೇಳಲಿಲ್ಲ ಹೇಳಲಿಲ್ಲ ನಾನೂ ಏನೂ ಕೇಳಲಿಲ್ಲ ಹೇಳಲಿಲ್ಲ. ಅರ‍್ದ ಗಂಟೆ ಆಗಿರಬೇಕು ಅದೇ ರೋಡಿನಲ್ಲಿ ಮುಂದೆ ಹೋಗುತ್ತಾ ದೂರದಲ್ಲಿ ಬೆಳಕುಗಳು ಲೈಟುಗಳು ಕಾಣಿಸಿದವು. ಅದು ಕಲಬುರಗಿಯೇ ಅಂತ ನನಗೆ ಕಾತ್ರಿಯಾಯಿತು. ಯಾಕೆಂದರೆ ಕಲಬುರಗಿ ನೀರು ಶುದ್ದೀಕರಣ ಗಟಕದಿಂದ ಯಾವಾಗಲೂ ಹೊರಡುವ ಚಿರಪರಿಚಿತ ಸುವಾಸನೆ ಮೂಗಿಗೆ ಬಡಿಯುತ್ತಿತ್ತು.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications