ವ್ಯವಸಾಯದಲ್ಲಿ ಯುವಜನರ ಪಾತ್ರ!

ಪುಶ್ಪ.


ಇತ್ತೀಚಿನ ದಿನಗಳಲ್ಲಿ ಬೇಸರವನ್ನು ಉಂಟುಮಾಡುವ ಸಂಗತಿಯೆಂದರೆ ಯುವಜನತೆಯಲ್ಲಿ ಕ್ರುಶಿಯ ಬಗೆಗಿನ ಆಸಕ್ತಿ ಕಡಿಮೆಯಾಗುತ್ತಿರುವುದು. ಕ್ರುಶಿಯನ್ನು ನಂಬಿದರೆ ನಾವು ಬದುಕುವುದಕ್ಕೆ ಆಗುವುದಿಲ್ಲ ಎಂದು ನಂಬಿದ್ದಾರೆ. ರೈತನ ಮಗ ರೈತನಾಗಲು ಹಿಂಜರಿಯುವ ದೇಶ. ನಮ್ಮ ದೇಶದಲ್ಲಿ ಮಂತ್ರಿಗಳ ಮಕ್ಕಳು ಮಂತ್ರಿಗಳೇ ಆಗಲು ಬಯಸುತ್ತಾರೆ, ನಟರ ಮಕ್ಕಳು ನಟರಾಗಲೂ ಬಯಸುತ್ತಾರೆ, ಉದ್ಯಮಿಗಳ ಮಕ್ಕಳು ಉದ್ಯಮಿಗಳೇ ಆಗುತ್ತಾರೆ, ಆದರೆ ರೈತರ ಮಕ್ಕಳು ರೈತರಾಗೋದಕ್ಕೆ ಹಿಂಜರಿಯುತ್ತಾರೆ, ನಾನು ರೈತ ಆಗಲಾರೆ ಎಂದು ಹೇಳುತ್ತಿದ್ದಾರೆ. ರೈತರ ಸಮಸ್ಯೆಗಳು, ತಾಪತ್ರಯಗಳು ಒಂದರ ಮೇಲೊಂದು ಇರುತ್ತವೆ, ಕೈಗೆ ಹತ್ತದ ಬೆಳೆ, ತೀರಿಸಲಾಗದ ಸಾಲ, ಎಲ್ಲವೂ ಸೇರಿಕೊಂಡು ಇವು ಅಕ್ಶರಸಹ ಅವರನ್ನ ಕಂಗಾಲು ಮಾಡಿಬಿಟ್ಟಿದೆ. ರೈತನಾಗಿ ಹುಟ್ಟುವುದು ಮತ್ತು ರೈತನಾಗಿ ಬದುಕುವುದು ಒಂದು ದೌರ‍್ಬಾಗ್ಯ ಎಂದು ರೈತರೇ ಎಂದುಕೊಳ್ಳುವ ಮಟ್ಟಕ್ಕೆ ಅವರನ್ನು ದೇಶ ಮಾಡಿಬಿಟ್ಟಿದೆ.

ಹಲವು ಸಮಸ್ಯೆಗಳ ನಡುವೆ ಕ್ರುಶಿ ಕಾಯಕವಲ್ಲ ಎಂಬ ಬಾವನೆ, ಜೊತೆಗೆ ಬದಲಾದ ಆರ‍್ತಿಕ, ಸಾಮಾಜಿಕ ಸನ್ನಿವೇಶಗಳಿಂದ ಹಳ್ಳಿಗಳು ಕಾಲಿಯಾಗುತ್ತಿವೆ. ಹೊಸತನಕ್ಕೆ ತೆರೆದುಕೊಳ್ಳದ, ಕ್ರುಶಿ ಮಾರುಕಟ್ಟೆಯ ಪರಿಮಿತ ಅವಕಾಶಗಳನ್ನು ಗುರುತಿಸದೆ ಹಾಗೂ ನಕಾರಾತ್ಮಕ ಯೋಜನೆಯಿಂದಾಗಿ ಇಂದಿನ ಯುವಕರು ಕ್ರುಶಿಯತ್ತ ಮುಕ ಮಾಡುತ್ತಿಲ್ಲ.

ಹಳ್ಳಿಗಳಲ್ಲಿರುವ ಎಲ್ಲಾ ಯುವಕರು ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ಬರುತ್ತಿದ್ದಾರೆ ಈಗ ಹಳ್ಳಿಗಳಲ್ಲಿ ಯುವಕರಿಲ್ಲದೆ ವ್ರುದ್ದಾಶ್ರಮಗಳಾಗುತ್ತಿವೆ. ಕೆಲವರು ದುಡಿದು ಅಪ್ಪ-ಅಮ್ಮನನ್ನು ನೋಡಿಕೊಳ್ಳಬೇಕು ಎಂಬ ದ್ರುಶ್ಟಿಯಿಂದ ಬಂದರೆ, ಇನ್ನು ಕೆಲವರು ಶೋಕಿ ಮಾಡಲೆಂದೇ ಬರುತ್ತಾರೆ. ನಾನು ಇತ್ತೀಚಿಗೆ ಪ್ರತ್ಯಕ್ಶವಾಗಿ ನೋಡುತ್ತಿರುವ ಗಟನೆ. ಒಂದು ಕಾಸಗಿ ಸಂಸ್ತೆಯಲ್ಲಿ ಕಾರ‍್ಯನಿರ‍್ವಹಿಸುತ್ತಿದ್ದೇನೆ ಅಲ್ಲಿ ಒಟ್ಟು 300 ರಿಂದ 500 ಯುವಜನರು ಕೆಲಸ ಮಾಡುತ್ತಾರೆ, ಪ್ರತಿಯೊಬ್ಬರು ಹಳ್ಳಿಗಾಡಿನ ರೈತರ ಮಕ್ಕಳೇ…

ಕುತೂಹಲದಿಂದ ನಾನು ಒಬ್ಬ ಹುಡುಗನಿಗೆ ಪ್ರಶ್ನೆ ಮಾಡಿದೆ, ರೈತರ ಮಕ್ಕಳಾಗಿ ನಿಮ್ಮ ಊರು ಮತ್ತು ಕ್ರುಶಿಯನ್ನು ಬಿಟ್ಟು ಬರಲು ಕಾರಣವೇನು ಎಂದು ಕೇಳಿದೆ. ಅದಕ್ಕೆ ಅವನು ಉತ್ತರಿಸಿದ್ದು, ಕ್ರುಶಿಯನ್ನು ನಂಬಿದರೆ ಒಂದೊತ್ತು ಊಟಕ್ಕೂ ಬಟ್ಟೆಗೂ ಆಗೋದಿಲ್ಲ, ಕ್ರುಶಿ ಲಾಬದಾಯಕವಲ್ಲ ಎಂದು. ರೈತರ ಕಶ್ಟಗಳನ್ನು ಪರಿಹಾರ ಮಾಡಲೆಂದೇ ಕ್ರುಶಿ ಇಲಾಕೆಯಿಂದ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ ಅದರಲ್ಲಿ ಮುಕ್ಯವಾಗಿ ಸಾವಯವ ಕ್ರುಶಿ, ಯಂತ್ರಗಳ ಬಳಕೆ, ಮಣ್ಣಿನ ಪರೀಕ್ಶೆ, ಕ್ರುಶಿ ಉತ್ಪನ್ನಗಳ ಸಂಸ್ಕರಣೆ ಇನ್ನು ಮುಂತಾದ ಯೋಜನೆಗಳಿವೆ, ಹಾಗೂ ಆರ‍್ತಿಕವಾಗಿ ಬಡ್ಡಿ ಇಲ್ಲದ ಬೆಳೆಸಾಲ, ಕ್ರುಶಿ ವಿಮಾ ಯೋಜನೆ ಹೀಗೆ ಇನ್ನು ಮುಂತಾದ ಯೋಜನೆಗಳಿವೆ ಇದರ ಪೂರ‍್ಣ ಮಾಹಿತಿಗಾಗಿ ರೈತ ಸಂಪರ‍್ಕ ಕೇಂದ್ರ ಅತವಾ ವಿಜ್ನಾನ ಕೇಂದ್ರಗಳಿಗೆ ಬೇಟಿ ನೀಡಬೇಕು. ಈ ಯೋಜನೆಗಳನ್ನು ಅನುಸರಿಸುವುದರಿಂದ ದೇಶದ ಆರ‍್ತಿಕ ಸ್ತಿತಿ ಹಾಗೂ ಆಹಾರ ಪದಾರ‍್ತಗಳ ಉತ್ಪಾದನೆ ಹೆಚ್ಚುತ್ತದೆ. ಅತಿಮುಕ್ಯವಾಗಿ ರೈತರ ಕಶ್ಟಗಳು ಕಡಿಮೆಯಾಗುತ್ತವೆ.

ಹೀಗೆ ಯುವಜನತೆಯಲ್ಲಿ ಕ್ರುಶಿ ಎಂದರೆ ಅಸಮಾದಾನವಿದೆ ಇದನ್ನು ತೆಗೆದು ಹಾಕಿ ನಗರಗಳಲ್ಲಿ ತಿಂಗಳಿನ ಸಂಬಳಕ್ಕೆ ಮೊರೆ ಹೋಗಿರುವ ಎಲ್ಲಾ ಯುವಜನತೆಯು ಮತ್ತೆ ತಮ್ಮ ತಮ್ಮ ಹಳ್ಳಿಗಳಿಗೆ ಹೋಗಿ ಕ್ರುಶಿಯನ್ನು ಪ್ರಾರಂಬ ಮಾಡಿದರೆ ದೇಶದ ಆರ‍್ತಿಕ ಪರಿಸ್ತಿತಿಯೂ ಕೂಡ ಉತ್ತಮವಾಗುತ್ತದೆ. ಆಗ “ಯುವಕರನ್ನು ಕ್ರುಶಿ ಸಾಮ್ರಾಜ್ಯದ ದೊರೆಗಳನ್ನಾಗಿ ಮಾಡಬಹುದು” ಹಾಗೆ “ಕ್ರುಶಿಯಲ್ಲಿ ಕುಶಿ ಕಾಣಬಹುದು”.
# ಜೈ ಜವಾನ್ ಜೈ ಕಿಸಾನ್”

(ಚಿತ್ರ ಸೆಲೆ: wiki

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Shalini U says:

    Thumba chennagide pushpa

ಅನಿಸಿಕೆ ಬರೆಯಿರಿ:

%d bloggers like this: