ಹುಲಿಬಾ – ಅರುಬಾದ ಪ್ರೇಮಿಗಳ ಸುರಂಗ

– ಕೆ.ವಿ. ಶಶಿದರ.

ಅರುಬಾದ ಗುಹೆ, aruba cave
ಸೌತ್ ಅಮೇರಿಕಾದ ಅರುಬಾದಲ್ಲಿನ ಹುಲಿಬಾ ಗುಹೆ ಅತವಾ ಬಾರಂಕಾ ಗುಹೆಯನ್ನು ಪ್ರೇಮಿಗಳ ಸುರಂಗ ಎಂಬ ಅಡ್ಡ ಹೆಸರಿಂದ ಸಹ ಗುರುತಿಸುತ್ತಾರೆ. ಇದು ಅರಿಕೊಕ್ ರಾಶ್ಟ್ರೀಯ ಉದ್ಯಾನವನದಲ್ಲಿರುವ ಅನೇಕ ಗುಹೆಗಳ ಸಂಕೀರ‍್ಣದಲ್ಲಿ ಒಂದು ಬಾಗವಾಗಿದೆ. ಇದರ ವಿಸ್ತೀರ‍್ಣ ದ್ವೀಪಕ್ಕೆ ಹೋಲಿಸಿದರೆ, ಅದರ ಶೇಕಡಾ 20ರಶ್ಟು. ಈ ಗುಹೆಯ ಒಳಬಾಗವು 90 ಮೀಟರ್ ಉದ್ದವಿದ್ದು, ಆಕಾರ ಪ್ರೇಮಿಗಳು ಬಳಸುವ ಹ್ರುದಯದ ಲಾಂಚನವನ್ನು ಹೋಲುತ್ತದೆ. ಇದಕ್ಕಾಗಿಯೇ ಇದಕ್ಕೆ ‘ಪ್ರೇಮಿಗಳ ಸುರಂಗ’ ಎನ್ನುವ ಅನ್ವರ‍್ತನಾಮ. ಅರಿಕೊಕ್ ರಾಶ್ಟ್ರೀಯ ಉದ್ಯಾನವು ಹಲವಾರು ಸುಣ್ಣದ ಗುಹೆಗಳಿಗೆ ನೆಲೆಯಾಗಿದೆ. ಈ ದ್ವೀಪಕ್ಕೆ ಬೇಟಿ ನೀಡುವ ಪ್ರವಾಸಿಗರಿಗೆ ಇದು ಸುತ್ತಲು ಅಪ್ಯಾಯಮಾನವಾದ ಪ್ರದೇಶ ಹಾಗೂ ಮೆಚ್ಚಿನ ತಾಣ.

ಸುರಂಗದಂತಹ ಈ ಗುಹೆಯಲ್ಲಿ ಗಮನಾರ‍್ಹವಾದುದು ಇದರಲ್ಲಿರುವ ಎರಡು ಗೊಮ್ಮಟಾಕಾರದ ಕೋಣೆಗಳಿಂದ. ಇದರ ಮೇಲ್ಚಾವಣಿಯಲ್ಲಿ ಇರುವ ರಂದ್ರಗಳಿಂದ ಬರುವ ಸೂರ‍್ಯನ ಕಿರಣಗಳು ಇದರ ಒಳಾಂಗಣವನ್ನು ಬೆಳಗಿಸುತ್ತದೆ. ಹುಲಿಬಾ ಗುಹೆ ಸಹ ಇರುವುದು ಇದರಲ್ಲೇ. ಸದ್ಯದಲ್ಲಿ, ಇದನ್ನು ಸಾರ‍್ವಜನಿಕರ ಪ್ರವೇಶಕ್ಕೆ ನಿರ‍್ಬಂದ ಹೇರಲಾಗಿದೆ. ಕಾರಣ ಇಲ್ಲಿರುವ ವಿಶೇಶ ತಳಿಯ ಬಾವಲಿಗಳ ಸಂರಕ್ಶಣೆಗಾಗಿ. ಈ ಗುಹೆಗೆ ಐದು ಪ್ರವೇಶ ದ್ವಾರಗಳಿವೆ. ಅವು ಕಡಿದಾದ, ಕಿರಿದಾದ ಹಾಗೂ ಪೂರ‍್ಣ ಬಗ್ಗಿ, ಅತವಾ ತೆವಳುತ್ತಾ ನುಸುಳಬೇಕಿರುವಂತಹವು. ಹುಲಿಬಾ ಗುಹೆಯನ್ನು ಪ್ರವೇಶಿಸುವವರು ಬ್ಯಾಟರಿ ಚಾಲಿತ ದೀಪಗಳನ್ನು ಹೊಂದಿರುವುದು ಅವಶ್ಯ ಏಕೆಂದರೆ, ಇದರ ಒಳಾಂಗಣ ಸಂಪೂರ‍್ಣ ಕತ್ತಲಾಗಿರುವುದರಿಂದ, ಅಲ್ಲಿನ ಸುಣ್ಣದ ಕಲ್ಲುಗಳಲ್ಲಿನ ಚಿತ್ರಗಳನ್ನು ನೋಡಲು ಬೆಳಕಿನ ಅವಶ್ಯಕತೆ ಇದೆ. ಈ ಗುಹೆಯ ಒಂದು ಕೋಣೆಯ ಕಲ್ಲಿನ ಗೋಡೆಯ ಮೇಲೆ ವರ‍್ಜಿನ್ ಮೇರಿಯ ಚಿತ್ರವನ್ನು ಬಿಡಿಸಲಾಗಿರುವುದು ವಿಶೇಶ.

ಈ ಗುಹೆಯ ತುಂಬಾ ಉದ್ದ ಮೂಗಿನ ಹಾಗೂ ಉದ್ದ ನಾಲಿಗೆಯ ಬಾವಲಿಗಳು ತುಂಬಿವೆ. ರಾತ್ರಿ ವೇಳೆಯಲ್ಲಿ ಈ ಗುಹೆಯನ್ನು ನೋಡಲು ಪ್ರಶಸ್ತ, ಬಾವಲಿಗಳ ಕಾಟ ಇರುವುದಿಲ್ಲ. ಆಹಾರಕ್ಕಾಗಿ ಬಾವಲಿಗಳು ಗುಂಪು ಗುಂಪಾಗಿ ಗುಹೆಯಿಂದ ಹಾರಿ ಹೊರ ಹೋಗಿರುತ್ತವೆ. ಈ ಗುಹೆಯಲ್ಲಿ ಬಹಳ ಶಾಕವಿರುವ ಕಾರಣ ಇದನ್ನು ನೋಡಲು ಬೆಳಗ್ಗೆ ಇಲ್ಲವೆ ಸಂಜೆ ತಂಪಾಗಿರುವುದರಿಂದ ಸೂಕ್ತ ಸಮಯವಾಗಿದೆ. ಈ ಗುಹೆಗಳಿಗೆ ಈ ಹೆಸರು ಬರಲು ಅಲ್ಲಿ ಸ್ತಳೀಯರು ಒಂದು ಜಾನಪದ ಕತೆಯನ್ನು ಹೇಳುತ್ತಾರೆ. ಅಲ್ಲಿನ ಒಬ್ಬ ಬಾರತೀಯ ಮುಕ್ಯಸ್ತನ ಮಗಳು ಒಬ್ಬ ಹುಡುಗನ ಪ್ರೇಮ ಪಾಶದಲ್ಲಿ ಸಿಲುಕಿದ್ದಳು. ಮುಕ್ಯಸ್ತನಿಗೆ, ಆಕೆ ಇಶ್ಟ ಪಟ್ಟ ಹುಡುಗ ಸ್ವೀಕಾರಾರ‍್ಹವಾಗಿರಲಿಲ್ಲ. ಆತ ಆಕೆಯನ್ನು ಹುಲಿಬಾದ ಒಂದು ಗುಹೆಯಲ್ಲಿ, ಆಕೆಯ ಪ್ರೇಮಿಯನ್ನು ಮತ್ತೊಂದು ಗುಹೆಯಲ್ಲಿ ಬಂದಿಯಾಗಿಸಿ ದೂರ ಮಾಡಲು ಪ್ರಯತ್ನಿಸಿದ್ದ. ಬಂದಿಗಳಾಗಿದ್ದರೂ ಸಹ ಅವರು ಪರಸ್ಪರ ಬೇಟಿಯಾಗಲು ಪ್ರಯತ್ನಿಸಿ ಯಶಸ್ವಿಯಾದರು. ಹಲವಾರು ದಿನಗಳ ನಂತರ ಅವರು ಅಲ್ಲಿಯೇ ಮರಣಹೊಂದಿದರು. ಅವರ ಆತ್ಮ ಸ್ವರ‍್ಗಾರೋಹಣ ಮಾಡುವಾಗ ಆ ಗುಹೆಯ ಮೇಲ್ಚಾವಣಿಯ ರಂದ್ರದ ಮೂಲಕ ಹಾದು ಹೋಯಿತು. ಈ ಸಮಯದಲ್ಲಿ ಗುಹೆಯ ಮೇಲ್ಚಾವಣಿ ಕುಸಿದು, ಈ ಗುಹೆಗೆ ಹ್ರುದಯದ ಆಕಾರ ಸ್ರುಶ್ಟಿಮಾಡಿತು.

ಈ ಸಂಕೀರ‍್ಣದಲ್ಲಿರುವ ಮತ್ತೊಂದು ಗುಹೆ ಗ್ವಾಡರಿಕಿರಿ. ಇದರ ಮೇಲ್ಚಾವಣಿಯಲ್ಲಿ ಎರಡು ರಂದ್ರಗಳಿವೆ. ಇದರಿಂದ ಸೂರ‍್ಯನ ಬೆಳಕು ಗುಹೆಯೊಳಗೆ ಬೀಳುತ್ತದೆ. ಪ್ರವಾಸಿಗರಿಗೆ ಗುಹೆಯ ಒಳಬಾಗವನ್ನು ನೋಡಲು ಇಶ್ಟು ಬೆಳಕು ಸಾಕು. ಬೇರೆ ಬೆಳಕಿನ ಅವಶ್ಯಕತೆಯಿಲ್ಲ. ಹುಲಿಬಾ ಗುಹೆ 300 ಅಡಿ ವಿಸ್ತೀರ‍್ಣವಾಗಿದೆ. ಗ್ವಾಡರಿಕಿರಿ ಗುಹೆಯಂತೆ ಇಲ್ಲಿ ಸೂರ‍್ಯನ ಬೆಳಕು ಇಲ್ಲವಾದ ಕಾರಣ ಟಾರ‍್ಚ್ ಬೆಳಕು ಅತ್ಯಾವಶ್ಯಕ. ಬಾವಲಿಗಳ ಬಗ್ಗೆ ಒಲವು ಇಲ್ಲದವರು ಗುಹೆಗಳಿಂದ ಹೊರಗುಳಿಯುವುದು ಒಳಿತು. ಯಾವುದೇ ಗುಹೆಗಳನ್ನು ಗಮನಿಸಿದರು, ಅವುಗಳೆಲ್ಲಾ ನೈಸರ‍್ಗಿಕವಾಗಿ ಬಾವಲಿಗಳ ಆವಾಸಸ್ತಾನ. ಅರೂಬಾದ ಗುಹೆಯಲ್ಲಿರುವ ಬಾವಲಿಗಳು ಹಾನಿಕಾರಕವಲ್ಲ. ಪ್ರವಾಸಿಗರು ಇವುಗಳನ್ನು ನೋಡಿ ಹೆದರಬಹುದೇ ಹೊರತು ಕಂಡಿತಾ ಅವುಗಳಿಂದ ತೊಂದರೆಯಿಲ್ಲ. ಗುಹೆಯಲ್ಲಿನ ನೆಲ ಬಹಳ ಒರಟಾಗಿರುವ ಕಾರಣ ಒಳ ಹೋಗುವವರು ತಮ್ಮ ಕಾಲಿನ ರಕ್ಶಣೆಗೆ ಪಾದರಕ್ಶೆಗಳನ್ನು ಬಳಸುವುದು ಸೂಕ್ತ.

ಈ ದ್ವೀಪವಿರುವ ಈ ಬಾಗವು ಕಡಲ್ಗಳ್ಳರ ನೆಚ್ಚಿನ ತಾಣ. ಅವರುಗಳು ಕದ್ದ ನಿದಿಯನ್ನು ಇಲ್ಲಿ ಬಚ್ಚಿಟ್ಟು ಅವರು ಸಹ ಇಲ್ಲೆ ವಾಸಿಸುತ್ತಿದ್ದರು ಎನ್ನುತ್ತಾರೆ ಸ್ತಳೀಯರು. ಅದರಲ್ಲಿ ನಿದಿ ಇನ್ನೂ ಇರಬಹುದು ಎಂಬ ಶಂಕೆ ಅವರದು!

(ಮಾಹಿತಿ ಸೆಲೆ: arubaanswers.com tripbucket.com nightspublications.com arubiana.com)

(ಚಿತ್ರ ಸೆಲೆ: arubaanswers.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications