ಅನಾಮಿಕನ ಆತ್ಮಚರಿತೆ
ಆ ದಿನ ನಾನೂ ಸಹ, ಇಂದು ಈ ಹುಡುಗ ಓಡಿದಂತೆ, ಉಸಿರು ಕಟ್ಟಿ ಒಂದೇ ಸಮನೆ ಓಡಿದ್ದೆ. ಮೈ ಬೆವರುತ್ತಿತ್ತು. ಬಯ ಆವರಿಸಿತ್ತು. ಓಡಿದ್ದು ಎಶ್ಟು ದೂರವೋ ತಿಳಿಯೇ. ಮೂರು ನಾಲ್ಕು ಕಿಲೋಮೀಟರಿಗೂ ಹೆಚ್ಚು ಇರಬಹುದು. ಅರ್ದ ಗಂಟೆಗೂ ಹೆಚ್ಚು ಕಾಲ ಎಲ್ಲೂ ನಿಲ್ಲದೆ, ದಣಿವಾರಿಸಿಕೊಳ್ಳಲು ಸಹ ನಿಲ್ಲದೆ ಓಡಿದ್ದೆ. ನಾನೇನು ಕಳ್ಳತನ, ದರೋಡೆ, ಕೊಲೆ, ಸುಲಿಗೆ, ಅತ್ಯಾಚಾರ ಯಾವುದನ್ನೂ ಮಾಡಿರಲಿಲ್ಲ. ಆದರೂ ಹೆದರಿಕೆ. ಅವರು ಅಟ್ಟಿಸಿಕೊಂಡು ಬಂದು ನನ್ನನ್ನು ಹಿಡಿದು ಎಲ್ಲಿ ಮತ್ತೆ ಬಂದಿ ಮಾಡುತ್ತಾರೋ ಎಂಬ ಬಯ. ಆ ಪಾಪ ಕೂಪದಲ್ಲಿ ಪಾಪಿಯಾಗದಿರುವ ಯೋಚನೆ ನನ್ನ ಓಡುವ ಶಕ್ತಿಯನ್ನು ಇಮ್ಮಡಿಸಿತ್ತು. ಆಲ್ಲಿರಲು ಸುತಾರಾಂ ನನಗಿಶ್ಟವಿರಲಿಲ್ಲ. ಅಲ್ಲಿಯ ವಾತಾವರಣ ಉಸಿರುಗಟ್ಟಿಸಿತ್ತು. ಅಂತಹ ಬಯಂಕರ ವಾತಾವರಣಕ್ಕೆ ಕಾಲಿಡಲು ಕಾರಣವಾದ ಸಂದರ್ಬಗಳನ್ನು ನೆನಪಿಸಿಕೊಂಡರೆ ಬಯವಾಗುತ್ತೆ.
ಅಪ್ಪ ಬಯಂಕರ ಕುಡುಕ. ಕುಡಿತಕ್ಕೆ ದಾಸನಾಗಿದ್ದ. ಕುಡಿಯಲು ದುಡ್ಡು ಎಲ್ಲೂ ಹುಟ್ಟದಿದ್ದರೆ, ಆ ದುಡ್ಡು ಅನಾಯಾಸವಾಗಿ ಹುಟ್ಟುವ ಜಾಗ ನನ್ನ ಹೆತ್ತಮ್ಮ. ಅಮ್ಮನನ್ನು ಹೊಡೆದು, ಬಡಿದು ಇದ್ದ ಬದ್ದ ಬಂಗಾರ ಎಲ್ಲಾ ಕಿತ್ತುಕೊಂಡು ತನ್ನ ಹಾಳು ಚಟಕ್ಕೆ ಸುರಿದಿದ್ದ. ದಿನದ ಇಪ್ಪನಾಲ್ಕು ಗಂಟೆ ಕುಡಿತದ ಅಮಲಲ್ಲೇ ಇರುತ್ತಿದ್ದ. ನೆಟ್ಟಗೆ ಮಾತನಾಡಿದ್ದನ್ನು ನಾನೆಂದೂ ಕಾಣೆ. ಕುಡಿದೂ ಕುಡಿದೂ ಕರುಳು ಸುಟ್ಟು ಒಂದು ದಿನ ರಾತ್ರಿ ಮಲಗಿದವ, ಮಾರನೆಯ ದಿನ ಬೆಳಿಗ್ಗೆ ಮೇಲೇಳಲೇ ಇಲ್ಲ. ಅವ ಸತ್ತ ದಿನ ಅಕ್ಕಪಕ್ಕದವರೆಲ್ಲಾ ಸೇರಿ ಬಾಜಾ ಬಜಂತ್ರಿ ತಂದು, ಕುಣಿದು ಕುಪ್ಪಳಿಸಿ ಅಪ್ಪನನ್ನು ಹೂವಿನ ಹಾರಗಳಿಂದ ಹೊದೆಸಿ, ಹೊತ್ತು ಮೆರವಣಿಗೆ ಮಾಡಿಕೊಂಡು ಹೋದರು. ಅಮ್ಮ ಕೊಂಚ ಕಾಲ ಎದೆ ಬಡಿದುಕೊಂಡು ಅತ್ತಳು. ನಂತರ ಯಾರಿಗೂ ಮುಕ ಕೊಡದೆ ಮೂಲೆಯಲ್ಲಿ ಮೊಣಕಾಲಿನ ಮದ್ಯೆ ತಲೆಯಿರಿಸಿಕೊಂಡು ಬಹಳ ಹೊತ್ತು ಕುಳಿತಿದ್ದಳು. ಅಪ್ಪ ಸತ್ತು ಅಮ್ಮನನ್ನು ಪೂರ್ಣ ಕತ್ತಲಿಗೆ ತಳ್ಳಿದನೆ? ಇಲ್ಲ ಜೀವನದಲ್ಲಿ ಬೆಳಕು ಹಚ್ಚಿದ್ದನಾ? ಅವಳಿಗೇ ತಿಳಿಯದು. ಬವಿಶ್ಯವಂತೂ ಗಾಡಾಂದಕಾರದಲ್ಲಿ ಮುಳುಗಿತ್ತು.
ನನಗೆ ಇದೆಲ್ಲಾ ಹೊಸದು. ತಮಟೆಯ ಬಡಿತದ ಕುಶಿಗೆ, ಅಂದು ನಾನೂ ಸಹ ನಾಲ್ಕು ಹೆಜ್ಜೆ ಹಾಕಿದ್ದು ನೆನಪಿದೆ. ಅಪ್ಪನ ಮೆರವಣಿಗೆ ದೂರ ಹೋಗುವವರೆಗೂ ನಾನೂ ನೋಡುತ್ತಿದ್ದೆ. ಮೆರವಣಿಗೆ ಮರೆಯಾಗುತ್ತಿದ್ದಂತೆ ಅಮ್ಮನ ರೋದನೆ ಮುಗಿಲು ಮುಟ್ಟಿತ್ತು. ಅಕ್ಕಪಕ್ಕದವರು ಆಕೆಯನ್ನು ತಬ್ಬಿ ಸಾಂತ್ವನ ಮಾಡಿದ್ದರು. ಸಂಜೆ ವೇಳೆಗೆ ಮೆರವಣಿಗೆ ಹೋದವರೆಲ್ಲಾ ಹಿಂದಿರುಗಿದರೂ ಅಪ್ಪ ಮಾತ್ರ ಕಾಣಲಿಲ್ಲ. ಯಾಕೋ, ಅಂದು ಚೂರು ಸಂಕಟವಾಗಿತ್ತು. ಏಕೆಂದು ತಿಳಿಯಲಿಲ್ಲ. ಅದೇನೋ ಶಾಸ್ತ್ರವಂತೆ. ನೆರೆಹೊರೆಯವರು ಅಂದು ತುಂಬಾ ಊಟ ಕೊಟ್ಟಿದ್ದರು. ಹೊಟ್ಟೆ ತುಂಬಿತ್ತು. ಅಪ್ಪನನ್ನು ಮೆರವಣಿಗೆ ಮಾಡಿ ಹೊತ್ತೊಯ್ದರೆ ಹೊಟ್ಟೆ ತುಂಬಾ ಊಟ ಸಿಗುತ್ತೆ ಎಂಬ ವಿಚಾರ ಕುಶಿ ಕೊಟ್ಟಿತ್ತು. ಹಾಗಾಗಿ ಅಪ್ಪ ವಾಪಸ್ಸು ಬಂದು ಮತ್ತೆ ಮೆರವಣಿಗೆಯಲ್ಲಿ ಹೋಗುತ್ತಾನೆ ಎಂದೇ ಬಾವಿಸಿದ್ದೆ. ಅಪ್ಪನ ದಾರಿಯನ್ನು ದಿನಾ ಎದುರು ನೋಡುತ್ತಿದ್ದೆ.
ಅಪ್ಪ ಸತ್ತ ಮೇಲೆ, ಅಮ್ಮ ನನ್ನನ್ನು ಅಲ್ಲಿಗೆ ಸೇರಿಸಿದರೆ ಎರಡು ಹೊತ್ತಿನ ಊಟ ಆದರೂ ಕಾಯಂ ಅಂದಾಗ ನನಗಾದ ಕುಶಿ ಅಶ್ಟಿಶ್ಟಲ್ಲ. ದಿನಕ್ಕೆರಡು ಬಾರಿ ಹೊಟ್ಟೆ ತುಂಬಾ ಊಟ!!! ಇದು ನಿಜವೇ? ಅನ್ನುವ ಅನುಮಾನ ಕಾಡಿದ್ದು ಸುಳ್ಳಲ್ಲ. ನಂಬಲು ಸಾದ್ಯವಾಗಲೇ ಇಲ್ಲ. ಆ ಒಂದು ವಿಶಯವೇ ನನ್ನನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಯಾವ ಜನ್ಮದ ಪುಣ್ಯವೋ? ನನ್ನನ್ನೇ ಹುಡುಕಿಕೊಂಡು ಬಂದಿದೆ ಅನಿಸಿತ್ತು. ಅಲ್ಲಿಗೆ ಬೇಗ ಹೋದರೆ ಗಂಜಿ ಊಟಕ್ಕೆ ತಿಲಾಂಜಲಿ ನೀಡಬಹುದು. ಹಸಿದ ಹೊಟ್ಟೆಯ ತಳಮಳ ಅನುಬವಿಸಿದವರಿಗೇ ಗೊತ್ತು? ಹೊಟ್ಟೆ ತುಂಬಾ ದಿನಕ್ಕೆರಡು ಹೊತ್ತು ತಿಂದು, ಆರಾಮವಾಗಿ ಇರಬಹುದು ಎಂಬ ಯೋಚನೆಯಿಂದ ಪುಳಕಿತನಾಗಿದ್ದೆ. ಮನ ಬಾನಾಡಿಯಾಗಿತ್ತು. ಕಂಡ ಕಂಡವರಿಗೆಲ್ಲಾ ಹೇಳಿಕೊಳ್ಳುವ ಆಸೆ ಚಿಗುರೊಡೆದಿತ್ತು. ಅವರು ಬಾದ್ಯಸ್ತರಾದರೆ? ತನಗೆ ಇಲ್ಲವಾದರೆ? ಬೇಡ, ಯಾರಿಗೂ ತಿಳಿಸುವುದು ಬೇಡ. ಗುಟ್ಟಾಗಿರಲಿ ಎಂದು ಸುಮ್ಮನಾದೆ. ಮನಸ್ಸು, ಈ ಕೊಳಗೇರಿಯಿಂದ ಶಾಶ್ವತ ಮುಕ್ತಿ ಬಯಸಿತ್ತು. ದೊಡ್ಡ ದೊಡ್ಡ ಮಹಲುಗಳನ್ನೂ ಕಂಡಾಗ, ಐಶಾರಾಮಿ ಕಾರುಗಳನ್ನು ಕಂಡಾಗ, ಸೆಂಟು ಹಾಕಿದ ಬಟ್ಟೆಗಳ ಗಮ ಮೂಗಿಗೆ ಬಡಿದಾಗ ಜೀವನದಲ್ಲಿ ಒಮ್ಮೆಯಾದರೂ ಆ ಸುಕ ಅನುಬವಿಸಿಯೇ ತೀರಬೇಕು ಎಂಬ ಹುಚ್ಚು ಆಸೆ ಗರಿಗೆದರಿ, ಉತ್ಕಟ ಆಸೆ ತಲೆ ಕೊರೆದಿದ್ದು ಸುಳ್ಳಲ್ಲ.
ಸಂಜೆ ಬಂದಿದ್ದ ಗೋಪಿ ಮಾವ ‘ಬೆಳಿಗ್ಗೆಯೇ ಬರುತ್ತೇನೆ, ರೆಡಿ ಇರು’ ಎಂದಾಗ ಆಗಸದಲ್ಲಿ ಹಾರಾಡಿದ ಅನುಬವ. ಆದರೂ ರಾತ್ರಿಯೆಲ್ಲ ಏನೋ ಬಯ, ಏನೋ ಆತಂಕ, ಏನೋ ದುಗುಡ. ಏನೋ ಸಂಕಟ. ನೂರಾರು ಚಿಟ್ಟೆ ಹೊಟ್ಟೆಯಲ್ಲಿ ಹಾರಾಡಿದಂತೆ. ಕನಸುಗಳು ರೆಕ್ಕೆ ಬೆಚ್ಚಿ ಕುಣಿದಂತೆ. ಅಮ್ಮನನ್ನು ಬಿಟ್ಟು ಹೋಗುವ ಸಂಕಟ ಒಂದೆಡೆ. ಯಾಕೋ ಕಾಣೆ ಮನಸ್ಸಿನಲ್ಲಿ ಏನೋ ತಳಮಳ. ಯಾರೊಡನೆಯೂ ಹೇಳಿಕೊಳ್ಳಲಾಗದ ವೇದನೆ. ನಾಳೆ ಬೆಳಿಗ್ಗೆ ಗೋಪಿ ಮಾವ ಬರುತ್ತಾರೆ. ‘ಬಾ ಹೋಗೋಣ’ ಅಂತಾರೆ. ಏನು ಮಾಡಲಿ? “ಇಲ್ಲ…. ಅಮ್ಮನ್ನ ಬಿಟ್ಟು ನಾ ಬರೋಲ್ಲ” ಎಂದು ಬಿಡಲೇ? ಎರಡು ಹೊತ್ತಿನ ಊಟಕ್ಕೆ ಕಲ್ಲು ಹಾಕಿಕೊಳ್ಳಲೇ? ಇಂತಹ ಸುವರ್ಣಾವಕಾಶವನ್ನು ಕಾಲಲ್ಲಿ ಒದ್ದರೆ, ಪದೇ ಪದೇ ಮರುಕಳಿಸುತ್ತದೆಯೇ? ಗೋಪಿ ಮಾವಂಗೇನು ನಶ್ಟವಿಲ್ಲ. ನಾನಲ್ಲದಿದ್ದರೆ ಅವರಿಗೆ ಇದೇ ಕೊಳೆಗೇರಿಯಲ್ಲಿ ಸಾಕಶ್ಟು ಹುಡುಗರಿದ್ದಾರೆ. ಅವರ ದಂದೆ ಅದೇ ಅಲ್ಲವೆ?
ಇಲ್ಲ ಈ ಸದಾವಕಾಶ ಬಿಡಬಾರದು. ಗೋಪಿ ಮಾವನ ಜೊತೆ ಹೋಗುವುದು ಶತಸಿದ್ದ. ಅದರೂ ಮನದಲ್ಲೆನೋ ಅಳುಕು. ನಾನು ಇಲ್ಲಿಂದ ಹೊರಟು ಹೋದರೆ? ಅಮ್ಮ ಏಕಾಂಗಿಯಾಗಲ್ವೆ? ಅಮ್ಮನನ್ನು ಗಮನಿಸುವವರು ಯಾರು? ನನಗಾಗಿ ಅಮ್ಮ ಪರಿತಪಿಸುವುದಿಲ್ಲವೇ? ನನಗೆ ಎರಡು ಹೊತ್ತು ಊಟ ಏನೋ ಸಿಗಬಹುದು, ಅದರಿಂದ ಅಮ್ಮನ ಹೊಟ್ಟೆ ತುಂಬುತ್ತದೆಯೇ? ನನ್ನ ಗುಂಗಿನಲ್ಲೇ ಅಮ್ಮ ಅನ್ನ, ಆಹಾರಾದಿಗಳನ್ನು ಮರೆತು ಕೊರಗುವುದಿಲ್ಲವೇ? ಅಮ್ಮ ಎಶ್ಟು ಬಾರಿ ಹೇಳಿಲ್ಲ? ‘ಪಾಪು ನಾನು ಬದುಕಿರುವುದೇ ನಿನಗಾಗಿ, ನೀನಿಲ್ಲವಾಗಿದ್ದರೆ ಇಶ್ಟು ಹೊತ್ತಿಗೆ ಕರೆಯೋ ಬಾವಿಯೋ ಪಾಲಾಗುತ್ತಿದ್ದೆ’ ಎಂದು. ಹೊಟ್ಟೆಯ ತುಂಬಾ ಎರಡು ಹೊತ್ತು ಊಟ ಒಂದೆಡೆಯಾದರೆ, ಹೆತ್ತು ಹೊತ್ತು ಸಾಕಿದ ಅಮ್ಮ ಮತ್ತೊಂದೆಡೆ. ಸಂದಿಗ್ದ ಪರಿಸ್ತಿತಿ. ಯಾವುದರ ಆಯ್ಕೆ ಸರಿ? ತಲೆ ಶೂಲೆ ಶುರುವಾಗಿತ್ತು. ಉತ್ತರ ಮಾತ್ರ ನಿಗೂಡ.
ನನ್ನ ಹೊಟ್ಟೆ ಹೊರೆಯಲು ಅಮ್ಮ ಪಡುತ್ತಿದ್ದ ಪಾಡು ನನಗೆ ಪೂರ್ಣ ಅರ್ತವಾಗದಿದ್ದರೂ, ದಿನದ ಬಹಳ ಹೊತ್ತು ಅಮ್ಮನನ್ನು ಮಿಸ್ ಮಾಡಿಕೊಂಡಿದ್ದಂತೂ ಹೌದು. ದಿನದ ದುಡಿತಕ್ಕೆ, ಸಾಹುಕಾರನ ಮನೆಗೆ, ಸೂರ್ಯ ಹುಟ್ಟುವ ಸಮಯಕ್ಕೆ ಹೋದರೆ ಮತ್ತೆ ಹೊತ್ತು ಮುಳುಗಿದ ನಂತರವೇ ವಾಪಸ್ಸು. ಮನೆಗೆ ಬಂದ ಅಮ್ಮನ ಕಣ್ಣು ಕೆಂಪಾಗಿ ರಕ್ತ ಸೋರುವಂತಿರುತ್ತಿತ್ತು. ನನ್ನ ಪುಟ್ಟ ಕೈಗಳಲ್ಲಿ, ಅವಳ ಬತ್ತಿ ಹೋಗಿದ್ದ ಕೆನ್ನೆ ಹಿಡಿದು ಪ್ರಶ್ನಿಸಿದರೆ, ಕಣ್ಣೀರ ಕೋಡಿ ಹರಿಯುತ್ತಿತ್ತು. ಆಕೆಯ ಎದೆಯಲ್ಲಿ ಮಡುಗಟ್ಟಿದ್ದ ದುಕ್ಕವೆಲ್ಲಾ ಕರಗಿಹೋಗುತ್ತಿತ್ತು. ಅಳುವ ಶಬ್ದ ಹೊರ ಬಾರದಿರಲಿ ಎಂದು ತನ್ನದೇ ಹರಿದ ಸೀರೆಯ ಸೆರಗನ್ನು ಉಂಡೆ ಕಟ್ಟಿ ಬಾಯಿ ಮುಚ್ಚಿಕೊಂಡು ಅಮ್ಮ ಅತ್ತಿದ್ದು, ಮರೆಯಲಾಗುತ್ತಿಲ್ಲ. ಅಗ ನನಗಂತೂ ಏನೂ ತಿಳಿಯುತ್ತಿರಲಿಲ್ಲ. ಕಣ್ಣೀರು ಒರೆಸುತ್ತಾ ‘ಅಮ್ಮ…. ನೀ ಅಳ್ಬೇಡ, ನೀನತ್ರೆ ನಂಗೂ ಅಳು ಬರುತ್ತೆ’ ಅಂತಿದ್ದೆ. ಆಕೆ ತಕ್ಶಣ ಉಂಡೆ ಕಟ್ಟಿದ್ದ ಅದೇ ಸೆರಗಿನಿಂದ ಕಣ್ಣೊರೆಸಿಕೊಂಡು ನನ್ನನ್ನು ಬಿಗಿದಪ್ಪುತ್ತಿದ್ದಳು. ಅಮ್ಮನ ದೇಹದ ಬಿಸಿ, ಉಸಿರಿನ ಬಿಸಿ, ನನ್ನ ಮೈ ತಾಕಿದಾಗ ಅನಿರ್ವಚನೀಯ ಸುಕ ನನ್ನದಾಗುತ್ತಿತ್ತು. ಗೋಪಿ ಮಾವನ ಜೊತೆ ಹೋದಲ್ಲಿ, ಈ ಸುಕ ಶಾಶ್ವತವಾಗಿ, ನನಗೆ ಇನ್ನೆಂದೂ, ಸಿಗಲಾರದು ಅನಿಸಿದಾಗ, ‘ಆ ಎರೆಡು ಹೊತ್ತಿನ ಊಟವೇ ಬೇಡ’ ಅನಿಸಿತ್ತು.
ಆ ದಿನಗಳಲ್ಲಿ ಕೊಳಚೆಯಲ್ಲೇ ನನ್ನ ದಿನಚರಿ. ಅವರಿವರು ಬಿಸಾಡಿದ, ಕಸದ ತೊಟ್ಟಿಯಲ್ಲಿನ ರೊಟ್ಟಿಯೇ ನನ್ನ ಹೊಟ್ಟೆ ತುಂಬಿಸುವ ಪರಮಾನ್ನ. ಬಡತನಕ್ಕೆ ಹೊಟ್ಟೆ ಜಾಸ್ತಿಯಂತೆ. ಬಡತನಕ್ಕೆ ಹೊಟ್ಟೆ ಜಾಸ್ತಿಯೋ, ಇಲ್ಲ ಹೊಟ್ಟೆ ಜಾಸ್ತಿಯಾಗಿದ್ದಕ್ಕೆ ಬಡತನವೋ, ಬೀಜ ವ್ರುಕ್ಶ ನ್ಯಾಯ.
ಮಾರನೆಯ ದಿನ ಗೋಪಿ ಮಾವ ಮನೆಗೆ ಬಂದಾಗ ನನ್ನೆದೆಯಲ್ಲಿ ಸುನಾಮಿ ಎದ್ದಿತ್ತು. ಸಾವಿರ ಸಾವಿರ ಬಾವನೆಗಳು ತಾಂಡವವಾಡುತ್ತಿತ್ತು. ಅಮ್ಮ ನನ್ನ ತಲೆ ನೇವರಿಸಿ, ಸಮಾದಾನ ಮಾಡಿ, ತಬ್ಬಿ ಮುದ್ದಾಡಿ ‘ಹೋಗಿ ಬಾ ಮಗನೇ..” ಎಂದು ಕಣ್ಣು ತುಂಬಿ ಬೀಳ್ಕೊಟ್ಟಾಗ, ನಿಜಕ್ಕೂ ನನ್ನೆದೆ ಒಡೆದ ಅನುಬವ. ಅಮ್ಮನಿಗೂ ಹಾಗೆಯೇ ಆಗಿರಲಿಕ್ಕೆ ಸಾಕಲ್ಲವೆ? ಅಮ್ಮನನ್ನು ಬಿಟ್ಟು ಹೋಗಲು ಸಾದ್ಯವಾಗಲೇ ಇಲ್ಲ. ಓಡಿ ಹೋಗಿ ಅಮ್ಮನನ್ನು ಗಟ್ಟಿಯಾಗಿ ತಬ್ಬಿ ‘ಬೇಡ, ನನಗೆ ಎರಡು ಹೊತ್ತು ಊಟ ಬೇಡ, ನೀ ಕೊಡುವ ಗಂಜಿಯೇ ಸಾಕು’ ಎಂದು ಚೀರುವ ಮನಸ್ಸಾಗಿತ್ತು. ನನ್ನ ಗೋಳಾಟ, ಅಮ್ಮನ ಮನದಲ್ಲಿನ ಹೊಯ್ದಾಟ, ಇವುಗಳ ಸಂಗರ್ಶ, ಬಹಳ ಹೊತ್ತು ಗೋಪಿ ಮಾವನನ್ನು ಕಾಯಿಸಿತ್ತು. ಅಮ್ಮನ ಸಾಂತ್ವನದ ಬರವಸೆ ನನ್ನನ್ನು ಮೂಕನನ್ನಾಗಿಸಿ, ಗೋಪಿ ಮಾವನ ಹಿಂದೆ ಹೆಜ್ಜೆ ಹಾಕುವಂತೆ ಮಾಡಿತ್ತು. ಕಣ್ಣಿನ ದ್ರುಶ್ಟಿ ಮರೆಯಾಗುವವರೆಗೂ ನಾನು ಪದೇ ಪದೇ ಹಿಂದಿರುಗಿ ಅಮ್ಮನನ್ನು ನೋಡುತ್ತಿದ್ದೆ. ಅಮ್ಮನೂ ಸಹ ಬಾಯಿಗೆ ಸೆರಗನ್ನು ಅಡ್ಡ ಹಿಡಿದು, ಬಾರವಾದ ಹ್ರುದಯ ಹೊತ್ತು, ಕರುಳ ಬಳ್ಳಿ ತನ್ನಿಂದ ದೂರಾಗುವುದನ್ನು ನೋಡಲಾರದೆ ನೋಡುತ್ತಾ, ಕೈಬೀಸಿದ್ದಳು. ಆಕೆಯ ಮುಕ ಕಣ್ಮರೆಯಾಗುವವರೆಗೂ ನಾನೂ ಸಹ ಹಿಂದಿರುಗಿ ನೋಡುವುದನ್ನು ನಿಲ್ಲಿಸಲಿಲ್ಲ.
ನನ್ನ ಜೀವನದಲ್ಲಿ ಸಾಕಶ್ಟು ಏರುಪೇರಿಗೆ ಇದೇ ನಾಂದಿಯಾಯಿತು. ಎರಡು ಹೊತ್ತು ಊಟದ ಆಮಿಶಕ್ಕಾಗಿ, ಅಮ್ಮನನ್ನು ತೊರೆದು ಬಂದವನಿಗೆ ನಿರಾಸೆ ಆವರಿಸಿತ್ತು. ಅವರಿವರ ಮನೆಯಲ್ಲಿ ಹೇಳಿದಶ್ಟು ಕೆಲಸ ಮಾಡಿದಲ್ಲಿ ಮಾತ್ರ ಊಟ ಎಂಬ ನಿಯಮ ನನಗರಿವಿರಲಿಲ್ಲ.. ಕೆಲಸ ಮಾಡದಿದ್ದಲ್ಲಿ ಬಾಸುಂಡೆ ಬರುವಂತಹ ಏಟುಗಳು, ಜೊತೆಗೆ ಊಟಕ್ಕೆ ಸಂಚಕಾರ. ತಿಂಗಳೊಪ್ಪತ್ತಿನಲ್ಲಿ ನನ್ನ ಊಟದ ಆಸೆ ಸತ್ತು ಹೋಗಿತ್ತು. ಅಮ್ಮ ಕೊಡುತ್ತಿದ್ದ ಎರಡು ಹೊತ್ತು ಗಂಜಿಯೇ, ಕಸದ ತೊಟ್ಟಿಯ ರೊಟ್ಟಿಯೇ ನಿಜಕ್ಕೂ ಪರಮಾನ್ನ ಅನಿಸಿತ್ತು. ಐದಾರು ತಿಂಗಳು ಕಳೆಯುವಶ್ಟರಲ್ಲಿ ಸಾಕುಬೇಕಾಗಿತ್ತು. ಸಿಕ್ಕ ಮೊದಲ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಅಲ್ಲಿಂದ ಕಾಲು ಕಿತ್ತು ಓಡಿದ್ದೆ.
ಅಲ್ಲಿಂದೇನೋ ತಪ್ಪಿಸಿಕೊಂಡು ಬಂದಿದ್ದೆ. ನಂತರ ನನಗೆ ಸಿಕ್ಕಿದ್ದು ಹೂವಿನ ಹಾಸಿಗೆಯೇನಲ್ಲ. ದಿನೇ ದಿನೇ, ನಾನು ಅಂದುಕೊಂಡಿದ್ದಕ್ಕಿಂತಾ ಹೆಚ್ಚು ತೊಂದರೆಗಳಲ್ಲಿ ಸಿಕ್ಕು, ನರಳಿ, ಸೊರಗಿಹೋಗಿದ್ದೆ. ಇಲ್ಲ ಸಲ್ಲದ ಅಪವಾದ ಹೊತ್ತು ಅವಮಾನ ಅನುಬವಿಸಿದ್ದೆ. ಇವೆಲ್ಲಾ ಬಡತನಕ್ಕೆ ಸಿಕ್ಕ ಬಳುವಳಿ ಎಂದು ಅರ್ತವಾಗಲು ಬಹಳ ದಿನ ಹಿಡಿಯಲಿಲ್ಲ. ಕೊಂಚ ಕಾಸನ್ನು ಹೊಂದಿಸಿ, ಅಮ್ಮನನ್ನು ಕರೆತಂದು, ಜೊತೆಯಲ್ಲಿ ಇಟ್ಟುಕೊಳ್ಳುವ ಆಸೆ ಬಹಳವಾಗಿತ್ತು. ಅದಕ್ಕಾಗಿ ಹಗಲು ರಾತ್ರಿ ಬಿಡುವಿಲ್ಲದೆ ದುಡಿದೆ. ಹಣ ಇದ್ದಲ್ಲಿಗೆ ಹಣ ಹರಿಯುತ್ತದೆ ಎಂಬ ಸತ್ಯ ಅರಿವಾಗಿದ್ದು ಆಗಲೇ. ಬಡತನದಲ್ಲಿ ಹುಟ್ಟಿದ ಮೇಲೆ ಬಡವನಾಗೇ ಸಾಯಬೇಕೇ ವಿನಹ ಬೇರೆ, ಗತ್ಯಂತರವಿಲ್ಲ ಎಂಬ ಅಂಶ ಬಹು ಬೇಗನೆ ಮನವರಿಕೆಯಾಗಿತ್ತು. ನಾಲ್ಕೈದು ವರ್ಶದ ಹಿಂದೆ ಗೋಪಿ ಮಾವ, ಅಚಾನಕ್ಕಾಗಿ ಒಮ್ಮೆ ಸಿಕ್ಕಿದ್ದ. ಪೂರ್ಣವಾಗಿ ಬತ್ತಿಹೋಗಿದ್ದ. ಎರಡು ಹೊತ್ತಿನ ಊಟದ ಆಸೆ ಹಚ್ಚಿ, ತಾಯಿ ಮಕ್ಕಳನ್ನು ದೂರ ಮಾಡಿದ್ದರ ಪ್ರಬಾವ ಇರಬೇಕು. ಸಾಕಶ್ಟು ಸೊರಗಿದ್ದ. ಉಬಯ ಕುಶಲೋಪರಿ ಮಾತನಾಡುತ್ತಾ, ಗೂಡಂಗಡಿಯಲ್ಲಿ ಬಿಸಿ ಬಿಸಿ ಚಾ ಹೀರುವಾಗ, ಮೆಲ್ಲನೆ ಅಮ್ಮನ ವಿಚಾರ ತೆಗೆದಿದ್ದ. ಒಂದು ಕ್ಶಣ ಮನಸ್ಸು ಕೊಂಚ ಪ್ರಪುಲ್ಲವಾಗಿ ಮತ್ತೆ ಯತಾಸ್ತಿತಿಗೆ ಮರಳಿತು. ಅವರ ಎಲ್ಲಾ ಮಾತನ್ನು ಆಲಿಸಿದೆ. ಮನೆಯ ಸಾಹುಕಾರ ಆಕೆಯನ್ನು ಇಂಚಿಂಚು ಬಿಡದೆ ಅನುಬವಿಸಿ, ಅವಳ ಮನಸ್ಸನ್ನು ಚಿದ್ರ ಚಿದ್ರಗೊಳಿಸಿದ್ದನ್ನು ವಿಸ್ತಾರವಾಗಿ ವಿವರಿಸಿದ. ನಂತರ ಗೋಣು ಕೆಳಕ್ಕೆ ಹಾಕಿ, ಮೆಲುದನಿಯಲ್ಲಿ ಆಕೆಯ ಆರೋಗ್ಯ ಕೆಟ್ಟ ವಿಚಾರ, ನರಳೀ ನರಳೀ ಸತ್ತ ವಿಚಾರ ಹೇಳಿ ನನ್ನನ್ನೇ ವಾರೆಗಣ್ಣಿಂದ ಗಮನಿಸಿದ್ದ.
ಕಲ್ಲಾದ ಹ್ರುದಯಕ್ಕೆ, ಸತ್ತ ಬಾವನೆಗಳಿಗೆ, ಮಾನವೀಯತೆ ಕಳೆದುಕೊಂಡ ಮನಕ್ಕೆ, ಅದು ಯಾವ ರೀತಿಯ ಪರಿಣಾಮವನ್ನೂ ಬೀರಲಿಲ್ಲ. ದಿನ ಪತ್ರಿಕೆಯಲ್ಲಿನ ದಿನನಿತ್ಯದ ಸಾವಿನ ಸುದ್ದಿಯಂತೆ, ನನ್ನ ಪಾಲಿಗೆ ಅದೂ ಒಂದು ಸುದ್ದಿಯಾಗಿತ್ತು. ಆದರೂ ಮೂಲೆಯಲ್ಲೆಲ್ಲೋ ಕರುಳು ಚುರುಕ್ಕೆಂದ ಕಾರಣ, ಒಂದೇ ಒಂದು ಹನಿ ಕಣ್ಣೀರು, ಸಾವಕಾಶವಾಗಿ ಕಣ್ಣಿಂದ ಹೊರಬಂದು, ಜಾರಿ ಕನ್ನೆಯ ಮೇಲೆ ಹರಿದು, ಹಿಂದಿನ ನೆನೆಪನ್ನೆಲ್ಲಾ ಕೆದಕಿ ಮಾಯವಾಗಿತ್ತು. ಒಂದಿಲ್ಲೊಂದು ದಿನ ಅಮ್ಮನ ಮುಕ ಕಾಣುವ ಆಸೆ, ಆಕೆಯ ಮುಕವನ್ನು ಅಂಗೈಯಲ್ಲಿ ಹಿಡಿದು ‘ಹೇಗಿದ್ದೀಯಮ್ಮಾ?’ ಎಂದು ಕೇಳುವ ಆಸೆ ಶಾಶ್ವತವಾಗಿ ಕಮರಿಹೋಗಿತ್ತು.
ಬಡವರ ಮರಣವೂ ದಾರುಣವಂತೆ. ನನ್ನ ಸಾವು ಸಹ ಇದಕ್ಕೇನು ಹೊರತಾಗಿರಲಿಲ್ಲ. ದಿನವೂ ಸಾವಿರಾರು ಜನ ಓಡಾಡುವ ಮಾಯಾನಗರಿಯ ಅಂಡರ್ ಪಾಸ್ ಒಂದರಲ್ಲಿ ನನ್ನ ಹೆಣ ಅನಾತವಾಗಿ ಬಿದ್ದಿತ್ತು. ಯಾರ ಗಮನಕ್ಕೂ ಬಂದಿರಲಿಲ್ಲ. ಹತ್ತಾರು ಬೀದಿ ನಾಯಿಗಳು, ವಾಸನೆ ನೋಡಿ, ಮುಕ ಮೈಮೇಲೆಲ್ಲಾ ತಮ್ಮ ಜಲಬಾದೆಯನ್ನು ತೀರಿಸಿಕೊಂಡು ಒದ್ದೆ ಮಾಡಿತ್ತು. ಅನಾಮಿಕನ ಕರೆಯ ಮೇರೆಗೆ ಕಾರ್ಪೋರೇಶನ್ನವರು, ಪೋಲೀಸ್ನವರು ಬಂದು ನನ್ನ ಹೆಣವನ್ನು ಸರ್ಕಾರಿ ಆಸ್ಪತ್ರಗೆ ಸಾಗಿಸುವ ಕೆಲಸ ಮಾಡಿದರು. ಮುಂದಿನ ಕಾರ್ಯಗಳೆಲ್ಲಾ ಯಾಂತ್ರಿಕ. ಪೋಸ್ಟ್ ಮಾರ್ಟಂ. ಹತ್ತಾರು ಕೋನಗಳಲ್ಲಿ ಪೋಲೀಸ್ ದಾಕಲೆಗಾಗಿ ಪೊಟೋಗಳು, ಅವಶ್ಯ ಕಾಗದ ಪತ್ರಗಳ ತಯಾರಿ. ಅನಾತ ಶವದ ಪಟ್ಟ. ನಂತರ ಹತ್ತಿರದ ಸ್ಮಶಾನದಲ್ಲಿ ಸುಟ್ಟು ಬೂದಿ ಮಾಡುವ ಕಾರ್ಯ. ಅಪ್ಪ ಸತ್ತಾಗ ಹತ್ತು ಜನ ಸೇರಿ ಹಾರ ಹಾಕಿ, ತಮಟೆ ಬಡಿದು, ಕುಣಿದು, ಕುಪ್ಪಳಿಸಿ ಮೆರವಣಿಗೆಯಲ್ಲಿ ಅಪ್ಪನನ್ನು ಹೊತ್ತು ಸಾಗಿದ್ದರು. ಆ ದಿನ ತಮಟೆಯ ತಾಳಕ್ಕೆ ಹಾಕಿದ್ದ ನಾಲ್ಕು ಹೆಜ್ಜೆ ಇನ್ನೂ ಮನದಲ್ಲಿ ಹಸಿರಾಗಿದೆ. ಆ ಸೌಬಾಗ್ಯ, ಆ ಪುಣ್ಯ ನನ್ನದೇ ಹೆಣಕ್ಕಿಲ್ಲ. ಅಪ್ಪನೇ ಅದ್ರುಶ್ಟವಂತ!!! ಇಂದು ತಮಟೆಯ ಸದ್ದಿಲ್ಲ, ಕುಣಿತದ ಆರ್ಬಟವಿಲ್ಲ. ಹೂವಿನ, ಕಾಸಿನ ಎರಚಾಟವಿಲ್ಲ, ಮೆರವಣಿಗೆ ಮೊದಲೇ ಇಲ್ಲ. ಎಲ್ಲಾ ಸ್ತಬ್ದ. ನಿಶ್ಯಬ್ದ. ಮೌನ ವಾತಾವರಣ.
ಜನಜೀವನ ಎಂದಿನಂತೆ ಸಾಮಾನ್ಯ. ಸೂರ್ಯ ಹುಟ್ಟುತ್ತಾನೆ, ನನ್ನಂತಹ ಲಕ್ಶಾಂತರ ಜೀವಿಗಳೂ ಪಶು ಪಕ್ಶಿಗಳೂ ಹುಟ್ಟುತ್ತವೆ, ಸೂರ್ಯ ಮುಳುಗುತ್ತಾನೆ. ಹುಟ್ಟಿದ ಎಲ್ಲಾ ಜೀವಿಗಳು ಸಾಯಲೇಬೇಕು. ಒಂದಲ್ಲಾ ಒಂದು ದಿನ ಅಸ್ತಂಗತವಾಗಲೇಬೇಕು. ಆಗೇ ಅಗುತ್ತದೆ. ಶಾಶ್ವತವಾಗಿ, ಗುರುತಿಲ್ಲದಂತೆ, ಕುರುಹೇ ಇಲ್ಲದಂತೆ ಅಳಿಸಿಹೋಗುತ್ತವೆ. ವ್ಯಕ್ತ ಪಡಿಸಲಾಗದ, ಹಂಚಿಕೊಳ್ಳಲಾಗದ ಎಶ್ಟೋ ವಿಚಾರಗಳು, ಬಡತನದಲ್ಲಿ ಹುಟ್ಟಿ ಬೆಳೆದ ಮಕ್ಕಳ ಮನದಲ್ಲಿ ಮಡುಗಟ್ಟಿರುವುದು ಸಾಮಾನ್ಯ. ಕಾಲಾನುಕ್ರಮದಲ್ಲಿ ಅವರ ಸಾವಿನೊಂದಿಗೆ ಅದು ಮಣ್ಣಾಗುತ್ತೆ. ಈ ವಿಚಾರದಲ್ಲಿ ನಾನು ಕೊಂಚ ಬಿನ್ನ, ಇಲ್ಲಿ ನನ್ನ ದ್ರುಶ್ಟಿಕೋನ ತೆರೆದಿಟ್ಟಿದ್ದೇನೆ. ಅನುಬವಿಸಿದ ಯಾತನೆಯನ್ನು, ಮನದ ಬಾವನೆಗಳನ್ನು, ಮನದಲ್ಲೇ ನುಂಗಿಕೊಂಡ ವಿಶಯವನ್ನು ಮುಚ್ಚುಮರೆಯಿಲ್ಲದೆ ಹಂಚಿಕೊಂಡಿದ್ದೇನೆ. ನನ್ನದೇ ಜೀವನ ವ್ರುತ್ತಾಂತವನ್ನು, ನಾನೇ ಕಂಡಂತೆ ತಮ್ಮಲ್ಲಿ ವಿಶದ ಪಡಿಸಿದ್ದೇನೆ.
ದಿನ ನಿತ್ಯ ಸಾಯುವ ನನ್ನಂತಹ ಅಸಂಕ್ಯಾತ ಬಡವರ ಜೀವನ ಚರಿತ್ರೆ ಇದಕ್ಕಿಂತ ತೀರ ಬಿನ್ನವೇನಲ್ಲ ಅಲ್ಲವೆ?
(ಚಿತ್ರಸೆಲೆ: needpix )
ಇತ್ತೀಚಿನ ಅನಿಸಿಕೆಗಳು