ರೋಗ, ರೋಗಾಣು ಮತ್ತು ಪರಿಸರ

ಕ್ರುಶಿಕ.ಎ.ವಿ.

ವೈರಸ್, Virus

ಒಂದು ಜೀವಿ ಮಿತಿಮೀರಿ ಬೆಳೆದಾಗ ಅತವಾ ಪರಿಸರ ಸಮತೋಲನಕ್ಕೆ ಬೇಕಾದಶ್ಟು ಜೀವಿಗಳ ಸಂಕ್ಯೆ ನಿಯಂತ್ರಿಸಲು, ಜೈವಿಕವಾಗಿ ಗಟ್ಟಿಮುಟ್ಟಾದ ಪೀಳಿಗೆಯನ್ನು ಮುಂದುವರೆಸಲು ಪರಿಸರ ರೂಪಿಸಿದ ವ್ಯವಸ್ತೆ ರೋಗಗಳು, ರೋಗಾಣುಗಳು, ಅದನ್ನು ಕಾರ‍್ಯರೂಪಕ್ಕೆ ತರುವ ವಾಹಕಗಳು. ಜೀವಿಗಳ ವಿಕಾಸದಲ್ಲಿ ರೋಗ ರೋಗಾಣುಗಳ ಪಾತ್ರ ದೊಡ್ಡದು. ಸಿಡುಬು ಸುಮಾರು 12000 ವರುಶಗಳ ಕಾಲದ ಅಸ್ತಿತ್ವದಲ್ಲಿ ಬರೀ 20ನೇ ಶತಮಾನದಲ್ಲಿ ಸುಮಾರು 300 ಮಿಲಿಯನ್ ಜನರ ಸಾವಿಗೆ ಕಾರಣವಾಯಿತು.  ಹೆಚ್ ಐ ವಿ ಉಚ್ಚ್ರಾಯ ಸ್ತಿತಿಯಲ್ಲಿ 36 ಮಿಲಿಯನ್ ಜನರನ್ನ, 1968ರ ಹಾಂಕಾಂಗ್ ಪ್ಲು ಆ ಪಟ್ಟಣದ 15% ಜನರು ಸೇರಿದಂತೆ 1ಮಿಲಿಯನ್ ಜನರನ್ನ, 1956-58ರ ಏಶಿಯನ್ ಪ್ಲು 2 ಮಿಲಿಯನ್ ಜನರನ್ನ, 1918ರ ಸ್ಪ್ಯಾನಿಶ್ ಪ್ಲು 20-50ಮಿಲಿಯನ್ ಜನರನ್ನ, ರಶಿಯನ್ ಪ್ಲು 1889-90 1ಮಿಲಿಯನ್ ಜನರನ್ನ, ಕಾಲೇರಾ ಸುಮಾರು 2000 ಸಾವಿರ ವರ‍್ಶದ ದಾಕಲೆಯಲ್ಲಿ ಸುಮಾರು 300 ಮಿಲಿಯನ್ ಜನರ ಸಾವಿಗೆ ಜಗತ್ತಿನಲ್ಲಿ ಕಾರಣವಾಗಿ ಜಾಗತಿಕ ಸೋಂಕು ಅಂತ ವಿಶೇಶವಾಗಿ ಗುರುತಿಸಲ್ಪಟ್ಟಿದೆ.

ಹೇಗೆ ರೋಗಗಳು ನೈಸರ‍್ಗಿಕ ಜೀವಿ/ಜೀವ ನಿಯಂತ್ರಣ ಸ್ರುಶ್ಟಿಯೋ ಹಾಗೆಯೇ ಯುದ್ದ ಕಲಹಗಳು ಮನುಶ್ಯ ಜೀವಿ ನಿಯಂತ್ರಣ ವ್ಯವಸ್ತೆ ಎಂದೇ ಗುರುತಿಸಬೇಕು. ಮಾನವ ಇತಿಹಾಸದಲ್ಲಿ ಯುದ್ದಗಳು ಸಾಯಿಸಿದ ಜನರ ಸಂಕ್ಯೆ ಹತ್ತಿರ ಹತ್ತಿರ 1 ಬಿಲಿಯನ್ ಅಂತ ಹಲವಾರು ದಾಕಲೆ ಇಟ್ಟುಕೊಂಡು ಅಂದಾಜು ಮಾಡಲಾಗಿದೆ. ಸುಮಾರು 50,000 ವರ‍್ಶದ ಆದುನಿಕ ಮನುಶ್ಯರ ಇತಿಹಾಸದಲ್ಲಿ ಅಂದಾಜು 108 ಬಿಲಿಯನ್ ಮನುಶ್ಯರು ಜಗತ್ತಿನಲ್ಲಿ ಹುಟ್ಟಿದ್ದಾರೆ ಹಾಗೂ ಮೇಲೆ ಕಾಣಿಸಿದ ವಿವಿದ ಕಾರಣದಿಂದ ದೊಡ್ಡ ಮಟ್ಟದಲ್ಲಿ ಸತ್ತಿದ್ದಾರೆ. ಹುಟ್ಟು ಸಾವುಗಳ ನಿರಂತರ ಪ್ರಕ್ರಿಯೆ ನಡೆಯುತ್ತಾ ಇರುತ್ತವೆ. ಆದರೆ ಈಗ ನಮ್ಮೊಡನೆ ಇರುವ ಸಮೂಹ ನಾಶಕ ಅಸ್ತ್ರಗಳು, ಅದಕ್ಕಿಂತ ಮೀರಿದ ಅಹಂ, ಸ್ವಾರ‍್ತ,ರಾಜಕೀಯ, ಮೇಲ್ವರ‍್ಗದ ವ್ಯಾಪಾರಿ ಹಿತಾಸಕ್ತಿ ಪ್ರಪಂಚದ ಜೀವಿಸಂಕುಲಕ್ಕೆ ಕಂಟಕವಾಗಿ ಬಹುತೇಕ ಬಡ/ಕೆಳವರ‍್ಗದ ಮನುಶ್ಯರ ಜೀವನಕ್ಕೂ ಕಂಟಕವಾಗಿ ಇದೆ. ಆದುನಿಕ ವಿಗ್ನಾನ ತಂತ್ರಗ್ನಾನ ಯಾವುದೇ ಸೋಂಕಿನ ದೊಡ್ಡ ಮಟ್ಟದ ಹರಡುವಿಕೆ ಹಾಗೂ ಸಾವನ್ನು ತಡೆಯಲು ಸಶಕ್ತವಾಗಿದ್ದರೆ, ಅದೇ ತಂತ್ರಗ್ನಾನ ಯುದ್ದದ ಮೂಲಕ ದೊಡ್ಡ ಸಂಕ್ಯೆಯ ಜನರ ಸಾವಿಗೆ ತಯಾರಾಗಿಯೂ ಇದೆ.

ಅತಿಯಾದ ಅರಣ್ಯ ನಾಶ, ಕಾಡು ಜೀವಿಗಳ ಆವಾಸದ ನಾಶ ಇನ್ನಿತರೆ ಮಾನವರ ಚಟುವಟಿಕೆ ಹಾಗೂ ಮಿತಿಮೀರಿದ ಜನಸಂಕ್ಯೆಯ ಕಾರಣ ಆದುನಿಕ ಜಗತ್ತಿನ ಸುಮಾರು 70% ಕ್ಕೂ ಹೆಚ್ಚು ಮಾರಣಾಂತಿಕ ರೋಗಗಳು, ಮನುಶ್ಯರಿಗೆ ಕಾಡಿನ ಪ್ರಾಣಿ/ಪಕ್ಶಿಗಳಿಂದ (Zoonotic Diseases) ಹರಡುತ್ತಿವೆ (ಕಶೇರುಕಗಳು ಬೆನ್ನು ಮೂಳೆ ಇರುವ ಪ್ರಾಣಿಗಳಿಂದ). ಬಾವಲಿ, ಹಕ್ಕಿ, ಮಂಗ ಹಂದಿ ಇತ್ಯಾದಿ ಜೀವಿಗಳಲ್ಲಿ ಇರುವ ವೈರಸ್ ಬ್ಯಾಕ್ಟೀರಿಯಾ ಏಕಕೋಶ ಜೀವಿ ಇತ್ಯಾದಿ ರೋಗಾಣುಗಳು ಮನುಶ್ಯರನ್ನು ಪ್ರವೇಶಿಸಿ ಸೋಂಕು ಸಾವು ತರುತ್ತಿವೆ.  1901 ರಿಂದ ಇದುವರೆಗೆ ಆದುನಿಕ ವಿಜ್ನಾನ ಪತ್ತೆಹಚ್ಚಲು ಸಾದ್ಯವಾಗಿರುವ ರೋಗಕಾರಣ ವೈರಾಣುಗಳ ಸಂಕ್ಯೆ ಕೇವಲ 291. ಒಂದು ಅಂದಾಜಿನ ಪ್ರಕಾರ ನಾವು ಇನ್ನೂ ಗುರುತಿಸದ ವೈರಾಣುಗಳ ಆಂಕ್ಯೆ 3,20,000.! ಕೇರಳದಲ್ಲಿ ಕಾಣಿಸಿಕೊಂಡ ನಿಪಾ, ಆಗಾಗ ಸುದ್ದಿಯಲ್ಲಿರೋ ಹಕ್ಕಿ ಜ್ವರ, ಎಬೋಲಾ, ಸುಮಾರು 6 ದಶಕದ ಹಿಂದೆ ಗುರುತಿಸಲಾದ ಇನ್ನೂ ಸೂಕ್ತ ಔಶದಿ ಕಂಡುಹಿಡಿಯದ ಮಲೆನಾಡಿನಲ್ಲಿ ಈ ಕಾಲದಲ್ಲಿ ಸದಾ ಸುದ್ದಿಯಲ್ಲಿರುವ ಕ್ಯಾಸನೂರು ಕಾಡಿನ ಮಂಗನ ಕಾಯಿಲೆ.  ಎಲ್ಲವೂ ಇದಕ್ಕೆ ಉದಾಹರಣೆ.

ಸುಮಾರು 12,000ವರ‍್ಶದ ಹಿಂದೆ ನವಶಿಲಾಯುಗದ ಶುರುವಿನಲ್ಲಿ ಮಾನವರ ಜೀವನಶೈಲಿ ಬದಲಾದ ಸಮಯದಲ್ಲೇ ವೈರಾಣುಗಳು ಸಾಮೂಹಿಕವಾಗಿ ಮನುಶ್ಯರನ್ನು ಕಾಡಲು ಸಾಯಿಸಲು ಶುರುವಾಯಿತು ಅಂತ ವೈರಾಣುಗಳ ಸಾಮಾಜಿಕ ಇತಿಹಾಸ ಹೇಳುತ್ತದೆ. ಚದುರಿದ ಅಲೆಮಾರಿ ಮನುಶ್ಯರು ಒಂದು ಕಡೆ ಕಲೆತು ನೆಲೆನಿಂತರು, ಕಾಡು ಪ್ರಾಣಿ ಪಕ್ಶಿಗಳನ್ನು ಪಳಗಿಸಿದರು ವ್ಯವಸಾಯ ಶುರು ಮಾಡಿದರು, ಜನಸಂಕ್ಯೆ ಬೆಳೆಯಿತು, ಆಗ ವೈರಾಣುಗಳ ಸೋಂಕು ಮನುಶ್ಯರನ್ನು ದೊಡ್ಡ ಮಟ್ಟದಲ್ಲಿ ಕಾಡಲು ಶುರುವಾಯಿತು. ಮನುಶ್ಯರನ್ನು ಮಾತ್ರವಲ್ಲದೆ ಬೆಳೆಗಳಿಗೂ ಕೂಡ ರೋಗಾಣು ವ್ಯಾಪಿಸಿತು. ವ್ಯವಸಾಯ ಮಾಡಿ ಆಹಾರ ದಾನ್ಯ ಸಂಗ್ರಹಣೆ ಶುರು ಮಾಡಿದಾಗ ಅದನ್ನು ತಿನ್ನಲು ಬರುವ ಇಲಿ ಹಕ್ಕಿಗಳು ರೋಗಾಣುಗಳನ್ನು ಮನುಶ್ಯರಿಗೆ ತಂದವು. ಸಿಡುಬು ಸುಮಾರು 11,000 ವರ‍್ಶದ ಹಿಂದೆ ನಮ್ಮ ಉಪಕಂಡದ ವ್ಯವಸಾಯಗಾರ ಸಮುದಾಯದಲ್ಲಿ ಮೊದಲು ಶುರುವಾಯಿತು ಅಂತ ಗುರುತಿಸುತ್ತಾರೆ. ನಾವು ತಿಳಿದಿರುವ ಪ್ರಪಂಚ ಅತ್ಯಂತ ಕಡಿಮೆ, ಅರಿತಿರುವ ಪರಿಸರ ಅತ್ಯಲ್ಪ. ಆದರೆ ಅರಿಯುವ ಮುನ್ನವೇ ಸಾಕಶ್ಟು ನಾಶ ಮಾಡಿದ್ದೇವೆ. ಸಮಸ್ಯೆ ಹಾಗೂ ಉತ್ತರದ ನಡುವಿನ ಹಲವಾರು ಕೊಂಡಿಗಳನ್ನು ಮುರಿದಿದ್ದೇವೆ, ತಿದ್ದಿದ್ದೇವೆ ಇಲ್ಲವೇ ನಾಶ ಮಾಡಿದ್ದೇವೆ. ಈಗಲಾದರೂ ಎಚ್ಚೆತ್ತುಕೊಂಡು ಪರಿಸರಕ್ಕೆ ಪೂರಕವಾದ ಜೀವನಕ್ರಮವನ್ನು ಆದಶ್ಟು ಮಟ್ಟಿಗೆಯಾದರೂ ನಾವು ರೂಡಿಸಿಕೊಳ್ಳದೆ ಹೋದರೆ ಮನುಶ್ಯ ಜನಾಂಗ ಅಂದುಕೊಂಡದ್ದಕ್ಕಿಂತ ಮೊದಲೇ ಅವನತಿ ಹೊಂದುವುದು.

( ಚಿತ್ರ ಸೆಲೆ : bostonmagazine.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sanjeev Hs says:

    ಅರ್ಥಪೂರ್ಣ ಬರಹ…?????

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *